Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹೋಬಳಿ ಕೇಂದ್ರದಲ್ಲಿ ಬಸ್ ತಂಗುದಾಣವಿಲ್ಲದೆ ಪರದಾಟ

ಪಿ ಶಿವಕುಮಾರ್

ದೊಡ್ಡ ಕವಲಂದೆ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಆಗ್ರಹ 

ದೊಡ್ಡಕವಲಂದೆ: ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಗ್ರಾಮ ಹೋಬಳಿ ಕೇಂದ್ರವಾಗಿದ್ದು ಪ್ರತಿನಿತ್ಯ ಸರ್ಕಾರಿ ಸಾರಿಗೆ ಬಸ್ ಗಳು, ಖಾಸಗಿ ಬಸ್‌ಗಳು ಗ್ರಾಮದ ಮೂಲಕ ಸಂಚರಿಸುತ್ತವೆ. ಆದರೆ ಪ್ರಯಾಣಿಕರು ವಿರಮಿಸಿ ಕೊಳ್ಳಲು ಬಸ್ ತಂಗುದಾಣ ಇಲ್ಲದೆ ಬಿಸಿಲು, ಮಳೆಯಲ್ಲೇ ನಿಲ್ಲಬೇಕಾಗಿದೆ.

ನಂಜನಗೂಡು- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ೭೬೬ ರಲ್ಲಿ ದೊಡ್ಡ ಕವಲಂದೆ ಹೋಬಳಿ ಕೇಂದ್ರ ಇದೆ. ಈ ಹೆದ್ದಾರಿಯು ಮೈಸೂರು, ನಂಜನಗೂಡು, ಚಾಮರಾಜನಗರ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ನಗರ ಮತ್ತು ಪಟ್ಟಣ ಪ್ರದೇಶಕ್ಕೆ ತೆರಳಲು ಹೋಬಳಿ ಕೇಂದ್ರಕ್ಕೆ ಆಗಮಿಸುತ್ತಾರೆ.

ಆದರೆ ಹೋಬಳಿ ಕೇಂದ್ರದಲ್ಲಿ ಸೂಕ್ತ ಬಸ್ ನಿಲ್ದಾಣ ಇಲ್ಲದೆ ರಸ್ತೆಯಲ್ಲಿಯೇ ನಿಂತು ಬಸ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಅತಿ ವೇಗವಾಗಿ ಸಂಚರಿಸುತ್ತವೆ. ಬಸ್ ನಿಲ್ದಾಣ ಇಲ್ಲದ ಕಾರಣ ಬಸ್ ಹಿಡಿಯುವವರು ನಡು ರಸ್ತೆಯಲ್ಲಿ ನಿಂತು ದಿನನಿತ್ಯ ಹೈರಾಣಾಗುತ್ತಿದ್ದಾರೆ. ಬಿಸಿಲು ಮಳೆ ಹೆಚ್ಚಾದ ಸಂದರ್ಭದಲ್ಲಿ ಅಕ್ಕ ಪಕ್ಕದ ಅಂಗಡಿ ಮಳಿಗೆಗಳ ಬಳಿ ಪ್ರಯಾಣಿಕರು ಆಶ್ರಯ ಪಡೆಯಬೇಕಾಗಿದೆ. ಕೆಲವು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಬಸ್ ಹತ್ತಲು ಹೋಗಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು.

ಬಸ್ ನಿಲ್ದಾಣ ನಿರ್ಮಿಸಿ ಕೊಡುವಂತೆ ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ಜಾಗ ಇಲ್ಲ ಎನ್ನುವ ನೆಪವನ್ನು ಹೇಳುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಹೋಬಳಿ ಕೇಂದ್ರದಲ್ಲಿ ಜಾಗದ ಸಮಸ್ಯೆಯ ನೆಪ ಇಟ್ಟುಕೊಂಡು ನಿಲ್ದಾಣ ನಿರ್ಮಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಕಟ್ಟಡ ಹಾಗೂ ದೇವನೂರು ಗ್ರಾಮಕ್ಕೆ ತೆರಳುವ ಬಳಿ ಜಾಗ ಇದ್ದು ಬಸ್ ನಿಲ್ದಾಣಕ್ಕೆ ಉಪಯೋಗಿಸಿಕೊಂಡು, ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಪ್ರಯಾಣಿಕ ಮಂಜೇಶ್ ಒತ್ತಾಯಿಸಿದ್ದಾರೆ.

” ಬಸ್ ನಿಲ್ದಾಣ ಸಂಬಂಧ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆದಿರುವ ವಿಷಯ  ನನಗೂ ತಿಳಿದಿದೆ. ಆದರೆ ಕಂದಾಯ ಇಲಾಖೆಗೆ ಸಂಬಂಧಿಸಿದ ಜಾಗ ದೊಡ್ಡ ಕವಲಂದೆ ಗ್ರಾಮದಲ್ಲಿ ಇಲ್ಲ. ಸಮಸ್ಯೆಗೆ ಸಂಬಂಧಿಸಿದಂತೆ ಕೆಎಸ್‌ಆರ್ ಟಿಸಿ ಹಾಗೂ ತಾಪಂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಸದ್ಯಕ್ಕೆ ಪೊಲೀಸ್ ಇಲಾಖೆ ಕಟ್ಟಡ ಖಾಲಿಯಿದ್ದು, ಇದು ಸೂಕ್ತವೆನಿಸಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

-ಶಿವಕುಮಾರ್ ಕಾಸನೂರು, ತಹಸಿಲ್ದಾರ್

” ದೊಡ್ಡ ಕವಲಂದೆ ಹೋಬಳಿ ಕೇಂದ್ರವಾಗಿದ್ದರೂ ಯಾವುದೇ ಪ್ರಯೋಜನವಿಲ್ಲ. ಮೂಲಸೌಕರ್ಯಕ್ಕಾಗಿ ಪ್ರಯಾಣಿಕರು ದಿನನಿತ್ಯ ಪರದಾಡುತ್ತಿರುವುದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕಾಣಿಸುತ್ತಿಲ್ಲ. ಜೀವ ಕೈಯಲ್ಲಿ ಹಿಡಿದುಕೊಂಡು ಬಸ್‌ಗಳಿಗೆ ಕಾಯಬೇಕಿರುವುದು ವಿಪರ್ಯಾಸವೇ ಸರಿ. ಈಗಲಾದರೂ ಬಸ್ ತಂಗುದಾಣ ನಿರ್ಮಿಸಲಿ.

-ಕೆ.ಜಿ.ಬಸವಣ್ಣ, ಪ್ರಯಾಣಿಕರು

Tags:
error: Content is protected !!