ಮಹಾಶಿವರಾತ್ರಿ ಪ್ರಯುಕ್ತ ಪ್ರಾಧಿಕಾರದಿಂದ ಪಾದಯಾತ್ರಿಕಗಳಿಗೆ ಸಕಲ ವ್ಯವಸ್ಥೆ; ಅನೇಕರಿಂದ ಅನ್ನಸಂತರ್ಪಣೆ
ಮಹಾದೇಶ್ ಎಂ. ಗೌಡ
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮ. ಬೆಟ್ಟಕ್ಕೆ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಾದಯಾತ್ರೆ ಮೂಲಕ ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ೩ ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕನಕಪುರ, ರಾಮನಗರ, ಬಿಡದಿ, ಚನ್ನಪಟ್ಟಣ ಗ್ರಾಮದವರು ಕಾವೇರಿ ನದಿ ಸಂಗಮದ ಮೂಲಕ ಆಗಮಿಸುತ್ತಿದ್ದಾರೆ. ಇದಲ್ಲದೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಬರುತ್ತಿದ್ದಾರೆ.
ಕಳೆದ ೨ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಭಕ್ತಾದಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾ ಗುವ ನಿರೀಕ್ಷೆ ಇದೆ. ಹರಕೆ ಹೊತ್ತ ಭಕ್ತಾದಿಗಳು ಹಗಲು- ರಾತ್ರಿ, ಚಳಿ- ಬಿಸಿಲು ಲೆಕ್ಕಿಸದೆ ಶ್ರೀ ಕ್ಷೇತ್ರದತ್ತ ಪಾದಯಾತ್ರೆ ಬೆಳೆಸಿದ್ದಾರೆ. ಕಾವೇರಿ ನದಿ ದಾಟಿ ಬರುವ ಪಾದಯಾತ್ರಿಕರಿಗೆ ತಾಲ್ಲೂಕಿನ ಶಾಗ್ಯ ಗ್ರಾಮದ ಬಳಿ ಗ್ರಾಮಸ್ಥರು ಸರದಿಯ ರೂಪದಲ್ಲಿ ಹಣವನ್ನು ಸಂಗ್ರಹಿಸಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈಗಾಗಲೇ ಆಹಾರ ಪದಾರ್ಥಗಳು ಸಿದ್ಧವಾಗಿದ್ದು, ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ ಮಾಡಿದ್ದಾರೆ.
೨೦ ಟ್ಯಾಂಕ್ ಅಳವಡಿಕೆ: ಬೆಟ್ಟಕ್ಕೆ ಬರುವ ಪಾದ ಯಾತ್ರಿಕರ ಅನುಕೂಲಕ್ಕಾಗಿ ತಾಳಬೆಟ್ಟದಿಂದ ಮಲೆ ಮ. ಬೆಟ್ಟದವರೆಗೆ ಸುಮಾರು ೨೦ ಕಡೆ ಒಂದು ಸಾವಿರ ಲೀಟರ್ ಸಾಮರ್ಥ್ಯದ ಮಿನಿ ಟ್ಯಾಂಕ್‌ಗಳನ್ನು ಇಡ ಲಾಗಿದ್ದು ಸಮ ರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತಾಳಬೆಟ್ಟದಲ್ಲಿ ತಾತ್ಕಾಲಿಕ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ.ಐವತ್ತಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.
ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಬರುತ್ತಿರುವ ದೇವರ ಗುಡ್ಡರು, ಮಹದೇಶ್ವರ ಭಕ್ತರು ಕಂಸಾಳೆ ಬಾರಿಸುತ್ತಾ ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತಾ ಭಕ್ತಿ ಭಾವದಿಂದ ತೆರಳುತ್ತಿದ್ದರೆ, ಯುವಕರು ತಮಟೆ ಬಾರಿಸುತ್ತ ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಾ ಸಾಗುತ್ತಿದ್ದಾರೆ.
ಮ. ಬೆಟ್ಟಕ್ಕೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರಿಕರು ಆಗಮಿಸುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿಯ ನೀರಿನ ಪ್ರಮಾಣ ಕಡಿಮೆ ಮಾಡಲು ಡಿಸಿಎಂ ಈಗಾಗಲೇ ಸೂಚನೆ ನೀಡಿದ್ದಾರೆ.
ಕನಕಪುರ ತಹಸಿಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಕಂದಾಯ, ಅರಣ್ಯ, ಗ್ರಾಪಂ, ಅಗ್ನಿಶಾಮಕ, ಪೊಲೀಸ್ ಇಲಾಖೆಯವರು ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಕಾವೇರಿ ನದಿ ದಾಟುವ ಸ್ಥಳದಲ್ಲಿ ಅಗತ್ಯ ಬಂದೋಬಸ್ತ್ ಮಾಡಿದ್ದಾರೆ. ಎಸ್‌ಟಿಆರ್‌ಎಫ್, ಎನ್ ಡಿಆರ್ ಎಫ್ ತಂಡದ ಸಿಬ್ಬಂದಿ ಸಹ ಬೊಮ್ಮಸಂದ್ರದ ಬಳಿಯೇ ಠಿಕಾಣಿ ಹೂಡಿದ್ದಾರೆ.
ನದಿ ದಾಟಿಸುತ್ತಿರುವ ಸಿಬ್ಬಂದಿ
೨ ವರ್ಷಗಳ ಹಿಂದೆ ಬೆಟ್ಟಕ್ಕೆ ಆಗಮಿಸುತ್ತಿದ್ದ ಪಾದಯಾತ್ರಿಕರಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿ ೫ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಬೊಮ್ಮಸಂದ್ರದಿಂದ ನದಿ ಮೂಲಕ ನಡೆದುಕೊಂಡು ಬರುತ್ತಿರುವ ಪಾದಯಾತ್ರಿಕರಿಗೆ ಎಡ ಹಾಗೂ ಬಲಬದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ ಹಿಡಿದುಕೊಂಡಿದ್ದು ಮಧ್ಯದಲ್ಲಿ ಪಾದಯಾತ್ರಿಕರನ್ನು ಸುರಕ್ಷಿತವಾಗಿ ದಾಟಿಸುತ್ತಿದ್ದಾರೆ.
ಈಗಾಗಲೇ ಪಾದಯಾತ್ರಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಹಾಗೂ ಮುಖಂಡರಾದ ಜಗದೀಶ್, ಕುಮಾರ್ ಅವರ ಸಹಕಾರದಿಂದ ಏಳಗಳ್ಳಿ ಗ್ರಾಮದಲ್ಲಿ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ. -ರವಿ, ಗ್ರಾಪಂ ಮಾಜಿ ಅಧ್ಯಕ್ಯ





