೩ ತಿಂಗಳ ಹಿಂದೆ ಒಂದು ದಿನ ನಡೆದು ಸ್ಥಗಿತವಾಗಿದ್ದ ಕಾರ್ಯಾಚರಣೆ
ನಗರಸಭೆ, ಸಂಚಾರ ಪೊಲೀಸರ ಸಹಯೋಗದಲ್ಲಿ ಕಾರ್ಯಾಚರಣೆ
ದಲ್ಲಾಳಿಗಳಿಗೆ ಅನುಕೂಲ: ಸ್ಥಳೀಯರ ಅಸಮಾಧಾನ
ನಂಜನಗೂಡು: ಕಳೆದ ಜೂನ್ ೬ರಂದು ಆರಂಭವಾಗಿ ಒಂದೇ ದಿನಕ್ಕೆ ಸ್ಥಗಿತಗೊಂಡಿದ್ದ ನಂಜನಗೂಡು ನಗರದ ಫುಟ್‌ಪಾತ್ ಹಾಗೂ ಪೆಟ್ಟಿಗೆ ಅಂಗಡಿಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ೩ ತಿಂಗಳ ನಂತರ ಸೋಮವಾರ ಮತ್ತೆ ಪ್ರಾರಂಭಿಸಲಾಯಿತು.
ಅಂದು ನಗರಸಭೆ ಕಚೇರಿಯ ಮುಂಭಾಗದ ನೆಹರು ವೃತ್ತದಿಂದ ಆರಂಭಿಸಿ ಸ್ವಲ್ಪ ದೂರ ತೆರವು ಕಾರ್ಯಾಚರಣೆ ನಡೆಸಿ, ಒಂದೇ ದಿನಕ್ಕೆ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ರಾಷ್ಟ್ರಪತಿ ರಸ್ತೆಯ ಶ್ರೀ ಪ್ರಸನ್ನ ಚಿಂತಾಮಣಿ ಇಷ್ಟಾರ್ಥ ಸಿದ್ಧಿ ಗಣಪತಿ ದೇವಾಲಯದಿಂದ ತೆರವು ಕಾರ್ಯ ಆರಂಭಿಸಲಾಯಿತು.
ಸಂಚಾರ ಪೊಲೀಸ್ ಠಾಣಾಧಿಕಾರಿ ಕೃಷ್ಣಕಾಂತ ಕೋಳಿಯವರ ನೇತೃತ್ವದಲ್ಲಿ ರಸ್ತೆಯ ಇಕ್ಕೆಲಗಳ ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದ ಅಂಗಡಿಗಳ ಒತ್ತುವರಿ ಹಾಗೂ ಹಣ್ಣಿನ ಅಂಗಡಿಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾ ಯಿತು. ರಸ್ತೆಯನ್ನು ಆಕ್ರಮಿಸಿಕೊಂಡಿದ್ದ ಅಂಗಡಿಗಳ ಮಾಲೀಕರು ಒತ್ತುವರಿಗೆ ಉಪಯೋಗಿಸಿದ್ದ ಕಬ್ಬಿಣದ ಚಾವಣಿಗಳನ್ನು ತಾವೇ ತೆಗೆದು ಇಟ್ಟುಕೊಂಡರೆ, ಮಿಕ್ಕ ಅಂಗಡಿಗಳ ಒತ್ತುವರಿಯನ್ನು ಜೆಸಿಬಿ ಯಂತ್ರದಿಂದ ತೆಗಿಸಿ ತೆರವುಗೊಳಿಸಿದ ಸಂಚಾರ ಪೊಲೀಸರು, ಅವುಗಳನ್ನು ನಗರ ಸಭೆಯ ಲಾರಿಗೆ ತುಂಬಿ ಗುಜರಿಯತ್ತ ಸಾಗಿಸಿದರು.
ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳಲ್ಲಿ ಕೆಲವು ಹಣ್ಣಿನ ಅಂಗಡಿಗಳ ಮಾಲೀಕರು ನಾವು ಜಾಗದ ಬಾಡಿಗೆಯನ್ನು ಕಟ್ಟಡದ ಮಾಲೀಕರಿಗೆ ನೀಡುತ್ತಿದ್ದೇವೆ ಎಂದಾಗ ಬಾಡಿಗೆ ನೀಡಿದ್ದು ಕಟ್ಟಡಕ್ಕೆ. ಅಲ್ಲೇ ವ್ಯಾಪಾರ ಮಾಡಿ, ಬೀದಿಗೆ ಬರಬೇಡಿ ಎಂದು ಅವರಿಗೆ ತಾಕೀತು ಮಾಡಿದರು. ಇದೇ ಮೊದಲ ಬಾರಿಗೆ ಒತ್ತುವರಿ ಮಾಡಿದವರೆಲ್ಲರಿಗೂ ಅಧಿಕೃತ ನೋಟಿಸ್ ಜಾರಿ ಮಾಡಿದರು.
ಪೆಟ್ಟಿಗೆ ಅಂಗಡಿಗಳ ತೆರವು ದಲ್ಲಾಳಿಗಳಿಗೆ ಆದಾಯಕ್ಕೆ ಮೂಲ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ್ ಹೇಳಿದ್ದು, ಕಳೆದ ೪೦ ವರ್ಷಗಳಲ್ಲಿ ೧೨ ಬಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ ನಂಜನಗೂಡಿನ ಅಂದಿನ ಪುರಸಭೆ ಹಾಗೂ ಇಂದಿನ ನಗರಸಭೆಯ ಕಾರ್ಯದಕ್ಷತೆಗೆ ಸಾಕ್ಷಿಯಾದಂತಿತ್ತು. ಇದಲ್ಲದೆ, ನಗರದ ಆರ್.ಪಿ. ರಸ್ತೆಯ ಒಂದು ಭಾಗದಲ್ಲಿ ಮಾತ್ರ ವಾಹನ ಪಾರ್ಕಿಂಗ್ ಯೋಜನೆ ಪ್ರಾರಂಭಿಕವಾಗಿ ೧೫ ದಿನಗಳಿಂದ ಜಾರಿಗೆ ಬಂದಿದ್ದು, ಇದನ್ನು ಸ್ವಾಗತಿಸಿದ ವಾಹನ ಮಾಲೀಕರು ಹಾಗೂ ಪಾದಚಾರಿಗಳು, ಫುಟ್‌ಪಾತ್ ಒತ್ತುವರಿ ಇರುವುದರಿಂದ ನಾವೆಲ್ಲಿ ಸಂಚರಿಸೋಣ. ರಸ್ತೆ ಮಧ್ಯದಲ್ಲೇ ಸಂಚರಿಸಬೇಕೇ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಒತ್ತುವರಿ ತೆರವಿನಿಂದ ಪಾದಚಾರಿಗಳಿಗೆ ಅನುಕೂಲವಾಗಲಿದೆ.
ತೆರವು ಕಾರ್ಯಾಚರಣೆ ವೇಳೆ ಪೊಲೀಸ್ ಇನ್ ಸ್ಪೆಕ್ಟರ್ ರವೀಂದ್ರ, ಸಂಚಾರ ಪೊಲೀಸ್ ಠಾಣೆ ಎಸ್‌ಐ ಕೃಷ್ಣಕಾಂತ ಕೋಳಿ, ಎ ಎಸ್‌ಐ ವಸಂತ , ಶ್ರೀನಿವಾಸ್ ಮೂರ್ತಿ, ಮಂಜುನಾಥ್, ಮಹದೇವ, ನಗರಸಭೆ ಆಯುಕ್ತ ವಿಜಯ್, ಮೈತ್ರಾ ದೇವಿ, ರೇಖಾ, ಪಾತಲಿಂಗಪ್ಪ, ಹೇಮಂತ ಕುಮಾರ್, ಶಮಂತ್, ಆದರ್ಶ, ವಸಂತ್ ಮಹೇಶ, ಪ್ರೀತಂ, ಮಹೇಶ ಇತರರು ಹಾಜರಿದ್ದರು.
” ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಡಿಸಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರ ಸೂಚನೆಯಂತೆ ಫುಟ್‌ಪಾತ್ ಮತ್ತು ಪೆಟ್ಟಿಗೆ ಅಂಗಡಿಗಳ ತೆರವು ಕಾರ್ಯ ಆರಂಭಿಸಿದ್ದು, ನಗರದಾದ್ಯಂತ ಇರುವ ಅನಧಿಕೃತ ಪೆಟ್ಟಿಗೆ ಅಂಗಡಿಗಳು ಹಾಗೂ ಫುಟ್‌ಪಾತ್ ಒತ್ತುವರಿಯನ್ನು ಈ ಬಾರಿ ಪೂರ್ಣವಾಗಿ ತೆರವುಗೊಳಿಸಲಾಗುವುದು.”
-ವಿಜಯ್, ನಗರಸಭೆ ಆಯುಕ್ತ
” ತೆರವಿನ ನಂತರ ಮತ್ತೆ ಅದೇ ಸ್ಥಳಕ್ಕೆ ಆಗಮಿ ಸುವ ಮಾತೇ ಇಲ್ಲ. ಅದಕ್ಕಾಗಿಯೇ ಸಂಚಾರ ನಿಯಮದ ಉಲ್ಲಂಘನೆಯ ನೋಟಿಸ್ ನೀಡಿ ಈ ಬಾರಿ ತೆರವುಗೊಳಿಸುತ್ತಿದ್ದೇವೆ. ಮತ್ತೆ ಒತ್ತುವರಿ ಮುಂದುವರಿದರೆ ಉಗ್ರ ಕ್ರಮ ಕೈಗೊಳ್ಳಲಾಗುವುದು.”
-ಕೃಷ್ಣಕಾಂತ್ ಕೋಳಿ, ಎಸ್‌ಐ ಸಂಚಾರ ಪೊಲೀಸ್ ಠಾಣೆ




