Mysore
22
broken clouds
Light
Dark

ಗೋಕುಲಂ ಪೇ ಅಂಡ್ ಯೂಸ್ ಶೌಚಾಲಯಕ್ಕೆ ಬೀಗ

ದುರಸ್ತಿಗೆ ಗಮನ ಹರಿಸದ ನಗರಪಾಲಿಕೆ ಅಧಿಕಾರಿಗಳು

ಮೈಸೂರು: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪೇ ಅಂಡ್ ಯೂಸ್ ಶೌಚಾಲಯ ಕಳೆದ ಎಂಟು ತಿಂಗಳಿನಿಂದ ಹಾಳಾಗಿದ್ದು, ಯಾರ ಬಳಕೆಗೂ ಬಾರದಂತಾಗಿದೆ.

ನಗರದ ಗೋಕುಲಂ ಮೂರನೇ ಹಂತದ ಕೆಆರ್‌ಎಸ್ ರಸ್ತೆ ಬದಿಯಲ್ಲಿ ಮೈಸೂರು ನಗರಪಾಲಿಕೆಯಿಂದ ನಿರ್ಮಿಸಿರುವ ಪಾವತಿಸಿ ಉಪಯೋಗಿಸುವ ಶೌಚಾಲಯಕ್ಕೆ ಕಳೆದ ಎಂಟು ತಿಂಗಳಿನಿಂದ ಬೀಗ ಜಡಿಯಲಾಗಿದ್ದು, ಕೊಳಕು ಮನೆ ಮಾಡಿದೆ.

ಗೋಕುಲಂ ರಸ್ತೆ ಮೂಲಕ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಮಂದಿ ಚಿಕಿತ್ಸೆಗೆ ಆಗಮಿಸುತ್ತಾರೆ. ಆಸ್ಪತ್ರೆಗಳು, ವಿವಿಧ ಇಲಾಖಾ ಕಚೇರಿ ಗಳು ಇಲ್ಲೇ ಇದ್ದು, ಬೇರೆ ಕಡೆಯಿಂದ ಆಗಮಿಸುವ ಜನರಿಗೆ ತಕ್ಷಣದ ಬಳಕೆಗಾಗಿ ಇದ್ದ ಈ ಒಂದು ಶೌಚಾಲಯವೂ ಸದ್ಯ ಮುಚ್ಚಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ.

ಶೌಚಾಲಯವನ್ನು ಪುನರ್‌ ಬಳಕೆಗೆ ಯೋಗ್ಯ ವಾಗುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ಹಾಳಾದ ಪಾರ್ಕ್:
ಈ ಶೌಚಾಲಯ ನಿರ್ಮಾಣವಾಗಿರುವ ಜಾಗ ಪಾಕ್‌ ೯ನ ಒಂದು ಭಾಗವಾಗಿದೆ. ಪಾವತಿಸಿ ಬಳಸುವ ಈ ಶೌಚಾಲಯ ಹಿಂಭಾಗದಲ್ಲಿರುವ ಚಿಕ್ಕ ಪಾರ್ಕ್ ಸಂಪೂರ್ಣವಾಗಿ ಹದಗೆಟ್ಟಿದೆ. ಪಾರ್ಕ್ ಬಳಿ ಭಾರೀ ಗಾತ್ರದ ಲಾರಿಗಳನ್ನು ನಿಲ್ಲಿಸಲಾಗುತ್ತಿದ್ದು, ಪಾರ್ಕ್ ಎಂಬುದರ ಕುರುಹೂ ಇಲ್ಲದಂತಾಗಿದೆ.

ಪಾರ್ಕ್‌ ಒಳಭಾಗದಲ್ಲಿ ಅನಗತ್ಯ ಸಸಿಗಲೂ ಬೆಳದು ನಿಂತಿದ್ದು, ಪಾರ್ಕ್‌ ಒಳ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ. ಪರಿಸ್ಥಿತಿ ಹೀಗೇಯೇ ಮುಂದುವರಿದರೆ ಬಡಾವಣೆಯ ಸುತ್ತಲಿನ ಎಲ್ಲಾ ಕಸಗಳು ಇಲ್ಲೇ ಸಂಗ್ರಹವಾಗಲಿವೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಶೌಚಾಲಯ ಮರು ಬಳಕೆ ಸಂಬಂಧ ಟೆಂಡರ್ ಕರೆಯಲಾಗಿತ್ತು. ಅಲ್ಲಿಗೆ ನಮ್ಮ ಅವಧಿ ಮುಗಿದಿತ್ತು. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಗಮನಕ್ಕೂ ತಂದಿದ್ದೆ. ಮತ್ತೊಮ್ಮೆ ಈ ಬಗ್ಗೆ ಪರಿಶೀಲಿಸಿ ಜನರ ಬಳಕೆಗೆ ತರಲಾಗುವುದು. ಪಾರ್ಕ್‌ನಲ್ಲಿ ಲಾರಿ ನಿಲ್ಲಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು.
ಎಸ್‌ಬಿಎಂ ಮಂಜು, ಮಾಜಿ ಕಾರ್ಪೊರೇಟರ್.

ಶೌಚಾಲಯ ಮರು ಸ್ಥಾಪನೆ ಸಂಬಂಧ ಟೆಂಡರ್‌ ಕಡೆಯಲಾಗಿತ್ತು. ಆದರೆ ಈವರೆಗೆ ಯಾರೂ ಮುಂದೆ ಬಂದಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್‌, ನಗರಪಾಲಿಕೆ ಆಯುಕ್ತ.

ಸುಮಾರು ದಿನಗಳಿಂದ ಪಾವತಿಸಿ ಬಳಸುವ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಸ್ಥಳೀಯರಾಗಿ ನಮಗೆ ಪ್ರಯೋಜನವಾಗಿತ್ತು. ಬೇರೆ ಕಡೆಗಳಿಂದ ಬರುವ ಜನರ ಬಳಕೆಗೆ ಉಪಯುಕ್ತವಾಗಿದ್ದ ಈ ಶೌಚಾಲಯ ಮರು ಬಳಕೆಗೆ ಬರಬೇಕು.
ರಾಜೇಶ್ವರಿ, ಗೋಕುಲಂ ನಿವಾಸಿ.

ಬೇರೆ ಊರುಗಳಿಂದ ಆಸ್ಪತ್ರೆಗೆ ಬರುವ ಜನರು, ಲಾರಿ ಚಾಲಕರು, ಇತರೆ ಕೂಲಿ ಕಾರ್ಮಿಕರರಿಗೆ ಉಪಯುಕ್ತವಾಗಿದ್ದ ಈ ಶೌಚಾಲಯ ಮುಚ್ಚಿರುವುದು ನಿಜಕ್ಕೂ ನಷ್ಟ. ತುಂಬಾ ಅಚ್ಚುಕಟ್ಟಾಗಿ ಸಾಗುತ್ತಿದ್ದ ಈ ಶೌಚಾಲಯವನ್ನು ಮತ್ತೆ ಪ್ರಾರಂಭಿಸಬೇಕು.
ಸತೀಶ್, ಅಂಗಡಿ ಮಾಲೀಕರು.