Mysore
20
haze

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಪೆರಿಫೆರಲ್ ರಸ್ತೆ: ಭೂ ಸ್ವಾಧೀನಕ್ಕೆ ಎಂಡಿಎ ಸಿದ್ಧತೆ

ಕೆ.ಬಿ.ರಮೇಶ ನಾಯಕ

ಮೈಸೂರು: ಮುಂದಿನ ೩೦-೫೦ ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಮೈಸೂರು ಹೊರವಲಯದಲ್ಲಿ ೧೦೫.೩೧ ಕಿ. ಮೀ. ಪೆರಿಫೆರಲ್ ರಸ್ತೆ ನಿರ್ಮಾಣ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇದಕ್ಕೆ ಅಗತ್ಯವಾದ ಭೂ ಸ್ವಾಧೀನಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಮುಂದಾಗಿದೆ.

ಮೈಸೂರು ಮಹಾನಗರದಲ್ಲಿ ವಾಹನಗಳ ಸಂಚಾರ ದಟ್ಟಣೆಯ ಒತ್ತಡವನ್ನು ಕಡಿಮೆಗೊಳಿಸಲು ಮತ್ತು ಮೈಸೂರು ನಗರ ಸಂಪರ್ಕಿಸುವ ರಸ್ತೆಯನ್ನು ಬಲಪಡಿಸಲು ಮತ್ತೊಂದು ಹೊರವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಎಂಡಿಎ, ೧೦೫ ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ ೨೦೦ ಅಡಿ ಅಗಲ ಭೂಸ್ವಾಧೀನ ಮಾಡಿ ಸಾರ್ವಜ ನಿಕರಿಗೆ ಉಪಯುಕ್ತತೆಗಳು, ಲಾಜಿಸ್ಟಿಕ್ ಹಬ್, ಆದಾಯ ತರುವ ಯೋಜನೆಗಳನ್ನು ಕಾರ್ಯ ಗತ ಗೊಳಿಸಲು ಉದ್ದೇಶಿಸಿದೆ. ಗ್ರೇಟರ್ ಮೈಸೂರು ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆ ಯಲ್ಲಿ ಪೆರಿಫೆರಲ್ ರಿಂಗ್ ರಸ್ತೆಯಲ್ಲಿ ನಡೆಸಲು ಉದ್ದೇಶಿ ಸಿರುವ ವಾಣಿಜ್ಯ ಚಟುವಟಿಕೆ ಗಳನ್ನು ಕುರಿತು ವಿವರಣೆ ನೀಡಲಾಗಿದೆ. ಈ ಬಗ್ಗೆ ವಿಸ್ತೃತವಾದ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಪ್ರಸ್ತಾವಿತ ರಸ್ತೆ ೪೫ ಮೀ. ಅಗಲವಿದ್ದು, ಆರು ಪಥಗಳು (೩+೩ ವಾಹನಗಳಿಗೆ) ಮತ್ತು ಎರಡು ಸರ್ವೀಸ್ (೨+೨) ರಸ್ತೆಗಳನ್ನು ಒಳಗೊಂಡಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಮೈಸೂರು ಯೋಜಿತ ನಗರ ವಿಸ್ತರಣೆಯನ್ನು ಬೆಂಬಲಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಎಂಡಿಎ ಪೆರಿಫೆರಲ್ ರಸ್ತೆಯ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆಗೆ ಒಟ್ಟು ೧೦೫.೩೧ ಕಿ.ಮೀ. ಉದ್ದಕ್ಕೂ ೨೦೦ ಅಡಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಅಂದರೆ ಸುಮಾರು ೬,೮೨,೫೦,೦೦೦ ಚದರ ಅಡಿ ಭೂಮಿ ಸರ್ಕಾರಿ ಆಸ್ತಿಯಾಗಿ ಉಳಿಯುತ್ತದೆ.

ಟ್ರಕ್ ಟರ್ಮಿನಲ್‌ಗಳು, ಗೋದಾಮು, ಕಮರ್ಷಿಯಲ್ ಶೆಡ್‌ಗಳು, ಲಾಜಿಸ್ಟಿಕ್ಸ್ ಹಬ್‌ಗಳು, ಸೇವಾ ಕೇಂದ್ರಗಳು, ಹಸಿರು ವಲಯಗಳು, ನೀರಿನ ಪೈಪ್ ಲೈನ್‌ಗಳು, ವಿದ್ಯುತ್ ಉಪಕೇಂದ್ರಗಳು, ತ್ಯಾಜ್ಯ ನಿರ್ವಹಣಾ ಸೌಲಭ್ಯಗಳು ಮತ್ತು ಇತರ ಸಾರ್ವಜನಿಕ ಉಪಯುಕ್ತತೆಗಳನ್ನು ಸ್ಥಾಪಿಸಲು ಎಂಡಿಎ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸೌಲಭ್ಯಗಳಿಂದ ಬರುವ ಆದಾಯವು ಖಾಸಗಿ ಡೆವಲಪರ್‌ಗಳಿಗಿಂತ ನೇರವಾಗಿ ಎಂಡಿಎಗೆ ಸೇರುತ್ತದೆ. ಎಂಡಿಎ ಈ ಭೂಮಿಯ ಕೆಲವು ಭಾಗಗಳನ್ನು ಮಾರಾಟ ಮಾಡಲು ಆಯ್ಕೆ ಮಾಡಿಕೊಂಡರೂ, ಅದು ಲಕ್ಷಾಂತರ ಕೋಟಿ ರೂ. ಗಳಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಗ್ರೇಟರ್ ಮೈಸೂರು ಯೋಜನೆ ಕುರಿತ ಸಭೆಯಲ್ಲಿ ಉದ್ದೇಶಿತ ಪೆರಿಫೆರಲ್ ರಸ್ತೆಯ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಆದಾಯ ಗಳಿಸುವ ಮಾದರಿಯನ್ನು ಸಿಎಂ ಮೆಚ್ಚಿಕೊಂಡಿರುವ ಜತೆಗೆ, ಹಾಲಿ ಯೋಜನೆ ಕಾರ್ಯಗತಗೊಳಿಸಲು ಹೊರಟಿರುವ ಎಂಡಿಎ ಮುಂದುವರಿಯಲು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸಿದ್ದರಾಮಯ್ಯ ಅವರ ಅನುಮೋದನೆಯ ನಂತರ, ಡಿಪಿಆರ್ ಸಲಹೆಗಾರರಿಗೆ ಮುಖ್ಯ ರಸ್ತೆ ಮತ್ತು ಸರ್ವೀಸ್ ರಸ್ತೆಗೆ ಮಾತ್ರವಲ್ಲದೆ ೨೦೦ ಅಡಿ ಬಫರ್ ವಲಯಗಳು ಮತ್ತು ಎರಡೂ ಕಡೆ ಭೂಮಿಯನ್ನು ಗುರುತಿಸಿ, ಮೀಸಲಿಡಲು ಸೂಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

” ಮೈಸೂರಿನ ಭವಿಷ್ಯದ ದೃಷ್ಟಿಯಿಂದ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕರೆದಿದ್ದ ಟೆಂಡರ್‌ನಲ್ಲಿ ನಾಲ್ಕು ಸಂಸ್ಥೆಗಳು ಭಾಗಿಯಾಗಿವೆ. ಈಗ ಒಂದನ್ನು ಆಯ್ಕೆ ಮಾಡಿಕೊಂಡು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಹೇಳಲಾಗುವುದು.”

-ಕೆ.ಆರ್.ರಕ್ಷಿತ್, ಆಯುಕ್ತ, ಎಂಡಿಎ

Tags:
error: Content is protected !!