ಸ್ಥಳೀಯ ಸಂಸ್ಥೆಗಳಿಗೆ ಮುಡಾ, ಖಾಸಗಿ ಬಡಾವಣೆಗಳ ಖಾತೆ ಹೊಣೆ
ಮೈಸೂರು: ಮುಡಾ ರಚಿಸಿರುವ ಹಾಗೂ ಅನುಮೋದಿತ ಖಾಸಗಿ ಬಡಾ ವಣೆಗಳ ನಿವೇಶನಗಳಿಗೆ ಖಾತೆ ಮಾಡ ದಿರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಸ್ಥಳೀಯ ಸಂಸ್ಥೆಗಳಿಂದಲೇ ಶುಲ್ಕ ಕಟ್ಟಿಸಿಕೊಂಡು ಖಾತೆ ಮಾಡುವ ಹೊಣೆ ವಹಿಸುವ ಮಹತ್ವದ ತೀರ್ಮಾನ ಮಾಡಲಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಜುಲೈ ೧ರಿಂದಲೇ ಖಾತೆ ಮಾಡುವ ಪ್ರಕ್ರಿಯೆ ಯನ್ನು ಸ್ಥಗಿತಗೊಳಿಸಿರುವ ಮುಡಾವು ಈಗಾಗಲೇ ಅನುಮೋದಿಸಿರುವ ಎಲ್ಲಾ ಖಾಸಗಿ ಬಡಾವಣೆಗಳ ಖಾತೆಗಳನ್ನು ಮಾಡುವ ಜವಾಬ್ದಾರಿಯನ್ನು ಮೈಸೂರು ಮಹಾನಗರಪಾಲಿಕೆ, ನಾಲ್ಕು ಪಟ್ಟಣ ಪಂಚಾಯಿತಿಗಳು, ಒಂದು ನಗರಸಭೆ, ೧೯ ಗ್ರಾಮ ಪಂಚಾಯಿತಿಗಳಿಗೆ ವಹಿಸಿದೆ.
ನಗರದ ಜಿಪಂನಲ್ಲಿ ಮುಡಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮಿ ಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಸಮ್ಮುಖದಲ್ಲಿ ನಡೆದ ಮಹತ್ವದ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮುಡಾದಿಂದ ಕಾನೂನು ಪ್ರಕಾರ ಬಡಾವಣೆ ರಚನೆಗೆ ನಕ್ಷೆ ಅನುಮೋದನೆ ಮಾಡಬಹುದೇ ಹೊರತು ಖಾತೆಯನ್ನು ಮಾಡುವಂತಿಲ್ಲದ ಕಾರಣ ಖಾತೆ ಮಾಡು ವುದನ್ನು ಸ್ಥಗಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಗರಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಕಡಕೊಳ, ಬೋಗಾದಿ, ರಮ್ಮನಹಳ್ಳಿ ಪಟ್ಟಣ ಪಂಚಾ ಯಿತಿಗಳು ಹಾಗೂ ೧೯ ಗ್ರಾಮ ಪಂಚಾಯಿತಿಗಳಲ್ಲಿ ಖಾತೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ನಿವೇಶನದಾರರು ಯಾವುದೇ ಗೊಂದಲಕ್ಕೆ ಒಳಗಾಗದೆ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸುವ ಶುಲ್ಕವನ್ನು ಪಾವತಿಸಿ ಖಾತೆ ಮಾಡಿಸಿಕೊಳ್ಳಬಹುದಾಗಿದೆ.
ಬ್ಯಾಂಕ್ ಸಾಲ ಸೇರಿದಂತೆ ಇನ್ನಿತರ ಅವಶ್ಯಕತೆಗೆ ಪರದಾಡುತ್ತಿರುವ ನಿವೇಶನದಾರರು ಖಾತೆಗೆ ಅರ್ಜಿ ಹಾಕಿದ ತಕ್ಷಣವೇ ಖಾತೆ ಮಾಡಿಕೊಟ್ಟು ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ಹಾಡುವುದಕ್ಕೆ ಸೂಚನೆ ನೀಡಲಾಯಿತು.
ಜಂಟಿ ಸಮೀಕ್ಷೆ: ಮುಡಾದಿಂದ ೧೭ ಬಡಾವಣೆ, ಖಾಸಗಿಯಾಗಿ ಅಭಿವೃದ್ಧಿಪಡಿಸಿದ ೯೦೦ ಬಡಾವಣೆಗಳಲ್ಲಿ ಮೊದಲ ಹಂತದಲ್ಲಿ ೨೦೦ ಬಡಾವಣೆಗಳನ್ನು ಹಸ್ತಾಂತರಿಸಲು ಸಭೆಯಲ್ಲಿ ಒಪ್ಪಿಗೆಯಾಗಿದ್ದು, ಒಂದು ವಾರದೊಳಗೆ ಮುಡಾ ಮತ್ತು ಸ್ಥಳೀಯ ಸಂಸ್ಥೆಗಳು ಜಂಟಿ ಸಮೀಕ್ಷೆ ನಡೆಸಿ ಅಭಿವೃದ್ಧಿ ಕಾಮಗಾರಿಗಳಿಗೆ ಆಗಬೇಕಿರುವ ಅನುದಾನ, ಏನೇನು ಕೆಲಸ ಆಗಬೇಕು, ಏನೇನು ಆಗಿದೆ ಎಂಬುದರ ವರದಿಯನ್ನು ಸಿದ್ಧಪಡಿಸುವುದು. ಹಸ್ತಾಂತರಕ್ಕೆ ಬೇಕಾದ ಎನ್‌ಒಸಿಯನ್ನು ಸಿದ್ಧಪಡಿಸಿಕೊಂಡು ನ. ೮ರಂದು ನಡೆಯುವ ಸಭೆಗೆ ಹಾಜರಾಗುವಂತೆ ಡಿಸಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಷರತ್ತುಗಳಿಗೆ ಅನ್ವಯವಾಗುವಂತೆ ಅಂದರೆ ಮೂಲಸೌಕರ್ಯಗಳನ್ನು ಒದಗಿಸಿರುವುದು ಅಥವಾ ಒದಗಿಸಿಲ್ಲದೆ ಇದ್ದರೂ ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಂಡು ಹಸ್ತಾಂತರ ಮಾಡಿಕೊಳ್ಳುವುದು. ಮುಡಾದಿಂದ ಎಷ್ಟು ವರ್ಷಗಳ ಕಾಲದಿಂದ ಅಭಿವೃದ್ಧಿ ಶುಲ್ಕ ಪಾವತಿಸಬೇಕು ಎನ್ನುವುದನ್ನು ಚರ್ಚಿಸಿ, ಏಕರೂಪದಲ್ಲಿ ಅಭಿವೃದ್ಧಿ ಶುಲ್ಕ ಮತ್ತು ಅಭಿವೃದ್ಧಿಗೆ ಅನುದಾನ ಒದಗಿಸುವುದಕ್ಕೆ ಮುಂದೆ ತೀರ್ಮಾನ ಮಾಡಲಾಗುತ್ತದೆ ಎಂದರು.
ಮುಡಾದಿಂದ ಅನುಮೋದನೆ ಪಡೆದುಕೊಂಡು ರಚಿಸಿರುವ ಬಡಾವಣೆಗಳಲ್ಲಿ ಇರುವ ೧೯೬ ಏಕ ನಿವೇಶಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವಹಿಸುವುದು. ಅಲ್ಲಿ ಆದಾಯಕ್ಕೆ ಬೇಕಾದ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಳ್ಳುವುದಕ್ಕೂ ಸಮ್ಮತಿಸಲಾಯಿತು. ಮುಡಾ ಮತ್ತು ಸ್ಥಳೀಯ ಸಂಸ್ಥೆಗಳ ಅಽಕಾರಿಗಳು ಜಂಟಿ ಸಮೀಕ್ಷೆ ಮಾಡುವಾಗ ಪ್ರತಿಯೊಂದು ಅಂಶವನ್ನೂ ಗಮನಿಸಿ ವರದಿ ತಯಾರು ಮಾಡಬೇಕು. ನ. ೮ರಂದು ನಡೆಯುವ ಸಭೆಯಲ್ಲಿ ಬಡಾವಣೆಗಳನ್ನು ಹಸ್ತಾಂತರ ಮಾಡಿದ ಮೇಲೆ ಸಾಕಷ್ಟು ಒತ್ತಡ ಬಂದರೂ ಅದನ್ನು ನಿರ್ವಹಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಕೆ. ಎಂ. ಗಾಯತ್ರಿ, ಮುಡಾ ಆಯುಕ್ತ ರಘುನಂದನ್, ಕಾರ್ಯದರ್ಶಿ ಪ್ರಸನ್ನಕುಮಾರ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀ-,ನಗರ ಯೋಜಕ ಸದಸ್ಯ ಶಿವರಾಮಯ್ಯ, ಮುಖ್ಯಾಧಿಕಾರಿಗಳಾದ ಎಚ್. ಎಂ. ಸುರೇಶ್,ಬಸವರಾಜು,ದೀಪಾ, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಚಂದ್ರಶೇಖರ್ ಸೇರಿದಂತೆ ಗ್ರಾಪಂನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.





