Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ಭೂ ಪರಿಹಾರಕ್ಕಾಗಿ ಮುಗಿಬಿದ್ದ ಜನ

land compensation

ಶ್ರೀಧರ್ ಆರ್. ಭಟ್

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರಕ್ಕೆ ಸೇರುವ ಇಮ್ಮಾವು, ಹುಳಿಮಾವು ಗ್ರಾಮಗಳಲ್ಲಿ 2012ರಲ್ಲಿ ಸರ್ಕಾರ ರೈತರಿಂದ ಭೂಮಿ ವಶಪಡಿಸಿಕೊಂಡು ಕೆಐಎಡಿಬಿಗೆ ನೀಡಿದ ಸಂಬಂಧ ಭೂಮಿ ಕಳೆದು ಕೊಂಡ ಜನರು ಇದೀಗ ಪರಿಹಾರಕ್ಕಾಗಿ ಮುಗಿಬಿದ್ದಿದ್ದಾರೆ.

ಜಮೀನಿನ ಪರಿಹಾರ ಪಡೆದುಕೊಳ್ಳಲು ಈ ಭಾಗದ ಸಹಸ್ರಾರು ಜನರು ಬುಧವಾರ ನಂಜನಗೂಡು ತಾಲ್ಲೂಕು ಕಚೇರಿಗೆ ಆಗಮಿಸಿದ್ದ ಪರಿಣಾಮ ಅರ್ಜಿ ಸ್ವೀಕರಿಸುತ್ತಿದ್ದ ಕಚೇರಿಯ ಸಿಬ್ಬಂದಿ ಹೈರಾಣಾದರು.

2012ರಲ್ಲಿ ಹಿಮ್ಮಾವು ಹಾಗೂ ಹುಳಿಮಾವು ಕೈಗಾರಿಕಾ ಕೇಂದ್ರವನ್ನು ನಿರ್ಮಿಸಲು ರಾಜ್ಯ ಸರ್ಕಾರ ಈ ಪ್ರದೇಶದ ಭೂಮಿಯನ್ನು ವಶಪಡಿಸಿಕೊಂಡು ಆಗಲೇ ಕೆಐಎಡಿಬಿಗೆ ಹಸ್ತಾಂತರಿಸಿತ್ತು. ಅಂದಿನಿಂದ ಇಂದಿನವರೆಗೆ ಸುಮಾರು 13 ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡಿ ಹೋರಾಟ ಮಾಡಿ ಹೈರಾಣಾದ ಜನ ಈಗ ಪರಿಹಾರಕ್ಕಾಗಿ ಅರ್ಜಿ ಕರೆಯಲಾಗಿರುವ ಮಾಹಿತಿ ತಿಳಿದು ಮಂಗಳವಾರ ನಂಜನಗೂಡು ತಾಲ್ಲೂಕು ಕಚೇರಿಗೆ ದೌಡಾಯಿಸಿದ್ದರು.

300 ಎಕರೆಯಲ್ಲಿ ತಮ್ಮ ತಂದೆ, ತಾತ, ಮುತ್ತಾತ ಉಳುಮೆ ಮಾಡುತ್ತಿದ್ದರು. ಆದ್ದರಿಂದ ಈಗ ಆ ಭೂಮಿಯ ಪರಿಹಾರ ಅವರ ವಂಶಸ್ಥರಾದ ನಮಗೆ ಬರಬೇಕು ಎಂಬ ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿಗಳ ವಿಲೇವಾರಿ ಕಂದಾಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.

ಪರಿಹಾರಕ್ಕಾಗಿ ನೀಡಬೇಕಾದ ಅರ್ಜಿಯೊಂದಿಗೆ ಸಾಗುವಳಿ ಚೀಟಿ, ಆರ್‌ಟಿಸಿ, ಆಧಾರ್, ವಂಶವೃಕ್ಷ , ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಲಗತ್ತಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದು, ಒಂದೇ ಜಾಗಕ್ಕಾಗಿ ಅನೇಕರು ಆ ಜಾಗ ತಮ್ಮದು ಎಂದು ಅರ್ಜಿ ನೀಡಿದ್ದೂ ಸೇರಿದಂತೆ ನೀಡಿದ ಅರ್ಜಿಗಳಲ್ಲಿ ಆ ದಾಖಲಾತಿಗಳ ಸಿಂಧುತ್ವವನ್ನು ಪತ್ತೆ ಮಾಡುವುದೇ ಕಂದಾಯ ಅಧಿಕಾರಿಗಳ ಪಾಲಿಗೆ ಶ್ರಮದಾಯಕವಾಗಲಿದೆ.

ಅರ್ಜಿ ಸಲ್ಲಿಸಲು ಬಂದಿದ್ದ ಅನೇಕರಿಗೆ ಕೈಗಾರಿಕೆಗಾಗಿ ಜಮೀನು ವಶಪಡಿಸಿಕೊಂಡಿರುವುದೇ ತಿಳಿದಿಲ್ಲ. ಅರ್ಜಿ ನೀಡಲು ಸರತಿಯಲ್ಲಿ ನಿಂತವರನ್ನು ಪತ್ರಿಕೆ ಮಾತನಾಡಿಸಿದಾಗ ಅವರು ಚಿತ್ರನಗರಿಗೆ ನಮ್ಮ ಜಮೀನು ನೀಡಿದ್ದು ಅದಕ್ಕಾಗಿ ಪರಿಹಾರ ಎಂದರು.

ಅಧಿಕಾರಿಗಳ ಪ್ರಕಾರ ಈ ಪರಿಹಾರ 2012ರಲ್ಲಿ ಕೈಗಾರಿಕೆಗಾಗಿ ವಶಪಡಿಸಿಕೊಂಡಿದ್ದ 300 ಎಕರೆ ಪ್ರದೇಶದ ಸರ್ವೆ ನಂ. 424ರ ಸುತ್ತಮುತ್ತಲಿನ ಪರಿಹಾರ ನೀಡಿಕೆಯಲ್ಲಿ ಆಗ ಕೈತಪ್ಪಿಹೋಗಿದ್ದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ.

Tags:
error: Content is protected !!