ಶ್ರೀಧರ್ ಆರ್ ಭಟ್
ನಂಜನಗೂಡು: ಆದಿವಾಸಿಗಳ ಕಾಲೋನಿಯಲ್ಲಿ ಮದ್ಯ ದೊರಕದಂತೆ ನೋಡಿಕೊಳ್ಳುವುದು ಅಬಕಾರಿ ಇಲಾಖಾ ಅಧಿಕಾರಿಗಳು ಹಾಗೂ ತಾಲ್ಲೂಕಿನ ಅಬಕಾರಿ ಸನ್ನದುದಾರರ ಕರ್ತವ್ಯವಾಗಿದೆ. ಆದಿವಾಸಿಗಳ ಕಾಲೋನಿಯಲ್ಲಿ ಮದ್ಯ ಕಂಡು ಬಂದರೆ ಅದಕ್ಕೆ ಅಧಿಕಾರಿಗಳು ಹಾಗೂ ಸನ್ನದುದಾರರೇ ಹೊಣೆ ಎಂದು ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತರಾದ ಮಹದೇವಿ ಬಾಯಿ ಎಚ್ಚರಿಕೆ ನೀಡಿದರು.
ಏ.೧ರ ಮಂಗಳವಾರದ ‘ಆಂದೋಲನ’ ದಿನಪತ್ರಿಕೆಯ ಮುಖಪುಟದಲ್ಲಿ ‘ಅಕ್ರಮ ಮದ್ಯ ಸೇವಿಸಿ ಆದಿವಾಸಿ ವ್ಯಕ್ತಿ ಸಾವು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಈ ಸಂಬಂಧ ನಂಜನಗೂಡು ಅಬಕಾರಿ ಇಲಾಖೆಯ ಕಾರ್ಯಾಲಯದಲ್ಲಿ ಗುರುವಾರ ಅಽಕಾರಿಗಳು, ಅಬಕಾರಿ ಮಾರಾಟದ ಸನ್ನದುದಾರರ ಸಭೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನ ನಾಗಣಾಪುರದ ಆದಿವಾಸಿ ಕಾಲೋನಿಯಲ್ಲಿ ನಡೆದ ಘಟನೆಯು ಇಲಾಖೆ ತಲೆ ತಗ್ಗಿಸ ಬೇಕಾದ ವಿಷಯವಾಗಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡಲು ತಾಲ್ಲೂಕಿನ ಸನ್ನದುದಾರರೇ ಕಾರಣ ಎಂದು ಹೇಳಿದರು.
ಹಳ್ಳಿಗಳಲ್ಲಿರುವ ಪೆಟ್ಟಿಗೆ ಅಂಗಡಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಕಂಡು ಬಂದ ಮದ್ಯದ ಬಾಟಲಿಗಳು ಹಾಗೂ ಮದ್ಯದ ಪ್ಯಾಕೇಟ್‌ಗಳು ಯಾವ ಸನ್ನದುದಾರರಿಂದ ಮಾರಾಟವಾದದ್ದು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಮದ್ಯ ಮಾರಾಟವಾಗದಂತೆ ಹಾಗೂ ಆದಿವಾಸಿಗಳ ಕೈ ಸೇರದಂತೆ ನೋಡಿಕೊಳ್ಳಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಎಚ್ಚರಿಸಿದರು.
ನಾಗಣಾಪುರದಲ್ಲಿ ಆದಿವಾಸಿ ರಾಜು ಎಂಬವರು ಅಕ್ರಮ ಮದ್ಯ ಸೇವಿಸಿ ಸಾವೀಗೀಡಾದ ಬಗ್ಗೆ ಇಲಾಖೆ ತನಿಖೆ ಆರಂಭಿಸಿದ್ದು, ಅಲ್ಲಿ ದೊರಕಿರುವ ಮದ್ಯದ ಕುರುಹುಗಳ ಜಾಡನ್ನು ಹಿಡಿದು ತಪ್ಪಿತಸ್ಥರನ್ನು ಜೈಲಿಗೆ ಕಳಿಸುವವರೆಗೂ ನಾವು ಬಿಡುವುದಿಲ್ಲ ಎಂದು ಅಧಿಕಾರಿಗಳು ಹಾಗೂ ಮಾರಾಟಗಾರರನ್ನು ಕಟುಕಿದರು.
ತಾಲ್ಲೂಕಿನ ಅಕ್ರಮ ಮದ್ಯ ಮಾರಾಟದ ತಡೆಗಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು, ರಾತ್ರಿ ಹಾಗೂ ಬೆಳಗಿನ ಜಾವವೇ ಹಿಂಬದಿಯ ಬಾಗಿಲು ತೆರೆಯುವ ಮದ್ಯದಂಗಡಿಗಳು ಹಾಗೂ ಬಾರ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಈ ತಂಡಗಳ ಜವಾಬ್ದಾರಿಯಾಗಿದೆ ಎಂದರು.
ತಾಲ್ಲೂಕಿನ ಬಹುತೇಕ ಮದ್ಯ ಮಾರಾಟದ ಸನ್ನದುದಾರರು ಹಾಗೂ ಅಬಕಾರಿ ಉಪ ಅಧಿಕ್ಷಕ ನಟರಾಜ, ವಲಯ ನಿರೀಕ್ಷಕ ನಾಗೇಂದ್ರ, ಉಪ ನಿರೀಕ್ಷಕ ಅಬ್ದುಲ್, ಚಂದ್ರು, ಅಭಿ, ಮಧುಖೇಶ, ಶಿಲ್ಪಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
” ನಂಜನಗೂಡು ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸಲು ಈಗಾಗಲೇ ಮೂರು ತಂಡಗಳನ್ನು ನೇಮಿಸಲಾಗಿದ್ದು, ಸದ್ಯದಲ್ಲೇ ಇನ್ನೆರಡು ತಂಡಗಳನ್ನು ರಚಿಸಲಾಗುವುದು. ಅಕ್ರಮ ಮದ್ಯ ಮಾರಾಟ ತಾಲ್ಲೂಕಿನಲ್ಲಿ ಎಲ್ಲೇ ಕಂಡು ಬಂದರೂ ಸಾರ್ವಜನಿಕರು ದೂರವಾಣಿ ಸಂಖ್ಯೆ ೯೪೪೯೫೯೭೧೮೪ಅನ್ನು ಸಂಪರ್ಕಿಸಿ ದೂರು ನೀಡಿದರೆ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ.”
-ಮಹದೇವಿ ತಾಯಿ, ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತರು