ಮೈಸೂರು: ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳೂ ಸೇರಿದಂತೆ ಮಹಿಳಾ ಉದ್ಯಮಿಗಳು ತಯಾರಿಸುವ ಸ್ಥಳೀಯ ಉತ್ಪನ್ನಗಳಿಗೆ ಮುಂದಿನ ದಿನಗಳಲ್ಲಿ ಜಾಗತಿಕ ಮಾರು ಕಟ್ಟೆ ಸಿಗಲಿದೆ. ನಿರೀಕ್ಷೆಯಂತೆ ಈ ಮಹತ್ವದ ಕಾರ್ಯ ಕ್ರಮ ಅನುಷ್ಠಾನಗೊಂಡರೆ ಉತ್ಪನ್ನಗಳಿಗೆ ಬೇಡಿಕೆ ಬರುವ ಜತೆಗೆ, ಮಹಿಳೆಯರಿಗೂ ಆರ್ಥಿಕವಾಗಿ ಲಾಭ ತಂದು ಕೊಡುವಂತಾಗಲಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್ ಮಾದರಿಯಲ್ಲಿ ಮಹಿಳೆಯರು ತಾವು ತಯಾರಿಸುವ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವುರೊಂದಿಗೆ ಆನ್‌ಲೈನ್ ಮೂಲಕವೂ ಮಾರಾಟ ಮಾಡಬಹುದಾಗಿದೆ. ಅಂತಹ ಆನ್‌ಲೈನ್ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕ್ರಿಯಾ ಯೋಜನೆ ರೂಪಿಸಿದ್ದು, ಅನುಷ್ಠಾನಗೊಳಿಸಲು ಭರದ ಸಿದ್ಧತೆ ನಡೆಸಿದೆ.
ಪ್ರತಿ ಜಿಲ್ಲೆಯ ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀಶಕ್ತಿ ಸ್ವ ಸಹಾಯ ಸಂಘಟನೆಗಳು ತಯಾರಿಸುವ ಉತ್ಪನ್ನಗಳ ಪಟ್ಟಿ ಮಾಡುತ್ತಿರುವ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ, ಆನ್‌ಲೈನ್ ಮಾರುಕಟ್ಟೆಗೆ ಆಪ್ಮತ್ತು ವೆಬ್‌ಸೈಟ್ ಮೂಲಕ ಭೂಮಿಕೆ ಸಿದ್ಧಪಡಿಸು ತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಮಾತ್ರ ಮಾರಾಟ ಮಾಡುವ ಅವಕಾಶ ಹೊಂದಿದ್ದ ಮಹಿಳಾ ಉದ್ಯಮಿಗಳಿಗೆ ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಅವಕಾಶ ಸಿಗಲಿದೆ. ಸರ್ಕಾರ ಹಾಗೂ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಸಣ್ಣ ಪ್ರಮಾಣದಲ್ಲಿ ಉದ್ಯಮಗಳನ್ನು ಆರಂಭಿಸಿರುವ ಮಹಿಳೆಯರು ಮನೆಯಲ್ಲಿಯೇ ಹಪ್ಪಳ, ಸಂಡಿಗೆ, ಕಾರದ ಪುಡಿ, ನಾನಾ ಬಗೆಯ ತಿಂಡಿ-ತಿನಿಸುಗಳು, ಕುರುಕಲು ತಿಂಡಿಗಳು, ಮನೆಯ ಅಲಂಕಾರಿಕ ವಸ್ತುಗಳು, ಸಿದ್ಧಪಡಿಸಿದ ಉಡುಪುಗಳು, ಫ್ಯಾನ್ಸಿ ವಸ್ತುಗಳು ಹೀಗೆ ನಾನಾ ಬಗೆಯ ವಸ್ತುಗಳನ್ನು ಸ್ಥಳೀಯವಾಗಿ ನಡೆಯುವ ವಸ್ತುಪ್ರದರ್ಶನಗಳಲ್ಲಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದೇ ಇರುವುದರಿಂದ ಸೀಮಿತ ಆದಾಯಕ್ಕೆ ತೃಪ್ತಿ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆನ್ಲೈನ್ ಮಾರಾಟ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಮಾಹಿತಿ ಸಂಗ್ರಹ ಪ್ರತಿ ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಮಹಿಳಾ ಉದ್ಯಮಿಗಳು ಮತ್ತು ಸೀ ಶಕ್ತಿ ಸಂಘಟನೆಗಳ ಸದಸ್ಯರನ್ನು ನಿಗಮದ ಅಧಿಕಾರಿಗಳು ಭೇಟಿ ಮಾಡುತ್ತಿದ್ದು, ಆನ್‌ಲೈನ್ ಮೂಲಕ ಮಾರಾಟ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿ ವಿವರ ಸಂಗ್ರಹಿಸುತ್ತಿದ್ದಾರೆ. ಉತ್ಪನ್ನದ ಹೆಸರು, ಚಿತ್ರದೊಂದಿಗೆ ಮಾರಾಟಗಾರರ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆ ಮೊದಲಾದ ವಿವರಗಳನ್ನು ಕಲೆ ಹಾಕಿ ನಿಗಮದ ಕೇಂದ್ರ ಕಚೇರಿಗೆ ನೀಡಲಾಗುತ್ತಿದೆ.
ಮಾರಾಟ ಹೇಗೆ?: ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾಉದ್ಯಮಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದ್ದು, ನಿಗಮವು ಅಭಿವೃದ್ಧಿಪಡಿಸುತ್ತಿರುವ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ. ಗ್ರಾಹಕರು ವೆಬ್‌ಸೈಟಿನಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಉತ್ಪನ್ನವನ್ನು ಖರೀದಿಸಬಹುದು.
” ರಾಜ್ಯದಲ್ಲಿ ಮಹಿಳಾ ಉದ್ಯಮಿಗಳು ಮತ್ತು ಸ್ತ್ರೀಶಕ್ತಿ ಶಕ್ತಿ ಸಂಘಟನೆಗಳು ತಯಾರಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಆನ್ಲೈನ್ ಮಾರಾಟ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ನಿಗಮದಿಂದ ವೆಬ್‌ಸೈಟ್ ಸಿದ್ಧಪಡಿಸಲಾಗುತ್ತಿದ್ದು, ಇದರಲ್ಲಿ ಉತ್ಪನ್ನಗಳ ಚಿತ್ರದೊಂದಿಗೆ ಮಾಹಿತಿಯನ್ನು ದಾಖಲಿಸುವ ಮೂಲಕ ಗ್ರಾಹಕರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ.”
– ಜಿ.ಪದ್ಮಾವತಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ
” ಮೈಸೂರು ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಮಹಿಳಾ ಉದ್ಯಮಿಗಳನ್ನು ಸಂಪರ್ಕಿಸಿ ಅವರು ಸಿದ್ಧಪಡಿಸುವ ಉತ್ಪನ್ನ ಮತ್ತು ವಿವರಗಳನ್ನು ಪಡೆಯಲಾಗುತ್ತಿದ್ದು, ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡುವ ಮೂಲಕ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.”
– ಎಚ್.ವಿ.ಜಗದಾಂಬ, ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ





