Mysore
17
broken clouds

Social Media

ಶನಿವಾರ, 31 ಜನವರಿ 2026
Light
Dark

ವಿಶ್ವದರ್ಜೆ ಫುಟ್‌ಪಾತ್ ನಿರ್ಮಾಣಕ್ಕೆ ಪ್ಲಾನ್!

ಕೆ.ಬಿ.ರಮೇಶನಾಯಕ

ಮೊದಲ ಹಂತದಲ್ಲಿ ಮೈಸೂರಿನ ಪ್ರಮುಖ ಮೂರು ರಸ್ತೆಗಳ ಗುರುತು

ಮೈಸೂರು: ದೇಶದ ಪ್ರಮುಖ ಸ್ಮಾರ್ಟ್ ಸಿಟಿಗಳಲ್ಲಿ ನಿರ್ಮಾಣಗೊಂಡಿರುವ ವಿಶ್ವದರ್ಜೆಯ ಫುಟ್‌ಪಾತ್ ಮಾದರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಮೈಸೂರು ನಗರಪಾಲಿಕೆ ಯೋಜನೆ ರೂಪಿಸುತ್ತಿದೆ.

ಮೊದಲ ಹಂತದಲ್ಲಿ ನಗರದ ಪ್ರಮುಖ ಮೂರು ರಸ್ತೆಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಈ ಯೋಜನೆಯ ಅಂದಾಜು ವೆಚ್ಚವನ್ನು ಗಮನಿಸಿಕೊಂಡು ಮುಂದಿನ ದಿನಗಳಲ್ಲಿ ಇತರೆ ರಸ್ತೆಗಳಲ್ಲೂ ಅದೇ ಮಾದರಿ ಅಳವಡಿಸಿಕೊಳ್ಳಲು ಚಿಂತನೆ ಮಾಡಲಾಗಿದೆ.

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಅರಮನೆ ನಗರಿ ಮೈಸೂರಿಗೆ ದಸರಾ ಮಹೋತ್ಸವ ಸಂದರ್ಭವಲ್ಲದೆ ವರ್ಷವಿಡೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ವಾರಾಂತ್ಯದ ರಜಾ ದಿನಗಳು ಹಾಗೂ ದಸರಾ ಸಂದರ್ಭದ ದಿನಗಳಲ್ಲಿ ಪ್ರವಾಸಿಗರು ಶಾಪಿಂಗ್ ಮಾಡಿಕೊಂಡು ಓಡಾಡುತ್ತಾರೆ. ಅರಮನೆ ಸುತ್ತಮುತ್ತಲಿನ ರಸ್ತೆಗಳಿಗೆ ಭೇಟಿ ನೀಡುವ ಕಾರಣಕ್ಕಾಗಿ ಜನದಟ್ಟಣೆಯಿಂದ ಕೂಡಿರುತ್ತದೆ.

ಆದರೆ, ಈ ರಸ್ತೆಗಳ ಫುಟ್‌ಪಾತ್‌ಗಳ ಅಂದ ಮಾತ್ರ ಅಷ್ಟೇನೂ ಸುಂದರವಾಗಿಲ್ಲ. ಆಗಿಂದಾಗ್ಗೆ ಫುಟ್‌ಪಾತ್ ದುರಸ್ತಿ ಕಾಮಗಾರಿಗೆ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿತ್ತು. ಇದನ್ನು ಮನಗಂಡಿರುವ ನಗರಪಾಲಿಕೆ ಆಯುಕ್ತ ಶೇಖರ್ ತನ್ವೀರ್ ಆಸಿಫ್‌ ಅವರು ಇದೀಗ ವಿಶ್ವದರ್ಜೆಯ ಸ್ಥಾನಮಾನ ಹೊಂದಿರುವ ಮಾದರಿಯಲ್ಲಿ ಫುಟ್‌ಪಾತ್ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆ, ರಾಜಸ್ಥಾನದ ಜೋಧ್ ಪುರ್, ಮಧ್ಯಪ್ರದೇಶದ ಇಂದೋರ್ ಸೇರಿದಂತೆ ಸ್ಮಾರ್ಟ್ ಸಿಟಿಗಳ ಮಾದರಿಯಲ್ಲಿ ಮೈಸೂರಿನಲ್ಲೂ ಫುಟ್‌ಪಾತ್ ನಿರ್ಮಾಣಕ್ಕೆ ಮುಂದಾಗಿದ್ದು, ಅಗತ್ಯ ಯೋಜನೆ ತಯಾರಿಸಲಾಗುತ್ತಿದೆ ಎಂದು ಗೊತ್ತಾಗಿದೆ.

ಮೊದಲ ಹಂತದಲ್ಲಿ ಮೂರು ರಸ್ತೆಗಳ ಗುರುತು: ಮೊದಲ ಹಂತದಲ್ಲಿ ನಗರದಲ್ಲಿ ಮೂರು ರಸ್ತೆಗಳನ್ನು ಗುರುತಿಸಲಾಗಿದ್ದು, ಮಿರ್ಜಾ ಇಸ್ಮಾಯಿಲ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನ್ಯೂ ಕಾಂತರಾಜ್ ಅರಸು ರಸ್ತೆಯಲ್ಲಿ ಅಂದಾಜು ಒಂದೂವರೆ ಕಿ.ಮೀ. ನಿರ್ಮಾಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಯುರ್ವೇದ ಕಾಲೇಜು ವೃತ್ತದಿಂದ ಬನ್ನಿಮಂಟಪ ದವರೆಗೆ, ಧನ್ವಂತ್ರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ, ನಾರಾಯಣಶಾಸಿ ರಸ್ತೆ, ಅಶೋಕ ರಸ್ತೆಯನ್ನು ಕೈಗೆತ್ತಿಕೊಳ್ಳ ಲಾಗುತ್ತದೆ. ಸ್ಮಾರ್ಟ್ ಸಿಟಿಗಳಲ್ಲಿ ಮಾಡಿರುವಂತೆ ಈ

ಫುಟ್‌ಪಾತ್‌ಗಳಲ್ಲಿ ಹೊಸ ವಿನ್ಯಾಸದ ಇಂಟರ್‌ಲಾಕ್, ಟೈಲ್ಸ್, ದೀಪದ ವ್ಯವಸ್ಥೆ, ಸಾರ್ವಜನಿಕರು ಮಾತ್ರ ಓಡಾಡುವುದಕ್ಕೆ ಅನುಕೂಲವಾಗುವಂತೆ ಕಬ್ಬಿಣದ ಸರಪಳಿಯ ಲೈನಿಂಗ್ ಹಾಕಲಾಗುತ್ತದೆ. ಸಂಜೆ ಹೊತ್ತು ವಾಯುವಿಹಾರಿಗಳು ಅಥವಾ ಪಾದಚಾರಿಗಳು ನೆಮ್ಮದಿಯಿಂದ ಸಂಚರಿಸುವ ರೀತಿಯಲ್ಲಿ ಇರುತ್ತದೆ.

” ಸ್ಮಾರ್ಟ್ ಸಿಟಿಗಳಲ್ಲಿ ಫುಟ್ ಪಾತ್ ನಿರ್ಮಾಣ ಮಾಡಿರುವಂತೆ ಮೈಸೂರಿನಲ್ಲೂ ವರ್ಲ್ಡ್ ಕ್ಲಾಸ್ ಫುಟ್‌ಪಾತ್ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ. ಮೊದಲ ಹಂತದಲ್ಲಿ ಮೂರು ರಸ್ತೆಗಳನ್ನು ಗುರುತಿಸಲಾಗಿದೆ.”‌

-ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರಪಾಲಿಕೆ

ಬಜೆಟ್‌ನಲ್ಲಿ ಅನುದಾನ ಮೀಸಲು:  ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳುವ ಮೂರು ರಸ್ತೆಗಳಲ್ಲಿ ಅಂದಾಜು ಒಂದೂವರೆ ಕಿ.ಮೀ.ನಷ್ಟು ಕಾಮಗಾರಿಗೆ ಬೇಕಾಗುವ ಅಂದಾಜು ಪಟ್ಟಿಯನ್ನು ತಯಾರಿಸಲಾಗುತ್ತಿದೆ. ಅಧೀಕ್ಷಕ ಅಭಿಯಂತರ ಸಿ.ಎಸ್.ಮಂಜುನಾಥ್, ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಅವರು ಈಗಾಗಲೇ ಮೂರು ರಸ್ತೆಗಳನ್ನೂ ಪರಿಶೀಲಿಸಿ ಡಿಪಿಆರ್ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೂರು ರಸ್ತೆಗಳಿಗೂ  ಆಗುವ ವೆಚ್ಚದ ಅಂದಾಜು ಪಟ್ಟಿಯ ಮೊತ್ತವನ್ನು ಮುಂದಿನ ಆಯವ್ಯಯದಲ್ಲಿ ಸೇರ್ಪಡೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡುವುದಕ್ಕೆ ತಯಾರಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಹೊಸ ಹೊಸ ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ:  ನಗರಪಾಲಿಕೆಯಲ್ಲಿ ತೆರಿಗೆ ಸಂಗ್ರಹಕ್ಕಾಗಿ ವಿಶೇಷವಾಗಿ ರೂಪಿಸಿದ್ದ ಪ್ಲಾನ್ ಸಫಲವಾಗಿದ್ದರಿಂದ ಈ ಬಾರಿ ನಿರೀಕ್ಷಿತ ತೆರಿಗೆ ಸಂಗ್ರಹವಾಗಿದೆ. ಕಳೆದ ಹಲವಾರು ವರ್ಷಗಳ ಬಾಕಿಯ ಮೊತ್ತ ಹಾಗೆಯೇ ಇದ್ದರೂ ೨೦೨೫-೨೬ನೇ ಸಾಲಿನ ತೆರಿಗೆ ಪಾವತಿಯಲ್ಲಿ ಗಣನೀಯವಾಗಿ ಸಂಗ್ರಹವಾಗಿದೆ. ವಲಯವಾರು ತೆರಿಗೆ ಸಂಗ್ರಹಕ್ಕೆ ಗುರಿ ನೀಡುವ ಜತೆಗೆ, ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದರು. ಇದನ್ನು ಗಮನಿಸಲು ಮತ್ತೊಬ್ಬ ಅಽಕಾರಿ ನೇಮಿಸಿದ್ದರಿಂದಾಗಿ ೨೦೦ ಕೋಟಿ ರೂ. ಸಂಗ್ರಹಕ್ಕೆ ಕಾರಣವಾಗಿತ್ತು. ಹೀಗಾಗಿ, ಈ ಬಾರಿಯ ಆಯವ್ಯಯದಲ್ಲಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಚಿಂತನೆ ಮಾಡಿದ್ದಾರೆ.

Tags:
error: Content is protected !!