• ಸ್ವಾಮಿ ಪೊನ್ನಾಚಿ
ದಸರಾ ಎಂದಾಗ ನಮ್ಮ ಚಿತ್ತವೆಲ್ಲಾ ಮೈಸೂರಿನತ್ತ ಗಿರಕಿ ಹೊಡೆಯುತ್ತದೆ. ನಾವೆಲ್ಲಾ ನಾಡಹಬ್ಬವೆಂದು ಮೈಸೂರಿನ ಚಾಮುಂಡಿ, ಅರಮನೆ ದರ್ಬಾರು, ಜಂಬೂ ಸವಾರಿಯ ಕಡೆ ಗಮನವನ್ನೆಲ್ಲಾ ಕೇಂದ್ರೀಕರಿಸುತ್ತಿರುವಾಗ ಮಹದೇಶ್ವರ ಬೆಟ್ಟ ಹಾಗೂ ಇದಕ್ಕೆ ಹೊಂದಿಕೊಂಡಂತೆ ತಮಿಳುನಾಡಿನಲ್ಲಿರುವ ಬುಡಕಟ್ಟು ಜನಾಂಗದ ಬೇಡಗಂಪಣರು ಮಾತ್ರ ನಮಗೂ ಮೈಸೂರಿಗೂ ಸಂಬಂಧವೇ ಇಲ್ಲವೆನ್ನುವಂತೆ ತಮ್ಮದೇ ರೀತಿಯಲ್ಲಿ ನವರಾತ್ರಿ ಉತ್ಸವವನ್ನು ಆಚರಿಸುತ್ತಾರೆ. ಶಕ್ತಿ ದೇವತೆ ಒಂಬತ್ತು ಅವತಾರಗಳಲ್ಲಿ ದುರ್ಗಿಯಾದುದನ್ನು ನಾವು ನವರಾತ್ರಿಗಳಲ್ಲಿ ಪೂಜಿಸಿದರೆ ಬೇಡಗಂಪಣರು ಒಂಬತ್ತೂ ದಿನಗಳೂ ಮಾದೇಶ್ವರನ ಪವಾಡಗಳನ್ನು ಕುರಿತು ಹಾಡುತ್ತಾ ಆಚರಿಸುತ್ತಾರೆ. ಮೈಸೂರಿನದ್ದು ಪುರೋಹಿತರ ಕಂಚಿನಕಂಠದಲ್ಲಿ ಮೊಳಗುವ ಮಂತ್ರಭಕ್ತಿ ಯಾದರೆ ಅವರದ್ದು ಬಾಯಿಗೆ ಬಟ್ಟೆ ಕಟ್ಟಿಕೊಂಡು ಒಂದೂ ಮಾತನಾಡದೆ ಪೂಜಿಸುವ ಮೌನಭಕ್ತಿ. ಇವರು ಮಹದೇಶ್ವರನನ್ನು ಕಾಡಿನಲ್ಲಿ ಸಿಗುವ ಕಾಡುಹಣ್ಣು, ಸೊಪ್ಪುಸೊದೆ, ದವಸಧಾನ್ಯಗಳಿಂದ ಅಲಂಕರಿಸಿ ಪೂಜಿಸುತ್ತಾರೆ. ನಾವು ಆನೆಯ ಮೇಲೆ ಜಂಬೂಸವಾರಿ ಮಾಡಿಸಿದರೆ ಅವರು ಕುದುರೆಯ ಪ್ರತಿಮೆಯ ಮೇಲೆ ಮೆರವಣಿಗೆ ಹೊರಡಿಸುತ್ತಾರೆ.
ಅಂದಹಾಗೆ ಈ ಬೇಡಗಂಪಣರು ದಕ್ಷಿಣದ ಕಡೆ ಬಂದು ನೆಲೆಸಿದ್ದೇ ಆಕಸ್ಮಿಕ. ಚೋಳರ ಸಾಮಂತ ರಾಜರ ಉಪಟಳವನ್ನು ತಾಳದೆ ಉತ್ತರದಿಂದ ರಾತ್ರೋ ರಾತ್ರಿ ತಪ್ಪಿಸಿಕೊಂಡು ವಲಸೆ ಬಂದ ಇವರು, ದಟ್ಟ ಕಾಡುಗಳಿಂದ ಹೊರ ಜಗತ್ತಿಗೆ ಮರೆಯಾಗಿದ್ದ ದಕ್ಷಿಣದ ಪಾಲಾರ್ ನದಿ ಪ್ರಾಂತ್ಯದ ಪ್ರದೇಶಗಳಲ್ಲಿ ನೆಲೆ ನಿಂತರು, ಬೇಟೆ ಆಡಿಕೊಂಡು, ಮಾರಿ ಮಸಣಿಗಳಂತಹ ಕ್ಷುದ್ರ ದೇವತೆಗಳನ್ನು ಪೂಜಿಸುತ್ತಾ ಕಾಲ ಕಳೆಯುತ್ತಿದ್ದ ಇವರನ್ನು ಒಂದು ಕಡೆ, ನೆಲೆ ನಿಲ್ಲುವಂತೆ ಮಾಡಿ ಒಕ್ಕಲುತನಕ್ಕೆ ಹಚ್ಚಿ, ಲಿಂಗದೀಕ್ಷೆ ನೀಡಿ ಸಸ್ಯಾಹಾರಿಗಳನ್ನಾಗಿ ಮಾಡಿದ್ದು ಮಾತ್ರ ಪವಾಡ ಪುರುಷನೆಂದೇ ಪ್ರಸಿದ್ದಿಯಾದ ಮಲೆ ಮಹದೇಶ್ವರರು. ಭಾರತ ದೇಶ ದಲ್ಲೇ ಸಸ್ಯಾಹಾರಿಗಳಾದ ಏಕೈಕ ಬುಡಕಟ್ಟು ಜನಾಂಗವಿದ್ದರೆ ಅದು ಬಹುಶಃ ಈ ಬೇಡಗಂಪಣರು.
ಮಹದೇಶ್ವರರು ಬದುಕಿದ್ದಾಗ ಮಾಡಿದ ಹಲವು ಪವಾಡಗಳನ್ನೇ ಹಾಡಿ ಹೊಗಳುತ್ತಾ ಅದರ ಸಂಕೇತವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬರುವ ಬೇಡಗಂಪಣರು ಮಲೆ ಮಹದೇಶ್ವರರು ಕೊಂಗದೊರೆಯನ್ನು ಸೋಲಿಸಿದ್ದು ಮತ್ತು ಶ್ರವಣನನ್ನು ಸಂಹಾರ ಮಾಡಿದ ಪ್ರತೀಕವಾಗಿ ವಿಜಯದಶಮಿಯನ್ನು ಆಚರಿಸುತ್ತಾರೆ.
ಬೇಡಗಂಪಣರದ್ದೇ ಮಾತುಗಳಲ್ಲಿ ಮಾದಪ್ಪನ ಕಥೆಯನ್ನು ಹೇಳುವುದಾ ದರೆ, ಬೇಡಗಂಪಣದ ರಾಜ, ರಾಯಣ್ಣನ ಮಗಳು ದೇವಕಿಯ ಕೂದಲನ್ನು ನೋಡಿಯೇ ಅವಳ ಸೌಂದರ್ಯವನ್ನು ಊಹಿಸಿದ ಕೊಂಗದೊರೆ ದೇವಕಿಯನ್ನು ತನಗೆ ಮದುವೆ ಮಾಡಿಕೊಡಲು ರಾಯಣ್ಣನನ್ನು ಕೇಳಿಕೊಳ್ಳುತ್ತಾನೆ. ಲಿಂಗದೀಕ್ಷೆಯಾಗಿ ಸಂಸ್ಕಾರವಂತರಾದ ನಾವು ಈ ಕೊಂಗದೊರೆಗೆ ಹೆಣ್ಣು ಕೊಡುವುದುಂಟೆ? ಎಂದು ಅವರು ನಿರಾಕರಿಸುತ್ತಾರೆ. ಬಲವಂತವಾಗಿ ಅವಳನ್ನು ಪಡೆಯಲೇಬೇಕೆಂಬ ಹಠದಿಂದ ಕೊಂಗದೊರೆ ದಂಡೆತ್ತಿ ಬಂದಾಗ; ಬೇಡಕಂಪಣರು ಮಾದಪ್ಪನ ಮೊರೆ ಹೋಗುತ್ತಾರೆ. ತನ್ನ ಗೆರಿಲ್ಲಾ ಯುದ್ಧ ತಂತ್ರದಿಂದ ಕೊಂಗದೊರೆಯನು ಮಹದೇಶ್ವರರು ಮಣಿಸಿದ ಮೇಲೆ ಶರಣಾಗತರಾದ ಕೊಂಗದೊರೆ ತಮ್ಮಲ್ಲಿದ್ದ ಬೆಳ್ಳಿಖಡ್ಗವನ್ನು ಹಾಗೂ ಛತ್ರಿ ಚಾಮರಗಳನ್ನು ತಪ್ಪು ಕಾಣಿಕೆಯಾಗಿ ಅರ್ಪಿಸಿ ಹೋಗುತ್ತಾರೆ. ಹಾಗೆ ಆ ಕೊಂಗದೊರೆಯಿಂದ ಕೊಡಲ್ಪಟ್ಟ ಬೆಳ್ಳಿಖಡ್ಗವನ್ನೇ ಬನ್ನಿ ಮಂಟಪದಲ್ಲಿಟ್ಟು ವಿಜಯದಶಮಿಯ ದಿನದಂದು ಬೇಡಗಂಪಣರು ಮೆರವಣಿಗೆ ಮಾಡುತ್ತಾ ಪೂಜೆ ಸಲ್ಲಿಸುತ್ತಾರೆ.
ಮಹದೇಶ್ವರರು ಈ ಭಾಗಕ್ಕೆ ಬರುವ ಹೊತ್ತಿಗೆ ಇದು ಜೈನ ದೊರೆಗಳ ಆಳ್ವಿಕೆಗೆ ಒಳಪಟ್ಟಿತ್ತು. ಗೇರುಮಾಳದ ಬಳಿ ಇರುವ ಬಂಕಾಪುರಿಯನ್ನು ರಾಜಧಾನಿ ಮಾಡಿಕೊಂಡು ಜೈನದೊರೆ ಶ್ರವಣನು ರಾಜ್ಯವಾಳುತ್ತಿರುತ್ತಾನೆ. ಶೈವ ಪರಂಪರೆಯನ್ನು ಕಂಡರಾಗದ ಇವನು ದೇವಾನುದೇವತೆಗಳನ್ನು ತನ್ನ ಸೆರೆಯಲ್ಲಿಟ್ಟುಕೊಂಡು ಸಾಮಾನ್ಯ ಜನರಿಗೆ ಕಂಟಕಪ್ರಾಯವಾಗಿರುತ್ತಾನೆ. ಇವನ ಅಟ್ಟಹಾಸವನ್ನು ಮಟ್ಟಹಾಕಲೆಂದೆ ಮಹದೇಶ್ವರರು ಅವತಾರ ತಾಳಿಬಂದು ಸಂಹಾರ ಮಾಡಿಸಿದನು. ಈ ಶ್ರವಣನನ್ನು ಸಂಹಾರ ಮಾಡಿದ ದಿನವೇ ವಿಜಯದಶಮಿ ಎಂದು ತಿಳಿದ ಬೇಡಗಂಪಣರು ಮಾದಪ್ಪನನ್ನು ಹಾಡಿ ಹೊಗಳಿ ವಿಶೇಷ ಅಲಂಕಾರ ಮಾಡಿ ಪೂಜಿಸುತ್ತಾರೆ.
ಮೈಸೂರಿನ ಅರಮನೆಯಲ್ಲಿ ನಡೆಯುವ ದರ್ಬಾರಿನ ಓಲಗದಂತೆಯೇ ಇಲ್ಲಿಯೂ ದರ್ಬಾರ್ ನಡೆಯುತ್ತದೆ. ನವರಾತ್ರಿಯ ಹಿಂದಿನ ಅಮಾವಾಸ್ಯೆಯಲ್ಲಿ ಎಣ್ಣೆ ಮಜ್ಜನದ ಸೇವೆ ಮಾಡಿದ ನಂತರವೇ ನವರಾತ್ರಿಯ ಕೈಂಕರ್ಯಗಳು ಶುರುವಾಗುತ್ತವೆ. ಮಾದಪ್ಪನನ್ನು ಪಟ್ಟಕ್ಕೆ ಕೂರಿಸಿದ ನಂತರ ಹತ್ತನೇ ದಿನದ ತನಕವೂ ಸೇವೆ ನಡೆಸುತ್ತಾರೆ. ಒಂದೊಂದು ದಿನದ ಸೇವೆಯನ್ನು ಒಂದೊಂದು ಊರಿನ ಮನೆತನಗಳು, ಸಾಲೂರು ಮಠದ ಸ್ವಾಮಿಗಳು, ಚಿಕ್ಕಪಾಲು, ದೊಡ್ಡಪಾಲಿನ ತಂಬಡಿಗಳು ವಹಿಸಿಕೊಳ್ಳುತ್ತಾರೆ. ಶ್ರವಣನನ್ನು ಕೊಲ್ಲಲು ಮಾದಪ್ಪನಿಗೆ ನೆರವು ನೀಡಲು ಜೊತೆಗಾರರಾಗಿದ್ದ ವೀರೇಶ್ವರ, ಪಂದೇಶ್ವರ, ಬೊಮ್ಮೇಶ್ವರ, ಕಿಚಗುತ್ತಿ ಮಾರಮ ಮುಂತಾದವರಿಗೂ ಕೂಡ ನವರಾತ್ರಿ ಸಮಯದಲ್ಲಿ ಪೂಜೆಯ ಸೇವೆ ಸಲ್ಲಿಸಲಾಗುತ್ತದೆ. ಒಂಬತ್ತನೇ ದಿನದಲ್ಲಿ ಮೈಸೂರಿನ ದಸರಾದಂತೆಯೇ ಜಂಬುಸವಾರಿ ಸಾಗುತ್ತದೆ. ಪಟ್ಟದಲ್ಲಿದ್ದ ಪಾರ್ವತಿ ಪರಮೇಶ್ವರರ ಪ್ರತಿಮೆಗಳನ್ನು ಕುದುರೆಯ ಮೂರ್ತಿ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಾ ದೇವಸ್ಥಾನದ ಮುಂಭಾಗ ಇರುವ ಬನ್ನಿಮಂಟಪದ ಶಮಿವೃಕ್ಷದ ತನಕ ಬಂದು ವಿವಿಧ ಪೂಜೆಗಳನ್ನು ಮಾಡುತ್ತಾರೆ. ಶುದ್ಧ ಸಸ್ಯಹಾರಿ ಆಗಿರುವ ಅನ್ನದ ಉಂಡೆಗಳಿಗೆ ಅರಿಶಿನ ಕುಂಕುಮ ಹಚ್ಚಿ, ಪಕ್ಕದಲ್ಲಿ ದೊಡ್ಡ ಕುಂಬಳಕಾಯಿಯನ್ನು ಇಟ್ಟು ಕೊಂಗದೊರೆ ಕಾಣಿಕೆಯಾಗಿ ನೀಡಿದ ಬೆಳ್ಳಿ ಖಡ್ಗದಿಂದ ಅನ್ನದ ಬಲಿಯನ್ನು ಕೊಟ್ಟು ತಮ್ಮ ದೇವರನ್ನು ಸಂಪ್ರೀತಿಗೊಳಿಸುತ್ತಾರೆ. ಪೂಜೆ ಮಾಡಿದ ನಂತರ ಕೊಳದಲ್ಲಿ ವಿಗ್ರಹಗಳನ್ನು ತೆಪ್ಪದ ಮೇಲೆ ನೀರಿನಲ್ಲಿ ತೇಲಿಸುವುದರ ಮೂಲಕ ತೆಪ್ಪೋತ್ಸವ ಮಾಡಿ ನವರಾತ್ರಿ ಉತ್ಸವದ ಆಚರಣೆಗೆ ಇತಿಶ್ರೀ ಹಾಡುತ್ತಾರೆ.
ಮಹದೇಶ್ವರ ಸ್ವಾಮಿ ದೇವಸ್ಥಾನವು ಸರ್ಕಾರಕ್ಕೆ ಸೇರಿದ ಮೇಲೆ ಬೇಡಗಂಪಣದ ಜನರ ಹಲವಾರು ಪ್ರಮುಖ ಆಚಾರ ವಿಚಾರಗಳನ್ನು ಕೈಬಿಟ್ಟು ಕೇವಲ ಹಣಕಾಸಿನ ಆದಾಯ ಬರುವ ಆಚರಣೆಗಳನ್ನಷ್ಟೇ ಮಾಡುತ್ತಾರೆ ಎಂದು ಎಂದು ಬೇಡಕಂಪಣದ ಹಿರಿಯರು ಬೇಸರದಿಂದ ಹೇಳಿಕೊಳ್ಳುತ್ತಾರೆ.
ಯಾತ್ರಾರ್ಥಿಗಳನ್ನು ಆಕರ್ಷಿಸುವ ನಡುವೆ ನಿಜವಾದ ಬುಡಕಟ್ಟು ಜನರ ಆಚಾರ, ವಿಚಾರ, ವಿಧಾನಗಳನ್ನು ಮೂಲೆಗುಂಪು ಮಾಡುತ್ತಿರುವುದು ವಿಪರ್ಯಾಸವೇ ಸರಿ ಎಂಬುದು ಬೇಡಗಂಪಣರ ಅನಿಸಿಕೆ. ಹೇಳಿ ಕೇಳಿ ಮಾದೇಶರ ಬಸವ ಪರಂಪರೆಯವನು. ಸಾಮಾನ್ಯ ಜನರಿಗೆ ಕಷ್ಟವಾಗುವ ವೈದಿಕ ಪರಂಪರೆಯ ಹಲವಾರು ಸಂಗತಿಗಳನ್ನು ವಿರೋಧಿಸುತ್ತಾ ಮೌಡ್ಯಗಳ ಬಗ್ಗೆ ಎಚ್ಚರಿಸಿ ಈ ಭಾಗದ ಜನರಿಗೆ ಸಾಮಾಜಿಕ ಕಳಕಳಿಯನ್ನು ಹೇಳಿಕೊಟ್ಟಂತಹವನು. ಈಗ ಸರ್ಕಾರ ಅವನು ವಿರೋಧಿಸಿದ ಪದ್ಧತಿಗಳನ್ನೇ ದೇವಸ್ಥಾನದಲ್ಲಿ ಆಚರಣೆಗೆ ತಂದಿರು ವುದು ಮತ್ತು ಜನರನ್ನು ಆಕರ್ಷಿಸಲು ಇನ್ನೂ ಹೆಚ್ಚಿನ ರೀತಿಯಲ್ಲಿ ಮೌಡ್ಯಗಳನ್ನು ತುಂಬುತಿರುವುದನ್ನು ನೋಡಿದರೆ ಮುಂದೊಂದು ದಿನ ನಮ್ಮ ಬೇಡಗಂಪಣ ಜನರ ಆಚಾರಗಳು ಕಣ್ಮರೆಯಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯರು. ಮೈಸೂರಿನದು ರಾಜಪ್ರಭುತ್ವದ ಸಂಕೇತದ ಆಚರಣೆಯಾದರೆ ನಮ್ಮದು ಭಕ್ತಿ ಪ್ರಭುತ್ವದ ದೈವ ಪ್ರಭುತ್ವದ ಆಚರಣೆ. ಇಲ್ಲಿ ಕಾಯ, ವಾಚ, ಮನಸ ಮನೆದೇವರಾದ ಮಾದೇಶ್ವರನನ್ನು ತಮ್ಮ ವಡ್ಡಪೂಜೆಯಿಂದ ಆರಾಧಿಸುವುದು ಎನ್ನುತ್ತಾರೆ.
ಮಲೆ ಮಹದೇಶ್ವರಸ್ವಾಮಿ ದೇವಸ್ಥಾನವು ಸರ್ಕಾರದ ಸುಪರ್ದಿಗೆ ಸೇರಿದ ಮೇಲೆ ಮೂಲ ನಿವಾಸಿ ಬೇಡಗಂಪಣ ಜನರ ಹಲವಾರು ಪ್ರಮುಖ ಆಚಾರ ವಿಚಾರಗಳನ್ನು ಕೈಬಿಟ್ಟು ಕೇವಲ ಹಣಕಾಸಿನ ಆದಾಯ ಬರುವ ಆಚರಣೆಗಳನ್ನಷ್ಟೇ ಮಾಡುತ್ತಾರೆ ಎಂದು ಬೇಸರದಿಂದ ಹೇಳಿಕೊಳ್ಳುವ ಬೇಡಗಂಪಣ ಹಿರಿಯರು, ಈ ಹಿಂದೆ ಅದ್ದೂರಿಯಾಗಿ ಆಚರಿಸುತ್ತಿದ್ದ ಆನೆಪರ, ಹನ್ನೆರಡು ವರ್ಷಗಳಿಗೊಮ್ಮೆ ಆಚರಿಸುತ್ತಿದ್ದ ಶೇಷಣ್ಣ ಒಡೆಯರ ಕೊಂಡ ಉತ್ಸವಗಳನ್ನು ನೆನೆಯುತ್ತಾ ಗದ್ಗದಿತರಾಗುತ್ತಾರೆ