Mysore
25
broken clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಮೈಸೂರು ಆಯ್ತು; ಈಗ ಜಿಲ್ಲೆಗೂ ಹಬ್ಬಿದ ಮಾದಕ ವಸ್ತುವಿನ ಘಾಟು

ಎಚ್.ಎಸ್.ದಿನೇಶ್ ಕುಮಾರ್

ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಿಲ್ಲದ ದಂಧೆ; ಪ್ರತಿ ಬಾರಿಯೂ ದಂಧೆಗೆ ಹೊಸ ದಾರಿ ಹುಡುಕುವ ದುರುಳರು

ಮೈಸೂರು: ನಗರ ಹಾಗೂ ಜಿಲ್ಲಾ ಪೊಲೀಸರ ಸತತ ಕಾರ್ಯಾಚರಣೆ ಹಾಗೂ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಮೈಸೂರು ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾತ್ರ ನಿಂತಿಲ್ಲ. ಇದಕ್ಕೆ ಸಾಕ್ಷಿ ಹುಣಸೂರು ಪ್ರಕರಣ. ಕದ್ದು ಮುಚ್ಚಿ ಮಾದಕ ವಸ್ತುಗಳನ್ನು ತರುವ ಖದೀಮರಿಗೆ ಪೊಲೀಸರ ಮೇಲೆ ಭಯವೇ ಇಲ್ಲವೇನೋ ಎಂಬಂತಾಗಿದೆ.

ಕಳೆದ ೨ ವರ್ಷಗಳ ಅವಧಿಯಲ್ಲಿ ನಗರ ಪೊಲೀಸರು ವಶಪಡಿಸಿಕೊಂಡ ಗಾಂಜಾ ಪ್ರಮಾಣ ೨೦೦ ಕೆಜಿಗೂ ಹೆಚ್ಚು. ಬಂಧಿಸಲ್ಪಟ್ಟವರು ಬರೋಬ್ಬರಿ ೧೧೦ ಮಂದಿ…! ಇನ್ನು ಜಿಲ್ಲಾ ಪೊಲೀಸರು ಕೂಡ ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ ಗಾಂಜಾ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ಪ್ರಕರಣಗಳಲ್ಲಿ ೬೭ ಮಂದಿಯನ್ನು ಬಂಧಿಸಿದ್ದಾರೆ.

ಈ ಹಿಂದೆ ನಗರ ಪ್ರದೇಶದಲ್ಲಿಯೇ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆ ಹೆಚ್ಚಾಗಿತ್ತು. ಇದೀಗ ನಗರ ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ದುಷ್ಕರ್ಮಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ, ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಿರುವುದು ಸಂತಸದ ವಿಚಾರ.

ಗಾಂಜಾ ಮಾರಾಟ ಹಾಗೂ ಅಕ್ರಮ ಬಳಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪೊಲೀಸರ ಭಯದ ನಡುವೆಯೂ ಹಣದಾಸೆಗಾಗಿ ಕೆಲವರು ಗಾಂಜಾ ಮಾರಾಟವನ್ನು ಕಸುಬಾಗಿಸಿಕೊಂಡಿದ್ದಾರೆ. ಅವರ ಹಣದಾಸೆಗೆ ಯುವ ಜನರು ತಪ್ಪುತ್ತಿರುವುದು ಮಾತ್ರ ಸುಳ್ಳಲ್ಲ.

ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಗಾಂಜಾ ಬಳಕೆ ಹೆಚ್ಚು : ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿಯೇ ಗಾಂಜಾ ಬಳಕೆ ಹೆಚ್ಚು ಎಂದು ಪೊಲೀಸರು ಹೇಳುತ್ತಾರೆ. ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಕೊಠಡಿಗಳು ಅಥವಾ ಮನೆ ಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಾರೆ. ಅಂತಹವರು ಬಹುಬೇಗನೆ ಇಂತಹ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎನ್ನುತ್ತಾರೆ. ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ದುಷ್ಕರ್ಮಿಗಳು ತರುತ್ತಾರೆ. ಕೆಲ ಹಳ್ಳಿಗಳಲ್ಲಿ ಗುಟ್ಟಾಗಿ ಗಾಂಜಾ ಬೆಳೆಯುತ್ತಾರೆ. ಚೆಂಡು ಹೂವಿನ ತೋಟ ಅಥವಾ ಮನೆಯ ಹಿತ್ತಲಿನಲ್ಲಿ ಬೆಳೆಯುವವರ ಸಂಖ್ಯೆ ಹೆಚ್ಚು. ಅಂತಹವರು ಗಾಂಜಾ ಮಾರಾಟಗಾರರ ಜೊತೆ ಸಂಪರ್ಕ ಹೊಂದಿರುತ್ತಾರೆ.

ಕೆಜಿಗೆ ೮ರಿಂದ ೧೦ ಸಾವಿರ ರೂ.ಗಳಿಗೆ ಮಾರಾಟ ಮಾಡಿ ಹೋಗುತ್ತಾರೆ. ಖರೀದಿಸಿದ ಪೆಡ್ಲರ್‌ಗಳು ಗಾಂಜಾವನ್ನು ಬಿಸಿಲಿನಲ್ಲಿ ಒಣಗಿಸಿ ಹದಗೊಳಿಸಿ ೨೦ ಗ್ರಾಂನಿಂದ ಹಿಡಿದು ೧೦೦ ಗ್ರಾಂವರೆಗೆ ಸಣ್ಣ ಪೊಟ್ಟಣಗಳನ್ನಾಗಿ ತಯಾರಿಸುತ್ತಾರೆ. ೧೦೦ ಗ್ರಾಂ ಗಾಂಜಾ ಬೆಲೆ ಇಂದು ಮಾರುಕಟ್ಟೆಯಲ್ಲಿ ೪ ಸಾವಿರ ರೂ. ಇದೆ.ಇನ್ನು ಎಂಡಿಎಂಎ ಹಾಗೂ ಇನ್ನಿತರ ಮಾದಕ ವಸ್ತುಗಳ ಮಾರಾಟಕ್ಕೆ ನಗರದ ಕಾಲೇಜುಗಳೇ ಟಾರ್ಗೆಟ್. ನಗರದ ಪ್ರತಿಷ್ಠಿತ ಕಾಲೇಜುಗಳೇ ದುಷ್ಕರ್ಮಿಗಳ ತಾಣ. ಕಾಲೇಜು ಮುಂದೆ ಅಡ್ಡಾಡುವ ಪೆಡ್ಲರ್‌ಗಳು ಅಲ್ಲಿನ ಟೀ ಶಾಪ್, ಸಣ್ಣ ಹೋಟೆಲ್ ಕೆಲಸಗಾರರ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಾರೆ. ವಿದ್ಯಾರ್ಥಿಗಳೇ ಏಜೆಂಟ್: ಇದು ಮಾತ್ರ ಆತಂಕಕಾರಿ ಬೆಳವಣಿಗೆ. ಒಮ್ಮೆ ಮಾದಕ ವಸ್ತು ಸೇವನೆಯ ಚಟಕ್ಕೆ ಬೀಳುವ ವಿದ್ಯಾರ್ಥಿಯು ತನ್ನ ಸಹಪಾಠಿಯನ್ನೂ ಚಟಕ್ಕೆ ಬೀಳಿಸುವ ಯತ್ನ ಮಾಡುತ್ತಾನೆ. ಅದು ಯಶಸ್ವಿಯಾದಲ್ಲಿ ಮತ್ತೊಬ್ಬ, ಮಗದೊಬ್ಬ ಎಂಬಂತೆ ಚಟವನ್ನು ಅಂಟಿಸಿಕೊಳ್ಳುತ್ತಾರೆ. ಈ ವೇಳೆ ಪೆಡ್ಲರ್ ಜೊತೆ ನಂಟು ಬೆಳೆಸಿಕೊಳ್ಳುವ ವಿದ್ಯಾರ್ಥಿಯೇ ಗಾಂಜಾ ಅಥವಾ ಇನ್ನಿತರ ಮಾದಕ ವಸ್ತು ಮಾರಾಟಕ್ಕೆ ಮಧ್ಯವರ್ತಿಯಾಗುತ್ತಾನೆ.

ಪೊಲೀಸರ ನಿತರಂತರ ಕಾರ್ಯಾಚರಣೆ: ಗಾಂಜಾ ಮಾರಾಟ ಹಾಗೂ ಸೇವನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಕಳೆದ ಆರು ತಿಂಗಳಿನಿಂದ ಸತತ ಕಾರ್ಯಾಚರಣೆ ನಡೆಸುತ್ತಿದೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಮಟ್ಟಹಾಕಲು ನಗರ ಸೆನ್ ಠಾಣೆಯ ಪೊಲೀಸರು, ಸಿಸಿಬಿ ಹಾಗೂ ಠಾಣಾ ಮಟ್ಟದಲ್ಲಿ ಪೊಲೀಸರು ಆಗಾಗ್ಗೆ ಕಾರ್ಯಾಚರಣೆ ನಡೆಸುವ ಮೂಲಕ ಮಾದಕ ವಸ್ತು ಮಾರಾಟಗಾರರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರು ಕೂಡ ಪೊಲೀಸರಿಗೆ ಸಹಕರಿಸುತ್ತಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಹಾಗೂ ಬಳಸುವವರ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಿದ್ದಾರೆ. ಈ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಂದ ಬಂದ ಮಾಹಿತಿಯನ್ನು ಆಧರಿಸಿ ೧೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

” ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ಹಾಗೂ ಸೇವಿಸುವವರ ಬಗ್ಗೆ ಇಲಾಖೆ ಹದ್ದಿನ ಕಣ್ಣಿರಿಸಿದೆ. ಗಾಂಜಾ ಮಾರಾಟ ಮಾಡುವವನು ಸಿಕ್ಕಿಬಿದ್ದ ವೇಳೆ ಆತನನ್ನು ವಿಚಾರಣೆಗೊಳಪಡಿಸಿ ಅದರ ಮೂಲವನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕರೂ ನಮಗೆ ಮಾಹಿತಿ ಒದಗಿಸಿ ದಲ್ಲಿ ಅನುಕೂಲವಾಗುತ್ತದೆ. ಕಾಲೇಜು ವಿದ್ಯಾರ್ಥಿಗಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಆಗಿಂದಾಗ್ಗೆ ಕಾಲೇಜಿಗೆ ತೆರಳಿ ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆಯಬೇಕು. ಆಗ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು.”

 -ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು.

” ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಾಗ್ಗೆ ಮಾದಕ ವಸ್ತುಗಳ ಮಾರಾಟ ಪ್ರಕರಣ ಪತ್ತೆಯಾಗುತ್ತಿರುವುದು ನಿಜಕ್ಕೂ ಆತಂಕವನ್ನು ಉಂಟುಮಾಡುತ್ತದೆ. ಮಾದಕ ವಸ್ತುಗಳ ಬಳಕೆಯಿಂದ ಯುವ ಪೀಳಿಗೆ ಹಾದಿ ತಪ್ಪುತ್ತದೆ. ಒಮ್ಮೆ ಈ ಚಟಕ್ಕೆ ಬಿದ್ದಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸುಲಭದ ಕೆಲಸವಲ್ಲ. ಪೊಲೀಸರಿಂದಲೇ ಇದನ್ನು ತಡೆಗಟ್ಟಲು ಅಸಾಧ್ಯ. ನಾವುಗಳು ಕೂಡ ಪೊಲೀಸರೊಂದಿಗೆ ಕೈ ಜೋಡಿಸಿ ಈ ಪಿಡುಗಿಗೆ ಅಂತ್ಯ ಹಾಡಬೇಕು.”

-ರಾಘವೇಂದ್ರ, ವಿಜಯನಗರ ನಿವಾಸಿ

” ದಿನೇ ದಿನೇ ಡ್ರಗ್ಸ್ ಜಾಲಗಳು ಹೆಚ್ಚುತಿದ್ದು, ತೀವ್ರ ಆಘಾತವಾಗುತ್ತಿದೆ. ಸರಿಯಾದ ಕಠಿಣ ಕಾನೂನು ಕ್ರಮವಾಗುತ್ತಿಲ್ಲ. ಹಿಂದೆ ಮೈಸೂರಿನಲ್ಲಿ ಡ್ರಗ್ಸ್ ಜಾಲಗಳನ್ನು ಪತ್ತೆ ಹಚ್ಚಲಾಗಿತ್ತು. ನಗರ ಭಾಗವಲ್ಲದೇ, ಹಳ್ಳಿ ಭಾಗಗಳಿಗೂ ಇಂತಹ ಕೃತ್ಯಗಳು ವಿಸ್ತ ರಿಸುತ್ತಿರುವುದು. ಸಮಾಜವನ್ನೇ ದುಸ್ಥಿತಿಗೆ ತಳ್ಳುವ ಅಪಾಯ ಎದುರಾಗುತ್ತಿದೆ. ಹಳ್ಳಿಗಳಲ್ಲೂ ಗಾಂಜಾ ಸೇವನೆ ನಿಧಾನವಾಗಿ ಹರಡುತಿದ್ದು, ಆರಂಭದಲ್ಲೇ ಜಾಲದ ಬುಡಗಳನ್ನು ಹೆಕ್ಕಿ ಕಿತ್ತೆಸಯಬೇಕಿದೆ. ಇದರಿಂದ ಮುಂದಿನ ಪೀಳಿಗೆಯನ್ನು ಕಾಪಾಡುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯದ್ದು.”

-ಹರಿಹರ ಆನಂದ ಸ್ವಾಮಿ, ಅಧ್ಯಕ್ಷ, ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆ 

ಸ್ವತಃ ಕಾರ್ಯಾಚರಣೆಗಿಳಿದಿದ್ದ ಪೊಲೀಸ್ ಆಯುಕ್ತರು: ಕಳೆದ ಜುಲೈ ತಿಂಗಳಿನಲ್ಲಿ ನಗರದ ಎನ್.ಆರ್.ಮೊಹಲ್ಲಾ ಬಳಿ ಎಂಡಿಎಂಎ ತಯಾರಿಸುತ್ತಿದ್ದ ಶೆಡ್ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಲ್ಲದೆ ಐವರನ್ನು ಬಂಧಿಸಿದ್ದರು. ಇದರಿಂದ ಎಚ್ಚೆತ್ತಿದ್ದ ನಗರ ಪೊಲೀಸ್ ಆಯುಕ್ತರು ಸ್ವತಃ ಕಾರ್ಯಾಚರಣೆಗಿಳಿಯುವ ಮೂಲಕ ಮಾದಕ ವಸ್ತು ಮಾರಾಟಗಾರರ ವಿರುದ್ಧ ಮುಗಿಬಿದ್ದಿದ್ದರು. ನಂತರ ನಗರದ ಠಾಣಾಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುವವರು ಹಾಗೂ ಬಳಸುವವರ ಹೆಡೆಮುರಿ ಕಟ್ಟಿದ್ದರು. ಇದೀಗ ನಗರ ವ್ಯಾಪ್ತಿಯಲ್ಲಿ ಪೊಲೀಸರು ವೈದ್ಯಕೀಯ, ಇಂಜಿಯನಿಯ ರಿಂಗ್ ವ್ಯಾಸಂಗ ಮಾಡುವ ಹಾಸ್ಟೆಲ್ಗಳಿಗೆ ಆಗಾಗ್ಗೆ ಭೇಟಿ ನೀಡಿ ಕೊಠಡಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಕಾಲೇಜುಗಳ ಮುಂದೆ ಮಫ್ತಿಯಲ್ಲಿರುವ ಪೊಲೀಸರು ದಿಢೀರ್ ಭೇಟಿ ನೀಡಿ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ: ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಜಾಲವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕೂಡ ಸ್ಥಳೀಯ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಾದಕ ವಸ್ತು ಮಾರಾಟ ಮಾಡುವವರ ಹಾಗೂ ಬಳಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು. ಈ ಸಂಬಂಧ ಸರ್ಕಾರ ಯಾವುದೇ ನೆರವು ನೀಡಲು ಸಿದ್ಧ ಎಂದು ಅಽಕಾರಿಗಳಿಗೆ ಭರವಸೆ ನೀಡಿದ್ದಾರೆ. ಹೀಗಾಗಿಯೇ ಮೈಸೂರು ನಗರ ಹಾಗೂ ಜಿಲ್ಲಾ ಪೊಲೀಸರು ಮಾದಕ ವಸ್ತು ಮಾರಾಟ ಹಾಗೂ ಬಳಕೆಯ ತಡೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.

‘ವಿಮುಕ್ತಿ’ಯಿಂದ ಇಬ್ಬರ ಬಂಧನ: 

ಮಾದಕ ವಸ್ತುಗಳ ಮಾರಾಟ ಅಥವಾ ಬಳಸುವವರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ವಿಮುಕ್ತಿ ಹೆಸರಿನಲ್ಲಿ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ಇಲಾಖೆ ಮೊಬೈಲ್ ಸಂಖ್ಯೆ(೮೨೭೭೯ ೪೮೦೮೦) ನೀಡಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಅದರ ಅನ್ವಯ ಸಾರ್ವಜನಿಕರೊಬ್ಬರು ಕರೆ ಮಾಡಿ ಮಾದಕ ವಸ್ತು ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿಯ ಅನ್ವಯ ಕೇರಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ.

ಮಾದಕ ವಸ್ತು ತಡೆಗೆ ಏನು ಮಾಡಬೇಕು ?: 

* ಮಾದಕ ವಸ್ತುಗಳು ಹೆಚ್ಚು ಮಾರಾಟವಾಗುವ ಸ್ಥಳಗಳನ್ನು ಗುರುತಿಸಬೇಕು. ಅಲ್ಲಿ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕು.

* ಮಾದಕ ವಸ್ತು ಸೇವನೆಯ ಸಂಶಯ ಬಂದ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ನಿಗಾ ಇಡಬೇಕು, ಈ ಸಂಬಂಧ ಪೋಷಕರಿಗೆ ಮಾಹಿತಿ ನೀಡಬೇಕು.

* ಮಾನಸಿಕ ತಜ್ಞರಿಂದ ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಬೇಕು.

* ಹೊರ ದೇಶದ ವಿದ್ಯಾರ್ಥಿಗಳು ವಾಸಿಸುವ ಸ್ಥಳ ಹಾಗೂ ಹಾಸ್ಟೆಲ್‌ಗಳ ಮೇಲೆ ಪೊಲೀಸರು ಹಾಗೂ ನೆರೆಹೊರೆಯವರು ನಿಗಾ ವಹಿಸಬೇಕು.

* ತಿಂಗಳಿನಲ್ಲಿ ಒಮ್ಮೆಯಾದರೂ ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್ಗಳಿಗೆ ತೆರಳಿ ಆಯಾ ಠಾಣಾ ಮಟ್ಟದ ಪೊಲೀಸರು ಪರಿಶೀಲನೆ ನಡೆಸಬೇಕು.

Tags:
error: Content is protected !!