ಮೈಸೂರಿನ ಕೆಆರ್‌ಎಸ್ ರಸ್ತೆಯ ಹೆಸರು ಬದಲಾವಣೆಯ ವಿವಾದ ವಿಸ್ತೃತಗೊಳ್ಳುತ್ತಿದೆ. ಈ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಒಂಟಿಕೊಪ್ಪಲಿನ ಶ್ರೀ ಲಕ್ಷಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ವರ್ತುಲ ರಸ್ತೆಯ ರಾಯಲ್ ಇನ್ ಹೋಟೆಲ್‌ವರೆಗಿನ ರಸ್ತೆಗೆ ನಾಮಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ. ಆದರೆ, ಹಿಂದಿನಿಂದಲೂ ಈ ರಸ್ತೆಗೆ ‘ಪ್ರಿನ್ಸೆಸ್ ರೋಡ್’ ಎನ್ನಲಾಗುತ್ತಿದೆ ಎಂಬ ಮಾತಿದೆ.
ವಿಶೇಷವೆಂದರೆ ವಿಪಕ್ಷಗಳ ನಾಯಕರು, ಮುಖಂಡರು ಕೂಡ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಜಾತ್ಯತೀತ ಜನತಾದಳದ ನಾಯಕರೂ ಆದ ಶಾಸಕ ಜಿ. ಟಿ. ದೇವೇಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯ ಅವರ ಹೆಸರಿಡಲು ಆಸಕ್ತಿ ತೋರಿಸಿ ದ್ದಾರೆ. ಪ್ರತಾಪ್ ಸಿಂಹ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಟ್ಟರೆ ತಪ್ಪೇನು ಅಂತ ಪ್ರಶ್ನೆ ರೂಪದಲ್ಲಿ ಬೆಂಬಲ ನೀಡಿದ್ದರೆ, ಜಿ. ಟಿ. ದೇವೇಗೌಡ ಅವರು ಈ ಮೊದಲು ಪ್ರಿನ್ಸೆಸ್ ಅವರ ಹೆಸರನ್ನು ಇಟ್ಟಿರದಿದ್ದರೆ, ಸಿದ್ದರಾiಯ್ಯ ಅವರ ಹೆಸರನ್ನು ನಾಮಕರಣ ಮಾಡಬಹುದು ಎಂದು ಹೇಳಿದ್ದಾರೆ.
ಆದರೆ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಸ್ತೆಗೆ ಹಿಂದೆಯೇ ಪ್ರಿನ್ಸೆಸ್ ಎಂದು ನಾಮಕರಣ ಮಾಡಲಾಗಿದೆ. ಅದನ್ನು ಬದಲಾವಣೆ ಮಾಡು ವುದು ಸರಿಯಲ್ಲ ಎಂದು ನೇರವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೋದರಿ ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿ ಕಾಯಿಲೆ(ಕ್ಷಯ ರೋಗ)ಯಿಂದ ಮೃತಪಟ್ಟಿರುತ್ತಾರೆ. ಈ ರೀತಿ ಯಾರಿಗೂ ಆಗಬಾರದು. ಮುಂದೆಯಾದರೂ ಈ ಕಾಯಿಲೆಯಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಕಾರಣದಿಂದ ನಾಲ್ವಡಿ ಅವರು ಸೋದರಿಯ ಸ್ಮರಣಾರ್ಥ ಪಿಕೆಟಿಬಿ ಆಸ್ಪತ್ರೆ ನಿರ್ಮಿಸುತ್ತಾರೆ. ಹಾಗಾಗಿ ಆ ರಸ್ತೆಗೆ ಪ್ರಿನ್ಸೆಸ್ ಅಥವಾ ರಾಜಕುಮಾರಿ ಎಂಬ ಹೆಸರು ಬಂದಿದೆ ಎಂಬುದು ಯದುವೀರ್ ಅವರ ಪ್ರತಿಪಾದನೆಯಾಗಿದೆ. ಒಂದು ವೇಳೆ ಹೆಸರು ಬದಲಾವಣೆ ಮಾಡಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆಯ ಮಾತುಗಳನ್ನೂ ಹೇಳಿದ್ದಾರೆ.
ಇತ್ತ ಸಿದ್ದರಾಮಯ್ಯ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ಕೆಲ ಶಾಸಕರು, ಮುಖಂಡರು ಪ್ರಿನ್ಸೆಸ್ ಎಂಬುದಾಗಿ ನಾಮಕರಣ ಮಾಡಿರುವುದಕ್ಕೆ ಯಾವುದೇ ಅಽಕೃತ ದಾಖಲೆಗಳಿಲ್ಲ. ಈ ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಅನುಕೂಲಕ್ಕಾಗಿ ೧೨ ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ. ಮೈಸೂರು ಮತ್ತು ಈ ಜಿಲ್ಲೆಯ ಆಸುಪಾಸಿನ ಒಟ್ಟು ೫ ಜಿಲ್ಲೆಗಳ ೧೭ ಲಕ್ಷ ಜನರಿಗೆ ಈ ಆಸ್ಪತ್ರೆಗಳ ಪ್ರಯೋಜನ ಸಿಗುತ್ತಿದೆ. ಹಾಗಾಗಿ ಈ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂಬುದಾಗಿ ನಾಮಕರಣ ಮಾಡಬೇಕು. ಅಲ್ಲದೆ, ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಸಮರ್ಥನೆಗಿಳಿದಿದ್ದಾರೆ.
ಬಿಜೆಪಿಯ ಕೆಲ ನಾಯಕರು, ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಹೆಸರನ್ನೂ ತೇಲಿಬಿಟ್ಟಿದ್ದಾರೆ. ಒಂದು ಹೊಸ ಕಾರ್ಯಕ್ರಮ ಅಥವಾ ಯೋಜನೆಯನ್ನು ಜಾರಿಗೆ ತರಲು ಅಥವಾ ಬದಲಾವಣೆ ಮಾಡಬೇಕಾದರೆ ಸಾರ್ವಜನಿಕವಾಗಿ ಚರ್ಚೆಗೆ ಒಳಪಡುವುದು ಪ್ರಜಾತಂತ್ರ ವ್ಯವಸ್ಥೆಯ ದ್ಯೋತಕವಾಗಿದೆ. ಇದು ರಸ್ತೆಗೆ ನಾಮಕರಣ ವಿಚಾರದಲ್ಲೂ ನಡೆಯುತ್ತಿರು ವುದು ಸೂಕ್ತವಾಗಿದೆ. ಆದರೆ, ಈ ಮೊದಲೇ ಹೇಳಿ ದಂತೆ ಇದು ಅತ್ಯಂತ ಸೂಕ್ಷ ವಿಚಾರ. ಪ್ರಮುಖವಾಗಿ ಇಲ್ಲಿ ವಾಸ್ತವ ಏನು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಕೆಆರ್‌ಎಸ್ ರಸ್ತೆಗೆ ನಾಮ ಕರಣದ ಪರ-ವಿರೋಧ ಇರುವವರೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಯಾವುದೇ ಪೂರ್ವಗ್ರಹ ಪೀಡಿತರಾಗದೆ ಅಭಿಪ್ರಾಯ ವ್ಯಕ್ತಪಡಿಸಬೇಕಿದೆ.
ಹಾಗಾಗಿ ‘ಪ್ರಿನ್ಸೆಸ್ ರೋಡ್’ ಎಂಬುದಕ್ಕೆ ಅಂದಿನ ಪುರಸಭೆ ಅಥವಾ ನಗರಸಭೆ, ಇಂದಿನ ನಗರಪಾಲಿಕೆಯಲ್ಲಿ ನಿರ್ಣಯ ಕೈಗೊಂಡಿರುವುದಕ್ಕೆ ದಾಖಲೆಗಳನ್ನು ಶೋಧಿಸಬೇಕು. ಅದು ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅದರಲ್ಲಿಯೂ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಬೇಕು ಎನ್ನುವವರು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಅವರು ಆಶಿಸುತ್ತಿರುವಂತೆ ರಸ್ತೆಗೆ ಹೆಸರಿಟ್ಟರೆ, ಮುಂದಿನ ಸಾಧಕ- ಬಾಧಕಗಳ ಬಗ್ಗೆಯೂ ಚಿಂತಿಸಬೇಕು. ಈಗಾಗಲೇ ಮೈಸೂರು ರಾಜಮನೆತನದ ರಾಜಕುಮಾರಿ ಹೆಸರು ಇದ್ದು, ಅದನ್ನು ಬದಲಾವಣೆ ಮಾಡುವುದರ ಪರಿಣಾಮ ಹೇಗಿರಬಹುದು ಎಂಬುದರ ಆಲೋಚನೆಯೂ ಬೇಕು. ಅಲ್ಲದೆ, ಈ ಎಲ್ಲ ಗೊಂದಲಗಳನ್ನು ನಿವಾರಿಸಿಯೇ ನಿರ್ಧಾರವನ್ನು ಕೈಗೊಳ್ಳುವುದು ಸೂಕ್ತ.





