ಎಚ್.ಎಸ್.ದಿನೇಶ್‌ಕುಮಾರ್
ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರ ಪ್ರಕರಣವೇ ಸಾಕ್ಷಿ. ಸಿದ್ದರಾಜು ಅವರ ಬದಲಿಗೆ ಅವರನ್ನೇ ಹೋಲುವ ವ್ಯಕ್ತಿಯನ್ನು ಕರೆದೊಯ್ದ ದುಷ್ಕರ್ಮಿ ನಾನು ಇವರ ತಮ್ಮ ಎಂದು ಹೇಳಿ ಕೊಂಡು ಜಿಪಿಎ ನೋಂದಣಿ ಮಾಡಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ವಿಜಯನಗರದಲ್ಲಿರುವ ಪಶ್ಚಿಮ ಉಪ ನೋಂದಣಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಅವರ ಸಮಯ ಪ್ರಜ್ಞೆಯಿಂದ ವಂಚನೆಯೊಂದು ತಪ್ಪಿದೆ. ದಾಖಲೆಯನ್ನು ನೋಂದಣಿ ಮಾಡುವ ವೇಳೆ ವಯಸ್ಸಿನ ಅಂತರವನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಮೇಲಧಿಕಾರಿಗೆ ವಿಚಾರ ಮುಟ್ಟಿಸಿ, ನಡೆಯಲಿದ್ದ ಭಾರೀ ವಂಚನೆಯನ್ನು ತಪ್ಪಿಸಿದ್ದಾರೆ.
ಘಟನೆ ವಿವರ: ಬುಧವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಕೇರ್ಗಳ್ಳಿ ಸರ್ವೇ ಸಂಖ್ಯೆಗಳ ಸುಮಾರು ೨೨ ನಿವೇಶನಗಳಿಗೆ ಸಂಬಂಧಿಸಿದಂತೆ ಸಹೋದರ ನಿಂದ ಜಿಪಿಎ ಪಡೆದುಕೊಳ್ಳಲು ನೋಂದಣಿಗಾಗಿ ವಿಜಯ ನಗರದ ಪಶ್ಚಿಮ ನೋಂದಣಿ ಕಚೇರಿಗೆ ಬಂದಿದ್ದಾನೆ. ಆತ ಜಿಪಿಎ ಪಡೆದುಕೊಳ್ಳಲು ಕರೆತಂದಿದ್ದು ಮಾಜಿ ವಿಧಾನಪರಿಷತ್ ಸದಸ್ಯ ಸಿದ್ದರಾಜು ಅವರನ್ನು…, ಆದರೆ, ಆತ ಕರೆತಂದಿದ್ದು ಸಿದ್ದರಾಜು ಅವರನ್ನೇ ಹೋಲುವ ವ್ಯಕ್ತಿ ಎಂದು ಮೊದಲಿಗೆ ಯಾರಿಗೂ ಗೊತ್ತಾಗಲಿಲ್ಲ.
ಅವರೇ ನಿಜವಾದ ಸಿದ್ದರಾಜು ಎಂದು ಜಿಪಿಎ ಪತ್ರವನ್ನು ನೋಂದಣಿ ಮಾಡಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ಹಾಗೂ ಆತನ ಸಹೋದರ ಎಂದು ಹೇಳಿಕೊಂಡ ವ್ಯಕ್ತಿಯ ದಾಖಲೆಗಳನ್ನು ಸಿಬ್ಬಂದಿ ಗಮನಿಸಿದ್ದಾರೆ. ಈ ವೇಳೆ ಅವರಿಬ್ಬರ ವಯಸ್ಸಿನ ಅಂತರ ಕಂಪ್ಯೂಟರ್ ಆಪರೇಟರ್‌ಗೆ ಅನುಮಾನ ಹುಟ್ಟಿಸಿದೆ. ಏಕೆಂದರೆ ಸಿದ್ದರಾಜು ಹಾಗೂ ದುಷ್ಕರ್ಮಿಯ ವಯಸ್ಸಿನ ಅಂತರ ಬರೋಬ್ಬರಿ ೩೩ವರ್ಷಗಳು. ಇದನ್ನು ಗಮನಿಸಿದ ಸಿಬ್ಬಂದಿಯು, ಸಿದ್ದರಾಜು ಅವರನ್ನು ಅಣ್ಣ ಎನ್ನುತ್ತೀರಿ, ಆದರೆ, ನಿಮಗೂ ಅವರಿಗೂ ೩೩ ವರ್ಷ ವಯಸ್ಸಿನ ಅಂತರವಿದೆ . ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ನಂತರ ಅಲ್ಲಿಂದ ತೆರಳಿದ ಅವರು ಮೇಲಾಧಿಕಾರಿ ಕೊಠಡಿಗೆ ತೆರಳಿ ತಮ್ಮ ಅನುಮಾವನ್ನು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಸಾಮಾನ್ಯ ಅಧಿಕಾರ ಪತ್ರ ನೋಂದಣಿ ಯನ್ನು ತಡೆಹಿಡಿದಿದ್ದಾರೆ. ಆತನನ್ನು ಇಲ್ಲಿಯೇ ಇರಿಸುವಂತೆ ಹೇಳಿದ್ದಾರೆ.
ಯಾವಾಗ ತನ್ನ ವಂಚನೆ ಬಯಲಾಗಿದೆ ಎಂಬುದು ತಿಳಿಯಿತೋ ದುಷ್ಕರ್ಮಿಯು ನಕಲಿ ಸಿದ್ದರಾಜು ಅವರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅವರಿಗೆ ವಿಚಾರ ಮುಟ್ಟಿಸಿ ಇಡೀ ಪ್ರಕರಣ ಬೆಳಕಿಗೆ ಬರುವಂತೆ ಮಾಡಿದ್ದಾರೆ. ಸಿಸಿ ಕ್ಯಾಮೆರಾ ಇಲ್ಲ: ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ. ಆದರೆ, ಸಿದ್ದರಾಜು ಅವರ ನಿವೇಶನಗಳನ್ನು ಲಪಟಾಯಿಸಲು ಹುನ್ನಾರ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಹಿಡಿಯಲು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇದೆ. ಏಕೆಂದರೆ ನೋಂದಣಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳನ್ನೇ ಅಳವಡಿಸಿಲ್ಲ. ಹೀಗಾಗಿ ವಂಚಿಸುವ ಹುನ್ನಾರ ನಡೆಸಿದ್ದ ವ್ಯಕ್ತಿಯನ್ನು ಹೇಗೆ ಪತ್ತೆಹಚ್ಚುವುದು ಎಂಬುದು ಪೊಲೀಸರಿಗೆ ಸಮಸ್ಯೆಯಾಗಿದೆ. ಪ್ರತಿದಿನ ಕೋಟ್ಯಂತರ ರೂ. ವ್ಯವಹಾರ ನಡೆಸುವ ಕಚೇರಿಯಲ್ಲಿ ಸಿಸಿ ಕ್ಯಾಮೆರಾವನ್ನು ಏಕೆ ಅಳವಡಿಸಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆ. ಈ ಹಿಂದೆ ನಗರದ ಎಲ್ಲಾ ನೋಂದಣಿ ಕಚೇರಿಗಳಿಗೂ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂಬ ಪ್ರಸ್ತಾವನೆ ಇತ್ತು. ಆದರೆ ಜಾರಿಯಾಗಿಲ್ಲ.
” ಸಾರ್ವಜನಿಕರ ವ್ಯವಹಾರವಿರುವ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸುವುದು ಉತ್ತಮ. ಮೈಸೂರಿನಲ್ಲಿ ನಿವೇಶನಗಳ ಬೆಲೆ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ನಕಲಿ ದಾಖಲೆಗಳ ಮೇಲಾಟ ನಡೆಯುವುದು ಮಾಮೂಲು. ಹೀಗಾಗಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದಲ್ಲಿ ವಂಚಕರ ಪತ್ತೆ ಸುಲಭವಾಗುತ್ತದೆ. ಇಲ್ಲವಾದಲ್ಲಿ ಅಂತಹವರನ್ನು ಹಿಡಿದು ಕಾನೂನು ಕ್ರಮ ತೆಗೆದುಕೊಳ್ಳಲು ಅಸಾಧ್ಯ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.”
ಎಂ.ಎಸ್.ಧನಂಜಯ. ಉಪಾಧ್ಯಕ್ಷರು ರಾಜ್ಯ ಪತ್ರ ಬರಹಗಾರರ ಸಂಘ





