ರಾಜ್ಯ ಸರ್ಕಾರವು ಈ ವರ್ಷದ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆಮಾಡಿರುವುದು ಸೂಕ್ತವಾಗಿದೆ.
ಜಾತಿ, ಧರ್ಮದ ಸಂಕೋಲೆಯನ್ನು ಮೀರಿ ವಿಶ್ವಕ್ಕೆ ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಈ ನಾಡ ಹಬ್ಬಕ್ಕೆ ಕನ್ನಡ ಸಾಹಿತ್ಯದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಮುಟ್ಟಿಸಿದ ಕನ್ನಡದ ಹೆಣ್ಣು ಮಗಳೊಬ್ಬಳನ್ನು ಜಾತಿ ಧರ್ಮದ ಲೇಪನಗೊಳಿಸಿ ವಿರೋಧಿಸುತ್ತಿರುವುದು ನಾಗರಿಕ ಸಮಾಜವು ನಾಚುವಂತಿದೆ.
ಹೀಗಾದರೆ ಕೋಮು ಸೌಹಾರ್ದತೆಯ ಸಾಮರಸ್ಯದ ಜೀವನ ನಡೆಸುವುದಾದರೂ ಹೇಗೆ? ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ವ್ಯವಸ್ಥೆಯ ಪಿತೂರಿಗಳು, ಜಾತ್ಯತೀತ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಶಾಂತಿಯನ್ನು ಉಂಟು ಮಾಡುವ ಮನಸ್ಸುಗಳು ಮೊದಲು ಸ್ವಚ್ಛಗೊಂಡು ಜಾತಿ ಮುಕ್ತ ಮನಸ್ಸುಗಳನ್ನು ಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕು. ನಾಡ ಹಬ್ಬದ ಉದ್ಘಾಟನೆಗೆ ಆಯ್ಕೆಯಾಗಿರುವ ಬಾನು ಮುಷ್ತಾಕ್ ಅವರನ್ನು ಜಾತಿ ಧರ್ಮದ ಕಣ್ಣಿನಿಂದ ನೋಡದೆ ದಸರಾ ಉದ್ಘಾಟನೆಗೆ ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ.
– ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗರ





