ಮೈಸೂರು: ಗ್ರಾಮಾಂತರ ಪ್ರದೇಶದ ಸಾರ್ವಜನಿಕರು ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರಿಗೆ ಹಾವುಗಳಿಂದ ರಕ್ಷಣೆ ಪಡೆಯುವ ಅರಿವಿನ ಕೊರತೆ ಕಾರಣದಿಂದ ಜಿಲ್ಲೆಯಲ್ಲಿ ಹಾವು ಕಡಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ, ಇದರೊಂದಿಗೆ ವಿಷಕಾರಿ ಹಾವುಗಳ ಕಡಿತದಿಂದ ಉಂಟಾಗಿರುವ ಸಾವುಗಳೂ ಗಣನೀಯವಾಗಿ ಏರಿಕೆಯಾಗಿದೆ.
೬,೩೦೭ ಚದರ ಕಿಮೀ ವಿಸ್ತಾರವಾಗಿರುವ ಜಿಲ್ಲೆಯಲ್ಲಿ ೧,೩೪೪ ಗ್ರಾಮಗಳಿವೆ. ಜತೆಗೆ, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕುಗಳು ಅರಣ್ಯ ಪ್ರದೇಶವನ್ನು ಹೊಂದಿವೆ. ಹೀಗಾಗಿ, ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತಿವೆ.
ಜಿಲ್ಲೆಯಲ್ಲಿ ೨೦೨೪ರಲ್ಲಿ ೭೯೦ ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ಈ ವಿಷಯದಲ್ಲಿ ರಾಜ್ಯದಲ್ಲೇ ಮೈಸೂರು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಹಾಸನ(೮೫೦ ಪ್ರಕರಣಗಳು), ಚಿಕ್ಕಬಳ್ಳಾಪುರ(೮೧೩ ಪ್ರಕರಣ) ನಂತರದ ಸ್ಥಾನದಲ್ಲಿ ಮೈಸೂರು ಜಿಲ್ಲೆ ಇದೆ. ಕಳೆದ ಮೂರು ತಿಂಗಳಲ್ಲಿ ಹಾವು ಕಡಿತದಿಂದ ೪ ಜನರು ಮೃತಪಟ್ಟಿದ್ದಾರೆ.
೨೦೨೫ರಲ್ಲೂ ಹಾವು ಕಡಿತ ಮತ್ತು ಸಾವಿನ ಸಂಖ್ಯೆ ಹೆಚ್ಚಳವಾಗಿತ್ತು. ಕಳೆದ ವರ್ಷ ೮೩೩ ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಮೈಸೂರು ಜಿಲ್ಲೆ ೪ನೇ ಸ್ಥಾನದಲ್ಲಿತ್ತು. ಶಿವಮೊಗ್ಗ(೧೦೦೨), ಚಿಕ್ಕಬಳ್ಳಾಪುರ (೯೪೪), ಹಾಸನ(೮೬೦) ಜಿಲ್ಲೆಗಳು ಮೊದಲ ಮೂರು ಸ್ಥಾನಗಳಲ್ಲಿದ್ದವು. ಅಲ್ಲದೆ, ಸಾವಿನ ಸಂಖ್ಯೆ ಕೂಡ ದುಪ್ಪಟ್ಟಾಗಿದೆ. ಈ ಸಂಗತಿ ರೈತರ ಆತಂಕಕ್ಕೆ ಕಾರಣವಾಗಿದೆ.
ಜೂನ್-ಅಕ್ಟೋಬರ್ ತಿಂಗಳ ಅವಧಿಯಲ್ಲಿ ಹಾವು ಕಡಿತದ ಪ್ರಕರಣಗಳ ಸಂಖ್ಯೆ ಹೆಚ್ಚು. ಮಳೆಗಾಲದಲ್ಲಿ ಬೆಟ್ಟ-ಗುಡ್ಡಗಳಿಂದ ಹರಿದು ಬರುವ ನೀರಿನೊಂದಿಗೆ ಸರೀಸೃಪಗಳು ನದಿ ಸೇರುತ್ತವೆ. ಬಳಿಕ ಹೊಲ-ಗದ್ದೆಗಳು, ಜನವಸತಿ ಪ್ರದೇಶಗಳಿಗೆ ಸೇರಿಕೊಳ್ಳುತ್ತವೆ. ಗಿಡಗಂಟಿಗಳಿಂದ ಆವೃತವಾಗಿರುವ ರಸ್ತೆಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಹಾವು ಕಡಿತಕ್ಕೆ ಗುರಿಯಾಗುತ್ತಿದ್ದಾರೆ. ಕೃಷಿ ಚಟುವಟಿಕೆ ವೇಳೆ ಹಾವು ಕಡಿತಕ್ಕೊಳಗಾದವರ ಸಂಖ್ಯೆ ಅಧಿಕ ಎಂದು ವೈದ್ಯರೊ ಬ್ಬರು ತಿಳಿಸಿ ದ್ದಾರೆ.
ಹಾವು ಕಡಿತ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ರಾಜ್ಯಾದ್ಯಂತ ೨೦೨೨ರಿಂದ ಅನುಷ್ಠಾನಕ್ಕೆ ಬಂದಿದ್ದು, ಹಾವು ಕಡಿತ ಪ್ರಕರಣಗಳು, ಸಂಭವಿಸುವ ಮರಣವನ್ನು ‘ಘೋಷಿತ ಕಾಯಿಲೆ’ ಎಂದು ಪರಿಗಣಿಸಲಾಗಿದೆ, ಇದರಿಂದಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಕೇಂದ್ರ ಸರ್ಕಾರದ ಐಎಚ್‌ಐಪಿ ಆನ್‌ಲೈನ್ ವೇದಿಕೆಯಲ್ಲಿ ವರದಿ ಮಾಡುವುದನ್ನು ಕಡ್ಡಾಯ ಗೊಳಿಸಲಾಗಿದೆ. ಹಾವು ಕಡಿತ ಕುರಿತು ಜಾಗೃತಿ ಮೂಡಿ, ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ವರದಿ ಮಾಡಿಕೊಂಡಿರುತ್ತಾರೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನೇಕ ರೋಗಿಗಳು ಚಿಕಿತ್ಸೆಗಾಗಿ ಸಕಾಲಕ್ಕೆ ಆಸ್ಪತ್ರೆಗೆ ತೆರಳದೆ ನಾಟಿ ಚಿಕಿತ್ಸಕರ ಹತ್ತಿರ ಹೋಗುವುದರಿಂದ ಹೆಚ್ಚಿನ ಸಾವುಗಳು ಸಂಭವಿ ಸಿರುತ್ತವೆ. ಕೆಲ ಪ್ರಕರಣಗಳಲ್ಲಿ ರೋಗಿಯು ಮಲಗಿ ದ್ದಾಗ ಹಾವು ಕಡಿದಿರುವುದರಿಂದ ರೋಗಿಗೆ ಹಾವು ಕಚ್ಚಿರುವ ಕುರಿತು ಮಾಹಿತಿಯೇ ಇಲ್ಲದೆ ಮೃತಪಟ್ಟಿರುವ ನಿದರ್ಶನಗಳಿವೆ ಎಂದೂ ಹೇಳುತ್ತಾರೆ ವೈದ್ಯರು. ಹಾವು ಕಡಿತದಿಂದ ಸಂಭವಿಸಿರುವ ಮರಣಗಳು ಕುರಿತು ನಿಯಮಿತವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ತಿಳಿದು, ಮರಣ ಪ್ರಮಾಣವನ್ನು ತಗ್ಗಿಸಲು ಎಲ್ಲ ಹಾವು ಕಡಿತದ ಮರಣ ಪ್ರಕರಣಗಳನ್ನು ಜಿಲ್ಲಾಽಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಡೆತ್ ಆಡಿಟ್ ಕೂಡ ನಡೆಸಲಾಗುತ್ತದೆ.
ಸಾಂಪ್ರದಾಯಿಕ, ನಾಟಿ ಚಿಕಿತ್ಸಕರಿಂದ ಹಾವು ಕಡಿತ ಪ್ರಕರಣಗಳು ಆಸ್ಪತ್ರೆಗೆ ಸಂತ್ರಸ್ತರನ್ನು ಸೇರುವುದು ತಡವಾದಲ್ಲಿ ಅಥವಾ ಮರಣ ಹೊಂದಿದಲ್ಲಿ ಅವರ ವಿರುದ್ಧ ಕೆಪಿಎಂಇ ಕಾಯ್ದೆಯಡಿ ಕ್ರಮ ವಹಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮುಂಗಡ ಹಣಕ್ಕಾಗಿ ಒತ್ತಾಯಿಸದೆ ಹಾವು ಕಡಿತಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಿ ಜೀವ ಉಳಿಸಲು ಆರೋಗ್ಯ ಇಲಾಖೆ ಆದೇಶಿಸಿದೆ. ಇಷ್ಟೆಲ್ಲ ಮುನ್ನೆಚ್ಚರಿಕಾ ಕ್ರಮ, ಸೂಚನೆ, ಆದೇಶ ಹೊರಡಿಸಿದ್ದರೂ ಹಾವು ಕಡಿತ ಪ್ರಕರಣಗಳು, ಹಾವು ಕಡಿತದಿಂದ ಸಾವಿನ ಪ್ರಕರಣಗಳೂ ತಗ್ಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ.
ಚಿಕಿತ್ಸೆ ಪಡೆಯಲು ನಿರ್ಲಕ್ಷ್ಯಬೇಡ:
ಬೇಸಿಗೆ ಋತುವಿನಲ್ಲಿ ಬಿಸಿಲಿನ ತಾಪ ತಾಳಲಾರದೆ ಹೊರಬರುವ ಹಾವುಗಳು ಮನುಷ್ಯರನ್ನು ಕಚ್ಚುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ವಿಷಕಾರಿ ಹಾವುಗಳು ಕಚ್ಚಿ ದಾಗ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಹಾವು ಕಡಿತದಿಂದ ಹೆಚ್ಚಾಗಿ ಬಹು ಅಂಗಾಂಗ ವೈಫಲ್ಯ ಉಂಟಾಗಬಹುದು. ರಕ್ತಸ್ರಾವ, ಪಾರ್ಶ್ವವಾಯು, ಸ್ನಾಯು ನಷ್ಟ, ಹೃದಯಾಘಾತ, ತೀವ್ರವಾದ ಮೂತ್ರ ಪಿಂಡದ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ, ಹಾವು ಕಡಿತವನ್ನು ಯಾವುದೇ ಕಾರಣಕ್ಕೂ ಅಲಕ್ಷಿಸಬಾರದು.
ಕೈಗೊಂಡಿರುವ ಕ್ರಮಗಳು ಏನು?:
ಹಾವು ಕಡಿತದಿಂದ ಜನರ ಸಾವಿರ ಸಂಖ್ಯೆ ಕಡಿಮೆ ಮಾಡಲು ಜಿಲ್ಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜಿನ ಅಧಿನದ ಕೆ.ಆರ್.ಆಸ್ಪತ್ರೆ ಇನ್ನಿತರ ಆಸ್ಪತ್ರೆಗಳಲ್ಲಿ ಹಾವಿನ ವಿಷ ನಿರೋಧಕ ಚಿಕಿತ್ಸೆಯನ್ನು (ಆಂಟಿ ಸ್ನೇಕ್ ವೆನಮ್-ಎಎಸ್‌ವಿ) ಉಚಿತವಾಗಿ ನೀಡಲಾಗುತ್ತಿದೆ. ಇದರೊಂದಿಗೆ ಕಡಿತದಿಂದ ಉಂಟಾಗುವ ಬೇರೆ ಬೇರೆ ತೊಂದರೆಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ, ಎಲ್ಲ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳಾಗಿ ಗುರುತಿಸಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ, ಇತರ ಆರೋಗ್ಯ ಸಿಬ್ಬಂದಿಗೆ ವಿವಿಧ ಹಂತಗಳಲ್ಲಿ ಹಾವು ಕಡಿತ ಚಿಕಿತ್ಸೆಯ ಕುರಿತು ತರಬೇತಿ ಸಹ ನೀಡಲಾಗಿದೆ.
ʼ ಜಿಲ್ಲೆಯಲ್ಲಿ ನಗರಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಈ ಪೈಕಿ ಕಾಡಂಚಿನ ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕುಗಳಲ್ಲಿ ಹೆಚ್ಚು. ಹಾವುಗಳಿಂದ ರಕ್ಷಣೆ ಪಡೆಯುವ ಕುರಿತು ಅರಿವು ಮೂಡಿಸಲಾಗುತ್ತಿದೆ. ಜತೆಗೆ, ಎಲ್ಲ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಔಷಧ ಕೊರತೆಯೂ ಇಲ್ಲ. ಅಗತ್ಯ ಇರುವಷ್ಟು ಔಷಧವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.”
– ಡಾ.ಪಿ.ಸಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ





