Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಶೀತಗಾಳಿ, ಮೈಕೊರೆಯುವ ಚಳಿಗೆ ಜನ ತತ್ತರ

ಗಿರೀಶ್ ಹುಣಸೂರು

ಮೈಸೂರು: ದಿತ್ವಾ ಚಂಡಮಾರುತದ ಪರಿಣಾಮ ವಾತಾವರಣದಲ್ಲಿ ಬದಲಾವಣೆಯಾಗಿರುವ ಜತೆಗೆ ಚಳಿಗಾಲವು ಆರಂಭವಾಗಿರುವುದರಿಂದ ಕುಳಿರ್ಗಾಳಿ, ಮೈಕೊರೆ ಯುವ ಚಳಿಗೆ ಹೆದರಿ ಜನ ಈಗಾಗಲೇ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಗರಿಷ್ಟ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಮೂಲೆ ಸೇರಿದ್ದ ಸ್ವೆಟರ್, ಟೋಪಿ ಮೊದಲಾದ ಬೆಚ್ಚನೆಯ ಉಡುಪುಗಳನ್ನು ಹುಡುಕಿಕೊಂಡು ಜನ ಧರಿಸುತ್ತಿದ್ದು, ಬೆಳಿಗ್ಗೆ- ಸಂಜೆ ವಾಯುವಿಹಾರಕ್ಕೆ ಹೋಗುವವರ ಸಂಖ್ಯೆ ಕೂಡ ತಗ್ಗಿದೆ.

ಬೆಳ್ಳಂಬೆಳಿಗ್ಗೆ ದಟ್ಟ ಮಂಜು, ಮೈ ಕೊರೆಯುವ ಚಳಿ ಆವರಿಸಿದ್ದರೆ, ಸಂಜೆ ಶೀತಗಾಳಿ ಬೀಸುತ್ತಿರುವುದರಿಂದ ವೈದ್ಯರ ಸಲಹೆಯಂತೆ ಅನಿವಾರ್ಯವಾಗಿ ವಾಯು ವಿಹಾರಕ್ಕೆ ಬರಲೇಬೇಕಾದವರು ಮೈ ಕೊರೆಯುವ ಚಳಿಯಲ್ಲೂ ಬೆಚ್ಚನೆಯ ಉಡುಪು ಧರಿಸಿ, ಕಿವಿಗೆ ಮಂಕಿಕ್ಯಾಪ್ ಹಾಕಿಕೊಂಡು ಮನೆಯಿಂದ ಹೊರಬರುತ್ತಿದ್ದಾರೆ. ರೈತರು, ಕೂಲಿ ಕಾರ್ಮಿಕರು ಒಣಹುಲ್ಲು, ತರಗಿಗೆ ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುವ ಜತೆಗೆ ಈ ಚಳಿಗೆ ಹೆಚ್ಚಾಗಿ ಕಾಫಿ, ಟೀ ಯತ್ತ ಮೊರೆ ಹೋಗುತ್ತಿದ್ದಾರೆ. ಈ ಚಳಿಗೆ ಜನರು ಥರಗುಟ್ಟಿ ಹೋಗುತ್ತಿದ್ದು, ಜನವರಿಯಲ್ಲಿ ಶೀತಗಾಳಿ ಉತ್ತುಂಗಕ್ಕೆ ಏರುವ ನಿರೀಕ್ಷೆ ಇದ್ದು, ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಲಿದೆ. ಈ ಅವಧಿಯಲ್ಲಿ ಮಕ್ಕಳು, ಹಿರಿಯರು, ಗರ್ಭಿಣಿ-ಬಾಣಂತಿಯರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮೋಡ ಕವಿದ ವಾತಾವರಣ, ಶೀತಗಾಳಿ, ಚಳಿಯ ತೀವ್ರತೆ ಹೆಚ್ಚಿದಂತೆ ಜನರ ಆರೋಗ್ಯ ಹದಗೆಡಲಿದ್ದು, ಜನರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ.

ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಸುಮಾರು ೫೦ ಕಿ.ಮೀ. ದೂರದಲ್ಲಿ ರೂಪುಗೊಂಡಿದ್ದ ದಿತ್ವಾ ಚಂಡ ಮಾರುತವು ಪ್ರಸ್ತುತ ದುರ್ಬಲಗೊಂಡು ಡೀಪ್ಡಿ ಪ್ರೆಶನ್ ಆಗಿ ಪರಿವರ್ತನೆಗೊಂಡಿದೆ. ಇದರಿಂದ ಕರ್ನಾಟಕದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆಯಿದ್ದು, ಕೆಲವು ಕಡೆ ಹಗುರ ಮಳೆಯಾಗುವ  ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.

ಮಳೆಯ ಮುನ್ಸೂಚನೆ: ರಾಜ್ಯದ ದಕ್ಷಿಣ ಒಳ ನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ( ಪಾವಗಡ ಸಹಿತ) ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮೋಡ ಅಥವಾ ತುಂತುರು ಮಳೆಯ ಮುನ್ಸೂಚನೆ ಇದೆ. ಡಿಸೆಂಬರ್ ೨ರಿಂದ ಅಲ್ಲಲ್ಲಿ ಹಿಂಗಾರು ಮಳೆಯ ಮುನ್ಸೂಚನೆ ಇದ್ದು, ಡಿ. ೫ರ ತನಕ ಮುಂದುವರಿಯುವ ಲಕ್ಷಣಗಳಿವೆ. ಮಲೆನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದೆ. ಕೊಡಗು ಜಿಲ್ಲೆಯ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದ್ದು, ಈಗಿನಂತೆ ಮಲೆನಾಡು ಜಿಲ್ಲೆಗಳಲ್ಲಿ ಡಿಸೆಂಬರ್ ೪ರ ತನಕ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ೫ರಿಂದ ಹಿಂಗಾರು ಮಳೆಯ ಮುನ್ಸೂಚನೆ ಇದೆ.

ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ದಿತ್ವಾ ಚಂಡ ಮಾರುತದ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ. ಆದರೆ ಅಲ್ಲಲ್ಲಿ ವಿರಳವಾಗಿ ಹಗುರ ಮೋಡದ ವಾತಾವರಣ ಇರಬಹುದು. ಒಣ ಹವೆ ಮುಂದುವರಿಯಲಿದೆ.

ಕರಾವಳಿ ಪ್ರದೇಶಗಳಾದ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಅಲ್ಲಲ್ಲಿ ಹಗುರ  ಡದ ವಾತಾವರಣದ ಮುನ್ಸೂಚನೆ ಇದೆ. ಕಾಸರಗೋಡು, ಮಂಗಳೂರು ಹಾಗೂ ಸುರತ್ಕಲ್ ಸುತ್ತಮುತ್ತ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ಮುಂದುವರಿಯಲಿದೆ.

ಈಗಿನಂತೆ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ ೪ರ ತನಕ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಡಿ.೫ ರಿಂದ ಪೂರ್ವ ದಿಕ್ಕಿನಿಂದ ಮಳೆಯ ಸಾಧ್ಯತೆಗಳಿವೆ. ಆದರೆ ಅದೂ ಬದಲಾಗಬಹುದು ಎನ್ನುತ್ತಾರೆ ಹವಾಮಾನ ತಜ್ಞರು.

” ಹಗಲು ಹೊತ್ತಿನಲ್ಲಿ ಈ ಪ್ರಮಾಣದ ತಾಪಮಾನ ಕುಸಿತ ತೀರಾ ಅಪರೂಪ. ರಾತ್ರಿ ಮತ್ತು ಹಗಲಿನ ನಡುವಿನ ತಾಪಮಾನ ವ್ಯತ್ಯಾಸ ಕೇವಲ ೨ ರಿಂದ ೩ ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿರುವುದು ಚಳಿಯ ಅನುಭವವನ್ನು ಹೆಚ್ಚಿಸಿದೆ. ಇನ್ನೂ ಎರಡು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ನಂತರ ಬಿಸಿಲು ಹೆಚ್ಚುವ ಸಾಧ್ಯತೆ ಇದೆ.”

-ಸಿ.ಎಸ್.ಪಾಟೀಲ್, ವಿಜ್ಞಾನಿ,  ಹವಾಮಾನ ಕೇಂದ್ರ, ಬೆಂಗಳೂರು

” ದಿತ್ವಾ ಚಂಡಮಾರುತವು ಡಿಸೆಂಬರ್ ೨ರಂದು ಆಂಧ್ರದ ನೆಲ್ಲೂರು, ಓಂಗಾಲ್ನಲ್ಲಿ ದುರ್ಬಲಗೊಂಡು, ಮತ್ತೆ ದಕ್ಷಿಣಕ್ಕೆ ಚಲಿಸಿ ತಮಿಳುನಾಡಿನ ವಿಲುಪ್ಪುರಂನಲ್ಲಿ ಸಂಪೂರ್ಣ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇದರೊಂದಿಗೆ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ೫ ರಿಂದ ೬ ದಿನಗಳವರೆಗೆ ಹಿಂಗಾರು ಮಳೆಯ ಸಾಧ್ಯತೆಗಳಿವೆ.”

-ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ

Tags:
error: Content is protected !!