ನವೀನ್ ಡಿಸೋಜ
ಕೆಲವೇ ದಿನಗಳಲ್ಲಿ ರಸ್ತೆಗಳು ಮತ್ತೆ ಹದಗೆಡುವ ಹಿನ್ನೆಲೆ : ಸಂಪೂರ್ಣ ರಸ್ತೆ ಡಾಂಬರೀಕರಣಕ್ಕೆ ಒತ್ತಾಯ
ಮಡಿಕೇರಿ: ರಸ್ತೆ ಗುಂಡಿಗಳನ್ನು ಮುಚ್ಚಿದ ಕೆಲವೇ ದಿನಗಳಲ್ಲಿ ರಸ್ತೆಗಳು ಮತ್ತೆ ಹದಗೆಡುವುದರಿಂದ ತೇಪೆ ಹಚ್ಚುವ ಕಾರ್ಯಕ್ಕೆ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಮಳೆಗಾಲದಲ್ಲಿ ಜಿಲ್ಲೆಯ ಹಲವು ರಸ್ತೆಗಳು ಗುಂಡಿ ಬಿದ್ದು, ತೀರಾ ಹಾಳಾಗಿವೆ. ಮಳೆಗಾಲ ಕಳೆದು ಈಗ ಬಿಸಿಲಿನ ವಾತಾವರಣ ಇರುವುದರಿಂದ ಈ ರಸ್ತೆಗಳ ದುರಸ್ತಿ ಕಾರ್ಯವನ್ನು ಆರಂಭಿಸಲಾಗಿದೆ. ಅಲ್ಲಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಆದರೆ ಗುಂಡಿಗಳಿಗೆ ಮಾತ್ರ ಡಾಂಬರೀಕರಣ ಮಾಡಿ ಮುಚ್ಚುವ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮಡಿಕೇರಿ – ಗಾಳಿಬೀಡು ರಸ್ತೆ ಹದಗೆಟ್ಟಿದ್ದು, ಈ ಬಾರಿಯೂ ತೇಪೆ ಕೆಲಸ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಆ ಭಾಗದ ಗ್ರಾಮಸ್ಥರು ಈಗಾಗಲೇ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಮಡಿಕೇರಿ – ಭಾಗಮಂಡಲ – ತಲಕಾವೇರಿ ರಸ್ತೆಯ ಗುಂಡಿಗಳನ್ನು ಕಾವೇರಿ ಜಾತ್ರೆಯ ಸಂದರ್ಭ ಮುಚ್ಚಲಾಗಿದ್ದು, ಈಗ ಆ ರಸ್ತೆ ಮತ್ತೆ ಯಥಾ ಸ್ಥಿತಿಗೆ ಬಂದಿದೆ.
ಮಡಿಕೇರಿ – ವಿರಾಜಪೇಟೆ ರಸ್ತೆಯಲ್ಲಿ ಮಡಿಕೇರಿ ವಿಭಾಗದಿಂದ ಗುಂಡಿ ಮುಚ್ಚುವ ಕೆಲಸ ಮಾಡಲಾಗುತ್ತಿದ್ದು, ಮೇಕೇರಿಯಿಂದ ಮಡಿಕೇರಿ ವರೆಗೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಾಪೋಕ್ಲುವಿನ ಕೊಳಕೇರಿ ರಸ್ತೆಯ ತೇಪೆ ಕಾರ್ಯವೂ ಗುಣಮಟ್ಟದಿಂದ ಕೂಡಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸೇರಿ ಜಿಲ್ಲೆಯ ಬೆರಳೆಣಿಕೆ ಯಷ್ಟು ರಸ್ತೆಗಳು ಮಾತ್ರ ಸುಸ್ಥಿತಿಯಲ್ಲಿದ್ದು ಉಳಿದ ಎಲ್ಲಾ ರಸ್ತೆಗಳು ಹದಗೆಟ್ಟಿವೆ.
ಲೋಕೋಪಯೋಗಿ ನಾನಾ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೆಲವೆಡೆ ಗುತ್ತಿಗೆ ದಾರರು ಉತ್ತಮ ಕೆಲಸ ಮಾಡುತ್ತಿದ್ದರೆ ಮತ್ತೆ ಕೆಲವೆಡೆ ಕಳಪೆ ಕಾಮಗಾರಿಯ ಆರೋಪ ಕೂಡ ಇರುವುದರಿಂದ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕಷ್ಟೇ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿ ಕೆಲಸ ಮಾಡಲಾಗುತ್ತಿದೆ. ಆದರೆ ಹಲವು ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಂಪೂರ್ಣವಾಗಿ ಮರು ಡಾಂಬರೀಕರಣ ಮಾಡಿದರಷ್ಟೇ ಸುಗಮ ಸಂಚಾರ ಸಾಧ್ಯವಾಗಲಿದೆ. ಹೀಗಿದ್ದೂ ಹೊಸದಾಗಿ ಡಾಂಬರೀಕರಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ.
ಹಲವು ರಸ್ತೆಗಳ ಮರು ಡಾಂಬರೀಕರಣಕ್ಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುದಾನ ಬರಬೇಕಿದೆ. ಅನುದಾನ ಬಿಡುಗಡೆ ಯಾದರೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಮಳೆಗಾಲದ ಬಳಿಕ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರದ ಮಟ್ಟದಲ್ಲಿ ಅನುದಾನ ಬಿಡು ಗಡೆಯಾಗಿ ಟೆಂಡರ್ ಪ್ರಕ್ರಿಯೆ ನಡೆದು ಕೆಲಸ ಆರಂಭವಾಗುವಷ್ಟರಲ್ಲಿ ಏಪ್ರಿಲ್ ಕಳೆದಿರುತ್ತದೆ. ಇದಾದ ಬಳಿಕ ಕಾಮಗಾರಿ ಪೂರ್ಣವಾಗುವಷ್ಟರಲ್ಲಿ ಮತ್ತೆ ಮಳೆಗಾಲ ಆರಂಭವಾಗಿ ರಸ್ತೆಗಳು ಮತ್ತೆ ಹದಗೆಡುತ್ತವೆ. ಹೀಗಾಗಿ ಮಳೆಗಾಲ ದಲ್ಲಿಯೇ ತಾಂತ್ರಿಕ ಕೆಲಸಗಳು, ಪ್ರಸ್ತಾವನೆ, ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ ಮಳೆಗಾಲ ಕಳೆದ ಕೂಡಲೇ ಕೆಲಸ ಆರಂಭಿಸು ವಂತಾಗ ಬೇಕು. ಹೀಗಾದಾಗ ಮಾತ್ರ ರಸ್ತೆಗಳು ಉಳಿಯುತ್ತವೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಬಸ್ ಮಾಲೀಕರ ಸಂಘದ ಪ್ರಮುಖರು ಈ ಹಿಂದೆಯೇ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು. ರಸ್ತೆಗಳ ಮರು ಡಾಂಬರೀಕರಣದ ಪ್ರಕ್ರಿಯೆ ಪ್ರಸ್ತಾವನೆ ಹಂತದಲ್ಲಿಯೇ ಇರುವುದಕ್ಕೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
” ಜಿಲ್ಲೆಯ ರಸ್ತೆಗಳು ತೀರಾ ಗುಂಡಿ ಬಿದ್ದಿದ್ದು, ತೇಪೆ ಕೆಲಸ ಮಾಡಿದರೆ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬಿದ್ದು ಹಾಳಾಗುತ್ತದೆ. ಇದಕ್ಕೆ ಮಡಿಕೇರಿ – ಭಾಗಮಂಡಲ ರಸ್ತೆಯಲ್ಲಿ ಮಾಡಿರುವ ಕಾಮಗಾರಿಯೇ ಸಾಕ್ಷಿಯಾಗಿದೆ. ಕೆಲವೆಡೆ ರಸ್ತೆ ಗುಂಡಿಗಳಿಂದ ಅಪಘಾತಗಳೂ ಸಂಭವಿಸುತ್ತಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು.”
-ಹೊಸೂರು ರಮೇಶ್ ಜೋಯಪ್ಪ , ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ .
” ಜಿಲ್ಲೆಯಲ್ಲಿ ಸದ್ಯಕ್ಕೆ ಆಯಾ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ವಹಣಾ ಕೆಲಸ ಕೈಗೊಳ್ಳಲಾಗುತ್ತಿದೆ. ಮರು ಡಾಂಬರೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾಗಬೇಕಿದೆ. ಉಳಿದಂತೆ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು.”
-ಮುತ್ತುರಾಜು, ಎಂ.ಪಿ., ಕಾರ್ಯಪಾಲಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ