Mysore
20
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಪೊಲೀಸ್ ಸಿಬ್ಬಂದಿ ಕಾರ್ಯವೈಖರಿಗೆ ಜನರಿಂದ ಮೆಚ್ಚುಗೆ

ಮಂಜು ಕೋಟೆ

ಮುಖ್ಯಮಂತ್ರಿಗಳ ಚಿನ್ನದ ಪದಕ ಗಳಿಸಿದ ಕೋಟೆಯ ರಮೇಶ್ ರಾವ್, ಸೈಯದ್ ಕಬೀರುದ್ದಿನ್‌ಗೆ ಸನ್ಮಾನ 

ಎಚ್.ಡಿ ಕೋಟೆ: ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ, ಪಟ್ಟಣದ ನಿವಾಸಿ ರಮೇಶ್ ರಾವ್ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಪೇದೆ ಸೈಯದ್ ಕಬೀರುದ್ದಿನ್ ಈ ಇಬ್ಬರೂ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿರುವುದು ತಾಲ್ಲೂಕಿಗೆ ಕೀರ್ತಿ ತಂದಿದೆ.

ಪಟ್ಟಣದ ಹನುಮಂತನಗರ ನಿವಾಸಿ ಜನಾರ್ಧನ್ ಮತ್ತು ಶಾರದಾ ಬಾಯಿಯವರ ಪುತ್ರರಾದ ರಮೇಶ್ ರಾವ್ ಎರಡನೇ ಬಾರಿಗೆ ಮುಖ್ಯಮಂತ್ರಿಗಳ ಪದಕ ಪಡೆಯುವ ಮೂಲಕ ತಾಲ್ಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯಲ್ಲಿ ಮುಖ್ಯಪೇದೆಯಾಗಿ ಕೆಲಸ ನಿರ್ವಹಿಸುತ್ತಿರುವ ರಮೇಶ್ ರಾವ್, ಇತ್ತೀಚೆಗೆ ಮಲೆನಾಡಿನ ಶೃಂಗೇರಿ ವ್ಯಾಪ್ತಿಯಲ್ಲಿ ನಕ್ಸಲ್ ತಂಡದ ಪ್ರಮುಖ ನಾಯಕನಾಗಿದ್ದ ರವೀಂದ್ರ ಅವರ ಮನವೊಲಿಸಿ ಶರಣಾಗುವಂತೆ ಮಾಡುವಲ್ಲಿ ಹಾಗೂ ಹಲವು ತಿಂಗಳ ಕಾಲ ಮಾರುವೇಷದಲ್ಲಿ ಶೋಧ ನಡೆಸಿ, ಪ್ರಾಣವನ್ನು ಲೆಕ್ಕಿಸದೆ ಕೆಲಸ ನಿರ್ವಹಿಸಿದ್ದರು. ಇವರ ಕರ್ತವ್ಯವನ್ನು ಮೆಚ್ಚಿ ಪೊಲೀಸ್ ಇಲಾಖೆ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಿಸಿತ್ತು.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ನೀಡಿ ಗೌರವಿಸಿದ್ದಾರೆ. ಈ ಹಿಂದೆ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ರಮೇಶ್ ರಾವ್ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅನೇಕ ದರೋಡೆ ಪ್ರಕರಣ, ಕೊಲೆ ಪ್ರಕರಣ, ಕಳ್ಳತನ ಇನ್ನಿತರ ಪ್ರಕರಣಗಳನ್ನು ಭೇದಿಸಿ ಪತ್ತೆ ಮಾಡಿದ್ದಾರೆ.

೨೦೧೨ರಲ್ಲಿ ಪ್ರಥಮವಾಗಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಕೋಟೆ ತಾಲ್ಲೂಕಿನ ಪೊಲೀಸ್ ಎಂದು ರಮೇಶ್ ರಾವ್ ಹೆಸರು ಗಳಿಸಿದ್ದರು. ಈಗ ಮತ್ತೊಂದು ಸಾಧನೆ ಮಾಡಿ ೨ನೇ ಬಾರಿಗೆ ಪದಕ ಪಡೆದುಕೊಂಡು ಪಟ್ಟಣಕ್ಕೆ ಆಗಮಿಸಿದ ರಮೇಶ್ ರಾವ್ ಅವರನ್ನು ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು ಪಟಾಕಿ ಸಿಡಿಸಿ ವಿಜಯೋತ್ಸವ ನಡೆಸಿ ಕೋಟೆ ಸಿಂಗಂ ಎಂದು ಘೋಷಣೆಗಳನ್ನು ಕೂಗಿ ಮೆರವಣಿಗೆ ಮಾಡಿದರು.

ಹುಣಸೂರು ತಾಲ್ಲೂಕಿನ ಮರದೂರು ಗ್ರಾಮದ ಸೈಯದ್ ಗಯಾಸುದ್ದಿನ್ ಮತ್ತು ಆಸೀಯಾಭಿರವರ ಮಗನಾದ ಕೋಟೆ ಪೊಲೀಸ್ ಠಾಣೆಯ ಪೇದೆ ಸೈಯದ್ ಕಬೀರುದ್ದೀನ್ ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸಿರುವ ಇವರು, ೨೦೨೩ನೇ ಸಾಲಿನಲ್ಲಿ ಸಾಮಾನ್ಯ ಕಳವು ಮತ್ತು ಮನೆಗಳವು ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಪಟ್ಟ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದರು.

ಇವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಪೊಲೀಸ್ ಇಲಾಖೆ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಘೋಷಣೆ ಮಾಡಿತ್ತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪದಕವನ್ನು ಪಡೆದುಕೊಂಡಿದ್ದಾರೆ.

ಈ ಇಬ್ಬರೂ ಅಧಿಕಾರಿಗಳನ್ನು ಹುಣಸೂರು ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ, ಎಚ್. ಡಿ.ಕೋಟೆ ಪಟ್ಟಣ ಠಾಣೆ ಇನ್ಸ್‌ಪೆಕ್ಟರ್ ಗಂಗಾಧರ್, ಶಬ್ಬೀರ್ ಹುಸೇನ್, ಸಬ್ ಇನ್‌ಸ್ಪೆಕ್ಟರ್ ಗಳಾದ ಚಿಕ್ಕನಾಯಕ, ಸುರೇಶ್ ನಾಯಕ, ಗೌರಿಶಂಕರ್, ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಅಭಿನಂದಿಸಿದರು.

ಜನರಿಂದ ಮೆಚ್ಚುಗೆ: 

ರಮೇಶ ರಾವ್ ಹಾಗೂ ಸೈಯದ್ ಕಬಿರುದ್ದಿನ್ ಈ ಇಬ್ಬರೂ ಪೊಲೀಸ್ ಅಽಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯವರಿಂದ ಪದಕವನ್ನು ಪಡೆದಿರುವುದು ಹಿಂದುಳಿದ ಕೋಟೆ ತಾಲ್ಲೂಕು ಹಾಗೂ ಪೊಲೀಸ್ ಇಲಾಖೆಯ ಗೌರವ ಹೆಚ್ಚಿಸಿದೆ. ಇವರ ಕಾರ್ಯಮೈಖರಿಯ ಬಗ್ಗೆ ತಾಲ್ಲೂಕಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:
error: Content is protected !!