Mysore
17
scattered clouds

Social Media

ಭಾನುವಾರ, 11 ಜನವರಿ 2026
Light
Dark

ಮೈಸೂರು ವಿವಿ: ಪಿಎಚ್.ಡಿ.ಗೆ ಬಾಗಿಲು ಮುಚ್ಚುವ ಆತಂಕ

ಸಿಂಧುವಳ್ಳಿ ಸುಧೀರ

ವಿವಿಯಲ್ಲಿ ಖಾಯಂ ಪ್ರಾಧ್ಯಾಪಕರ ಕೊರತೆ; ಮಾರ್ಗದರ್ಶಕರ ಹುಡುಕಾಟದಲ್ಲಿ ಆಕಾಂಕ್ಷಿಗಳು; ಪಿಎಚ್.ಡಿ. ಪದವಿ ಕಾಲಾವಕಾಶ ಮುಗಿಯುವ ಆತಂಕದಲ್ಲಿ ಹಲವರು

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಖಾಯಂ ಪ್ರಾಧ್ಯಾಪಕರ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ಆದ್ದರಿಂದ ಕೆ-ಸೆಟ್, ಎನ್‌ಇಟಿ, ಜೆಆರ್‌ಎ- ಮತ್ತು ಪಿಎಚ್.ಡಿ. ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿ ವ್ಯಾಸಂಗಕ್ಕೆ ಅವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಭವಿಷ್ಯ ಮಂಕಾಗುವ ಆತಂಕದಲ್ಲಿದ್ದಾರೆ.

ಕೆ-ಸೆಟ್, ಎನ್‌ಇಟಿ, ಜೆಆರ್ ಎಫ್ ಪರೀಕ್ಷೆಗಳಲ್ಲಿ ತಮ್ಮ ಐಚ್ಛಿಕ ವಿಷಯದಲ್ಲಿ ಉತ್ತೀರ್ಣರಾಗಿ ರುವ ವಿದ್ಯಾರ್ಥಿಗಳು ೨ ವರ್ಷದ ಒಳಗೆ ಯಾವುದಾರೊಂದು ವಿಶ್ವ ವಿದ್ಯಾನಿಲಯದಲ್ಲಿ ತಾವು ಉತ್ತೀರ್ಣಗೊಂಡಿರುವ ವಿಷಯದ ಪ್ರಾಧ್ಯಾಪಕರ ಮಾರ್ಗದರ್ಶನದಡಿಯಲ್ಲಿ ಪಿಎಚ್.ಡಿ. ಪದವಿಗೆ ಪ್ರವೇಶ ಪಡೆಯಬೇಕು. ಇಲ್ಲವಾದರೆ ಪಿಎಚ್.ಡಿ. ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ

ಎನ್‌ಇಟಿ, ಜೆಆರ್‌ಎಫ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ರಾಷ್ಟ್ರದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪಿಎಚ್.ಡಿ. ಪಡೆಯಬಹುದಾಗಿದೆ. ಆದರೆ ಕೆ-ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದಾರ್ಥಿಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಪಿಎಚ್.ಡಿ. ಪದವಿ ಅಧ್ಯಯನ ಮಾಡಬೇಕು. ಆದರೆ ಯಾವುದಾದ ರೊಂದು ವಿಶ್ವವಿದ್ಯಾನಿಲಯ ನಡೆಸುವ ಪಿಎಚ್.ಡಿ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅದೇ ವಿವಿಯಲ್ಲಿ ಪಿಎಚ್.ಡಿ. ವ್ಯಾಸಂಗಕ್ಕೆ ಅರ್ಹರಾಗಿರುತ್ತಾರೆ.

ಮೈಸೂರು ವಿವಿಯು ಇತ್ತೀಚೆಗೆ ಪಿ.ಎಚ್.ಡಿ. ಪ್ರವೇಶ ಪರೀಕ್ಷೆ ನಡೆಸಿದ್ದು, ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲ ಇದೇ ವಿವಿಯಲ್ಲಿ ಪಿಎಚ್.ಡಿ. ಪಡೆಯಲು ಅರ್ಹರು. ಆದರೆ ವಿವಿಯಲ್ಲಿ ೧೯೩ ಪ್ರಾಧ್ಯಾ ಪಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಎನ್ ಇಟಿ, ಜೆಆರ್‌ಎ-, ಕೆ-ಸೆಟ್, ಪಿಎಚ್.ಡಿ. ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರ ಸಂಖ್ಯೆಇಲ್ಲ. ಹಾಗಾಗಿ ಪಿಎಚ್.ಡಿ. ಆಕಾಂಕ್ಷಿಗಳಿಗೆಮಾರ್ಗ ದರ್ಶಕ (ಗೈಡ್) ದೊರೆಯುವುದೇ ದುರ್ಲಭ ವಾಗಿದೆ. ಮೈಸೂರು ವಿವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೧೯೩ ಪ್ರಾಧ್ಯಾಪಕರಲ್ಲಿ ೮೪ ಜನರು ಪದವಿ ಕಾಲೇಜುಗಳ ಪ್ರಾಧ್ಯಾಪಕರಿದ್ದಾರೆ. ಅವರಲ್ಲಿ ಮಹಾರಾಜ, ಯುವರಾಜ ಮತ್ತು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕರನ್ನು ಹೊರತು ಪಡಿಸಿ, ವಿವಿ ವ್ಯಾಪ್ತಿಗೆ ಬರುವ ಇತರೆ ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಪಿಎಚ್.ಡಿ.

ಪದವಿಗೆ ಮಾರ್ಗದರ್ಶನ ಮಾಡುವ ಅವಕಾಶವಿಲ್ಲ. ಆದ್ದರಿಂದ ಪಿಎಚ್.ಡಿ. ಆಂಕಾಂಕ್ಷಿಗಳು ತಮ್ಮ ಶೈಕ್ಷಣಿಕ ಭವಿಷ್ಯ ಕಮರಿಹೋಗ ಬಹುದು ಎಂಬ ಆತಂಕದಲ್ಲಿದ್ದಾರೆ.

ಮೈಸೂರು ವಿವಿಯಲ್ಲಿ ಒಬ್ಬ ಪ್ರಾಧ್ಯಾಪಕ ೮ ಜನ ವಿದ್ಯಾರ್ಥಿಗಳಿಗೆ, ಒಬ್ಬ ಸಹ ಪ್ರಾಧ್ಯಾಪಕ ೬ ಜನರಿಗೆ ಹಾಗೂ ಒಬ್ಬ ಸಹಾಯಕ ಪ್ರಾಧ್ಯಾಪಕ ೪ ವಿದ್ಯಾರ್ಥಿಗಳಿಗೆ ಮಾತ್ರ ಮಾರ್ಗದರ್ಶಕರಾಗುವ ಅವಕಾಶವಿದೆ. ಆದರೆ ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರ ಸಂಖ್ಯೆ ತೀರಾ ಕಡಿಮೆ ಇದೆ. ಹೊಸ ಪ್ರಾಧ್ಯಾಪಕರ ನೇಮಕ ಮಾಡುವವರೆಗೆ ಇರುವ ಪ್ರಾಧ್ಯಾಪಕರಿಗೇ ಹೆಚ್ಚುವರಿ ಅಭ್ಯರ್ಥಿ ಗಳನ್ನು ನಿಯೋಜನೆ ಮಾಡಿದರೆ ಪಿಎಚ್.ಡಿ. ಆಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂಬುದು ಆಕಾಂಕ್ಷಿಗಳ ಬೇಡಿಕೆಯಾಗಿದೆ.

” ಪಿಎಚ್.ಡಿ. ಮಾಡಬೇಕು ಎಂದು ತುಂಬಾ ಆಸೆ ಇತ್ತು. ಆದರೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ. ಮಾಡಲು ಮಾರ್ಗದರ್ಶಕರು ಸಿಗದ ಕಾರಣ ಕನಸು ಕನಸಾಗಿಯೇ ಉಳಿದಿದೆ. ಖಾಯಂ ಪ್ರಾಧ್ಯಾಪಕರನ್ನು ನೇಮಕ ಮಾಡುವವರೆಗೆ ಇರುವ ಪ್ರಾಧ್ಯಾಪಕರನ್ನು ಹೆಚ್ಚುವರಿ ಮಾರ್ಗದರ್ಶಕರಾಗಿ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು. ನಮ್ಮ ಶೈಕ್ಷಣಿಕ ಜೀವನ ಮುಗಿದು ಹೋಗುವ ಆತಂಕ ಕಾಡುತ್ತಿದೆ.”

-ದರ್ಶನ್ ಹಳ್ಳದ ಕೊಪ್ಪಲು, ಪಿಎಚ್.ಡಿ. ಆಕಾಂಕ್ಷಿ

” ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕರ ಕೊರತೆ ಇರುವುದರಿಂದ ಪಿಎಚ್.ಡಿ. ಆಕಾಂಕ್ಷಿಗಳ ಸಂಖ್ಯೆಗೆ ಅನುಗುಣವಾಗಿ ಮಾರ್ಗದರ್ಶಕರು ಸಿಗುತ್ತಿಲ್ಲ. ಆದಕಾರಣ ಹೆಚ್ಚುವರಿ ಪ್ರಾಧ್ಯಾಪಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಒಳ ಮೀಸಲಾತಿ ಪ್ರಕ್ರಿಯೆ ಮುಗಿಯುವವರೆಗೆ ಹೊಸ ನೇಮಕಾತಿಯನ್ನು ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ಕುಲಪತಿಗಳ ನೇತೃತ್ವದ ಸಮಿತಿ ವರದಿಯನ್ನು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ, ರಾಜ್ಯ ಸರ್ಕಾರದ ನಿರ್ದೇಶನವನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ.”

-ಪ್ರೊ.ಎನ್.ಕೆ.ಲೋಕನಾಥ್, ಕುಲಪತಿ, ಮೈವಿವಿ

Tags:
error: Content is protected !!