ಎಚ್.ಎಸ್.ದಿನೇಶ್ ಕುಮಾರ್
ಲಕ್ಷಾಂತರ ಜನರನ್ನು ಆಕರ್ಷಿಸಿದ ಮನರಂಜನಾ ತಾಣ; ನಿತ್ಯ ಸಾವಿರಾರು ಜನ ವೀಕ್ಷಣೆ
ಮೈಸೂರು: ಕಳೆದ ಮೂರು ತಿಂಗಳುಗಳಿಂದ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಹಾಗೂ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಿದ ದಸರಾ ವಸ್ತುಪ್ರದರ್ಶನ ಭಾನುವಾರ ತೆರೆ ಕಂಡಿತು.
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ವಸ್ತುಪ್ರದರ್ಶನವೂ ಒಂದು. ಮೂರು ತಿಂಗಳುಗಳ ಕಾಲ ನಡೆಯುವ ವಸ್ತುಪ್ರದರ್ಶನದಲ್ಲಿ ಕೇರಳ, ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜ್ಯದ ಹಲವಾರು ಜಿಲ್ಲೆಯ ಉದ್ಯಮಿಗಳು ಪಾಲ್ಗೊಳ್ಳುವುದುವಾಡಿಕೆ. ಅವರಿಗೆ ವಸ್ತುಪ್ರದರ್ಶನ ಆರಂಭವಾಯಿತು ಎಂದರೆ ಎಲ್ಲಿಲ್ಲದ ಸಂತಸ.
ಲಕ್ಷಾಂತರ ರೂ. ಬಂಡವಾಳ ಹೂಡುವ ವ್ಯಾಪಾರಿಗಳು ಸಾಕಷ್ಟು ಲಾಭ ಮಾಡಿಕೊಂಡು ತಮ್ಮ ಊರಿನತ್ತ ಪಯಣ ಬೆಳೆಸುತ್ತಾರೆ. ಇದರ ಜೊತೆಗೆ ವಿವಿಧ ಬಗೆಯ ತಿಂಡಿ, ತಿನಿಸುಗಳ ಮಾರಾಟಗಾರರು ಹಾಗೂ ಸ್ತ್ರೀ ಶಕ್ತಿ ಮಹಿಳಾ ಸಂಘಟನೆಗಳು ಕೂಡ ಆಹಾರ ಪದಾರ್ಥಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿವೆ.
ಹಲವು ವಿಶೇಷ: ಈ ಬಾರಿಯ ವಸ್ತು ಪ್ರದರ್ಶನದ ಆವರಣವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಹಿಮಕರಡಿ, ಡ್ರ್ಯಾಗನ್ ಪಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಗಳನ್ನು ಬಿಂಬಿಸುವ ಮಳಿಗೆ, ಸಂಗೀತ ಕಾರಂಜಿ… ಹೀಗೆ ಹಲವು ಹೊಸತನಗಳನ್ನು ನೋಡುಗರು ಕಣ್ತುಂಬಿಕೊಂಡರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದು ವಿಶೇಷ.
ಕೊನೆಯ ದಿನ ವ್ಯಾಪಾರ ಬಲೂ ಜೋರು: ಭಾನುವಾರ ರಾತ್ರಿಯೇ ದಸರಾ ವಸ್ತುಪ್ರದರ್ಶನ ಅಧಿಕೃತವಾಗಿ ಕೊನೆಗೊಂಡರೂ, ಸೋಮವಾರವೂ ವ್ಯಾಪಾರಸ್ಥರು ಭಾರೀ ರಿಯಾಯಿತಿ ಮೂಲಕ ವ್ಯಾಪಾರ ಮಾಡಿ ಕೊಂಡರು. ಅವರ ವ್ಯಾಪಾರಕ್ಕೆ ವಸ್ತುಪ್ರದರ್ಶನದ ಅಧಿಕಾರಿಗಳು ಕೂಡ ಅಡ್ಡಿಪಡಿಸಲಿಲ್ಲ.
ಸಾರ್ವಜನಿಕರು ಯಾವುದೇ ಪ್ರವೇಶ ಶುಲ್ಕವಿಲ್ಲದೆ ಸೋಮವಾರ ವಸ್ತುಪ್ರದರ್ಶನ ಆವರಣಕ್ಕೆ ಲಗ್ಗೆ ಇಟ್ಟರು. ರಸ್ತೆ ಬದಿ ವ್ಯಾಪಾರಿಗಳು ವಸ್ತುಪ್ರದರ್ಶನ ಆವರಣದ ಮುಂಭಾಗ ವ್ಯಾಪಾರ ಮಾಡಿಕೊಂಡರು.
ಇದೇ ವೇಳೆ ೨೦೨೫ರ ದಸರಾ ವಸ್ತು ಪ್ರದರ್ಶನದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ನಿಗಮ, ಮಂಡಳಿಗಳು ಹಾಗೂ ಜಿಲ್ಲಾ ಪಂಚಾಯತ್‌ಗಳಿಂದ ತೆರೆಯಲಾಗಿದ್ದ ಮಳಿಗೆಗಳಲ್ಲಿ ಬಹುಮಾನಕ್ಕೆ ಆಯ್ಕೆಯಾದ ಮಳಿಗೆಗಳಿಗೆ ಮುಂದಿನ ವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
” ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಸೆ, ಅಧಿಕಾರಿಗಳ ಸಹಕಾರದಿಂದ ಈ ಬಾರಿಯ ವಸ್ತುಪ್ರರ್ದಶನ ಯಶಸ್ವಿಯಾಗಿ ಮುಗಿದಿದೆ. ದೇಶವಿದೇಶಗಳ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿ ಖುಷಿಪಟ್ಟಿದ್ದಾರೆ. ವಸ್ತುಪ್ರದರ್ಶನ ಅಂತ್ಯಗೊಂಡರೂ ಡ್ರ್ಯಾಗನ್ ಪಾಂಡ್ ಜನರ ವೀಕ್ಷಣೆಗೆ ಲಭ್ಯವಿರುತ್ತದೆ. ವಸ್ತುಪ್ರದರ್ಶನದ ಯಶಸ್ಸಿಗೆ ಕಾರಣರಾದ ಮೈಸೂರು ಜನತೆ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ.”
ಅಯೂಬ್ ಖಾನ್, ಅಧ್ಯಕ್ಷರು, ವಸ್ತುಪ್ರದರ್ಶನ ಪ್ರಾಧಿಕಾರ
” ಕಳೆದ ಮೂರು ತಿಂಗಳುಗಳಿಂದ ಮಳಿಗೆಯನ್ನು ನಡೆಸಿಕೊಂಡು ಬಂದಿದ್ದೇವೆ. ಹೆಚ್ಚು ಲಾಭವಿಲ್ಲದಿದ್ದರೂ ನಷ್ಟವಂತೂ ಆಗಿಲ್ಲ. ಮುಂದಿನ ಬಾರಿಯೂ ಮಳಿಗೆಯನ್ನು ಹೊಂದುವ ಇಚ್ಛೆ ಇದೆ.”
ನಯಾಜ್, ವ್ಯಾಪಾರಿ
” ಬೀಜಾಪುರದಿಂದ ಬಂದು ಇಲ್ಲಿ ಮೂರು ತಿಂಗಳುಗಳಿಂದ ವ್ಯಾಪಾರ ಮಾಡಿದ್ದೇವೆ. ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ನಿರೀಕ್ಷೆಯಂತೆ ನಮ್ಮ ವಸ್ತುಗಳು ಬಿಕರಿಯಾಗಿವೆ.”
ಭಾಗ್ಯಶ್ರೀ, ವ್ಯಾಪಾರಿ





