Mysore
19
broken clouds

Social Media

ಭಾನುವಾರ, 11 ಜನವರಿ 2026
Light
Dark

ಸುಂದರ ಪರಿಸರದಲ್ಲಿರುವ ಪರಶುರಾಮ ದೇವಸ್ಥಾನ

ಆರ್.ಎಲ್.ಮಂಜುನಾಥ್‌ 

ನಂಜನಗೂಡು ಎಂದರೆ ತಕ್ಷಣ ಕಪಿಲಾ ನದಿ, ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ, ಇದೇ ಶ್ರೀಕಂಠೇಶ್ವರ ದೇವ ಸ್ಥಾನದ ಸಮೀಪವೇ ಮತ್ತೊಂದು ಪುರಾಣ ಪ್ರಸಿದ್ಧ ಚಿಕ್ಕ ದೇಗುಲವಿರುವುದು ಅನೇಕರಿಗೆ ಗೊತ್ತಿಲ್ಲ.

ಈ ದೇವಸ್ಥಾನ ಇರುವುದು ನಂಜನಗೂಡು- ಚಾಮರಾಜನಗರ ಹೆದ್ದಾರಿಯ ಸಮೀಪ. ನಂಜನಗೂಡು ಕಪಿಲಾ ನದಿಯ ಸ್ನಾನಘಟ್ಟದಿಂದ ಸುಮಾರು ೧ ಕಿ.ಮೀ. ದೂರದಲ್ಲಿರುವ ಈ ಗುಡಿಯ ಹೆಸರು ಪರಶುರಾಮ ದೇವಸ್ಥಾನ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಗದ್ದೆ ಬಯಲು, ಮರಗಿಡಗಳು, ದೇಗುಲದ ಪಕ್ಕವೇ ಹರಿಯುವ ಕಪಿಲಾ ನದಿಯ ನೀರಿನ ವೈಯ್ಯಾರ ಕಣ್ಣಿಗೆ, ಮನಸ್ಸಿಗೆ ತಂಪಿನ ಅನುಭವ ನೀಡುತ್ತದೆ.

ಐತಿಹ್ಯದ ಪ್ರಕಾರ ತನ್ನ ತಂದೆ ಜಮ ದಗ್ನಿಯ ಸೂಚನೆಯಂತೆ ತಾಯಿಯನ್ನು ಹತ್ಯೆಗೈದ ಪರಶು ರಾಮ. ಪಾಪ ಪರಿಹಾರಕ್ಕಾಗಿ ಇದೇ ಸ್ಥಳದಲ್ಲಿ ತಪಸ್ಸು ಮಾಡಿದ್ದ ಎಂಬ ನಂಬಿಕೆಯಿದೆ. ತಪಸ್ಸಿಗೆ ಒಲಿದ ನಂಜುಂಡೇಶ್ವರನು ತನಗೊಂದು ದೇವಸ್ಥಾನ ಕಟ್ಟಿಕೊಡುವಂತೆ ಕೇಳಿಕೊಂಡಿದ್ದನು. ನಂಜುಂಡೇಶ್ವರನ ಮಾತಿನಂತೆ ಪರಶುರಾಮನೇ ಇಲ್ಲಿನ ನಂಜುಂಡೇಶ್ವರನ ದೇಗುಲವನ್ನು ಕಟ್ಟಿಸಿದ ಎಂದು ಹೇಳಲಾಗುತ್ತದೆ.

ಪರಶುರಾಮ ಕ್ಷೇತ್ರದಲ್ಲಿ ತಮ್ಮ ಯಾವುದೇ ಕಷ್ಟ, ಸಮಸ್ಯೆಗಳು ಪರಿಹಾರವಾಗಬೇಕೆಂದುಭಕ್ತರು ಪ್ರಾರ್ಥಿಸಿಕೊಂಡು ಒಂದು ಬೆಲ್ಲ ಹಾಗೂ ಒಂದು ಹಿಡಿ ಉಪ್ಪನ್ನು ಕಪಿಲೆಯಲ್ಲಿ ಹಾಕಿದರೆ ಅವುಗಳು ನೀರಿನಲ್ಲಿ ಕರಗುವಂತೆ, ಅಂತೆಯೇ ಭಕ್ತರಿಗೆ ಎದುರಾದ ಕಷ್ಟಗಳೂ ಕರಗಿ ಹೋಗುತ್ತವೆ ಎಂಬ ನಂಬಿಕೆ ಇದ್ದು, ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸಿ ಪ್ರಾರ್ಥಿಸಿಕೊಳ್ಳುತ್ತಾರೆ.

ಮಾಹಿತಿ ಫಲಕ ಅಳವಡಿಸಬೇಕು: 

ಪರಶುರಾಮ ದೇವಸ್ಥಾನ ಬಗ್ಗೆ ಬಹುತೇಕರಿಗೆ ಸಮರ್ಪಕ ಮಾಹಿತಿ ಇಲ್ಲ. ಶ್ರೀಕಂಠೇಶ್ವರ ದೇಗುಲದ ಬಳಿ ಈ ಪುರಾತನ ದೇವಸ್ಥಾನ, ತೆರಳುವ ಮಾರ್ಗ ಕುರಿತು ಮಾಹಿತಿ ನೀಡಿದರೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತದೆ. ನಂಜನಗೂಡಿಗೆ ಭೇಟಿ ನೀಡುವವರು ಪರಶುರಾಮ ಕ್ಷೇತ್ರಕ್ಕೂ ಬರುತ್ತಾರೆ. ಆಗ ನಮ್ಮ ಪರಂಪರೆಯ ಇತಿಹಾಸದ ಅರಿವಿನ ಜತೆಗೆ ಆಹ್ಲಾದಕರ ಪರಿಸರದ ಅನುಭವವನ್ನೂ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂಬ ಆಶಯ ಸ್ಥಳೀಯರದ್ದಾಗಿದೆ.

ಪ್ರವಾಸಿ ತಾಣವಾಗಿಸಲು ಅಭಿವೃದ್ಧಿ:  ಹಸಿರಿನ ಮಧ್ಯೆ ಕಂಗೊಳಿಸುವಈ ದೇವಸ್ಥಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗಿ ರೂಪಿಸಬಹುದಾಗಿದೆ. ಈ ಸ್ಥಳದಲ್ಲಿ ಅನೇಕ ಭಕ್ತರು ಹರಕೆ ಕಟ್ಟಿಕೊಂಡು ವಿಶೇಷ ಪೂಜೆ ಸಲ್ಲಿಸಿ ಪರ ಮಾಡುತ್ತಾರೆ. ಇದು ದೇವಾಲಯದ ಆವರಣದಲ್ಲೇ ನಡೆಯುತ್ತಿದೆ. ಇದಕ್ಕೆ ಪ್ರತ್ಯೇಕವಾಗಿ ಸೌಲಭ್ಯ ಕಲ್ಪಿಸಿದರೆ ಅವರಿಗೆಲ್ಲಾ ಅನುಕೂಲವಾಗಲಿದೆ. ಕುಡಿಯುವ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ.

Tags:
error: Content is protected !!