Mysore
20
few clouds

Social Media

ಮಂಗಳವಾರ, 20 ಜನವರಿ 2026
Light
Dark

ಕೈಗಾರಿಕೆ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಿಗದ ಪರಿಹಾರ

ಪ್ರಶಾಂತ್ ಎಸ್.

ಸ್ಥಾಪನೆಯಾಗದ ತ್ಯಾಜ್ಯ ಸಂಸ್ಕರಣಾ ಘಟಕ

ಕೆಐಎಡಿಬಿಯಲ್ಲಿ ೨೦೦೧ರಲ್ಲೇ ನಿಯಮ ರಚನೆ

ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಜಿಲ್ಲಾ ಕೈಗಾರಿಕಾ ಸಂಘ ಹೋರಾಟ

೧೦ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳು; ಒಂದೂ ಸಂಸ್ಕರಣ ಘಟಕ ಇಲ್ಲ

ಕೈಗಾರಿಕಾ ಪ್ರದೇಶದಲ್ಲಿ ೨೦ ಎಕರೆ ತ್ಯಾಜ್ಯ ಘಟಕಕ್ಕೆ ಮೀಸಲು ಕಡ್ಡಾಯ

ಮೈಸೂರು: ಕಾರ್ಖಾನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳ ಶೇಖರಣೆ ಮತ್ತು ಸಂಸ್ಕರಣೆ ಮಾಡುವುದು ಸಮಸ್ಯೆಯಾಗಿದೆ. ಪ್ರತಿ ಕೈಗಾರಿಕಾ ಪ್ರದೇಶದಲ್ಲಿಯೂ ಒಂದು ಕೈಗಾರಿಕಾ ತ್ಯಾಜ್ಯ ವಸ್ತು ಸಂಸ್ಕರಣಾ ಘಟಕಕ್ಕೆ ಸ್ಥಳ ನಿಗದಿ ಮಾಡಬೇಕೆಂಬ ನಿಯಮವಿದೆ. ಆದರೆ, ಜಾರಿಯಾಗಿಲ್ಲ.

ಒಂದೇ ಒಂದೂ ತ್ಯಾಜ್ಯ ಸಂಸ್ಕರಣ ಘಟಕ ಇಲ್ಲ: ನಗರ ವ್ಯಾಪ್ತಿಯಲ್ಲಿ ಹೆಬ್ಬಾಳು, ಮೇಟಗಳ್ಳಿ, ಹೂಟಗಳ್ಳಿ, ಬೆಳವಾಡಿ, ಕೂರ್ಗಳ್ಳಿ ಸೇರಿದಂತೆ ೧೦ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳಿವೆ. ಆದರೆ, ಒಂದರಲ್ಲಿಯೂ ತ್ಯಾಜ್ಯ ಸಂಸ್ಕರಣ ಘಟಕ ಇಲ್ಲ. ಯಾವುದೇ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಕನಿಷ್ಠ ೨೦ ಎಕರೆ ಜಾಗವನ್ನು ಕೈಗಾರಿಕಾ ತ್ಯಾಜ್ಯ ವಸ್ತು ಸಂಸ್ಕರಣಾ ಘಟಕಕ್ಕೆ ಮೀಸಲಿರಿಸಬೇಕು ಎಂದು ಕೆಐಎಡಿಬಿಯಲ್ಲಿ ೨೦೦೧ರಲ್ಲೇ ನಿಯಮ ರೂಪಿಸಲಾಗಿದೆ. ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಎಲ್ಲೆಂದರಲ್ಲಿ ವಿಲೇವಾರಿ: ಕೈಗಾರಿಕಾ ತ್ಯಾಜ್ಯವನ್ನು ನಗರದ ವರ್ತುಲ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮನಬಂದಂತೆ ವಿಲೇವಾರಿ ಮಾಡಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರದ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ತ್ಯಾಜ್ಯ ಸಂಸ್ಕರಣ ನಿರ್ಮಾಣವೊಂದೇ ಪರಿಹಾರ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವ ಅವಶ್ಯವಿದೆ.

ಯಾವುದೇ ದೊಡ್ಡ ನಗರಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ನಗರದ ಹೊರಭಾಗದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದರೆ, ಕೈಗಾರಿಕಾ ಪ್ರದೇಶವು ಬೆಳೆದಂತೆ ಪೂರಕ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಎಲ್ಲ ತ್ಯಾಜ್ಯವೂ ನಗರದ ಹೊರವಲಯಕ್ಕೆ ಹೋಗುತ್ತಿದೆ ಎನ್ನಲಾಗಿದೆ.

ಡಂಪಿಂಗ್ ಯಾರ್ಡ್ ನಿರ್ಮಿಸಲು ಒತ್ತಾಯ: ಕೈಗಾರಿಕಾ ತ್ಯಾಜ್ಯ ವಿಲೇವಾರಿಗೆ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕು ಎಂದು ಮೈಸೂರು ಜಿಲ್ಲಾ ಕೈಗಾರಿಕಾ ಸಂಘವು ದಶಕದಿಂದಲೂ ಹೋರಾಟ ನಡೆಸುತ್ತಿದೆ. ೨೦೦೭ರಲ್ಲಿ ನಗರದ ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಬೇಕು ಎಂದು ಹೋರಾಟ ಆರಂಭಿಸಲಾಯಿತು. ಪರಿಣಾಮವಾಗಿ ೨೦೦೯ರಲ್ಲಿ ರಾಜ್ಯ ಸರ್ಕಾರವು ಸಂಘಕ್ಕೆ ಮೂರು ಎಕರೆ ಪ್ರದೇಶವನ್ನು ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೀಡಿ, ನಿರ್ವಹಣೆ ಜವಾಬ್ದಾರಿಯನ್ನೂ ಸಂಘಕ್ಕೇ ವಹಿಸಲು ತೀರ್ಮಾನಿಸಿತು. ಆದರೆ, ನೀಡಬೇಕಿದ್ದ ಜಾಗವನ್ನು ಬೇರೆಯವರಿಗೆ ಭಾಗಶಃ ಹಂಚಿಕೆ ಮಾಡಿ, ಉಳಿದ ಜಾಗವನ್ನು ನೀಡಲು ಮುಂದಾಯಿತು.

ಈ ಸೀಮಿತ ಪ್ರದೇಶದಲ್ಲಿ ತ್ಯಾಜ್ಯದ ದಾಸ್ತಾನು ಮತ್ತು ನಿರ್ವಹಣೆಗೆ ಸಮಸ್ಯೆಯಾಗಲಿದೆ ಎಂಬುದನ್ನು ಅರಿತ ಸಂಘದ ಪದಾಧಿಕಾರಿಗಳು ಅದನ್ನು ತಿರಸ್ಕರಿಸಿದರು. ನಂತರ ಬೇರೆ ಎಲ್ಲಾದರೂ ಐದು ಎಕರೆ ಪ್ರದೇಶವನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ.

” ಕಸದ ತ್ಯಾಜ್ಯವನ್ನು ಕವರಿನಲ್ಲಿ ಕಟ್ಟಿ ದ್ವಿಚಕ್ರವಾಹನಗಳಲ್ಲಿ ಬಂದು ರಸ್ತೆಯ ಬದಿಯಲ್ಲಿ ಬಿಸಾಡುತ್ತಿದ್ದಾರೆ. ಮುಂಜಾನೆ ಅಥವಾ ಕತ್ತಲಾದ ಬಳಿಕ ರಸ್ತೆ ಬದಿ, ಕಾಲುವೆ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಬಿಸಾಡಿ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹವರಿಗೆ ನಗರಪಾಲಿಕೆ ಅಧಿಕಾರಿಗಳು ದಂಡ ಹಾಕಿದರೆ, ಕಾಲಕ್ರಮೇಣ ತ್ಯಾಜ್ಯ ಸಮಸ್ಯೆ ನಿವಾರಣೆ ಆಗುತ್ತದೆ.”

-ಚಂದ್ರಶೇಖರ್, ಮಾಲೀಕ, ಚೈತನ್ಯ ಇಂಡಸ್ಟ್ರೀಸ್, ಹೆಬ್ಬಾಳು

” ರಾತ್ರಿ ಸಮಯದಲ್ಲಿ ಬಹುತೇಕ ಜನ ಸಂಚಾರ ಇಲ್ಲದಿರುವುದರಿಂದ ಜನರಿಗೆ ಕಸ ಎಸೆಯುವುದುಸುಲಭವಾಗಿದೆ. ರಾತ್ರಿಯಲ್ಲಿ ವಿದ್ಯುತ್ ದೀಪಗಳು ಇಲ್ಲದ ಜಾಗಗಳಲ್ಲಿ ಕತ್ತಲು ಇರುವುದರಿಂದ ಕಸ ಎಸೆಯುವವರಿಗೆ ಸುಲಭವಾಗುತ್ತಿದೆ. ಕೈಗಾರಿಕಾ ವಸಾಹತು ಪ್ರದೇಶಗಳಿದ್ದರೂ ಅವುಗಳ ತ್ಯಾಜ್ಯ ವಿಲೇವಾರಿಗೆ ಘಟಕವಿಲ್ಲ. ಇದರಿಂದ ಕೈಗಾರಿಕೋದ್ಯಮಿಗಳಿಗೆ ತ್ಯಾಜ್ಯ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ.”

-ಚನ್ನಕೇಶವ, ಕೈಗಾರಿಕೋದ್ಯಮಿ, ಮೈಸೂರು

” ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ಸುತ್ತಮುತ್ತ ಈ ರಸ್ತೆಯಲ್ಲಿ ರಾತ್ರಿ ಹೊತ್ತು ರಸ್ತೆಯ ಎರಡೂ ಬದಿಯಲ್ಲಿ ಕಸ ತಂದು ಬಿಸಾಡುತ್ತಾರೆ. ಕಸ ರಸ್ತೆಗೇ ಹರಡುವುದರಿಂದ ದ್ವಿಚಕ್ರಗಳಲ್ಲಿ ಸಂಚರಿಸುವುದು ಬಹಳ ದುಸ್ತರವಾಗಿದೆ. ಮೊದಲನೆಯದಾಗಿ ತ್ಯಾಜ್ಯ ವಿಲೇವಾರಿ ಬಗ್ಗೆ ಜನರಿಗೆ ಸರಿಯಾದ ತಿಳಿವಳಿಕೆ ಇಲ್ಲ. ನಗರಪಾಲಿಕೆಯವರು ಕೂಡ ಕೆಲಸ ಮಾಡುತ್ತಿದ್ದು, ಅವರ ಜೊತೆ ಸಾರ್ವಜನಿಕರೂ ಸಹಕಾರ ನೀಡಬೇಕು.”

-ಡಾ.ಟಿ.ಎಚ್.ವೀಣಾ, ಕೈಗಾರಿಕೋದ್ಯಮಿ, ಮೈಸೂರು

” ಲಾರಿ ಮತ್ತು ಟಿಪ್ಪರ್ ಚಾಲಕರು ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಾರೆ. ಕೈಗಾರಿಕಾ ವಸಾಹತು ಪ್ರದೇಶಗಳಿದ್ದರೂ ಅವುಗಳ ತ್ಯಾಜ್ಯ ವಿಲೇವಾರಿಗೆ ಘಟಕವಿಲ್ಲ. ಕಾರ್ಖಾನೆ ಸುತ್ತಮುತ್ತ ಓಡಾಡುವ ಜಾಗದಲ್ಲೇ ಜನರು ಕಸವನ್ನು ಎಸೆಯುತ್ತಾರೆ. ಇದರಿಂದ ರಸ್ತೆಯಲ್ಲಿ ಗಬ್ಬು ವಾಸನೆ ಬರುತ್ತಿದೆ. ನಾವು ಕೂಡ ಹಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ.”

-ಸಿ.ಎಂ.ಚಂದ್ರಮ್ಮ, ಸಿಬ್ಬಂದಿ,

” ಸಣ್ಣ ವಸ್ತುವಿನಿಂದ ಹಿಡಿದು ನೋಟು ಮುದ್ರಣ, ದ್ವಿಚಕ್ರ ವಾಹನ, ಎಲೆಕ್ಟ್ರಾನಿಕ್ಸ್ ಸೇರಿ ಮಾಹಿತಿ ತಂತ್ರಜ್ಞಾನಕ್ಕೆ ಅವಶ್ಯವಾದ ೨,೫೦೦ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಅದರಿಂದ ಉತ್ಪಾದನೆಯಾಗುವ ತ್ಯಾಜ್ಯಗಳ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಹಾಗಾಗಿ ಕೈಗಾರಿಕೋದ್ಯಮಿಗಳು ಹಾಗೂ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದಾಗಿ ಕೈಗಾರಿಕೋದ್ಯಮಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.”

Tags:
error: Content is protected !!