Mysore
27
few clouds

Social Media

ಸೋಮವಾರ, 05 ಜನವರಿ 2026
Light
Dark

ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!

ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ

೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ

ಮೈಸೂರು: ನೂರಾರು ಗುಬ್ಬಚ್ಚಿಗಳಿದ್ದ ಶಾಲೆಯಲ್ಲಿ, ಈಗ ಹನ್ನೆರಡು ‘ಗುಬ್ಬಚ್ಚಿ’ಗಳು ರೆಕ್ಕೆ ಬಡಿಯುತ್ತಾ ಓದುತ್ತಿವೆ! ಹೌದು… ಮೈಸೂರಿನ ಹಳೇ ಕೃಷ್ಣಮೂರ್ತಿಪುರಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಸ್ತವದ ನೋಟ ಇದಾಗಿದೆ.

೧೯೧೧ರಲ್ಲಿ ಆರಂಭವಾದ ಈ ಶಾಲೆಯು ಶತಮಾನ ಕಂಡಿದೆ. ಜೊತೆಗೆ ಶಾಲೆಯ ಆವರಣದಲ್ಲಿ ರುವ ಬಾಗೇಮರಕ್ಕೂ ಹೆಚ್ಚುಕಮ್ಮಿ ೯೦ ವರ್ಷಗಳಾಗಿವೆ. ಈ ಶಾಲೆಯಲ್ಲಿ ನನಗೆ ತಿಳಿದಂತೆ ೧ ರಿಂದ ೭ನೇ  ತರಗತಿವರೆಗಿನ ೧೮೦ ಮಕ್ಕಳು ಪ್ರವೇಶ ಪಡೆದು ಓದಿದ ದಾಖಲೆ ಇದೆ. ಜೊತೆಗೆ ೧೮ ಶಿಕ್ಷಕರು ಇದ್ದ ಕಾಲವೂ ಇತ್ತು. ಯಾವ ಖಾಸಗೀ ಶಾಲೆಗಳಿಗೂ ಕಡಿಮೆ ಇಲ್ಲದೆ, ಸರ್ಕಾರಿ ಸೌಲಭ್ಯಗಳನ್ನೂ ನೀಡಿದೆ, ಮುಖ್ಯವಾಗಿ ಉಚಿತ ಶಿಕ್ಷಣವಿದ್ದರೂ ಮಕ್ಕಳ ಪ್ರವೇಶಾತಿ ೧೨ ಮಕ್ಕಳಿಗೆ ಬಂದು ತಲುಪಿರುವುದು ನೋವಿನ ಸಂಗತಿ ಎಂದು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಟಿ.ಸ್. ಮೋಹನ್ ಕುಮಾರ್ ಭಾವುಕರಾಗಿ ಸ್ಮರಿಸುತ್ತಾರೆ.

ಒಂದು ಕಾಲದಲ್ಲಿ ಗುಬ್ಬಚ್ಚಿ ಶಾಲೆ ಪ್ರಸಿದ್ಧಿ ಪಡೆದು ಕೊಂಡಿದ್ದ ಈ ಶಾಲೆಯು ಈಗ ಅಳಿವಿನ ಅಂಚಿಗೆ ಸರಿಯುತ್ತಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಆದರೆ, ಈಗ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕುಸಿದಿದೆ. ಆರ್‌ಟಿಇ (ಶಿಕ್ಷಣ ಹಕ್ಕುಕಾಯ್ದೆ) ಪ್ರಕಾರ ಖಾಸಗಿ ಶಾಲೆಗೆ ಪ್ರವೇಶಾತಿಗೆ ಅವ ಕಾಶ ನೀಡಿರುವುದು, ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮ, ಈ ಶಾಲೆಯ ಸುತ್ತಮುತ್ತಲ ಸಮೀಪದಲ್ಲಿ ರುವ ಅನುದಾನ ಸಹಿತ, ಅನುದಾನ ರಹಿತ ಶಾಲೆಗಳ ಕಟ್ಟಡಗಳ ಆಕರ್ಷಕ ಸೆಳೆತವೂ ಮಕ್ಕಳ ಸಂಖ್ಯೆ ಕುಸಿತಕ್ಕೆ ಪ್ರಮುಖ ಕಾರಣಗಳೂ ಆಗಿವೆ. ಅಲ್ಲದೆ, ಖಾಸಗಿ ಶಾಲೆಗಳು ಮಕ್ಕಳಿಗಿಂತ ಹೆಚ್ಚಾಗಿ ಪೋಷಕರನ್ನು ಆಕರ್ಷಿಸಿವೆ ಎನ್ನಬಹುದು.

ಅಶೋಕಪುರಂ ಕ್ಲಸ್ಟರ್‌ನ ಈ ಶಾಲೆಯಲ್ಲಿ ಉಚಿತ ಲೇಖನ ಸಾಮಗ್ರಿಗಳು, ಪ್ರತಿಭಾವಂತ ಮಕ್ಕಳಿಗೆ ಉಚಿತ ವಿದ್ಯಾರ್ಥಿ ವೇತನ, ಉತ್ತಮ ಕ್ರೀಡೋಪಕರಣ ಸೌಲಭ್ಯ ಅಲ್ಲದೆ, ಅಕ್ಷರ ದಾಸೋಹ ಹಾಗೂ ಕ್ಷೀರಭಾಗ್ಯ, ಹಿಂದುಳಿದ ಮಕ್ಕಳಿಗೆ ವಿಶೇಷ ಶಿಕ್ಷಣಕ್ಕೆ ಪ್ರಾಧ್ಯಾನತೆ, ಅಂಗವಿಕಲ ಮಕ್ಕಳಿಗೆ ವಿಶೇಷ ಸೌಲಭ್ಯ ಮತ್ತು ವಿಶೇಷ ಶಿಕ್ಷಣ, ಶುದ್ಧೀಕರಿಸಿದ (ಅಕ್ವಾಗಾರ್ಡ್) ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿವೆ. ಜೊತೆಗೆ ೧ನೇ ತರಗತಿಯ ಹೆಣ್ಣುಮಕ್ಕಳಿಗೆ ಪ್ರತಿದಿನ ೨ ರೂ.ಗಳಂತೆ ಹಾಜರಾತಿ ವಿಶೇಷ ಪ್ರೋತ್ಸಾಹಧನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಗುಬ್ಬಚ್ಚಿ ಶಾಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ೬ ಬಾಲಕರು, ೬ ಬಾಲಕಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ ೬ ಮಂದಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಾಗಿದ್ದಾರೆ. ಒಬ್ಬರು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಯಾಗಿದ್ದು, ಉಳಿದ ೫ ವಿದ್ಯಾರ್ಥಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಶಾಲೆಯಲ್ಲಿ ಇಬ್ಬರು ಶಿಕ್ಷಕರು, ಒಬ್ಬರು ಅಡುಗೆ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ.

” ಶಾಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಪ್ರವೇಶಾತಿಯನ್ನು ಹೆಚ್ಚಳಗೊಳಿಸಲು ನಾನಾ ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಮನೆಮನೆಗೆ ಭೇಟಿ ನೀಡಿ ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು, ಸೌಲಭ್ಯಗಳನ್ನು ತಿಳಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡಲು ಕಾರ್ಯಯೋಜನೆಯನ್ನು ಮತ್ತಷ್ಟು ಪರಿಣಾಕಾರಿಯಾಗಿ ಮಾಡುತ್ತೇವೆ.”

-ಕೃಷ್ಣ, ಬಿಇಒ, ಮೈಸೂರು ದಕ್ಷಿಣ ವಲಯ

” ಸರ್ಕಾರಿ ಶಾಲೆಗಳು ಉಳಿದಾಗಲೇ ಬಡ ಮಕ್ಕಳು ಶಿಕ್ಷಣದಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಇಲ್ಲಿ ಪೋಷಕರು ವಿವೇಚನೆಯಿಂದ ತಿರ್ಮಾನ ತೆಗೆದುಕೊಳ್ಳಬೇಕು. ದೂರದ ಬೆಟ್ಟ ನುಣ್ಣಗೆ ಎಂಬಂತೆ ಖಾಸಗಿ ಶಾಲೆಗಳು ಕಾಣುತ್ತಿವೆ. ಸರ್ಕಾರಿ ಶಾಲೆಗಳು ಈಗಲೂ ಖಾಸಗಿ ಶಾಲೆಗಳ ಸಮಕ್ಕೆ ಇವೆ. ಇದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು.”

-ದಿನೇಶ್, ನೇತ್ರಾಧಿಕಾರಿ,

” ಪ್ರಾಥಮಿಕ ಆರೋಗ್ಯ ಕೇಂದ್ರ, ಭೇರ್ಯ, ಕೆ.ಆರ್.ನಗರ ತಾ. ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಹಿಂದೆ ಸರ್ಕಾರಿ ಶಾಲೆಗಳೆ ಎಲ್ಲರಿಗೂ ಆಧ್ಯತೆಯಾಗಿದ್ದವು. ಈಗ ಪೋಷಕರು ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬಂತೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಬ್ಬುತ್ತಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು.”

– ರವೀಂದ್ರ, ಎಸ್‌ಡಿಇ, ಕೆ.ಆರ್.ನಗರ ಪಟ್ಟಣ

” ಮಕ್ಕಳ ಪ್ರವೇಶಾತಿ ನಿಧಾನವಾಗಿ ಕಡಿಮೆ ಆಗುತ್ತಿತ್ತು, ಈ ನಡುವೆ ಕೋವಿಡ್-೧೯ ಎದುರಾಗಿ ಮಕ್ಕಳ ಪ್ರವೇಶಾತಿ ಏಕಾಏಕಿ ಒಂದೇ ಸಮನೆ ಕಡಿಮೆಯಾಯಿತು. ಇದು ಯಾಕೆ ಅಂತ ನಮಗೆ ಅರ್ಥವಾಗದ ಸಂಗತಿ. ಮಕ್ಕಳ ಪ್ರವೇಶಾತಿ ಹೆಚ್ಚಳಕ್ಕಾಗಿ ೨೦೨೫-೨೬ನೇ ಸಾಲಿನ ೧ನೇ ತರಗತಿ ಮಕ್ಕಳಿಗಾಗಿ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಮಾಧ್ಯಮವನ್ನು ಆರಂಭಿಸಲಾಗಿದೆ.”

-ಚಂಪಾಶ್ರೀ ಸಹ ಶಿಕ್ಷಕರು

” ಶಾಲೆ ಆವರಣದಲ್ಲಿ ವಿಸ್ತಾರವಾಗಿ ಬೆಳೆದು ನಿಂತಿರುವ ಭಾಗೇಮರದಲ್ಲಿ ಅಸಂಖ್ಯಾತ ಗುಬ್ಬಚ್ಚಿಗಳು ವಾಸಿಸುತ್ತಿದ್ದವು. ಆ ಗುಬ್ಬಚ್ಚಿಗಳೇ ಶಾಲೆಯ ಒಂದು ಪ್ರಮುಖ ಆಕರ್ಷಣೆಯೂ ಆಗಿದ್ದವು. ಹಾಗಾಗಿ ಶಾಲೆ ಗುಬ್ಬಚ್ಚಿ ಶಾಲೆ ಎಂದೇ ಪ್ರಸಿದ್ಧಿ ಪಡೆದಿದೆ”

 -ಟಿ.ಎಸ್.ಮೋಹನ್ ಕುಮಾರ್ ಪ್ರಭಾರ ಮುಖ್ಯೋಪಾಧ್ಯಾಯ

Tags:
error: Content is protected !!