Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನೀರಿನ ಸಂಪರ್ಕವೇ ಇಲ್ಲ; ಬಿಲ್ ಪಾವತಿ!

ನಂ.ಗೂಡು ತಾಲ್ಲೂಕಿನ ದುಗ್ಗಹಳ್ಳಿ ಗ್ರಾಪಂನ ಮಂಗಳೂರಿನಲ್ಲಿ ಪ್ರಕರಣ

• ಶ್ರೀಧರ ಆರ್ ಭಟ್
ನಂಜನಗೂಡು: ಜಲಜೀವನ್ ಯೋಜನೆ ಮಂಜೂರಾಗಿ ನಾಲ್ಕು ವರ್ಷಗಳು ಕಳೆದರೂ ಗ್ರಾಮಕ ಹನಿ ನೀರೂ ಬಂದಿಲ್ಲ. ಹಾಗಂತ ಕಾಮಗಾರಿಯ ಹಣವೂ ಇಲಾಖೆಯಲ್ಲಿ ಇಲ್ಲ. ಇಂಥ ಸ್ಥಿತಿ ತಾಲ್ಲೂಕಿನ ದುಗ್ಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಗ್ರಾಮದಲ್ಲಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆ ಹಾಗೂ ತಾಪಂ ಲೆಕ್ಕದಲ್ಲಿ ಕೇವಲ 3 ಮನೆಗಳಿರುವ ತಾಲ್ಲೂಕಿನ ಅತ್ಯಂತ ಪುಟ್ಟ ಗ್ರಾಮ ಮಂಗಳೂರು, ಸರ್ಕಾರಿ ದಾಖಲೆಗಳ ಪ್ರಕಾರ ಈ ಗ್ರಾಮದಲ್ಲಿ ರುವುದು ಮೂರೇ ಮನೆಗಳು. ಆದರೆ ಜಲಜೀವನ ಯೋಜನೆಯ ಪ್ರಕಾರ ಗ್ರಾಮದಲ್ಲಿರುವುದು 8 ಮನೆಗಳು, ಜಲಜೀವನ್ ಮಿಷನ್‌ನವರು ಕಂಡು ಹಿಡಿದ ಇನ್ನುಳಿದ 5 ಮನೆಗಳು ಮಾತ್ರ ಯಾರ ಕಣ್ಣಿಗೂ ಕಂಡಿಲ್ಲ. ಜಲಜೀವನ್ ಯೋಜನೆ ಆರಂಭ ಗೊಂಡಿದ್ದು 2020-21ರಲ್ಲಿ ಇರುವ 3 ಮನೆಗಳ ಬದಲಿಗೆ 8 ಮನೆಗಳು ಎಂದ ಇಲಾಖೆ, ಆ ಮನೆಗಳಿಗೆ ನೀರು ಕೊಡಬೇಕಿತ್ತು.

ಕೊಳವೆ ಹಾಕಿದ್ದಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಓವರ್‌ ಹೆಡ್ ಟ್ಯಾಂಕ್ ನಿರ್ಮಿಸಿ ಗ್ರಾಮದ 3 ಮನೆಗಳಿಗೆ ನಲ್ಲಿ ಹಾಕಿ ಹೋದ ಅಧಿಕಾರಿಗಳು 4 ವರ್ಷಗಳಾದರೂ ಗ್ರಾಮದತ್ತ ಸುಳಿಯಲಿಲ್ಲ. ಆ ನಲ್ಲಿಗಳು ನೀರನ್ನೇ ಕಾಣದೆ ತುಕ್ಕು ಹಿಡಿದು ತಾಲ್ಲೂಕಿನ ಜಲಜೀವನ್ ಯೋಜನೆಯ ನಿಜ ಬಣ್ಣವನ್ನು ಹೊರಜಗತ್ತಿಗೆ ಇಂದಿಗೂ ಸಾರುತ್ತಲೇ ಇವೆ.

ಜೆಜೆಎಂನ ಮನೆ ಮನೆಗೆ ಗಂಗೆ ಯೋಜನೆಯ ಕಾಮಗಾರಿ ಮೊತ್ತ 11.57 ಲಕ್ಷ ರೂ. ಇದ್ದು, ಇಲಾಖೆ ಗುತ್ತಿಗೆದಾರರಿಗೆ ಹೆಚ್ಚುವರಿ ಕೆಲಸ ಸೇರಿಸಿ 12 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು 2021ರಲ್ಲೇ ಪಾವತಿಸಿದೆ ಎನ್ನಲಾಗಿದೆ. ನೀರೇ ಇಲ್ಲದಿದ್ದರೂ ಗುತ್ತಿಗೆದಾರರಿಗೆ ಹಣ ಪಾವತಿಸಿರುವುದು ಗ್ರಾಸವಾಗಿದೆ.

3 ಮನೆಗಳ ಬದಲು 8 ಮನೆಗಳಿವೆ ಎಂದಿರುವುದು ಹಾಗೂ ಕಾಮಗಾರಿಯ ಬಿಲ್ ಪಾವತಿಸಿ 4 ವರ್ಷವಾದರೂ ನೀರಿನ ಸಂಪರ್ಕ ಕಲ್ಪಿಸದಿ ರುವುದು ಇದೀಗ ನನ್ನ ಗಮನಕ್ಕೆ ಬಂದಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ.
ಜೆರಾಲ್ಡ್ ರಾಜೇಶ, ಇಒ

ಗ್ರಾಮಕ್ಕೆ ಭೇಟಿ ನೀಡಿ ಜಲಜೀವನ್ ಯೋಜನೆಯ ಕಾಮಗಾರಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
-ದರ್ಶನ್, ಶಾಸಕ

ನಾನು ನಂಜನಗೂಡಿನ ಜಲಜೀವನ್‌ ಯೋಜನೆಯ ಜವಾಬ್ದಾರಿ ಸ್ವೀಕರಿಸಿ ಕೇವಲ 2 ತಿಂಗಳುಗಳಾಗಿವೆ.ನೀರು ಹರಿಯದೆ ನಲ್ಲಿಗಳು ತುಕ್ಕು ಹಿಡಿದಿರಬಹುದು. ಅವುಗಳನ್ನು ಬದಲಾಯಿಸಿ ವಾರದೊಳಗೆ ನೀರು ತಲುಪಿಸಲು ಪ್ರಯತ್ನಿಸುವೆ.

-ಶಿವಕುಮಾರ, ಎಇಇ, ಜೆಜೆಎಂ

ಗ್ರಾಮದಲ್ಲಿರುವುದು ಮೂರೇ ಮನೆಗಳು, ಆ ಗ್ರಾಮದಲ್ಲಿ ನೀರಿದೆ. ಆದರೆ ಜಲಜೀವನ್ ಮಿಷನ್‌ ಯೋಜನೆಯ ಮನೆ ಮನೆಗೆ ಗಂಗೆಯ ಸಂಪರ್ಕ ಮಾತ್ರ ಈವರೆಗೂ ನೀಡಿಲ್ಲ.

-ಹೇಮಾವತಿ, ಪಿಡಿಒ, ದುಗ್ಗಹಳ್ಳಿ

ಕಂದಾಯ ದಾಖಲೆಯಲ್ಲೂ ಮಂಗಳೂರು ಗ್ರಾಮದಲ್ಲಿರುವುದು ಮೂರೇ ಮನೆಗಳು.

-ಪ್ರಕಾಶ, ರಾಜಸ್ವ ನಿರೀಕ್ಷಕ, ಹುಲ್ಲಹಳ್ಳಿ

Tags: