Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಒಂದೆಡೆ ರಸ್ತೆಯಲ್ಲಿ ದೂಳು, ಮತ್ತೊಂದೆಡೆ ಕನ್ನಡದ ಕಗ್ಗೊಲೆ

ಬಾವಲಿ-ಹ್ಯಾಂಡ್‌ಪೋಸ್ಟ್ ರಸ್ತೆ ಕಾಮಗಾರಿ ವೇಳೆ ಗುತ್ತಿಗೆದಾರನ ನಿರ್ಲಕ್ಷ್ಯ; ಫಲಕದಲ್ಲಿ ಕನ್ನಡದ ಕಡೆಗಣನೆ 

ಮಂಜು ಕೋಟೆ

ಎಚ್.ಡಿ.ಕೋಟೆ: ಬಾವಲಿ ಮತ್ತು ಹ್ಯಾಂಡ್ ಪೋಸ್ಟ್ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿ ಕಾಮಗಾರಿ ಒಂದೆಡೆ ದೂಳುಮಯವಾಗಿದ್ದರೆ, ಕಾಮಗಾರಿ ಸ್ಥಳದಲ್ಲಿ ಅಳವಡಿಸಿರುವ ಫಲಕದಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಹೀಗಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.

ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಬಾವಲಿ ಮತ್ತು ಹ್ಯಾಂಡ್‌ಪೋಸ್ಟ್ ರಸ್ತೆಯು ತೀವ್ರ ಹದಗೆಟ್ಟಿದ್ದರಿಂದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆ ಎಸ್‌ಟಿಪಿ ಮೂಲಕ ೨೦ ಕೋಟಿ ರೂ. ವೆಚ್ಚದಲ್ಲಿ ಬಳ್ಳೆಯಿಂದ ಬಾವಲಿವರೆಗೆ ರಸ್ತೆ ಕಾಮಗಾರಿ ನಡೆಸಲು ಮಂಡ್ಯದ ಮೂಲದ ಯೋಗಾನಂದ ಎಂಬವರಿಗೆ ಟೆಂಡರ್ ನೀಡಿದೆ.

ಒಂದು ತಿಂಗಳಿಂದ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಲಾರಿಗಳ ಮುಖಾಂತರ ರಸ್ತೆ ಉದ್ದಕ್ಕೂ ಜಲ್ಲಿಯನ್ನು ಸುರಿಸಿ ಕಾಮಗಾರಿ ನಡೆಸುತ್ತಿದ್ದು, ಅದಕ್ಕೆ ನೀರನ್ನು ಹಾಕದೆ ಇರುವುದರಿಂದ ವಾಹನಗಳು ರಸ್ತೆಯ ಮೇಲೆ ಚಲಿಸಿದಾಗ ಭಾರೀ ಪ್ರಮಾಣದಲ್ಲಿ ದೂಳು ಏಳುತ್ತಿದೆ.

ಇದರಿಂದ ವಾಹನ ಚಾಲಕರು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಅಲ್ಲದೆ, ವನ್ಯ ಪ್ರಾಣಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ.

ಫಲಕದಲ್ಲಿ ಕನ್ನಡದ ಕಗ್ಗೊಲೆ: ಮತ್ತೊಂದೆಡೆ ರಸ್ತೆಯ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಅಭಿನಂದಿಸುವ ಸಲುವಾಗಿ ಕೆಲ ಸಂಸ್ಥೆಗಳು ಬಾವಲಿಯಲ್ಲಿ ಫಲಕದಲ್ಲಿ ನಾಯಕರ ಭಾವಚಿತ್ರಗಳೊಂದಿಗೆ ಮೊದಲು ಮಲಯಾಳಂ ಭಾಷೆಯಲ್ಲಿ ಅಭಿನಂದನಾ ಬರಹಗಳನ್ನು ಬರೆಸಿ ಕೆಳಭಾಗದಲ್ಲಿ ಕನ್ನಡದಲ್ಲಿ ಬರೆಸಿವೆ. ಆದರೆ, ಕನ್ನಡವನ್ನು ತಪ್ಪು ತಪ್ಪಾಗಿ ಬರೆಸಲಾಗಿದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಹೆಸರನ್ನು ‘ಡಿಕೆ ಸುಕುಮಾರ್’ ಎಂದೂ, ಅನಿಲ್ ಚಿಕ್ಕಮಾದು ಹೆಸರನ್ನು ‘ಅನಿಲ್ ಚಿಕುಮದು’ ಎಂದೂ ಬರೆಯಲಾಗಿದೆ. ರಾಜ್ಯದ ಗಡಿಭಾಗದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕಾದ ಸಂದರ್ಭದಲ್ಲಿ ಹೀಗೆ ಕನ್ನಡದ ಕಗ್ಗೊಲೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ಭಾಗದಲ್ಲಿ ಪೊಲೀಸ್, ಅರಣ್ಯ, ಅಬಕಾರಿ ಇಲಾಖೆಗಳ ಚೆಕ್‌ಪೋಸ್ಟ್‌ಗಳಿದ್ದು, ಅಲ್ಲಿ ಕೆಲಸ ನಿರ್ವಹಿಸುವವರು ದಿನನಿತ್ಯ ಸಂಚರಿಸಿದರೂ ಕಂಡೂ ಕಾಣದಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಸಮರ್ಪಕವಾಗಿ ಕೆಲಸ ಮಾಡದೆ ಜನರಿಗೆ ತೊಂದರೆಯಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಫಲಕದಲ್ಲಿ ಮಲಯಾಳಂ ಭಾಷೆಗೆ ಆದ್ಯತೆ ನೀಡಿ ಕನ್ನಡವನ್ನು ಕಡೆಗಣಿಸಿರುವುದರಿಂದ ಸಂಬಂಧಪಟ್ಟವರು ತಕ್ಷಣ ಸಂಬಂಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

” ಕಾಮಗಾರಿ ನಡೆಯುತ್ತಿರುವ ರಸ್ತೆ ದೂಳುಮಯವಾಗುತ್ತಿರುವ ಬಗ್ಗೆ ತಿಳಿದುಬಂದಿದ್ದು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಎಲ್ಲ ಕಾಮಗಾರಿಗಳನ್ನೂ ಪರಿಶೀಲಿಸಲು, ಉಸ್ತುವಾರಿ ನೋಡಿಕೊಳ್ಳಲು ಬೆಂಗಳೂರು ಮಟ್ಟದಲ್ಲಿ ಅಧಿಕಾರಿಗಳು ಮತ್ತು ತಂಡ ನೇಮಕವಾಗಿದೆ.”

ಬೋರಯ್ಯ, ಎಇಇ, ಪಿಡಬ್ಲ್ಯುಡಿ

” ಗಡಿ ತಾಲ್ಲೂಕಿನಲ್ಲಿ ಕನ್ನಡ ಭಾಷೆ, ಸಂಸ್ಕ ತಿಗೆ ಒತ್ತು ನೀಡಿ ಬೆಳೆಸುವ ಅಗತ್ಯವಿದೆ. ಆದರೆ, ಇಲ್ಲಿಇ ಕನ್ನಡಕ್ಕೆ ಅಪಮಾನ ಮಾಡಿ ಪರಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.”

-ನಟರಾಜ್, ಕರವೇ ತಾ.ಅಧ್ಯಕ್ಷ

Tags:
error: Content is protected !!