Mysore
19
broken clouds

Social Media

ಭಾನುವಾರ, 11 ಜನವರಿ 2026
Light
Dark

ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗೆ ಹೊಸ ಮಾರ್ಗಸೂಚಿ

mysore university

ಅನುಚೇತನ್ ಕೆ.ಎಂ.

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಪದವಿಗಾಗಿ ಪರಿತಪಿಸಿ, ನಿರಂತರವಾಗಿ ಪ್ರತಿಭಟನೆ ನಡೆಸಿದ ಆಕಾಂಕ್ಷಿ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ, ವಿವಿಯು ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯ ಮಂತ್ರಿಗಳೊಂದಿಗೆ ಸಭೆ ನಡೆಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮಾರ್ಗಸೂಚಿ ಸಿದ್ಧಪಡಿಸಿದೆ.

ಮೈಸೂರು ವಿವಿಯಲ್ಲಿ ಉನ್ನತ ಶಿಕ್ಷಣ ಮುಗಿಸಿ ಸಂಶೋಧನಾ ಕಾರ್ಯ ನಡೆಸಲು ವಿಶ್ವವಿದ್ಯಾನಿಲಯ ಪ್ರವೇಶಾತಿ ಪರೀಕ್ಷೆ, ಕೆಸಿಇಟಿ, ಜೆಆರ್‌ಎ-, ಎನ್‌ಇಇಟಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ನೂರಾರು ವಿದ್ಯಾರ್ಥಿಗಳು ಒಂದು ವರ್ಷದಿಂದ ಪಿಎಚ್.ಡಿ. ಮಾರ್ಗದರ್ಶಕರಿಗಾಗಿ ಪರಿತಪಿಸುತ್ತಿದ್ದು, ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ವಿವಿಯು ಯುಜಿಸಿ ನಿಯಮಾನುಸಾರ ಹೆಚ್ಚುವರಿ ಪಿಎಚ್.ಡಿ. ಪ್ರವೇಶ ನೀಡಲಾಗದು ಎಂದು ತಿಳಿಸಿದೆ. ಹಿಂದಿನ ಕುಲಪತಿ ಅವರು ಹೆಚ್ಚುವರಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಟ್ಟು, ನಿಯಮಕ್ಕೂ ಹೆಚ್ಚಿನ ಅಭ್ಯರ್ಥಿಗಳನ್ನು ನೇಮಿಸಿಕೊಂಡಿದ್ದರು.

ಅದರ ಅನುಸಾರ ಪ್ರವೇಶ ನೀಡುವಂತೆ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದ್ದರೂ, ಅಭ್ಯರ್ಥಿಗಳಿಗೆ ಯಾವುದೇ ಪ್ರತಿಫಲ ದೊರೆತಿರಲಿಲ್ಲ. ಇದೀಗ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಉನ್ನತ ಶಿಕ್ಷಣ ಇಲಾಖೆಯಿಂದ ಹೊಸ ಮಾರ್ಗಸೂಚಿ ತರಲುಸೂಚಿಸಿದ್ದಾರೆ. ವಿವಿಯು ಮಾರ್ಗಸೂಚಿ ಅನುಮತಿಗೆ ಎದುರು ನೋಡುತ್ತಿದೆ.

ಸರ್ಕಾರಿ ಕಾಲೇಜುಗಳಿಗೆ ಅನುಮತಿ: ಇದೀಗ ವಿವಿಯು ಯುಜಿಸಿ ನಿಯಮನುಸಾರ ಒಬ್ಬ ಪ್ರಾಧ್ಯಾಪಕರಿಗೆ ೮ ಅಭ್ಯರ್ಥಿಗಳು, ಸಹ ಪ್ರಾಧ್ಯಾಪಕರಿಗೆ ೬ ಅಭ್ಯರ್ಥಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರಿಗೆ ೪ ಅಭ್ಯರ್ಥಿಗಳನ್ನು ನೀಡಲು ಅವಕಾಶ ನೀಡಲಾಗಿದ್ದು, ಈವರೆಗೆ ವಿವಿಯಲ್ಲಿ ೧೦೬ ಪ್ರಾಧ್ಯಾಪಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಪ್ರಾಧ್ಯಾಪಕರ ಪಿಎಚ್.ಡಿ. ಅಭ್ಯರ್ಥಿಗಳ ಸ್ಥಳಾವ ಕಾಶ ಪೂರ್ಣವಾಗಿದೆ.

ವಿವಿಯಲ್ಲಿ ಒಟ್ಟು ೪೮೬ ಪ್ರಾಧ್ಯಾಪಕರ ಹುದ್ದೆಗಳಿದ್ದು, ೩೮೦ ಪ್ರಾಧ್ಯಾಪಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ವಿವಿಯಲ್ಲಿ ಪಿಎಚ್.ಡಿ. ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗದ ಕಾರಣ ಉನ್ನತ ಶಿಕ್ಷಣ ಇಲಾಖೆ ಹಾಗೂ ಸಚಿವರೊಂದಿಗೆ ಚರ್ಚಿಸಿ ಮೈಸೂರು ವಿವಿಯ ಆಡಳಿತಕ್ಕೊಳಪಡುವ ೩೮ ಸರ್ಕಾರಿ ಸ್ನಾತಕೋತ್ತರ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡು, ಅಧ್ಯಯನ ವಿಷಯವಿರುವ ಪ್ರಾಧ್ಯಾಪಕರ ಮಾರ್ಗದರ್ಶಕ್ಕೆ ತಲಾ ಇಬ್ಬರು ಅಭ್ಯರ್ಥಿಗಳನ್ನು ನೀಡುವ ವಿಚಾರ ಪ್ರಸ್ತಾಪಿಸಲಾಗಿದೆ. ಅದಕ್ಕೂ ಮೊದಲು ಮಾರ್ಗದರ್ಶನ ನೀಡಲು ಬಯಸುವ ಪ್ರಾಧ್ಯಾಪಕರಿಂದ ಅರ್ಜಿ ಸ್ವೀಕರಿಸಲಾಗುತ್ತದೆ. ಇನ್ನುಳಿದಂತೆ ಯಾವುದೇ ನಿರ್ಧಾರಗಳನ್ನು ವಿವಿಯು ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಸೂಚನೆ ಮೇರೆಗೆ ಉನ್ನತ ಶಿಕ್ಷಣ ಸಂಸ್ಥೆಯ ಮಾರ್ಗಸೂಚಿ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜು ತಿಳಿಸಿದ್ದಾರೆ

ಉಪ ವಿಭಾಗಗಳಿಗೂ ಅನುವು: ಈಗಾಗಲೇ ವಿವಿಯಲ್ಲಿ ಪ್ರಾಧ್ಯಾಪಕರ ಕೊರತೆಯಿರುವ ಕಾರಣ ಕೇಂದ್ರ ಅಧ್ಯಯನ ವಿಭಾಗದ ವಿಷಯಗಳಲ್ಲಿ ಬರುವ, ಉಪ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳಿಗೂ ಅಧ್ಯಯನ ವಿಭಾಗದ ಪ್ರಾಧ್ಯಾಪಕರಿಂದ ಮಾರ್ಗದರ್ಶನಕ್ಕೆ ಅನುವು ಮಾಡಿಕೊಡಲಾಗಿದ್ದು, ಹೆಚ್ಚುವರಿ ಅವಕಾಶ ನೀಡಲು ಸಾಧ್ಯವಿಲ್ಲ. ವಿವಿಗೆ ಇನ್ನು ಕನಿಷ್ಠ ೧೦೦ ಪ್ರಾಧ್ಯಾಪಕರ ಅವಶ್ಯಕತೆಯಿದ್ದು, ನೇಮಕವಾದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿತಂತಾಗುತ್ತದೆ. ಉನ್ನತ ಶಿಕ್ಷಣ ಇಲಾಖೆಯ ಸೂಚನೆ ಹಾಗೂ ತೀರ್ಮಾನವಿಲ್ಲದೆ ವಿವಿಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ

” ಪಿಎಚ್.ಡಿ. ಪ್ರವೇಶಾತಿ ವಿಚಾರವಾಗಿ ಹಲವು ಚರ್ಚೆಗಳಾಗಿದ್ದು, ಇದರ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರರೊಂದಿಗೆ ಸಭೆ ನಡೆಸಲಾಗಿದ್ದು, ವಿವಿಯಿಂದ ಮಾರ್ಗಸೂಚಿ ಹಾಗೂ ವರದಿಯನ್ನು ಸಲ್ಲಿಸಲಾಗಿದೆ. ಸರ್ಕಾರ ಮುಂದಿನ ಕ್ರಮಕ್ಕೆ ಸೂಚನೆ ಪತ್ರ ಹಾಗೂ ಆದೇಶ ನೀಡಬೇಕಿದ್ದು, ಸರ್ಕಾರದ ತೀರ್ಮಾನಕ್ಕೆ ಕಾಯುತ್ತಿದ್ದೇವೆ. ಪತ್ರ ಬಂದ ಬಳಿಕ ಸರ್ಕಾರದ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುತ್ತೇವೆ.”

-ಪ್ರೊ.ಎನ್.ಕೆ ಲೋಕನಾಥ್, ಕುಲಪತಿ , ಮೈಸೂರು ವಿಶ್ವವಿದ್ಯಾನಿಲಯ

Tags:
error: Content is protected !!