Mysore
26
haze

Social Media

ಗುರುವಾರ, 29 ಜನವರಿ 2026
Light
Dark

ಮನ್ರೇಗಾ: ೭ ತಿಂಗಳಿಂದ ಸಿಬ್ಬಂದಿಗೆ ಶೂನ್ಯ ವೇತನ!  

ಕೆ.ಬಿ.ರಮೇಶನಾಯಕ

ಇಂದಿನಿಂದಲೇ ಸಾಮೂಹಿಕ ರಜೆ ಹಾಕಲು ಸಿಬ್ಬಂದಿ ಚಿಂತನೆ 

ನೌಕರರ ಮನವೊಲಿಕೆಗೆ ಅಧಿಕಾರಿಗಳ ಕಸರತ್ತು

ಮೈಸೂರು ಜಿಲ್ಲೆಯಲ್ಲಿ ೧೨೦ ಮಂದಿ ಸಿಬ್ಬಂದಿ

ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ನೌಕರರು

ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ

ಮೈಸೂರು: ದಶಕದ ಹಿಂದೆ ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗದಂತೆ ತಡೆದು ದುಡಿಯುವ ಕೈಗಳಿಗೆ ಕೆಲಸ ನೀಡಲು ಆರಂಭಿಸಿದ ಮನ್ರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮೈಸೂರು ಜಿಲ್ಲೆಯವರು ಸೇರಿದಂತೆ ರಾಜ್ಯದ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಏಳು ತಿಂಗಳುಗಳಿಂದ ವೇತನ ಪಾವತಿಯಾಗದೆ ಕಂಗೆಟ್ಟಿದ್ದಾರೆ.

ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದಿರುವ ಕಾರಣ ರಾಜ್ಯ ಸರ್ಕಾರ ಕೂಡ ಕೈ ಚೆಲ್ಲುವಂತೆ ಆಗಿದೆ. ಇದರಿಂದಾಗಿ ಕುಟುಂಬ ನಿರ್ವಹಣೆ ಮಾಡಲಾಗದ ನೌಕರರು ತಬ್ಬಲಿತನ ಅನುಭವಿಸುತ್ತಿದ್ದಾರೆ. ವೇತನ ಪಾವತಿಗೆ ಇಂದು – ನಾಳೆ ಎನ್ನುವ ಭರವಸೆ ಕೇಳಿ ಕೇಳಿ ಸಾಕಾಗಿ ಹತಾಶೆಯಿಂದ ಊರಿಗೆ ಮರಳುತ್ತಿರುವ ನೌಕರರು ಸಾಮೂಹಿಕ ರಜೆ ಹಾಕಿ ಮನೆಯಲ್ಲೇ ಉಳಿ ಯುವ ಆಲೋಚನೆಯಲ್ಲಿದ್ದಾರೆ.

ಇದರಿಂದಾಗಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಮನವೊಲಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿ ಕೆಲಸ ಅರಸಿ ಗುಳೆ ಹೋಗುತ್ತಿದ್ದರಿಂದ ಸ್ಥಳೀಯವಾಗಿ ಕೂಲಿ ನೀಡಲು ಯುಪಿಎ ಸರ್ಕಾರ ಅಽಕಾರದಲ್ಲಿದ್ದಾಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನ್ರೇಗಾ) ಯೋಜನೆಯನ್ನು ದೇಶಾದ್ಯಂತ ಆರಂಭಿಸಲಾಗಿತ್ತು.

ವರ್ಷದಿಂದ ವರ್ಷಕ್ಕೆ ಮನ್ರೇಗಾ ಯೋಜನೆಯಡಿ ನೀಡುತ್ತಿದ್ದ ಅನುದಾನವನ್ನು ಹೆಚ್ಚಳ ಮಾಡಿದ್ದರಿಂದ, ಆಯಾಯ ಜಿಲ್ಲೆಗಳಲ್ಲಿ ಮಾನವ ದಿನಗಳ ಸೃಜನೆಗೆ ಗುರಿ ನೀಡಲಾಗುತ್ತಿತ್ತು. ಈ ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ ವಿವಿಧ ಹುದ್ದೆಗಳನ್ನು ಸೃಷ್ಟಿಸಿ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಮೈಸೂರು ಜಿಲ್ಲೆಯಲ್ಲಿ ಮನ್ರೇಗಾ ನಿರ್ವಹಣೆಗೆ ಸಹಾಯಕ ಕಾರ್ಯಕ್ರಮ ಅಧಿಕಾರಿ, ಬೇರ್ ಪುಟ್ ಟೆಕ್ನಿಷಿ ಯನ್, ಐಇಸಿ ಕೋ ಆರ್ಡಿನೇಟರ್, ಜಿಲ್ಲಾ ಎಂಐಎಸ್ ಕೋ ಆರ್ಡಿನೇಟರ್, ತಾಲ್ಲೂಕು ಮಟ್ಟದ ತಾಂತ್ರಿಕ ಕೋಆರ್ಡಿನೇಟರ್‌ಗಳಾಗಿ ೧೨೦ ಮಂದಿ ಕೆಲಸ ಮಾಡುತ್ತಿದ್ದರೆ, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಎಲ್ಲಾ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸಲಾಗುತ್ತಿತ್ತು.

ಕೇಂದ್ರ ಸರ್ಕಾರ ೧೦೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೆ ಶೇ.೬ರಂತೆ ಆಡಳಿತಾತ್ಮಕ ವೆಚ್ಚಕ್ಕೆ ೬ ಕೋಟಿ ರೂ. ಮೀಸಲಿಟ್ಟು ವೇತನ ಪಾವತಿಸಬೇಕಿತ್ತು. ಆದರೆ, ಕೇಂದ್ರದ ಅನುದಾನ ನಿರೀಕ್ಷೆ ಇಟ್ಟುಕೊಂಡು ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಡಳಿತಾತ್ಮಕ ವೆಚ್ಚವನ್ನು ಕೂಡ ಮೆಟೀರಿಯಲ್ ಕಾಂಪೋನೆಟ್ (ಶೇ.೬೦ ರಷ್ಟು ಮಾನವಶಕ್ತಿ, ಶೇ.೪೦ರಷ್ಟು ಯಂತ್ರೋಪಕರಣ ಬಳಕೆ ನಿಯಮ)ಗೆ ಬಿಡುಗಡೆ ಮಾಡಿ ಬಿಟ್ಟಿದ್ದರು. ಇದರ ನಡುವೆ ಕೆಲವು ಜಿಲ್ಲೆಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಗೆ ಏಜೆನ್ಸಿ ಆಯ್ಕೆ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತು. ಈ ಏಜೆನ್ಸಿಯ ಸಮಸ್ಯೆ ಇತ್ಯರ್ಥಪಡಿಸುವ ಹೊತ್ತಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇರುವುದು ನೌಕರರಿಗೆ ವೇತನ ಪಾವತಿಸಲು ಹಣ ಇಲ್ಲದೆ ಅಧಿಕಾರಿಗಳು ಅಸಹಾಯಕರಾಗಿ ಕುಳಿತಿದ್ದಾರೆ. ಸಿಬ್ಬಂದಿ ವೇತನ ಪಾವತಿಗೆ ಆಗಿರುವ ಆಡಳಿತಾತ್ಮಕ ಮತ್ತು ಅನುದಾನ ಕೊರತೆಯನ್ನು ನಿವಾರಿಸಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದು ಒತ್ತಡ ಹೇರಿದ್ದರೆ, ರಾಜ್ಯದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸಚಿವರು ಮತ್ತು ಅಧಿಕಾರಿಗಳು ಕೇಂದ್ರದ ಮೇಲೆ ಪದೇ ಪದೇ ಒತ್ತಡ ಹೇರುತ್ತಲೇ ಇದ್ದರೂ ಅನುದಾನ ಮಾತ್ರ ಬಿಡುಗಡೆಯಾಗದ ಕಾರಣ ಏಳು ತಿಂಗಳುಗಳಿಂದ ವೇತನ ಸಿಗದೆ ಕಾರ್ಮಿಕರು ಹತಾಶೆಗೊಂಡಿದ್ದಾರೆ. ಕುಟುಂಬ ನಿರ್ವಹಣೆ, ಮನೆ ಬಾಡಿಗೆ, ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಇಲ್ಲದೆ ತುಂಬಾ ತೊಂದರೆ ಆಗಿದೆ ಎಂದು ನಿತ್ಯ ಅಧಿಕಾರಿಗಳ ಎದುರು ನೌಕರರು ಗೋಳು ಹೇಳಿಕೊಳ್ಳುವುದು ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರವು ಅನುದಾನ ಬಿಡುಗಡೆ ಮಾಡುವ ಮೂಲಕ ನೌಕರರ ಹಿತರಕ್ಷಣೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

” ಮನ್ರೇಗಾ ಯೋಜನೆಯಡಿ ಬಾಕಿ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಿಂದಲೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಾರ ಬಿಡುಗಡೆ ಆಗುವ ನಿರೀಕ್ಷೆಯಿದೆ. ಅನುದಾನ ವಿಳಂಬದ ಬಗ್ಗೆ ನಮಗೆ ಗೊತ್ತಿಲ್ಲ. ಈತನಕ ಸಕಾಲಕ್ಕೆ ಬಿಡುಗಡೆ ಆಗುತ್ತಿತ್ತು.”

-ಡಾ.ಎಂ.ಕೃಷ್ಣರಾಜು, ಉಪ ಕಾರ್ಯದರ್ಶಿ, ಜಿಪಂ

” ಮನ್ರೇಗಾ ಯೋಜನೆಯಡಿ ಪ್ರಗತಿ ಸಾಧಿಸಲು ಸಿಬ್ಬಂದಿ ಪಾತ್ರ ಅಪಾರವಿದೆ. ಪ್ರತಿಯೊಂದು ಕಾಮಗಾರಿಯ ಮೇಲೂ ನಿಗಾ, ಲೆಕ್ಕಪತ್ರ ಸೇರಿದಂತೆ ಪ್ರತಿಯೊಂದು ನಿರ್ವಹಣೆ ಮಾಡುವ ನಮಗೆ ಏಳು ತಿಂಗಳುಗಳಿಂದ ವೇತನ ಇಲ್ಲದೆ ಸಮಸ್ಯೆ ಆಗಿದೆ. ಅಧಿಕಾರಿಗಳು ಹೇಳುವ ಆಶ್ವಾಸನೆ ಮಾತು ಕೇಳಿ ಕೇಳಿ ಸಾಕಾಗಿದೆ. ಕೇಂದ್ರ ಕೊಡುವ ತನಕ ಕಾಯದೆ ಜಿಪಂನ ಯಾವುದಾದರೂ ನಿಧಿಯಲ್ಲಿ ವೇತನ ಪಾವತಿಸಲಿ.”

– ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ

Tags:
error: Content is protected !!