Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಬೀದಿನಾಯಿಗಳು, ಕೋತಿಗಳ ಹಾವಳಿಯಿಂದ ಕಂಗೆಟ್ಟ ಜನತೆ

ಮಂಜು ಕೋಟೆ

ಕೋಟೆ ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿ, ಕೋತಿಗಳ ಹಾವಳಿ ನಿಯಂತ್ರಿಸಲು ಆಗ್ರಹ 

ಎಚ್.ಡಿ.ಕೋಟೆ: ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿ ಮತ್ತು ಕೋತಿಗಳ ಹಾವಳಿಯಿಂದಾಗಿ ಮಕ್ಕಳು, ವೃದ್ಧರು, ಜನಸಾಮಾನ್ಯರು ಪ್ರತಿನಿತ್ಯ ಪ್ರಾಣಭಯದಿಂದ ಜೀವನ ನಡೆಸುವ ಪರಿಸ್ಥಿತಿ ಎದುರಾಗಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪುರಸಭೆ ವ್ಯಾಪ್ತಿಯ ೨೩ ವಾಡ್ಗಳಲ್ಲೂ ದಿನದಿಂದ ದಿನಕ್ಕೆ ಬೀದಿ ನಾಯಿಗಳು ಮತ್ತು ಕೋತಿಗಳು ಹೆಚ್ಚಾಗಿದ್ದು, ಗುಂಪು ಗುಂಪುಗಳಾಗಿ ಬೀದಿ ಬೀದಿಯಲ್ಲಿ ಮನೆ, ಸರ್ಕಾರಿ ಕಚೇರಿಗಳು, ಪಶು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿವೆ. ಬೀದಿ ನಾಯಿಗಳಂತೂ ಎಲ್ಲೆಂದರಲ್ಲಿ ಗುಂಪುಗಳಾಗಿ ಓಡಾಡುತ್ತಿದ್ದು, ಮಹಿಳೆಯರು ಮಕ್ಕಳು, ದನ-ಕರು, ವೃದ್ಧರ ಮೇಲೆ ದಾಳಿ ನಡೆಸುತ್ತಿವೆ.

ಮೊದಲನೇ ಮತ್ತು ಎರಡನೇ ಮುಖ್ಯ ರಸ್ತೆಗಳಲ್ಲಿ ಹಾಗೂ ಕೃಷ್ಣಾಪುರದಲ್ಲಿ ಕೋತಿಗಳ ಹಾವಳಿ ಮಿತಿಮೀರಿದ್ದು, ಜನಸಾಮಾನ್ಯರ ಮೇಲೂ ದಾಳಿ ನಡೆಸುತ್ತಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಮತ್ತು ಸಾರ್ವಜನಿಕರು ಭೀತಿಗೊಂಡಿದ್ದಾರೆ. ಅದರಲ್ಲೂ ಕೋಳಿ, ಮೇಕೆ, ದನದ ಮಾಂಸದ ಅಂಗಡಿಗಳ ಸಮೀಪ ಬಂದು, ಅಂಗಡಿಯವರು ಹಾಕುವ ಮೂಳೆ ಮಾಂಸಗಳಿಗೆ ಮುಗಿಬಿದ್ದು, ಆತಂಕ ಉಂಟುಮಾಡುತ್ತಿವೆ.

ಪರಿಸ್ಥಿತಿ ಹೀಗಿದ್ದರೂ ಇವುಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

” ಕೃಷ್ಣಾಪುರ ವ್ಯಾಪ್ತಿಯ ರಸ್ತೆಯಲ್ಲಿ ಕೋತಿಗಳ ಹಾವಳಿಯಿಂದಾಗಿ ಜನರು ಓಡಾಡಲು ಸಾಧ್ಯವಾಗುತ್ತಿಲ್ಲ. ಜನರು ಭಯ ಭೀತಿಯಿಂದ ಮನೆಯಲ್ಲೇ ಇರುವ ಪರಿಸ್ಥಿತಿ ಎದುರಾಗಿದೆ. ಇವುಗಳನ್ನು ನಿಯಂತ್ರಿಸುವಂತೆ ಪುರಸಭೆ ಅಧಿಕಾರಿಗಳಿಗೆ, ಅರಣ್ಯ ಇಲಾಖೆಯವರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ”

-ಪರಶಿವಮೂರ್ತಿ, ಕೃಷ್ಣಾಪುರ 

” ಕೋತಿಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯವರ ಸಹಕಾರ ಬೇಕಾಗಿದೆ. ಆದರೆ ಅವರು ಸಹಕಾರ ನೀಡುತ್ತಿಲ್ಲ. ನಾಯಿಗಳ ಹಾವಳಿ ನಿಯಂತ್ರಿಸಲು ನ್ಯಾಯಾಲಯದ ನಿರ್ದೇಶನದಂತೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.”

-ಸುರೇಶ್, ಮುಖ್ಯಾಧಿಕಾರಿ, ಪುರಸಭೆ

Tags:
error: Content is protected !!