Mysore
25
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಜ್ಜಿಯೊಬ್ಬಳ ದಿನಚರಿಯ ಪುಟಗಳು

• ಶ್ರೀಲಕ್ಷ್ಮೀ, ಮೈಸೂರು

ಎಂಬತ್ತರ ಆಸುಪಾಸಿನ ನಮ್ಮ ಅಜ್ಜಿಗೆ ಬೆಳಗಾಗುವುದು ಎಂಟು ಗಂಟೆಗೆ! ವಯಸ್ಸಾಗುತ್ತಿದ್ದಂತೆ ನಿದ್ದೆ ಸರಿಬರದ ಅದೆಷ್ಟು ರಾತ್ರಿಗಳನ್ನು ಕಳೆದಿದ್ದಾರೋ ಅವಳಿಗೇ ಗೊತ್ತು. ದೇಹ ದಣಿದರೂ ರಾತ್ರಿ ನಿದ್ದೆ ಬರುತ್ತದೆಂಬ ಖಾತ್ರಿಯಿಲ್ಲ. ಅದರಲ್ಲೂ ಅಪರೂಪಕ್ಕೆ ಮಧ್ಯಾಹ್ನದ ಹೊತ್ತಲ್ಲಿ ದಿಂಬಿಗೆ ತಲೆಕೊಟ್ಟು, ಅರ್ಧಗಂಟೆ ಮಲಗಿದ್ದರೆ ನಿದ್ರೆ ಬರುವುದಕ್ಕೆ ಅಜ್ಜಿಯ ಪಾಲಿಗೆ ಪವಾಡವೇ ಸೃಷ್ಟಿಯಾಗಬೇಕು. ನಿದ್ದೆ ತನ್ನ ಜೊತೆ ಮುನಿಸಿಕೊಂಡಿದೆ ಎಂದು ಹೇಳುತ್ತಲೇ, ತನ್ನ ಮನಸ್ಸನ್ನು ತಾನೇ ತಿಳಿಗೊಳಿಸಿಕೊಳ್ಳುತ್ತಿದ್ದಳು.

ಮೊದಲೆಲ್ಲ ಅಜ್ಜಿ ತನ್ನಿಷ್ಟದ ಮಂಟೇಸ್ವಾಮಿ, ಸಿದ್ದಪ್ಪಾಜಿಯ ಕತೆಗಳನ್ನು ಹೇಳುತ್ತಿದ್ದಳು. ಮನುಷ್ಯ ದೇವರಾದ ಕತೆಯನು ಹೇಳುವಾಗಲಂತೂ ಅವರ ಭಕ್ತಿಯ ತಲ್ಲೀನತೆಯನ್ನು ಕಂಡಿದ್ದೆವು. ಈಗ ನಾವೆಲ್ಲ ಓದುವುದಕ್ಕೆಂದು ಬಂದ ಮೇಲೆ ಅಜ್ಜಿ ಕತೆ ಹೇಳುವುದನ್ನು ನಿಲ್ಲಿಸಿ, ಧಾರಾವಾಹಿ ಕತೆಗೆ ಕಿವಿಯಾಗಿದ್ದಾಳೆ. ಅದೆಂತಹ ಚುರುಕು ಕಿವಿ ಎಂದರೆ ಬೆಳಿಗ್ಗೆಯಿಂದ ರಾತ್ರಿಯ ತನಕ ಟಿವಿ ನೋಡುತ್ತಾ, ಆ ಪಾತ್ರಗಳೊಂದಿಗೆ ಸಂಭಾಷಿಸುತ್ತಲೇ ಇರುತ್ತಾಳೆ. ಯಾವ ಚಾನೆಲ್‌ನ್ನೂ ಅಜ್ಜಿ ತಿರಸ್ಕರಿಸಿದ್ದಿಲ್ಲ. ಅರ್ಧಗಂಟೆಗೊಮ್ಮೆ ಚಾನೆಲ್ ಬದಲಾಗುತ್ತಲೇ, ಆಯಾ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಗುನುಗುತ್ತಲೇ ಇರುತ್ತಾಳೆ.

ಅಜ್ಜಿ ಹೆಚ್ಚು ಸಂಭಾಷಿಸುವುದು, ನಾಯಕಿಯ ಪಾತ್ರದೊಂದಿಗೆ, ವಿಲನ್ ಪಾತ್ರ ಮುಂದೇನು ಅಪಾಯವನ್ನು ತಂದೊಡ್ಡಬಹುದು ಎಂದು ಅಜ್ಜಿಗೆ ಗೊತ್ತಾಗುತ್ತಿದ್ದಂತೆ, ಅದನ್ನೆಲ್ಲ ನಾಯಕಿಯ ಪಾತ್ರ ಟಿವಿ ಮುಂದೆ ಬರುತ್ತಿದ್ದಂತೆಯೇ ಹೇಳಿ ಎಚ್ಚರಿಸುತ್ತಲೇ ಇರುತ್ತಾಳೆ. ‘ಸುಮ್ಮನಿರಜ್ಜಿ’ ಎಂದು ನನ್ನಕ್ಕ ಹೇಳಿದರೆ, ‘ಹೆಂಗ್ ಸುಮಿರ್ಲಿ! ಒಬ್ರಿಗೆ ಒಳ್ಳೆದ್ ಮಾಡೇ ಇದ್ರೂ ಕೆಟ್ಟದ್ ಮಾಡ್ಡಾರ್ದು ಕಪಾ’ ಎಂಬ ತಿಳಿನುಡಿ ಹೇಳುತ್ತಿದ್ದ ಅಜ್ಜಿ, ಬದುಕಿಗೂ ಅದನ್ನು ರೂಢಿಸಿಕೊಂಡಿದ್ದಳು. ಹಾಗೆಂದು ಟಿವಿ ನೋಡುತ್ತಿರುವಾಗ ಅವಳನ್ನು ಪದೇ ಪದೇ ಅಣಕಿಸುತ್ತಿದ್ದರೆ, ನಾಗವಲ್ಲಿ ಕಣ್ಣು ಬೀರುತ್ತಿದ್ದದ್ದೂ ಇದೆ! ಹೇಳುವುದು ಮರೆತ್ತಿದ್ದೆ, ಅಜ್ಜಿಗೆ ತಿಂಡಿ ಎಂದರೆ ಪ್ರಾಣ. ಅವಳ ಆರೋಗ್ಯಕ್ಕೆ ಯಾವ ಸಮಸ್ಯೆ ಆಗಿರದಿದ್ದರೂ ವಾರಕ್ಕೊಮ್ಮೆ ಆಸ್ಪತ್ರೆಯನ್ನು ಭೇಟಿ ಮಾಡಲೇಬೇಕು ಎಂದು ಗೋಗರೆಯುತ್ತಾಳೆ. ಹೀಗೆ ಆಸ್ಪತ್ರೆಗೆ ಹೋಗಿ. ಮನೆಗೆ ಬರುವಾಗ ಒಂದಷ್ಟು ತಿಂಡಿಯನ್ನು ತರುವುದು ಅಜ್ಜಿ ಪಾಲಿಸಿಕೊಂಡು ಬಂದ ವಿಶೇಷ ಆಚರಣೆ, ಬರೀ ಕೈಯಲ್ಲಿ ಅಜ್ಜಿ ಬಂದ ನೆನಪು ಇವತ್ತಿಗೂ ಇಲ್ಲ. ಸಂಜೆಯ ಬಿಡುವಿನಲ್ಲಿ ನಮ್ಮನ್ನೆಲ್ಲ ಜೊತೆಯಾಗಿಸಿ ತಿನ್ನುವಾಗೆಲ್ಲ, ನಮ್ಮೊಂದಿಗೆ ಬೆರೆಯುತ್ತಿದ್ದಳು.

ತಂದ ತಿಂಡಿಗಳಲ್ಲಿ ಅಜ್ಜಿ ಅಲ್ಪಸ್ವಲ್ಪವನ್ನು ತಮಗಾಗಿ ಕೂಡಿಟ್ಟುಕೊಳ್ಳುತ್ತಿದ್ದರು. ಊಟ ಸಪ್ಪೆಯಾಯಿತೆನಿಸಿದರೆ, ಮೆಲ್ಲನೆ ತನ್ನ ಕೋಣೆಗೆ ಹೋಗುತ್ತಿದ್ದಳು. ನಾವು ನಿಧಾನಕ್ಕೆ ಕತ್ತು ಬಗ್ಗಿಸಿ ನೋಡಿದರೆ, ಅಜ್ಜಿ ಉಳಿಸಿಕೊಂಡ ತಿಂಡಿ ತಿನ್ನುತ್ತಿದ್ದಳು. ಮೊದಲೆಲ್ಲ ಅಪ್ಪ – ಅಮ್ಮನಿಗೆ ಅಚ್ಚರಿಯಿಂದ ತಮ್ಮ ಗೂಢಾಚಾರಿಕೆಯ ಕೆಲಸವನ್ನು ಹೇಳುತ್ತಿದ್ದೆವು. ಇಬ್ಬರೂ ಏನೂ ಮಾತಾಡದೇ ನಕ್ಕು ಸುಮ್ಮನಾಗುತ್ತಿದ್ದರು.

ಬೆಳಿಗ್ಗೆ ಒಂಬತ್ತರ ಹೊತ್ತಿಗೆ ಮನೆಯ ಹಿತ್ತಲ ಬಳಿ ಒಂದು ಸುತ್ತು ಬಂದು, ಏನೇನು ಬದಲಾವಣೆಯ ಆಗಿದೆಯೆಂದು ಗಮನಿಸುವುದು ಅಜ್ಜಿಯ ದಿನಚರಿಗಳಲ್ಲಿ ಒಂದು ನೆಟ್ಟ ಬದನೆ ಹೂ ಬಿಟ್ಟಾಗ ಸಂಭ್ರಮಿಸುವುದು, ತೆಂಗಿನ ಕಾಯಿ ಕೊಯ್ಯುವ ಸೋಮಣ್ಣನಿಗೆ ಫೋನ್ ಮಾಡಿಸುವುದು, ಅರಳಿ ನಿಂತ ದಾಸವಾಳಗಳನ್ನೆಲ್ಲ ಕೊಯ್ಯುವುದು ಹೀಗೆ ಅಜ್ಜಿಯ ಹಿತ್ತಲ ಸವಾರಿ ಬಲು ಜೋರು. ಹತ್ತರ ಹೊತ್ತಿಗೆ ತಿಂಡಿ ತಿಂದ ಮೇಲೆ, ಪಕ್ಕದ ಮನೆಯ ತನ್ನ ಸ್ನೇಹಿತೆಯರ ಬಳಿ ಮಾತಿಗೆಂದು ಅಜ್ಜಿ ಕೂರುತ್ತಿದ್ದಳು. ಈ ಮಾತಿನ ಚಾವಡಿ ಪ್ರತಿ ದಿನ ಒಬ್ಬೊಬ್ಬರ ಮನೆಯಲ್ಲಿ ಇರುತ್ತಿತ್ತು. ಹೀಗೆ ಆರಂಭವಾಗುತ್ತಿದ್ದ ದಿನಚರಿ, ಮಾತು, ಹರಟೆ, ಕುತೂಹಲ, ಸುತ್ತಾಟ ಎಲ್ಲವನ್ನೂ ಒಳಗೊಳ್ಳುತ್ತಿತ್ತು. ಇದನ್ನೆಲ್ಲ ಕಾಣುತ್ತಿದ್ದರೆ
ನೆರಿಗೆಗಳು ಅಜ್ಜಿಗೆ ವಯಸ್ಸಾಗುತ್ತಿದೆ ಎಂದರೆ, ಅವಳ ಉತ್ಸಾಹ ವಯಸ್ಸು, ದೇಹ ವ್ಯತ್ಯಾಸವನ್ನೂ ಮೀರುತ್ತಿದೆ ಎನಿಸುತ್ತದೆ.

Tags: