ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಪಟ್ಟಣದ ಹೃದಯ ಭಾಗದಲ್ಲಿರುವ ವೆಂಕಟೇಶ್ವರ ಚಿತ್ರಮಂದಿರ ರಸ್ತೆಯ ಬಳಿ ಇರುವ ಹಳೆಯ ಆಸ್ಪತ್ರೆ ವಸತಿ ಕಟ್ಟಡಗಳು ಸಂಪೂರ್ಣ ಶಿಥಿಲಾ ವಸ್ಥೆಯಲ್ಲಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ವಸತಿಗೃಹಗಳು ಕುಡುಕರ ಅಡ್ಡೆಯಾಗಿದ್ದು, ಸಂಜೆಯಾದರೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಕಟ್ಟಡದಲ್ಲಿರುವ ವಸ್ತುಗಳು ಕಳ್ಳರ ಪಾಲಾದರೂ ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ. ಕಟ್ಟಡವನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಹಳೆಯ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕುಡುಕರ ತಾಣವಾಗಿ, ಅನೈತಿಕ ಚಟುವಟಿಕೆಗಳ ಸ್ಥಾನವಾಗಿ ಮಾರ್ಪಟ್ಟಿದೆ. ಆದ್ದರಿಂದ ವಾಸಕ್ಕೆ ಯೋಗ್ಯವಲ್ಲದ ಈ ಕಟ್ಟಡವನ್ನು ನೆಲಸಮ ಮಾಡಿ ಉದ್ಯಾನವನವನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ವಿಶ್ರಾಂತಿ ಹಾಗೂ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗಡಿನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಮುನೀರ್ ಪಾಷ ಒತ್ತಾಯಿಸಿದ್ದಾರೆ.
” ಈಗಾಗಲೇ ನಾವು ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಿ ಮನವಿ ಸಲ್ಲಿಸಿದ್ದು, ಇನ್ನು ೨ ತಿಂಗಳುಗಳಲ್ಲಿ ಕಟ್ಟಡ ಕೆಡವಲಾಗುವುದು ಎಂದು ತಿಳಿಸಿದ್ದಾರೆ.”
-ಅಲೀಂ ಪಾಷ, ತಾಲ್ಲೂಕು ಅರೋಗ್ಯ ಅಧಿಕಾರಿ
” ಆಸ್ಪತ್ರೆ ಪಟ್ಟಣದ ಹೃದಯ ಭಾಗದಲ್ಲಿದ್ದು, ನಿತ್ಯ ನೂರಾರು ಜನ ಬಂದು ಹೋಗುವ ಸ್ಥಳವಾಗಿದೆ. ಆದರೆ ಆ ಸ್ಥಳ ಇತ್ತೀಚೆಗೆ ಕುಡುಕರ ಅಡ್ಡೆಯಾಗಿದೆ. ಜೊತೆಗೆ ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆಗಳನ್ನು ನಡೆಸಲು ಸಹಾಯಕವಾಗಿದೆ. ಆದರೆ, ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.”
ಮುನೀರ್ ಪಾಷಾ, ಗಡಿನಾಡು ರಕ್ಷಣಾ ಸೇನೆಯ ಅಧ್ಯಕ್ಷ,
ಜಿ.ಮಂಜುನಾಥ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ





