Mysore
20
overcast clouds
Light
Dark

ಮೈಸೂರಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ; ಪ್ಲಾಸ್ಟಿಕ್‌ ಮರು ಬಳಕೆ ಘಟಕ ಸ್ಥಾಪಿಸಲು ಸೂಚನೆ

ಮೈಸೂರು: ದೇಶ-ವಿದೇಶಗಳ ಸಹಸ್ರಾರು ಪ್ರವಾಸಿಗರು ಭೇಟಿ ನೀಡುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಕಂಟಕವಾಗಿರುವ ಮತ್ತು ಪರಿಸರವನ್ನು ದೊಡ್ಡ ಪ್ರಮಾಣದಲ್ಲಿ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮರ್ಪಕವಾಗಿ ಮರು ಬಳಕೆ ಮಾಡುವ ಮೂಲಕ ಪರಿಸರದ ಮೇಲಾಗುತ್ತಿರುವ ಹಾನಿ ತಪ್ಪಿಸಲು ಮೈಸೂರು ನಗರ ಪಾಲಿಕೆಯು ನಗರದಲ್ಲಿ ‘ಪ್ಲಾಸ್ಟಿಕ್ ಮರು ಬಳಕೆ ಘಟಕ’ ಸ್ಥಾಪಿಸಲು ಸಿದ್ಧತೆ ನಡೆಸಿದೆ. ನಗರದಲ್ಲಿ ಪ್ರತಿನಿತ್ಯ 500 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ. 25 ರಷ್ಟು ಪ್ಲಾಸ್ಟಿಕ್ ತ್ಯಾಜ್ಯವಾಗಿದೆ. ನಗರದಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ನಿಷೇಽಸಿದ್ದರೂ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ನಗರ ಪಾಲಿಕೆ ಅಽಕಾರಿಗಳು ಹಲವಾರು ಬಾರಿ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದರೂ ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹೀಗೆ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತಿದೆ.

ಈ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಮರು ಬಳಕೆಯಾಗುವಂತೆ ಮಾಡದೆ ಇದ್ದರೆ ಪರಿಸರದ ಮೇಲೆ ದೊಡ್ಡ ದುಷ್ಪಪರಿಣಾಮ ಬೀರುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ನಗರದಲ್ಲಿ ‘ಪ್ಲಾಸ್ಟಿಕ್ ಮರು ಬಳಕೆ ಘಟಕ’ ಪ್ರಾರಂಭಿಸಲು ಪಾಲಿಕೆ ಸಿದ್ಧತೆ ಕೈಗೊಂಡಿದ್ದು, ಇದಕ್ಕೆ ಮುಂಬೈ ಮೂಲದ ಕಂಪೆನಿಯೊಂದಿಗೆ ಮಾತುಕತೆ ನಡೆಸಲಾಗಿದೆ. ಕಂಪೆನಿಗೆ ನಗರದಲ್ಲಿ ಮೂರರಿಂದ ನಾಲ್ಕು ಎಕರೆ ಜಾಗದ ಅಗತ್ಯವಿದ್ದು, 8 ಕೋಟಿ ರೂ. ವೆಚ್ಚದಲ್ಲಿ ‘ಪ್ಲಾಸ್ಟಿಕ್ ಮರು ಬಳಕೆ ಘಟಕ’ ಸ್ಥಾಪಿಸಲಿದೆ. ನಗರದ ಸಿವೇಜ್ ಫಾರ್ಮ್‌ನಲ್ಲಿ ಘಟಕ ಸ್ಥಾಪನೆಗೆ ಜಾಗ ನೀಡಲು ನಗರ ಪಾಲಿಕೆ ಚಿಂತನೆ ನಡೆಸಿದೆ. ಪ್ರಸ್ತುತ ಸಿವೇಜ್ ಫಾಮ್ ನಲ್ಲಿ ಸಂಗ್ರಹವಾಗಿರುವ ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸಿ ಆ ಜಾಗವನ್ನು ಘಟಕ ಸ್ಥಾಪನೆಗೆ ನೀಡಲು ಉದ್ದೇಶಿಸಲಾಗಿದೆ. ಸಿವೇಜ್ ಫಾರ್ಮ್‌ನಲ್ಲಿ ಕೆಲವು ವರ್ಷಗಳ ಹಿಂದೆ ನಗರ ಪಾಲಿಕೆಯ ಸಹಯೋಗದೊಂದಿಗೆ ಜಾಗೃತ್ ಟೆಕ್ ಸಂಸ್ಥೆಯು ಪ್ಲಾಸ್ಟಿಕ್ ಮರು ಬಳಕೆ ಘಟಕವನ್ನು ತೆರೆದಿದೆ. ಜಾಗೃತ್ ಟೆಕ್ ಸಂಸ್ಥೆಯು ಪ್ಲಾಸ್ಟಿಕ್ ತ್ಯಾಜ್ಯದಿಂದ ಮೇಜು, ಕುರ್ಚಿ, ಇಂಟರ್‌ಲಾಕ್‌ ಮುಂತಾದ ಉತ್ಪನ್ನಗಳನ್ನು ತಯಾರಿಸುತ್ತಿದೆ. ನೂತನ ಕಂಪೆನಿಯು ಇಂತಹ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ಬದಲಿಗೆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಕಚ್ಛಾ ಪ್ಲಾಸ್ಟಿಕ್‌ ತಯಾರಿಸಿ ನಂತರ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ಮಾರಾಟ ಮಾಡಲಿದೆ. ಇದರಿಂದ ನಗರದಲ್ಲಿ ಎಷ್ಟೇ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾದರೂ ವೈಜ್ಞಾನಿಕವಾಗಿ ವಿಲೇವಾರಿಯಾಗುತ್ತದೆ ಎನ್ನಲಾಗಿದೆ.

ದಂಡದ ಪ್ರಮಾಣ: ಪ್ಲಾಸ್ಟಿಕ್ ಬಳಕೆ ತಡೆಯಲು ನಗರ ಪಾಲಿಕೆ ಸಾಕಷ್ಟು ದಾಳಿಗಳನ್ನು ನಡೆಸಿ ದಂಡ ವಿಧಿಸಿದ್ದರೂ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಪಾಲಿಕೆ ದೊಡ್ಡ ಪ್ರಮಾಣದಲ್ಲಿ ದಂಡ ವಿಽಸಿದ್ದರೂ ವರ್ತಕರು ಹಾಗೂ ಸಾರ್ವಜನಿಕರು ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಬಳಿಸಿದರೆ ಮೊದಲ ಬಾರಿ ೨೦೦ ರೂ. , ೨ನೇ ಬಾರಿ ೫೦೦ ರೂ. ದಂಡ ವಿಽಸಲಾಗುವುದು. ಅದೇ ರೀತಿ ಬೀದಿಬದಿ ವ್ಯಾಪಾರಿಗಳು ಬಳಸಿದರೆ ಕ್ರಮವಾಗಿ ೫೦೦ ರೂ. , ೧,೦೦೦ ರೂ. , ವಾಣಿಜ್ಯೋದ್ಯಮಿಗಳಿಗೆ ೫,೦೦೦ ರೂ. , ೧೦,೦೦೦ ರೂ. , ಮಾರಾಟ ಅಥವಾ ವಿತರಣೆ ಮಾಡುವವರಿಗೆ ೨೫,೦೦೦ ರೂ. , ೫೦,೦೦೦ ರೂ. , ಸಂಗ್ರಹಣೆ ಅಥವಾ ಸಾಗಾಣಿಕೆ ಮಾಡುವವರಿಗೆ ೫೦,೦೦೦ ರೂ. , ೧,೦೦,೦೦೦ ರೂ. , ಪ್ಲಾಸ್ಟಿಕ್ ತಯಾರಿಸುವ ಯಾವುದೇ ಕೈಗಾರಿಕೆ ಅಥವಾ ವ್ಯಕ್ತಿಗಳಿಗೆ ಮೊದಲ ಬಾರಿಗೆ ೧,೦೦,೦೦೦ ರೂ. , ಎರಡನೇ ಬಾರಿಗೆ ೨,೦೦,೦೦೦ ರೂ. ದಂಡ ವಿಧಿಸಲಾಗುವುದು.

ನಗರದಲ್ಲಿ ಪ್ಲಾಸ್ಟಿಕ್ ಮರು ಬಳಕೆ ಘಟಕ ಸ್ಥಾಪಿಸಲು ಮುಂಬೈ ಮೂಲದ ಕಂಪೆನಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, ಟೆಂಡರ್ ಕರೆಯಬೇಕಾಗಿದೆ. ಈ ಘಟಕವು ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ವಸ್ತುಗಳನ್ನು ಉತ್ಪಾದಿಸಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳಿಗೆ ಮಾರಾಟ ಮಾಡುವ ಉದ್ದೇಶವನ್ನು ಹೊಂದಿದೆ. ಈ ಘಟಕ ಪ್ರಾರಂಭಗೊಂಡರೆ ನಗರ ಎದುರಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
– ಡಾ. ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ

ಕೆಲವು ಕಡೆ ಗುಂಡಿಯಲ್ಲಿ ಪ್ಲಾಸ್ಟಿಕ್‌ಗಳನ್ನು ಹಾಕಿ, ಮಣ್ಣು ಮುಚ್ಚಲಾಗುತ್ತಿದೆ. ಈ ಕ್ರಮವು ಮುಂದೊಂದು ದಿನ ಅಪಾಯಕ್ಕೆ ಆಹ್ವಾನ ನೀಡಿದಂತೆ. ಪ್ಲಾಸ್ಟಿಕ್, ಗಾಜು ಇನ್ನಿತರ ವಸ್ತುಗಳು ಮುಂದೆ ವಿಷವಾಗಿ ಪರಿವರ್ತನೆಗೊಂಡು, ವಿವಿಧ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಈ ನಿಟ್ಟಿನಲ್ಲಿ ನಗರಪಾಲಿಕೆ ಅವರು ಕ್ರಮವಹಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
– ಎನ್. ರಾಮು, ಸ್ಥಳೀಯರು

ಎಲ್ಲ ಪ್ಲಾಸ್ಟಿಕ್‌ ನಿಷೇಧವಲ್ಲ: ಪ್ಲಾಸ್ಟಿಕ್ ಬಳಕೆ ನಿಷೇಽಸಿದ ಮಾತ್ರಕ್ಕೆ ಎಲ್ಲ ಪ್ಲಾಸ್ಟಿಕ್ ಬಳಕೆಯೂ ನಿಷೇಽತವಲ್ಲ. ಹಾಲು, ಹಾಲಿನ ಉತ್ಪನ್ನಗಳು ಸೇರಿದಂತೆ ಕೆಲವೊಂದು ಉತ್ಪನ್ನಗಳನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತದೆ. ಇದಕ್ಕೆ ಸರ್ಕಾರದ ಅನುಮತಿ ಇರುವುದರಿಂದ ಅಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ರೀತಿಯ ಅಡ್ಡಿ ಇಲ್ಲ. ಈ ರೀತಿಯ ಉತ್ಪನ್ನಗಳಿಂದ ಸೃಷ್ಟಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿಯಾಗುವಂತೆ ಮಾಡುವುದೇ ಪಾಲಿಕೆಯ ಮುಂದಿರುವ ಸವಾಲಾಗಿದೆ. ನಗರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್ ನಿಂದ ಇತರೆ ವಸ್ತುಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.