Mysore
21
broken clouds

Social Media

ಬುಧವಾರ, 14 ಜನವರಿ 2026
Light
Dark

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಮೈಸೂರಿಗೆ ಮೂರನೇ ಸ್ಥಾನ

ಕೆ.ಬಿ.ರಮೇಶನಾಯಕ

ಯೋಜನೆಯಡಿ ತರಬೇತಿ ಪಡೆದ -ಲಾನುಭವಿಗಳಿಗೆ ಟೂಲ್ ಕಿಟ್ ವಿತರಣೆ 

ಮೈಸೂರು: ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಮರು ರೂಪಿಸುವ ಮತ್ತು ಅದರ ಕುಶಲ ಕರ್ಮಿಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ ಯೋಜನೆಯಡಿ ಕರ್ನಾಟಕ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ,ಮೈಸೂರು ರಾಜ್ಯದಲ್ಲಿ ೩ನೇ ಸ್ಥಾನವನ್ನು ಹೊಂದಿದೆ.

ಕಳೆದ ೨ ವರ್ಷಗಳಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿದಂತೆ ೧.೯೮ ಲಕ್ಷ ಮಂದಿ ಪಿಎಂ ವಿಶ್ವಕರ್ಮ ಯೋಜನೆಯಡಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಇದರಲ್ಲಿ ೩ ಹಂತಗಳಲ್ಲಿ ಆಯ್ಕೆಯಾಗಿರುವ ೩೪,೭೭೧ ಮಂದಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಗಿದೆ.

ಈ ಯೋಜನೆಯ ಫಲಾನುಭವಿಗಳು ಸ್ವಂತ ವೃತ್ತಿಯ ಕುಶಲಕರ್ಮಿಗಳಾಗಿ ಹೊರಹೊಮ್ಮಿರುವುದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೨೦೨೩ರ ಸೆ.೧೭ರಂದು ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿತು. ಪಿಎಂ ವಿಶ್ವಕರ್ಮ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಾಂಪ್ರದಾಯಿಕ ೧೮ ವಿವಿಧ ವೃತ್ತಿಗಳ ಕುಶಲಕರ್ಮಿಗಳನ್ನು ಗುರುತಿಸಿ, ಸೂಕ್ತ ತರಬೇತಿ ನೀಡಿ ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ, ಡಿಜಿಟಲ್ ಸೌಲಭ್ಯ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಇದೀಗ ಮೈಸೂರಿನಲ್ಲಿ ೨ ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿರುವುದು ಗಮನಾರ್ಹವಾಗಿದೆ.

ಮೈಸೂರಿಗೆ ೩ನೇ ಸ್ಥಾನ: ರಾಜ್ಯದ ೩೧ ಜಿಲ್ಲೆಗಳಲ್ಲೂ ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿ ಮಾಡಿಕೊಳ್ಳುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಎರಡೂವರೆ ಲಕ್ಷ ಮಂದಿ ನೋಂದಣಿಯಾಗಿದ್ದು ೬೫ ಸಾವಿರ ಜನರಿಗೆ ಟೂಲ್ ಕಿಟ್ ವಿತರಿಸಿ ಮೊದಲ ಸ್ಥಾನದಲ್ಲಿದ್ದರೆ, ಕೋಲಾರ ಜಿಲ್ಲೆಯಲ್ಲಿ ೨ ಲಕ್ಷ ಮಂದಿ ನೋಂದಣಿಯಾಗಿ ೩೮,೧೯೯ ಮಂದಿಗೆ ಟೂಲ್ ಕಿಟ್ಗಳನ್ನು ವಿತರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ೨೦೨೩ರ ಸೆಪ್ಟೆಂಬರ್ ತಿಂಗಳಿಂದ ೨೦೨೫ ಆಗಸ್ಟ್ ತಿಂಗಳ ತನಕ ೧.೯೮ ಲಕ್ಷ ಮಂದಿ ನೋಂದಣಿಯಾಗಿದ್ದಾರೆ.

ಇದರಲ್ಲಿ ಗ್ರಾಪಂ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಅನುಮೋದನೆ ದೊರೆತಿರುವ ೩೪,೭೭೧ ಮಂದಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಗಿದೆ. ಉಳಿದ ೧.೫೦ ಲಕ್ಷ ಮಂದಿ ಫಲಾನುಭವಿಗಳ ಅರ್ಜಿಗಳು ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆಗೊಂಡು ಜಿಲ್ಲಾಧಿಕಾರಿಗಳ ಹಂತದಲ್ಲಿವೆ. ಇದರಲ್ಲಿ ಶೇ.೫೦ ಅರ್ಜಿಗಳಿಗೆ ಅನುಮೋದನೆ ನೀಡಿ ರಾಜ್ಯಮಟ್ಟದ ಸಮಿತಿಗೆ ಕಳುಹಿಸಲಾಗಿದೆ. ಈ ಅರ್ಜಿಗಳಿಗೆ ಒಪ್ಪಿಗೆ ದೊರೆಯುತ್ತಿದ್ದಂತೆ ತರಬೇತಿ ಪಡೆದಿರುವವರಿಗೆ ಟೂಲ್ ಕಿಟ್ ವಿತರಿಸಲಾಗುತ್ತದೆ. ಈ ಯೋಜನೆಯಡಿ ಅರ್ಜಿ ಹಾಕಲು ಕಾಲಮಿತಿ, ಸಮಯ ಮಿತಿ ಇರುವುದಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ಒಂದು ಅಥವಾ ಎರಡು ವಾರಗಳ ಕಾಲ ತರಬೇತಿ ನೀಡಿ ಪ್ರಮಾಣಪತ್ರ ವಿತರಿಸಲಾಗುತ್ತದೆ. ನಂತರ, ಟೂಲ್ ಕಿಟ್ ಕೊಡುವ ಪ್ರಕ್ರಿಯೆ ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ

ಯಾರ‍್ಯಾರಿಗೆ ನೋಂದಣಿಗೆ ಅವಕಾಶ?:  ಬಡಿಗರು, ದೋಣಿ ತಯಾರಕರು, ಕಮ್ಮಾರರು, ಚಿನ್ನದ ಕೆಲಸಗಾರರು, ಕುಂಬಾರರು, ಸವಿತಾ ಸಮಾಜದವರು, ಮಡಿವಾಳ ಸಮಾಜದವರು, ಮೀನುಗಾರಿಕೆ ಬಲೆ ತಯಾರಕರು, ಕುಲುಮೆ ಕೆಲಸಗಾರರು, ಮರದ ಕೆಲಸಗಾರರು.

ಯೋಜನೆಗೆ ಅರ್ಹತೆ..: ಯೋಜನೆಯಲ್ಲಿ ಒಳಗೊಂಡಿರುವ ೧೮ ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಉದ್ಯೋಗಿಯಾಗಿರಬೇಕು. ಅರ್ಜಿದಾರರಿಗೆ ಕನಿಷ್ಠ ೧೮ ವರ್ಷ ವಯಸ್ಸಾಗಿರಬೇಕು.

ಒಂದು ಕುಟುಂಬದಿಂದ ಒಬ್ಬ ಸದಸ್ಯರು ಮಾತ್ರ ನೋಂದಣಿಗೆ ಅರ್ಹರು. ಕಳೆದ ೫ ವರ್ಷಗಳಲ್ಲಿ ಪಿಎಂ ಇಜಿಪಿ,ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲ ಪಡೆದಿರಬಾರದು. ಶೇ.೫ ಬಡ್ಡಿದರದಲ್ಲಿ ೩ ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಸಾಲವನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ಮೊದಲ ಕಂತಿನಲ್ಲಿ. ೧ ಲಕ್ಷ ರೂ. ಮತ್ತು ೨ನೇ ಕಂತಿನಲ್ಲಿ ೨ ಲಕ್ಷ ರೂ. ನೀಡಲಾಗುತ್ತದೆ.

” ಪಿಎಂ ವಿಶ್ವಕರ್ಮ ಯೋಜನೆಯಡಿ ಮೈಸೂರು ಜಿಲ್ಲೆಯು ರಾಜ್ಯದಲ್ಲೇ ೩ನೇ ಸ್ಥಾನದಲ್ಲಿದೆ. ನೋಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗುವುದು ಮತ್ತು ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರಾತಿಯಲ್ಲಿ ನಿಧಾನವಾಗುವುದರಿಂದ ನಾವು ಸಂಬಂಧಿಸಿದವರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಕೆಲಸ ಮಾಡುತ್ತೇವೆ.”

-ಶಿವಲಿಂಗಯ್ಯ, ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ.

Tags:
error: Content is protected !!