ವಿವಿ ನಿರ್ಧಾರಕ್ಕೆ ಪಿಎಚ್.ಡಿ. ಆಕಾಂಕ್ಷಿಗಳ ಆಕ್ರೋಶ
ಸಿಂಧುವಳ್ಳಿ ಸುಧೀರ
ಮೈಸೂರು: ಕಾಲೇಜು ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಿದ್ದ ಮೈಸೂರು ವಿಶ್ವವಿದ್ಯಾನಿಲಯ ಇದೀಗ ಪಿಎಚ್.ಡಿ. ಪ್ರವೇಶ ಪರೀಕ್ಷೆಗೆ ಪ್ರಸಕ್ತ ಸಾಲಿನಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿರುವುದಕ್ಕೆ ಪಿಎಚ್.ಡಿ. ಪದವಿ ಪಡೆಯಬೇಕೆಂಬ ಹಂಬಲವುಳ್ಳವರಿಂದ ಆಕ್ರೋಶ ವ್ಯಕ್ತವಾಗಿದೆ.
ಸ್ನಾತಕೋತ್ತರ ಪದವಿ ಮುಗಿಸಿದ ಬಹುತೇಕ ಗ್ರಾಮೀಣ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳೇ ಪಿಎಚ್.ಡಿ. ಪದವಿ ಪಡೆಯುವ ಇಚ್ಛೆಯನ್ನೂ ಹೊಂದಿರುತ್ತಾರೆ. ಅಲ್ಲದೆ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂತಹ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ವ್ಯಾಸಂಗ ಮಾಡಿರುತ್ತಾರೆ. ಇಂತಹ ಆಕಾಂಕ್ಷಿಗಳಿಗೆ ಪ್ರವೇಶ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರು ವುದು ಅಸಮಾಧಾನ ತಂದಿದೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ನಡೆಸುವ ಎನ್‌ಇಟಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ‘ಕೆ -ಸೆಟ್’ ಪರೀಕ್ಷೆಗಳ ಪ್ರವೇಶ ಶುಲ್ಕಕಿಂತ ಮೈಸೂರು ವಿವಿಯು ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆಗೆ ನಿಗದಿಪಡಿಸಿರುವ ಶುಲ್ಕ ದುಬಾರಿಯಾಗಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆಗೆ ಎಸ್‌ಸಿ-ಎಸ್‌ಟಿ, ಪ್ರವರ್ಗ-1 ವಿದ್ಯಾರ್ಥಿಗಳಿಗೆ 1,250 ರೂ. ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 2,500 ರೂ. ಶುಲ್ಕವನ್ನು ನಿಗದಿಪಡಿಸಿದೆ.
ಆದರೆ, ಎನ್‌ಇಟಿ, ಜೆಆರ್‌ಎಫ್ ಪರೀಕ್ಷೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 1,150 ರೂ., ಒಬಿಸಿ ಆರ್ಥಿಕವಾಗಿ ಹಿಂದುಳಿದ ವರ್ಗದ (ಇಡಬ್ಲ್ಯೂಎಸ್)ವರಿಗೆ 600 ರೂ., ಎಸ್ಸಿ-ಎಸ್‌ಟಿ ಹಾಗೂ ತೃತೀಯ ಲಿಂಗಿ ಸಮುದಾಯದ ವಿದ್ಯಾರ್ಥಿಗಳಿಗೆ 325 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ‘ಕೆ ಸೆಟ್ ಪರೀಕ್ಷೆಗೆ ಸಾಮಾನ್ಯ ವರ್ಗ, 2ಎ, 2ಬಿ, 3ಬಿ ವಿದ್ಯಾರ್ಥಿ ಗಳಿಗೆ 1,000 ರೂ., ಎಸ್ಸಿ-ಎಸ್‌ಟಿ ಮತ್ತು ಪ್ರವರ್ಗ-1 ಮತ್ತು ತೃತೀಯ ಲಿಂಗಿ ವರ್ಗದ ವಿದ್ಯಾರ್ಥಿಗಳಿಗೆ 700 ರೂ. ಶುಲ್ಕ ನಿಗದಿಪಡಿಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆಗೆ ವಿಧಿಸಿರುವ ಶುಲ್ಕಕೆ-ಸೆಟ್ ಮತ್ತು ಎನ್‌ಇಟಿ ಪರೀಕ್ಷೆಯ ಶುಲ್ಕಕ್ಕಿಂತ ದುಬಾರಿಯಾಗಿದೆ.
ಮೈಸೂರು ವಿಶ್ವವಿದ್ಯಾನಿಲಯ 2017-18ನೇ ಸಾಲಿನ ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 2,000 ರೂ., ಎಸ್ಸಿ-ಎಸ್‌ಟಿ, ಪ್ರವರ್ಗ-1 ವಿದ್ಯಾರ್ಥಿಗಳಿಗೆ 750 ರೂ. ಶುಲ್ಕ ನಿಗದಿಪಡಿಸಿತ್ತು. ಹಾಗೆಯೇ 2020-21 ನೇ ಸಾಲಿನ ಪಿಎಚ್.ಡಿ, ಪ್ರವೇಶಾತಿ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 1,000 ರೂ. ಮತ್ತು ಎಸ್‌ಸಿ-ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 400 ರೂ. ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿತ್ತು.
ಗ್ರಾಮೀಣ ಭಾಗದ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣದವರೆಗೆ ಓದಿಸುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ. ಶುಲ್ಕ ಹೆಚ್ಚಳ ಮಾಡಿರುವುದು ಆತಂಕಕಾರಿ ವಿಚಾರ.
ಐ.ಎಂ.ಸಿಂಧು, ಸ್ನಾತಕೋತ್ತರ ಪದವೀಧರರು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿವಿ.
ನಾನು ಕಳೆದ ವರ್ಷ ಮೈಸೂರು ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದು, ಪಿಎಚ್.ಡಿ. ಪದವಿ ಪಡೆಯುವ ಆಸೆ ಇದೆ. ಆದರೆ ಮೈಸೂರು ವಿವಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದ್ದು, ಹಣ ಇಲ್ಲದೆ ಪರದಾಡುತ್ತಿದ್ದೇನೆ.
ರಂಜಿತ್, ಸ್ನಾತಕೋತ್ತರ ಪದವೀಧರ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿವಿ.
ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದಲೇ ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆ ನಡೆಸಲು ತೀರ್ಮಾಸಿದ್ದೇವೆ. ಪ್ರಶ್ನೆ ಪತ್ರಿಕೆ ತಯಾರು, ಪರೀಕ್ಷೆ ನಡೆಸುವ ಮತ್ತು ಮೌಲ್ಯಮಾಪನಕ್ಕೆ ಬೇರೆ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರನ್ನು ಕರೆಸುತ್ತೇವೆ. ಈ ಎಲ್ಲಾ ಖರ್ಚು ವೆಚ್ಚಗಳನ್ನು ವಿವಿಯೇ ಭರಿಸಬೇಕಿರುವ ಕಾರಣ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
• ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈಸೂರು ವಿವಿ.
64 ವಿಷಯಗಳಿಗೆ ಸಂಬಂಧಿಸಿದಂತೆ ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆ ನಡೆಸಲಿದ್ದೇವೆ. ಪ್ರತಿಯೊಂದು ವಿಷಯಕ್ಕೂ ಸಂಬಂಧಿಸಿದ ಪರಿಣತ ಪ್ರಾಧ್ಯಾಪಕರನ್ನು ಬೇರೆ ವಿವಿಯಿಂದ ಕರೆಯಿಸಬೇಕಿರುವ ಕಾರಣ ಹೊರೆ ಬೀಳುತ್ತದೆ. ಹಾಗಂತ ಪರೀಕ್ಷೆ ನಡೆಸದೇ ಇರಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಅಗತ್ಯವಿರುವ ಕಾರಣ ಶುಲ್ಕ ಹೆಚ್ಚಳ ಮಾಡಲಾಗಿದೆ.
ಪ್ರೊ.ಎನ್.ನಾಗರಾಜು, ಪರೀಕ್ಷಾಂಗ ಕುಲಸಚಿವರು, ಮೈಸೂರು ವಿವಿ.