ಎಸ್.ಎಸ್.ಭಟ್
ಹಾಗಂತ ಇಲ್ಲಿ ಫಲಕ ಹಾಕಿಲ್ಲ, ವಾಹನ ನಿಲ್ಲುವುದು ತಪ್ಪುತ್ತಿಲ್ಲ; ಇದು ನಂಜನಗೂಡಿನ ತಾಯಿ-ಮಕ್ಕಳ ಆಸ್ಪತ್ರೆ ಆವರಣದ ಸ್ಥಿತಿ
ನಂಜನಗೂಡು: ನಗರದ ಹೃದಯ ಭಾಗದ ಮಹಾತ್ಮ ಗಾಂಧಿ ಶತಾಬ್ಧಿ ರಸ್ತೆಗೆ ಹೊಂದಿಕೊಂಡಂತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣ ಈಗ ದ್ವಿಚಕ್ರ ವಾಹನಗಳಿಂದ ತುಂಬಿ ತುಳುಕಲಾರಂಭಿಸಿದೆ.
ಈ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ಅಥವಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಗರ್ಭಿಣಿ, ಬಾಣಂತಿಯರನ್ನು ನೋಡಲು ಬಂದವರು ತಮ್ಮ ವಾಹನ ನಿಲ್ಲಸಲೂ ಜಾಗವೇ ಇರದಂತೆ ಇಲ್ಲಿ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ೫೦೦ಕ್ಕೂ ಹೆಚ್ಚು ವಾಹನಗಳು ನಿಂತಿರುತ್ತವೆ.
ನಗರದ ಹಳೇ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಮಧ್ಯ ಭಾಗದಲ್ಲಿರುವ ನಾಗಮ್ಮ ಎಂಬ ಮಹಾದಾನಿ ಕಳೆದ ಶತಮಾನದ ಆರಂಭದಲ್ಲಿ ಆಸ್ಪತ್ರೆಗೆಂದು ನೀಡಿದ್ದ ಈ ಜಾಗದಲ್ಲಿ ಆರ್. ಧ್ರುವನಾರಾಯಣ ಸಂಸದರಾಗಿದ್ದಾಗ ಅನುದಾನ ತಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಇದೇ ಅವರಣದಲ್ಲಿ ಆಯುರ್ವೇದ ಆಸ್ಪತ್ರೆ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳ ಕಾರ್ಯಾಲಯಗಳೂ ಕಾರ್ಯನಿರ್ವಹಿಸುತ್ತಿವೆ.
ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ತಾಲ್ಲೂಕು ಕೇಂದ್ರಗಳಿಗೆ ನಿತ್ಯ ಕೆಲಸದ ಮೇಲೆ ತೆರಳುವವರಿಗೆ ಈ ಆಸ್ಪತ್ರೆಯ ಆವರಣ ಪುಕ್ಕಟೆಯಾಗಿ ವಾಹನ ನಿಲ್ಲಿಸುವ ತಾಣವಾಗಿದೆ. ಆಸ್ಪತ್ರೆಗೆ ಬರುವವರಿರಲಿ, ಸಿಬ್ಬಂದಿಗಳಿಗೂ ಇಲ್ಲಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳಿಂದಾಗಿ ತಮ್ಮ ವಾಹನ ನಿಲ್ಲಿಸಲು ಜಾಗವೇ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ.
ನಗರದ ಹಳೇ ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಲು ಯಾವುದೇ ಪಾರ್ಕಿಂಗ್ ಸೌಲಭ್ಯಗಳಿಲ್ಲ. ಆದರೆ ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಇದ್ದು, ಅಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಾಹನ ನಿಲ್ಲಿಸಿದರೆ ಹಣ ಪೀಕಬೇಕು. ಹಾಗಾಗಿ ದ್ವಿಚಕ್ರ ವಾಹನ ಸವಾರರು ಆಸ್ಪತ್ರೆಯ ಆವರಣವನ್ನು ಉಚಿತವಾಗಿ ವಾಹನ ನಿಲ್ಲಿಸುವ ತಂಗುದಾಣವಾಗಿಸಿ ಕೊಂಡಿದ್ದಾರೆ. ಇದರತ್ತ ತಾಲ್ಲೂಕು ಆಡಳಿತ ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
” ಆಸ್ಪತ್ರೆಯ ಆವರಣ ರೋಗಿಗಳಿಗೆ ಮತ್ತು ಅವರೊಡನೆ ಬರುವವರ ವಾಹನಗಳಿಗೆ ಮಾತ್ರ ಮೀಸಲಾಗಬೇಕು.”
-ಮಾದೇವನಾಯಕ
” ಈ ರೀತಿ ಪುಕ್ಕಟೆಯಾಗಿ ಆಸ್ಪತ್ರೆ ಆವರಣದಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ತೊಂದರೆಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು.”
-ಆಸ್ಪತ್ರೆಯ ಸಿಬ್ಬಂದಿ
” ನಗರಸಭೆಯು ನಗರದಲ್ಲಿ ವಾಹನ ನಿಲ್ಲಿಸಲು ನಿಗದಿತ ಸ್ಥಳಾವಕಾಶ ಮಾಡಿಕೊಡಬೇಕು. ಇಲ್ಲವೇ ಸಂಚಾರ ಪೊಲೀಸರು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸುವುದಕ್ಕೆ ಕಡಿವಾಣ ಹಾಕಬೇಕು.”
-ಸಾರ್ವಜನಿಕರು





