Mysore
30
clear sky

Social Media

ಸೋಮವಾರ, 23 ಫೆಬ್ರವರಿ 2026
Light
Dark

ಆನ್‌ಲೈನ್‌ ಸೇವೆಗೆ ಸಿದ್ಧವಾದ ಮೈವಿವಿ ಪ್ರಸಾರಾಂಗ

ಕೆ.ಎಂ ಅನುಚೇತನ್

ಮೊದಲ ಬಾರಿಗೆ ತನ್ನ ಪುಸ್ತಕಗಳನ್ನು ಪ್ರಪಂಚದಾದ್ಯಂತ ತಲುಪಿಸಲು ಕಾರ್ಯಸನ್ನದ್ಧ 

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಶತಮಾನ ಪೂರೈಸಿ, ದೇಶದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಈಗ ಮತ್ತೊಂದು ದೃಢ ಹೆಜ್ಜೆ ಇಟ್ಟಿದ್ದು, ವಿವಿಯ ಭಾಗವಾಗಿರುವ ಪ್ರಸಾರಾಂಗವು ತನ್ನ ಪುಸ್ತಕಗಳನ್ನು ಪ್ರಪಂಚದಾದ್ಯಂತ ತಲುಪಿಸಲು ಮೊದಲ ಬಾರಿಗೆ ಆನ್‌ಲೈನ್ ಮೂಲಕ ಸೇವೆ ನೀಡಲು ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಆನ್‌ಲೈನ್ ಸೇವೆಯ ಪ್ರಸಾರಾಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ವಿವಿಯು ೧೯೩೩ರ ಮೇ ೨೨ರಲ್ಲಿ ಪ್ರಸಾರಾಂಗ ಸ್ಥಾಪಿಸಿತ್ತು. ಇದು ದೇಶದ ಮೊದಲ ಪ್ರಸಾರಾಂಗ ಎಂಬ ಹೆಚ್ಚುಗಾರಿಕೆ ಹೊಂದಿದೆ. ದೇಶದಾದ್ಯಂತ ಹಲವಾರು ವಿಶ್ವ ವಿದ್ಯಾನಿಲಯಗಳು ತಮ್ಮದೇ ಪ್ರಸಾರಾಂಗಗಳನ್ನು ಹೊಂದಿದ್ದರೂ ಮೈಸೂರು ವಿವಿಯ ಪ್ರಸಾರಾಂಗ ಹೆಚ್ಚು ಕಾರ್ಯಪ್ರವೃತ್ತವಾಗಿದೆ. ಪ್ರಸಾರಾಂಗವು ಪುಸ್ತಕಗಳನ್ನು ಖರೀದಿಸುವವರಿಗೆ ನೇರವಾಗಿ ಅಲ್ಲದೇ, ಆನ್‌ಲೈನ್ ಮೂಲಕವೂ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವುದರಿಂದ ಓದುಗರು ಅನಾಯಾಸ ವಾಗಿ ಮನೆ ಬಾಗಿಲಿಗೆ ಪ್ರಸಾರಾಂಗದ ಪುಸ್ತಕವನ್ನು ತರಿಸಿಕೊಳ್ಳ ಬಹುದಾಗಿದೆ.

ದೇಶದಲ್ಲೇ ಮೊದಲ ಆನ್‌ಲೈನ್ ಸೇವೆ: ಪ್ರಸಾರಾಂಗ ಇದೇ ಮೊದಲ ಬಾರಿಗೆ ಪುಸ್ತಕ ಮಾರಾಟವನ್ನು ಆನ್‌ಲೈನ್‌ನಲ್ಲಿ ನಡೆಸಲು ತಯಾರಿ ನಡೆಸುತ್ತಿದ್ದು, ಈ ಸೇವೆಯನ್ನು ಪ್ರಪಂಚದಾದ್ಯಂತ ಒದಗಿಸಲು ವಿವಿ ಮುಂದಾಗಿದೆ.ಹಾಗಾಗಿ ಇನ್ನು ಮುಂದೆ ವಿದೇಶಗಳಲ್ಲೂ ಪ್ರಸಾರಾಂಗದ ಪುಸ್ತಕ ಖರೀದಿ ಮಾಡಬಹುದು ಎಂದು ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು ತಿಳಿಸಿದ್ದಾರೆ.

೧ ರೂ.ನಿಂದ ೬ ಸಾವಿರ ರೂ. ದರದ ಪುಸ್ತಕ ಲಭ್ಯ: ಈಗಾಗಲೇ ಪ್ರಸಾರಾಂಗ ವಿಶ್ವವಿಖ್ಯಾತ ಸಾಹಿತಿಗಳ ಪುಸ್ತಕಗಳನ್ನು ಮುದ್ರಿಸಿದೆ. ಮೈಸೂರು ವಿವಿಯಿಂದ ಈವರೆಗೂ ೯ ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು, ೨೮೦೦ಕ್ಕೂ ಶೀರ್ಷಿಕೆ ಆಧಾರಿತ ಪುಸ್ತಕಗಳು ಪ್ರಕಟಗೊಂಡಿವೆ. ವಿಶ್ವಕೋಶ, ಶಬ್ದ ಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ- ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ, ಕನ್ನಡ ಜಾನಪದ ಪುಸ್ತಕಗಳು, ಕನ್ನಡ ವಿಶ್ವಕೋಶ, ಜ್ಞಾನ ಪೀಠ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ದ.ರಾ.ಬೇಂದ್ರೆ, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರರ ಪುಸ್ತಕಗಳು, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಸ್ವಾತಂತ್ರ್ಯಹೋರಾಟಗಾರರ ಪುಸ್ತಕಗಳು, ಸಾಧಕರು, ವಿಜ್ಞಾನ, ಸಂಗೀತ, ಶೈಕ್ಷಣಿಕ, ಪಠ್ಯಪುಸ್ತಕಗಳು ಸೇರಿದಂತೆ ಎಲ್ಲ ಕ್ಷೇತ್ರದ ಪುಸ್ತಕಗಳು ದೊರೆಯಲಿವೆ.

ಮೈಸೂರು ವಿವಿ ಪ್ರಾಧ್ಯಾಪಕರು, ಸಂಶೋಧಕರು ಸಂಶೋಧನೆ ನಡೆಸಿ ಪ್ರಕಟಗೊಳಿಸಿರುವ ಪುಸ್ತಕಗಳು ಲಭ್ಯವಿವೆ. ಇದರಲ್ಲಿ ೧ ರೂ.ನಿಂದ ಹಿಡಿದು ೬ ಸಾವಿರ ರೂ.ಗಳಿಗೂ ಹೆಚ್ಚಿನ ಬೆಲೆಯ ಪುಸ್ತಕಗಳು ದೊರೆಯಲಿವೆ. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.

ಖರೀದಿ ಹೇಗೆ: ಈಗಾಗಲೇ ಪ್ರಸಾರಾಂಗ, ಆನ್‌ಲೈನ್ ಮೂಲಕ ಪುಸ್ತಕ ಖರೀದಿಗೆ ವೆಟ್ ಸೈಟ್ ರಚನೆ ಮಾಡಿದ್ದು, ಪ್ರಸಾರಾಂಗ ವೆಬ್ ಸೈಟ್‌ನಲ್ಲಿ ಪುಸ್ತಕಗಳ ಹೆಸರು, ಅದರ ಬೆಲೆ ನಮೂದಿಸಲಾಗುತ್ತದೆ. ಗ್ರಾಹಕರು ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿ ಬಳಿಕ ತಮ್ಮ ಸಂಪೂರ್ಣ ವಿಳಾಸ, ವಿವರವನ್ನು ಭರ್ತಿ ಮಾಡಬೇಕು. ನಂತರ ಅಂಚೆ ಕಚೇರಿ, ಕೊರಿಯರ್ ಸೇವೆಗಳ ಮೂಲಕ ಗ್ರಾಹಕರಿಗೆ ಪುಸ್ತಕವನ್ನು ಅವರ ವಿಳಾಸಕ್ಕೆ ತಲುಪಿಸಲಾಗುತ್ತದೆ.

ಖರೀದಿ ವೇಳೆಯಲ್ಲೇ ಸ್ಥಳಕ್ಕೆ ಅನುಗುಣವಾಗಿ ಪುಸ್ತಕದ ರಫ್ತಿನ ವೆಚ್ಚವನ್ನು ವಿಧಿಸಲಾಗುತ್ತದೆ. ಇದರಿಂದ ದೂರದ ಊರುಗಳಿಂದ ಪುಸ್ತಕ ಖರೀದಿಗಾಗಿ ಪ್ರಸಾರಾಂಗಕ್ಕೆ ಭೇಟಿ ನೀಡುವವರ ಸಮಯ, ಪ್ರಯಾಣದ ಹಣ ಉಳಿತಾಯವಾಗಲಿದೆ ಎನ್ನುತ್ತಾರೆ ಪ್ರಸಾರಾಂಗದ ನಿರ್ದೇಶಕರು. ಶೀಘ್ರದಲ್ಲಿ ವೆಬ್‌ಸೈಟ್ ಲೋಕಾರ್ಪಣೆ ಗೊಳ್ಳಲಿದ್ದು, ಹೆಚ್ಚಿನ ಮಾಹಿತಿ ದೊರೆಯಲಿದೆ.

” ಆನ್‌ಲೈನ್ ಸೇವೆಯಲ್ಲಿ ಪುಸ್ತಕ ಮಾರಾಟ ಮಾಡಲು, ೩ ವರ್ಷಗಳಿಂದ ಸಿದ್ಧತೆ ನಡೆಸಲಾಗಿತ್ತು, ಶೀಘ್ರವೇ ಯೋಜನೆ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯ ಹೆಚ್ಚು ಕಾರ್ಯಮಗ್ನವಾಗಿದೆ. ಇದು ದೇಶದ ಮೊದಲ ಆನ್‌ಲೈನ್ ಪುಸ್ತಕ ಮಾರಾಟ ಪ್ರಸಾರಾಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.”

ಡಾ.ನಂಜಯ್ಯ ಹೊಂಗನೂರು, ಪ್ರಸಾರಾಂಗ ನಿರ್ದೆಶಕ, ಮೈಸೂರು ವಿವಿ.

” ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಇದೊಂದು ಅತ್ಯುತ್ತಮ ಯೋಜನೆ. ಇದರಿಂದ ಒದುಗರಿಗೆ ಅಪಾರ ಅನುಕೂಲವಾಗಲಿದೆ. ಮೈಸೂರು ವಿವಿಯ ಘನತೆ ಹೆಚ್ಚಲಿದೆ. ಈಗಾಗಲೇ ಇದರ ಪೂರ್ವ ಸಿದ್ಧತೆ ನಡೆಯುತಿದ್ದು, ವೆಬ್‌ಸೈಟ್‌ನಲ್ಲಿ ಮತ್ತಷ್ಟು ಬದಲಾವಣೆ ಹಾಗೂ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಿದ್ದೇವೆ.”

ಪ್ರೊ.ಎನ್.ಲೋಕನಾಥ್, ಕುಲಪತಿ, ಮೈಸೂರು ವಿವಿ.

Tags:
error: Content is protected !!