Mysore
24
overcast clouds

Social Media

ಗುರುವಾರ, 17 ಸೆಪ್ಟೆಂಬರ್ 2026
Light
Dark

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ  

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ

೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅನಾಮಿಕನಾಗಿ ತನ್ನನ್ನು ತಾನೇ ಕಟುವಾಗಿ ಸ್ವವಿಮರ್ಶೆಗೆ ಒಳಪಡಿಸಿ ಬರೆದಿದ್ದರು ಎಂದರೆ ನೀವು ನಂಬುತ್ತೀರಾ? ಸರ್ವಾಧಿಕಾರಿಗಳೂ ತಮ್ಮನ್ನು ತಾವೇ ಜನಸೇವಕ ಎಂದು ಹೊಗಳಿಕೊಳ್ಳುವ ಈ ಕಾಲದಲ್ಲಿ ನೈಜ ಜನಸೇವಕನಾಗಿದ್ದ ನೆಹರೂ ತನ್ನನ್ನು ತಾನೇ ಭಾವೀ ಸರ್ವಾಧಿಕಾರಿಯಾಗುವ ಎಲ್ಲ ಲಕ್ಷಣಗಳುಳ್ಳ ಅಪಾಯಕಾರಿ ಎಂದು ಲೇವಡಿ ಮಾಡಿಕೊಂಡಿದ್ದರು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟ

ಒಂದು ದೊಡ್ಡ ಮೆರವಣಿಗೆ ಸಾಗುತ್ತಿದೆ. ಹತ್ತಾರು ಸಾವಿರ ಜನರು ಅವರ ಕಾರನ್ನು ಸುತ್ತುವರಿದು, ಪರವಶತೆಯಿಂದ, ತುಂಬು ಪ್ರೀತಿಯಿಂದ ಅವರನ್ನು ಸ್ವಾಗತಿಸುತ್ತಿದ್ದಾರೆ. ಅವರು ಕಾರಿನ ಆಸನದ ಮೇಲೆ ನಿಂತಿದ್ದಾರೆ. ಈಗ ಹಠಾತ್ತನೆ ಮತ್ತೆ ಆ ನಗು ಕಾಣಿಸಿಕೊಳ್ಳುತ್ತದೆ ಅಥವಾ ಸಂಭ್ರಮ ತುಂಬಿದ ನಗೆ ಕೇಳಿಸುತ್ತದೆ. ಜನರೂ ಅವರೊಂದಿಗೆ ನಗುತ್ತಾರೆ. ಆ ಕ್ಷಣದಲ್ಲಿ ಜವಾಹರ್ ದೇವರಂತೆ ಕಾಣಿಸುವುದಿಲ್ಲ. ತನ್ನ ಸುತ್ತಲೂ ಸೇರಿರುವ ಸಾವಿರಾರು ಜನರೊಂದಿಗೆ ಆತ್ಮೀಯತೆಯನ್ನೂ ಸಹೋದರತ್ವವನ್ನೂ ಹಂಚಿ ಕೊಳ್ಳುವ ಒಬ್ಬ ಸಾಮಾನ್ಯ ಮನುಷ್ಯನಂತೆ ಕಾಣುತ್ತಾರೆ. ಜನರೂ ಸಂತೋಷ ಪಡುತ್ತಾರೆ. ಆದರೆ ಆ ನಗು ಮತ್ತೆ ಅಚಾನಕ್ಕಾಗಿ ಮಾಯವಾಗುತ್ತದೆ. ಬಿಳಿಚಿಕೊಂಡ, ಗಂಭೀರ ಮುಖ ಮತ್ತೆ ಕಾಣಿಸಿಕೊಳ್ಳುತ್ತದೆ.

ಇವೆಲ್ಲವೂ ಸಹಜವಾಗಿ ನಡೆಯುತ್ತಿದೆಯೇ? ಅಥವಾ ಸಾರ್ವಜನಿಕ ವ್ಯಕ್ತಿಯೊಬ್ಬನು ಬಹಳ ಯೋಚಿಸಿ ರೂಪಿಸಿಕೊಂಡಿರುವ ತಂತ್ರವೇ? ಎರಡೂ ಇರಬಹುದು. ಇದು ನಟನೆಯೇ ಅಲ್ಲ, ಸಹಜ ಸ್ವಭಾವ ಅನ್ನಿಸುವ ಭಂಗಿಯೇ ಅತ್ಯಂತ ಪರಿಣಾಮಕಾರಿ ನಟನೆ. ವಿಶೇಷವಾಗಿ ಮಾಡುತ್ತಿಲ್ಲವೆಂಬಂತೆ, ನಿರಾಳವಾಗಿ, ನಿರ್ಲಕ್ಷ್ಯದಿಂದಲೇ ಅವರು ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ನಿಪುಣ ಕಲಾವಿದನಂತೆ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಆದರೆ ಈ ದಾರಿ ಅವರನ್ನು ಮತ್ತು ದೇಶವನ್ನು ಎಲ್ಲಿಗೆ ಕೊಂಡೊಯ್ಯಲಿದೆ? ಅವರ ಮುಖವಾಡದ ಹಿಂದೆ ಏನಿದೆ? ಯಾವ ಆಸೆಗಳು? ಅಧಿಕಾರದ ಯಾವ ಬಯಕೆ? ಈ ಪ್ರಶ್ನೆಗಳು ನಿಜಕ್ಕೂ ಆಸಕ್ತಿದಾಯಕ. ಏಕೆಂದರೆ ಭಾರತದ ವರ್ತಮಾನವೂ, ಭವಿಷ್ಯವೂ ಅವರೊಂದಿಗೆ ಬೆಸೆದುಕೊಂಡಿದೆ. ಭಾರತಕ್ಕೆ ಮಹತ್ತರವಾದ ಒಳಿತನ್ನೂ ಹಾನಿಯನ್ನೂ ಮಾಡುವ ಶಕ್ತಿ ಅವರಲ್ಲಿದೆ. ಆದ್ದರಿಂದ ನಾವೀ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲೇಬೇಕು, ನಮಗೆ ಬೇರೆ ದಾರಿಯೇ ಇಲ್ಲ.

ಸುಮಾರು ಎರಡು ವರ್ಷಗಳಿಂದ ಜವಾಹರಲಾಲ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ಅವರು ರೈತನ, ಕಾರ್ಮಿಕನ, ಜಮೀನ್ದಾರನ, ಬಂಡವಾಳಶಾಹಿಯ, ವ್ಯಾಪಾರಿಯ, ಬೀದಿ ವ್ಯಾಪಾರಿಯ, ಬ್ರಾಹ್ಮಣನ, ಅಸ್ಪೃಶ್ಯನ, ಮುಸ್ಲಿಂ, ಸಿಖ್, ಕ್ರೈಸ್ತ, ಯೆಹೂದಿಯ ಬಳಿಗೂ ಹೋಗುತ್ತಾರೆ. ತಮ್ಮ ವಯಸ್ಸಿನ ಇತಿಮಿತಿಗಳನ್ನೂ ಮೀರಿ ಅವರು ಭಾರತದಾದ್ಯಂತ ಓಡಾಡುತ್ತಿದ್ದಾರೆ. ತಮ್ಮ ಹಿಂದೆ ಕೀರ್ತಿಯನ್ನೂ ಒಂದು ದಂತಕಥೆಯನ್ನೂ ಬಿಟ್ಟು ಹೋಗುವ ಸೀಸರ್‌ನಂತೆ… ಇದೆಲ್ಲವೂ ಅವರಿಗೆ ಕೇವಲ ಕ್ಷಣಿಕವಾದ ಮನರಂಜನೆಯೇ? ಅಥವಾ ಯಾವುದೋ ಆಳವಾದ ಯೋಜನೆಯೇ? ತಮ್ಮ ಆತ್ಮಚರಿತ್ರೆಯಲ್ಲಿ ಅವರು ಹೇಳಿರುವ ಅಧಿಕಾರದ ಬಯಕೆಯೇ ಅವರನ್ನು ಒಂದು ಜನಸಮೂಹದಿಂದ ಮತ್ತೊಂದು ಜನಸಮೂಹದತ್ತ ಕೊಂಡೊಯ್ಯುತ್ತಿದೆಯೇ? ಒಂದು ವೇಳೆ ಈ ಆಕರ್ಷಣೆಯ ದಿಕ್ಕೇ ಬದಲಾಗಿಬಿಟ್ಟರೆ…?

ಜವಾಹರಲಾಲ್‌ನಂತಹವರು ಮಹತ್ತರವಾದ ಕೆಲಸಗಳನ್ನು ಮಾಡುವ ಅಪಾರ ಸಾಮರ್ಥ್ಯ ಹೊಂದಿರುವವರು. ಪ್ರಜಾಪ್ರಭುತ್ವದಲ್ಲಿ ಅಪಾಯಕಾರಿಗಳೂ ಆಗಬಹುದು. ಅವರು ತಮ್ಮನ್ನು ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಕರೆಯುತ್ತಾರೆ. ಅವರು ಅದನ್ನು ಸಂಪೂರ್ಣ ಪ್ರಾಮಾಣಿಕತೆಯಿಂದಲೇ ಹೇಳುತ್ತಾರೆ. ಆದರೆ ಮನುಷ್ಯ ಆಸೆಗಳು ಮತ್ತು ತಣಿಯದ ಆಂತರಿಕ ಪ್ರೇರಣೆಗಳಿಗೆ ತಕ್ಕಂತೆ ತರ್ಕವನ್ನೂ ರೂಪಿಸಿಕೊಳ್ಳಬಲ್ಲವ. ಸ್ವಲ್ಪವೇ ಬದಲಾವಣೆ ಸಂಭವಿಸಿದರೂ ಜವಾಹರಲಾಲ್ ನಿಧಾನಗತಿಯ ಪ್ರಜಾಪ್ರಭುತ್ವದ ಎಲ್ಲಾ ವಿಧಿವಿಧಾನಗಳನ್ನು ಬದಿಗೊತ್ತಿ ಒಬ್ಬ ಸರ್ವಾಧಿಕಾರಿಯಾಗಬಹುದು.

ಆಗಲೂ ಅವರು ಪ್ರಜಾಪ್ರಭುತ್ವ, ಸಮಾಜವಾದದ ಭಾಷೆಯನ್ನೂ ಘೋಷಣೆಗಳನ್ನೂ ಬಳಸಬಹುದು. ಆದರೆ ಫ್ಯಾಸಿಸಂ ಕೂಡ ಇದೇ ಭಾಷೆಯನ್ನು ಹೇಗೆ ತನ್ನ ಅನುಕೂಲಕ್ಕೆ ಬಳಸಿಕೊಂಡು, ನಂತರ ಅದನ್ನೇ ಎಸೆದುಬಿಟ್ಟಿತು ಎಂಬುದು ನಮಗೆ ಗೊತ್ತಿದೆ. ಜವಾಹರಲಾಲ್ ಖಂಡಿತವಾಗಿಯೂ ಫ್ಯಾಸಿಸ್ಟ್ ಅಲ್ಲ. ಅವರ ನಂಬಿಕೆಗಳಿಂದ ಮಾತ್ರವಲ್ಲ, ಅವರ ಸ್ವಭಾವದಿಂದಲೂ ಅಲ್ಲ. ಫ್ಯಾಸಿಸಂನ ಕ್ರೌರ್ಯ ಮತ್ತು ಒರಟುತನ ಅವರಿಗೆ ಹೊಂದಿಕೆಯಾಗುವುದಿಲ್ಲ. ಫ್ಯಾಸಿಸ್ಟ್‌ನ ಮುಖವೆಂದರೆ ಅದು ಸಾರ್ವಜನಿಕವಾಗಿರಲಿ, ಖಾಸಗಿಯಾಗಿರಲಿ, ಆಹ್ಲಾದಕರವಾದ ಮುಖವಲ್ಲ. ಆದರೆ ಜವಾಹರಲಾಲ್ ಅವರ ಮುಖವೂ, ಧ್ವನಿಯೂ ಸಂಪೂರ್ಣವಾಗಿ ಖಾಸಗಿ ಸ್ವಭಾವದ್ದೇ. ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುವಾಗಲೂ, ಅವರ ಧ್ವನಿ ಆತ್ಮೀಯವಾದ ಧ್ವನಿಯಂತೆ ತೋರುತ್ತದೆ. ಒಬ್ಬೊಬ್ಬ ವ್ಯಕ್ತಿಯೊಂದಿಗೆ ಪ್ರತ್ಯೇಕವಾಗಿ, ಸರಳವಾಗಿ, ಮನೆಯವರಂತೆ ಮಾತನಾಡುತ್ತಿರುವಂತೆ ತೋರುತ್ತದೆ. ಆ ಸೂಕ್ಷ್ಮವಾದ ಮುಖವನ್ನು ನೋಡುತ್ತಾ, ಆ ಧ್ವನಿಯನ್ನು ಕೇಳುತ್ತಾ, ಅದರ ಹಿಂದೆ ಏನಿದೆ ಎಂದು ಯೋಚಿಸಬೇಕಾಗುತ್ತದೆ.

ಸಾರ್ವಜನಿಕವಾಗಿ ಮಾತನಾಡುವಾಗ ಅವರದೇ ಆಲೋಚನೆಗಳ ಸರಣಿ ಅವರನ್ನು ಹಿಡಿದಿಟ್ಟುಕೊಳ್ಳುತ್ತದೆ. ಅನೇಕ ಸಂದರ್ಭಗಳಲ್ಲಿ ಅವರ ಕಣ್ಣುಗಳೇ ಅವನ್ನು ಬಯಲಿಗೆಳೆಯುತ್ತವೆ. ಜವಾಹರಲಾಲ್ ಫ್ಯಾಸಿಸ್ಟ್ ಆಗಲು ಸಾಧ್ಯವೇ ಇಲ್ಲ. ಆದರೂ ಅವರೊಳಗೆ ಒಬ್ಬ ಸರ್ವಾಧಿಕಾರಿಯ ಎಲ್ಲ ಲಕ್ಷಣಗಳೂ ಇವೆ. ಅಪಾರ ಜನಪ್ರಿಯತೆ, ಗುರಿಯತ್ತ ಕೇಂದ್ರೀಕೃತವಾದ ಬಲವಾದ ಇಚ್ಛಾಶಕ್ತಿ, ಶಕ್ತಿ, ಹೆಮ್ಮೆ, ಸಂಘಟನಾ ಸಾಮರ್ಥ್ಯ, ಪ್ರತಿಭೆ, ಕಠಿಣತೆ ಇವೆಲ್ಲದರ ಜೊತೆ ಜೊತೆಗೆ, ಜನಸಮೂಹದ ಮೇಲಿನ ಅವರ ಅಪಾರ ಪ್ರೀತಿಯೊಂದಿಗೇ, ಇತರರ ಬಗ್ಗೆ ಒಂದು ರೀತಿಯ ಅಸಹನೆ ಮತ್ತು ದುರ್ಬಲರು ಹಾಗೂ ಅಸಮರ್ಥರ ಬಗ್ಗೆ ಒಂದು ರೀತಿಯ ತಿರಸ್ಕಾರವೂ ಅವರೊಳಗೆ ಇದೆ.

ಅವರ ಕೋಪದ ತೀವ್ರತೆಯ ಬಗ್ಗೆ ಎಲ್ಲರಿಗೂ ತಿಳಿದಿವೆ. ಅವುಗಳನ್ನು ನಿಯಂತ್ರಿಸಿಕೊಂಡರೂ, ತುಟಿಗಳ ಸಣ್ಣ ವಕ್ರತೆಯೇ ಅವರ ಒಳಗಿನ ಭಾವನೆಯನ್ನು ಬಯಲಿಗೆಳೆಯುತ್ತದೆ. ಕೆಲಸಗಳನ್ನು ಹೇಗಾದರೂ ಮುಗಿಸಿಬಿಡ ಬೇಕು, ತನಗೆ ಇಷ್ಟವಿಲ್ಲದ ಸಂಗತಿಗಳನ್ನು ಬದಿಗೊತ್ತಿ ಹೊಸದನ್ನು ನಿರ್ಮಿಸಬೇಕು ಎಂಬ ಅವರ ಅತಿಯಾದ ಹಂಬಲವು ಪ್ರಜಾಪ್ರಭುತ್ವದ ನಿಧಾನಗತಿಯ ಪ್ರಕ್ರಿಯೆಯನ್ನು ಹೆಚ್ಚು ಕಾಲ ಸಹಿಸಿಕೊಳ್ಳಲಾರದು. ಅವರು ಪ್ರಜಾಪ್ರಭುತ್ವದ ಹೊರಕವಚವನ್ನು ಉಳಿಸಿಕೊಳ್ಳಬಹುದು. ಆದರೆ ಅದು ತಮ್ಮ ಇಚ್ಛೆಗೆ ತಕ್ಕಂತೆ ಬಾಗುವಂತೆ ಮಾಡುವುದರಲ್ಲಿ ಅವರು ಹಿಂದೆ ಬೀಳಲಾರರು. ಸಾಮಾನ್ಯ ಸಂದರ್ಭದಲ್ಲಿ ಇಂತಹ ವ್ಯಕ್ತಿ ಒಬ್ಬ ಸಮರ್ಥ ಮತ್ತು ಯಶಸ್ವಿ ನಾಯಕನಾಗಬಹುದು. ಆದರೆ ಈ ಕ್ರಾಂತಿಕಾರಿ ಯುಗದಲ್ಲಿ ಸೀಸರ್‌ವಾದವು ಯಾವಾಗಲೂ ಕಾಲಬುಡದಲ್ಲೇ ನಿಂತಿರುತ್ತದೆ. ಜವಾಹರಲಾಲ್ ತಮ್ಮನ್ನು ತಾವೇ ಸೀಸರ್ ನಂತೆ ಕಲ್ಪಿಸಿಕೊಳ್ಳುವ ಸಾಧ್ಯತೆ ಇಲ್ಲವೇ? ಖಂಡಿತವಾಗಿಯೂ ಇದೆ.ಮ ಅಲ್ಲಿಯೇ ಜವಾಹರಲಾಲ್‌ಗೂ ಭಾರತಕ್ಕೂ ಅಪಾಯ ಇರುವುದು.

ಭಾರತ ಸ್ವಾತಂತ್ರ್ಯವನ್ನು ಪಡೆಯುವುದು ಸೀಸರ್‌ವಾದದ ಮೂಲಕವಲ್ಲ. ಒಬ್ಬ ದಯಾಳುವೂ ಸಮರ್ಥನೂ ಆದ ನಿರಂಕುಶ ಆಡಳಿತಗಾರನ ಅಡಿಯಲ್ಲಿ ಭಾರತ ಸ್ವಲ್ಪಮಟ್ಟಿಗೆ ಅಭಿವೃದ್ಧಿ ಹೊಂದಬಹುದಾದರೂ, ಅದರ ನಿಜವಾದ ಬೆಳವಣಿಗೆ ಕುಂಠಿತವಾಗುತ್ತದೆ. ಜನರ ನಿಜವಾದ ವಿಮೋಚನೆಯ ದಿನ ಇನ್ನಷ್ಟು ದೂರ ಸರಿಯುತ್ತದೆ. ಸತತ ಎರಡು ವರ್ಷಗಳಿಂದ ಜವಾಹರಲಾಲ್ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ತಮ್ಮನ್ನು ಕಾಂಗ್ರೆಸ್‌ಗೆ ಅಷ್ಟು ಅನಿವಾರ್ಯರನ್ನಾಗಿ ಮಾಡಿಕೊಂಡಿದ್ದಾರೆ; ಅವರನ್ನು ಮೂರನೇ ಅವಧಿಗೂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಇದು ಭಾರತಕ್ಕೂ ಜವಾಹರಲಾಲ್‌ಗೂ ಮಾಡುವ ದೊಡ್ಡ ಅಪಾಯ. ಅವರನ್ನು ೩ನೇ ಬಾರಿಗೆ ಆಯ್ಕೆ ಮಾಡುವುದೆಂದರೆ ಕಾಂಗ್ರೆಸ್‌ನ ಎತ್ತರಕ್ಕೆ ಒಬ್ಬ ವ್ಯಕ್ತಿಯನ್ನು ಏರಿಸುವುದು. ಜನರು ರಾಜಕೀಯವನ್ನು ಕಾಂಗ್ರೆಸ್ನ ಸಾಮೂಹಿಕ ಶಕ್ತಿಯ ಬದಲು ಒಬ್ಬ ವ್ಯಕ್ತಿಯ ಸುತ್ತ ಅಂದರೆ ಸೀಸರ್‌ವಾದದ ದೃಷ್ಟಿಯಿಂದ ಯೋಚಿಸುವಂತೆ ಮಾಡುವುದು. ಇದರಿಂದ ಜವಾಹರಲಾಲ್ ನಲ್ಲಿರುವ ತಪ್ಪು ಪ್ರವೃತ್ತಿಗಳಿಗೆ ನಾವು ಇನ್ನಷ್ಟು ಬಲ ನೀಡುತ್ತೇವೆ. ಅವರ ಆತ್ಮಾಭಿಮಾನ ಮತ್ತು ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ. ಕೊನೆಗೆ ಭಾರತದ ಸಮಸ್ಯೆಗಳ ಈ ಭಾರವನ್ನು ಹೊರುವುದಕ್ಕೂ, ಅವುಗಳನ್ನು ಪರಿಹರಿಸುವುದಕ್ಕೂ ತಾನೊಬ್ಬನೇ ಸಮರ್ಥನೆಂಬ ನಂಬಿಕೆ ಅವರಲ್ಲಿ ಮೂಡಬಹುದು. ಆದರೆ ಯಾವ ಮನುಷ್ಯನೂ ತನ್ನನ್ನು ಅನಿವಾರ್ಯನೆಂದು ಭಾವಿಸುವಂತಾಗಬಾರದು. ಭಾರತಕ್ಕೆ ಜವಾಹರಲಾಲ್ ಸತತ ೩ನೇ ವರ್ಷವೂ ಕಾಂಗ್ರೆಸ್‌ನ ಅಧ್ಯಕ್ಷರಾಗಿರುವುದನ್ನು ಸಹಿಸಿಕೊಳ್ಳುವಷ್ಟು ಸಾಮರ್ಥ್ಯವಿಲ್ಲ. ಇದಕ್ಕೆ ವೈಯಕ್ತಿಕ ಕಾರಣವೂ ಇದೆ. ತಮ್ಮ ಧೈರ್ಯದ ಮಾತುಗಳ ನಡುವೆಯೂ ಜವಾಹರಲಾಲ್ ಸ್ಪಷ್ಟವಾಗಿ ದಣಿದಿದ್ದಾರೆ, ಬಳಲಿದ್ದಾರೆ. ಅವರು ಅಧ್ಯಕ್ಷರಾಗಿಯೇ ಮುಂದುವರಿದರೆ ಕ್ರಮೇಣ ಅವರ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಅವರಿಗೆ ವಿಶ್ರಾಂತಿ ಸಾಧ್ಯವಿಲ್ಲ. ಆದರೆ ಕನಿಷ್ಠ, ಅವರು ದಾರಿ ತಪ್ಪದಂತೆ ನೋಡಿಕೊಳ್ಳಬಹುದು. ಅತಿಯಾದ ಹೊರೆ ಮತ್ತು ಹೊಣೆಗಾರಿಕೆಗಳಿಂದ ಅವರ ಮಾನಸಿಕ ಸಾಮರ್ಥ್ಯ ಕುಗ್ಗದಂತೆ ನೋಡಿಕೊಳ್ಳಬಹುದು. ಭವಿಷ್ಯದಲ್ಲಿ ಅವರಿಂದ ಉತ್ತಮ ಕೆಲಸ ನಿರೀಕ್ಷಿಸುವ ಹಕ್ಕು ನಮಗಿದೆ. ಆದ್ದರಿಂದ ಅತಿಯಾದ ಪ್ರಶಂಸೆಯಿಂದ ಅವರನ್ನು ಹಾಳುಮಾಡಬಾರದು; ಅವರ ಆತ್ಮಾಭಿಮಾನ ಈಗಾಗಲೇ ಅಪಾಯಕಾರಿಯಾದಷ್ಟು ದೊಡ್ಡದಾಗಿದೆ. ಅದನ್ನು ನಿಯಂತ್ರಿಸಲೇಬೇಕು.

(ಈ ಬರಹ The Modern Review of Calcutta ೧೯೩೭ರ ನವೆಂಬರ್ ತಿಂಗಳ ಸಂಚಿಕೆಯಲ್ಲಿ Rashtrapati by Chanakya ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿತ್ತು. ಆ ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ರಾಷ್ಟ್ರಪತಿ ಎಂದೇ ಕರೆಯುವ ವಾಡಿಕೆಯಿತ್ತು) ಕೃಪೆ: The Nehru Archive ಅನುವಾದ ಫಾತಿಮಾ ರಲಿಯಾ) 

 

 

 

Tags:
error: Content is protected !!