Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬಾಲ್ಯ ವಿವಾಹ ಬಂಧನದಲ್ಲಿ ಮಂಡ್ಯ

ಮಂಡ್ಯ: ಬಾಲ್ಯವಿವಾಹ ತಡೆಗೆ ಸರ್ಕಾರ, ಸಾಮಾಜಿಕ ಸಂಘಟನೆಗಳು, ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆ ಜಾಗೃತಿ ಮೂಡಿಸುತ್ತಿದ್ದರೂ ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಇದರ ಅರಿವು ಮೂಡದಿರುವುದು ಆತಂಕದ ಸಂಗತಿಯಾಗಿದೆ. ಸಾಮಾಜಿಕ- ಕೌಟುಂಬಿಕ ಸಮಸ್ಯೆ ಹಾಗೂ ಹದಿಹರೆಯದಲ್ಲೇ ಪ್ರೀತಿ ಪ್ರಣಯಕ್ಕೆ ಬೀಳುತ್ತಿರು ವುದು ಬಾಲ್ಯವಿವಾಹ ಹೆಚ್ಚಲು ಕಾರಣ ಎಂದು ಹೇಳಲಾಗುತ್ತಿದೆಯಾದರೂ ಇದನ್ನು ನಿಯಂತ್ರಿಸುವ ಅಗತ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ. ಈ ಮಧ್ಯೆ ಬಾಲ್ಯವಿವಾಹ ಪ್ರಕರಣಗಳಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂಬ ಆತಂಕಕಾರಿ ಅಂಕಿ-ಅಂಶ ಹೊರಬಿದ್ದಿದೆ. 14ನೇ ವಯಸ್ಸಿನಿಂದ 19ನೇ ವಯಸ್ಸಿನವರೆಗಿನ ಬಾಲಗರ್ಭಿಣಿಯರು ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಇದ್ದಾರೆ.

ಬಾಲ್ಯ ವಿವಾಹ ಮತ್ತು ಪ್ರೇಮ ವಿವಾಹ ಪ್ರಕರಣಗಳು ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಲು ಮುಖ್ಯ ಕಾರಣ ಎಂದು ಮೂಲಗಳು ತಿಳಿಸಿವೆ. ಬಾಲಗರ್ಭಿಣಿಯರಿರುವ ಜಿಲ್ಲೆಗ ಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿ ದ್ದರೆ, ಬೆಳಗಾವಿ ಎರಡನೇ ಸ್ಥಾನದಲ್ಲಿದೆ. ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರು ವುದಕ್ಕೆ ಬಾಲ್ಯವಿವಾಹ ಒಂದು ಕಾರಣವಾದರೆ, ಹದಿಹರೆಯದರಲ್ಲೇ ಪ್ರೇಮಪಾಶಕ್ಕೆ ಸಿಲುಕುತ್ತಿರುವ ಹೆಣ್ಣು ಮಕ್ಕಳು ವಿವಾಹ ಬಂಧನಕ್ಕೊಳಗಾಗುತ್ತಿರುವುದು ಪ್ರಾಪ್ತ ವಯಸ್ಸಿಗೆ ಮುನ್ನವೇ ಗರ್ಭ ಧರಿಸುವುದಕ್ಕೆ ಮತ್ತೊಂದು ಕಾರಣ ಎನ್ನುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಹೆಣ್ಣು ಮಕ್ಕಳು ಪ್ರೇಮಬಂಧನಕ್ಕೆ ಸಿಲುಕಿರುವ ವಿಷಯ ತಿಳಿದು ಪೋಷಕರು ಮರ್ಯಾದೆಗೆ ಹೆದರಿ ರಹಸ್ಯವಾಗಿ ಮದುವೆ ಮಾಡಿರುತ್ತಾರೆ.

ಕೆಲವೊಮ್ಮೆ ಪ್ರಾಪ್ತ ವಯಸ್ಸಾಗದಿದ್ದರೂ ಆಧಾರ್ ಕಾರ್ಡ್‌ನಲ್ಲಿ ಜನ್ಮದಿನಾಂಕವನ್ನು ತಿದ್ದುಪಡಿ ಮಾಡಿ ಮದುವೆ ಮಾಡಿರುವ ನಿದರ್ಶನಗಳೂ ಇವೆ. ಕೆಲವರು ಮದುವೆ ಯಾಗಿದ್ದರೂ ಮದುವೆಯಾಗದವರಂತೆ ಹೊರಜಗತ್ತಿಗೆ ತೋರಿಸಿಕೊಳ್ಳುತ್ತಿರುತ್ತಾರೆ. ತಾಯಿ ಕಾರ್ಡ್ ಪಡೆಯಲು ಬಂದಾಗ ಆಕೆ ಗರ್ಭಿಣಿ ಎಂದು ತಿಳಿಯುತ್ತದೆ. ಕೆಲವೊಮ್ಮೆ ಮಾನವೀಯ ದೃಷ್ಟಿಯಿಂದ ಪ್ರಕರಣಗಳನ್ನು ಕೈಬಿಟ್ಟಿರುವ ನಿದರ್ಶನಗಳೂ ಇವೆ.

ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ರೂಪಿಸ ಲಾಗಿದ್ದರೂ ಅವೆಲ್ಲವೂ ಹಲ್ಲಿಲ್ಲದ ಹಾವಿನತಾಂಗಿವೆ. ಕಾನೂನಿನ ಭಯವಿಲ್ಲದಿರುವುದೇ ಬಾಲ್ಯವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ. ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾದ ಬಳಿಕ ಅವೆಲ್ಲವೂ ಎಫ್‌ಐಆರ್ ಹಂತದಲ್ಲೇ ಬಿದ್ದುಹೋಗುತ್ತಿವೆ. ಇದುವರೆಗೆ ಬಾಲ್ಯವಿವಾಹ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಬಾಲ್ಯವಿವಾಹ ಪ್ರಕರಣ ಪತ್ತೆಯಾದ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಮದುವೆ ಮಾಡದಂತೆ ಎರಡೂ ಕುಟುಂಬಗಳಿಂದ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದರ ನಡುವೆಯೂ ಎಷ್ಟೋ ಮಂದಿ ಅದಾದ ೬ ತಿಂಗಳು, ಒಂದು ವರ್ಷಕ್ಕೆ ಯಾರಿಗೂ ಗೊತ್ತಾಗದಂತೆ ಮದುವೆ ಮಾಡಿರುತ್ತಾರೆ. ಅಂತಹ ಪ್ರಕರಣಗಳೂ ಸಾಕಷ್ಟಿವೆ.

ಆತಂಕ ಮೂಡಿಸುವ ಬಾಲ ಗರ್ಭಿಣಿಯರ ಸಂಖ್ಯೆ

105 ಬಾಲ್ಯ ವಿವಾಹಗಳಿಗೆ ತಡೆ ಜನವರಿಯಿಂದ ಮಾರ್ಚ್‌ವರೆಗೆ ಬಾಲ್ಯ ವಿವಾಹದ ಬಗ್ಗೆ ೧೮೦ ದೂರವಾಣಿ ಕರೆಗಳು ಬಂದಿದ್ದು, 105 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾ ಗಿದೆ ಎಂದು ಮಕ್ಕಳ ಸಹಾಯ ವಾಣಿಯವರು ತಿಳಿಸಿದ್ದಾರೆ. 25 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ 33 ಪ್ರಕರಣಗಳು ಮಕ್ಕಳ ಸಹಾಯವಾಣಿಗೆ ಬಂದಿದ್ದು, ಈ ಪೈಕಿ 6 ಬಾಲ್ಯವಿವಾಹಗಳನ್ನು ತಡೆದಿದ್ದು, 6 ಎಫ್‌ಐಆರ್ ಮಾಡಲಾಗಿದೆ.

ಬಾಲ್ಯ ವಿವಾಹಕ್ಕೆ ಕಾರಣ

ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವುದನ್ನು ತಡೆಯಲು ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಬಾಲ್ಯವಿವಾಹ ಹೆಚ್ಚಾಗಿ ನಡೆಯುವ ಸ್ಥಳಗಳು, ಗ್ರಾಮಗಳ ಮೇಲೆ ನಿಗಾ ವಹಿಸುವ, ಗ್ರಾಮದಲ್ಲಿರುವ ಹದಿಹರೆಯದ ಹೆಣ್ಣು ಮಕ್ಕಳ ಸಂಖ್ಯೆಯನ್ನು ಗುರುತಿಸಿಟ್ಟುಕೊಂಡು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅವರ ಬಗ್ಗೆ ಆಗಾಗ ಮಾಹಿತಿ ಸಂಗ್ರಹಿಸುವ ಕೆಲಸಗಳು ನಡೆಯದಿರುವುದು ಬಾಲ್ಯವಿವಾಹ ಹೆಚ್ಚಲು ಮತ್ತೊಂದು ಕಾರಣವಾಗಿದೆ.

ಮಂಡ್ಯ ಜಿಲ್ಲೆ ಬಾಲಗರ್ಭಿಣಿಯರು

2021-22: 1521
2022-23: 1390
2023-24: 1010

ಹೆಣ್ಣು ಮಕ್ಕಳ ಪೋಷಕರಿಗೆ ತಮ್ಮ ಜವಾಬ್ದಾರಿ ನಿಭಾಯಿಸಿಕೊಳ್ಳಬೇಕೆಂಬ ಧಾವಂತ ಹೆಚ್ಚಾಗಿದೆ. ಪ್ರೇಮ ಪ್ರಕರಣಗಳು, ವರ ದಕ್ಷಿಣೆ, ಪ್ರೇಮ ವಿವಾಹ ಸೇರಿದಂತೆ ಹಲವಾರು ಕಾರಣ ಗಳಿಂದಾಗಿ ತಮ್ಮ ಮಗಳನ್ನು ತಮ್ಮ ನಂಬಿಕೆಯ ಕುಟುಂಬದ ಮಡಿಲಿಗೆ ಹಾಕಿ ನೆಮ್ಮದಿಯಾಗಿರಬೇಕೆಂಬ ಮನೋಭಾವ ಮುನ್ನೆಲೆಗೆ ಬರುತ್ತಿದೆ. ಆದರೆ, ಬಹುತೇಕರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಜಾಗೃತ ಮನಸ್ಥಿತಿ ಇದೆ. ಹೀಗಿರುವಾಗ ಮುಂದೇನೋ ಎಂಬ ಆತಂಕದಿಂದ ೧೮ ವರ್ಷ ತುಂಬುವ ಮುನ್ನವೇ ಮದುವೆ ಮಾಡುತ್ತಾರೆಂಬುದು ನನ್ನ ಅನಿಸಿಕೆ. ಹೆಣ್ಣು ಮಕ್ಕಳ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗತಿಯನ್ನು ಪರಿ ಗಣಿಸಿ ಬಾಲ್ಯವಿವಾಹವನ್ನು ತಡೆಯ ಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ.
– ಸುನಂದಾ ಜಯರಾಂ, ಹೋರಾಟಗಾರ್ತಿ

ಬಾಲಗರ್ಭಿಣಿಯರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ವಿಶೇಷ ಮಕ್ಕಳ ಪೊಲೀಸ್ ಘಟಕ, ಆರೋಗ್ಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸೇರಿ ಚರ್ಚಿಸಿ ಬಾಲಗರ್ಭಿಣಿಯರ ತಡೆಗೆ ಮುನ್ನೆಚ್ಚರಿಕೆ ವಹಿಸಬೇಕು. ಬಾಲ್ಯವಿವಾಹ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಪ್ರಕರಣಗಳು ಪತ್ತೆಯಾದಾಗ ಆಪ್ತ ಸಮಾಲೋಚನೆ ನಡೆಸಿ ಧೈರ್ಯ, ಆತ್ಮವಿಶ್ವಾಸ, ಕಾನೂನಾತ್ಮಕ ಅರಿವು ಮೂಡಿಸಬೇಕಿದೆ.

– ಮಿಕ್ಕೆರೆ ವೆಂಕಟೇಶ್, ಸದಸ್ಯರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಹೆಚ್ಚು ನಡೆಯುವ ಗ್ರಾಮಗಳನ್ನು ಪಟ್ಟಿ ಮಾಡಿ ಅಂತಹ ಗ್ರಾಮಗಳ ಮೇಲೆ ನಿಗಾ ವಹಿ ಸುವುದರ ಜೊತೆಗೆ, ಜಾಗೃತಿ ಶಿಬಿರಗಳನ್ನು ಆಯೋಜಿಸುವಂತೆ ಅಽಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಏರ್ಪಡಿಸಿ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಬಾಲ್ಯ ವಿವಾಹ, ಬಾಲಾಪರಾಧ, ಬಾಲ ಕಾರ್ಮಿಕ ಪದ್ಧತಿ, ಭ್ರೂಣ ಹತ್ಯೆ ಪ್ರಕರಣಗಳು ಕಂಡು ಬರುತ್ತಿರುವುದು ಶೋಚನೀಯ. ಇಂತಹ ಪದ್ಧತಿಗಳನ್ನು ದೂರ ಮಾಡಲು ಜನರು ಕೈಜೋಡಿಸಬೇಕು.

– ಡಾ. ಎಚ್. ಎಲ್. ನಾಗರಾಜು, ಎಡಿಸಿ

 

Tags: