59 ಪ್ರಕರಣ ಪತ್ತೆ; 8 ಮಂದಿಗೆ ದಂಡ; 51 ಮಂದಿಗೆ ನೋಟಿಸ್
ಕೆ.ಬಿ.ರಮೇಶನಾಯಕ
ಮೈಸೂರು: ಇಡ್ಲಿ ತಯಾರಿಕೆಯಲ್ಲಿ ಬಟ್ಟೆ ಬದಲು ಕ್ಯಾನ್ಸರ್‌ಕಾರಕ ಪ್ಲಾಸ್ಟಿಕ್ ಹಾಳೆಗಳನ್ನು ಬಳಸುತ್ತಿರುವುದು ಕಂಡುಬಂದಿದ್ದು, ತಪಾಸಣೆ ವೇಳೆ ಜಿಲ್ಲೆಯಲ್ಲಿ 59 ಮಂದಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
ರಾಜ್ಯ ಸರ್ಕಾರದ ಖಡಕ್ ಸೂಚನೆ ಮೇರೆಗೆ ತಪಾಸಣೆಗೆ ಇಳಿದಿರುವ ಜಿಲ್ಲೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು, ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಹಾಳೆ ಬಳಸುತ್ತಿರುವವರಿಗೆ ಚಾಟಿ ಬೀಸಿದ್ದಾರೆ.
ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಬದಿ ಫಾಸ್ಟ್‌ಫುಡ್‌ಗಳು ಮತ್ತು ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದಾಗ 59 ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಳೆ ಬಳಸುತ್ತಿರುವುದು ಪತ್ತೆಯಾಗಿದ್ದು, ಈ ಪೈಕಿ 8 ಮಂದಿ ಮಾಲೀಕರಿಗೆ ದಂಡ ವಿಧಿಸಲಾಗಿದೆ.
ಬೆಂಗಳೂರಿನಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದ್ದು, ಇದರಿಂದಾಗಿ ಕ್ಯಾನ್ಸರ್ ರೋಗಕ್ಕೆ ಎಡೆ ಮಾಡಿಕೊಟ್ಟಿದೆ ಎಂದುತಜ್ಞರು ವರದಿ ನೀಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಎಲ್ಲಾ ಕಡೆಗಳಲ್ಲಿ ತಪಾಸಣೆ ನಡೆಸುವಂತೆ ಆದೇಶ ನೀಡಿದ್ದರು.
ಅದರಂತೆ, ಸೋಮವಾರದಿಂದ ಶನಿವಾರದವರೆಗೆ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ತಪಾಸಣೆ ನಡೆಸಿರುವ ಅಧಿಕಾರಿಗಳಿಗೆ ರಸ್ತೆಬದಿ ಫಾಸ್ಟ್ ಫುಡ್, ಇಡ್ಲಿ ತಯಾರಿಕೆಗೆ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ.
ಮೈಸೂರು ನಗರದಲ್ಲಿ ಅತಿ ಹೆಚ್ಚು ಫಾಸ್ಟ್‌ಫುಡ್‌ಗಳಲ್ಲಿ ಪ್ಲಾಸ್ಟಿಕ್ ಹಾಳೆ ಬಳಸುತ್ತಿದ್ದು, 59 ಜನರಲ್ಲಿ 8 ಮಂದಿಗೆ ಕನಿಷ್ಠ ಒಂದು ಸಾವಿರ ರೂ.ನಿಂದ ನಾಲ್ಕು ಸಾವಿರ ರೂ.ತನಕ ದಂಡ ವಿಧಿಸಲಾಗಿದೆ. 51 ಮಂದಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ವರದಿಗಾಗಿ ನಿರೀಕ್ಷೆ: ಹಸಿರು ಬಟಾಣಿಯಲ್ಲಿ ಕೃತಕ ಬಣ್ಣ ಬಳಸಿರುವ ಬಗ್ಗೆ ತಪಾಸಣೆ ನಡೆಸಲಾಗುತ್ತಿದ್ದು,ಮೈಸೂರಿನ ಚಾಟ್ ಸೆಂಟರ್‌ಗಳಲ್ಲಿ ಸ್ಯಾಂಪಲ್ ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಐದು ಕಡೆಗಳಲ್ಲಿ ತಪಾಸಣೆ ಮಾಡಿ ಸಂಗ್ರಹಿಸಿರುವುದರಲ್ಲಿ ಏನಾದರೂ ಕೃತಕ ಬಣ್ಣ ಇರುವುದು ಪತ್ತೆಯಾದರೆ ತಕ್ಷಣವೇ ಅಂತಹವುಗಳನ್ನು ಸೀಜ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಸರಬರಾಜು ಮಾಡುವ ಮಾಲೀ ಕರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಕಲ್ಲಂಗಡಿ ಹಣ್ಣಿನತ್ತ ಕಣ್ಣು: ಬಿಸಿಲ ಬೇಗೆಗೆ ತಂಪು ನೀಡುವ ಕಲ್ಲಂಗಡಿ ಹಣ್ಣನ್ನು ಎಲ್ಲೆಂದರಲ್ಲಿ ಮಾರಾಟ ಮಾಡಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ತಪಾಸಣೆ ನಡೆಸಿ ಸ್ಯಾಂಪಲ್ ಸಂಗ್ರಹಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಕಲ್ಲಂಗಡಿ ಹಣ್ಣು ತಪಾಸಣೆಗೆ ಸೂಚನೆ ನೀಡಿದ್ದರೂ ಮೈಸೂರಿನಲ್ಲಿ ಈ ತನಕ ಪರೀಕ್ಷೆ ಮಾಡಿಲ್ಲ. ಹಾಗಾಗಿ, ಸೋಮವಾರದ ನಂತರ ಅಲ್ಲಲ್ಲಿ ಟನ್‌ಗಟ್ಟಲೆ ಸಂಗ್ರಹ ಮಾಡಿಕೊಂಡು ಉಂಡೆ ಲೆಕ್ಕದಲ್ಲಿ ಮಾರಾಟ ಮಾಡುವ ಕಡೆಗಳಲ್ಲಿ ತಪಾಸಣೆ ಮಾಡಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಂಕಿತ ಅಧಿಕಾರಿ ಡಾ.ಎ.ಎನ್.ಕಾಂತರಾಜು ಹೇಳಿದರು.
ಒಂದು ವಾರದಿಂದ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 5 ಹಸಿರು ಬಟಾಣಿ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ಮುಂದಿನ ಕ್ರಮಗಳಿ ಗಾಗಿ ವರದಿಗೆ ಕಾಯುತ್ತಿದ್ದೇವೆ. ಕಲ್ಲಂಗಡಿ ಹಣ್ಣಿ ನಲ್ಲಿ ಕೃತಕ ಬಣ್ಣ ಬಳಸಿರುವ ಬಗ್ಗೆ ಸ್ಯಾಂಪಲ್ ಪಡೆಯಲು ತಪಾಸಣೆ ನಡೆಸಲಿದ್ದೇವೆ. –ಡಾ.ಎ.ಎನ್.ಕಾಂತರಾಜು, ಅಂಕಿತ ಅಧಿಕಾರಿ,
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ.





