Mysore
25
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಮಹಿಳಾ ದಸರೆಯಲ್ಲಿ ಮೈಸೂರು ಪರಂಪರೆ!

ಕೆ.ಬಿ.ರಮೇಶ್‌ನಾಯಕ

ಜಿಐ ಟ್ಯಾಗ್ ಪಡೆದಿರುವ ಮೈಸೂರು ಉತ್ಪನ್ನಗಳ ಪ್ರದರ್ಶನ; ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಅನಾವರಣ 

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಮಹಿಳಾ ದಸರಾವನ್ನು ಪ್ರಸಕ್ತ ವರ್ಷ ವಿಭಿನ್ನವಾಗಿ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಮುಂದಾಗಿದೆ.

ನಗರದ ಜೆ.ಕೆ.ಮೈದಾನದಲ್ಲಿ ಸೆ.೨೩ರಿಂದ ೨೬ರವರೆಗೆ ಮಹಿಳಾ ದಸರಾ ನಡೆಯಲಿದ್ದು, ಈ ಬಾರಿ ಮಹಿಳಾ ದಸರಾದಲ್ಲಿ ಮೈಸೂರು ಪರಂಪರೆ ಮತ್ತು ಜಿಐ ಟ್ಯಾಗ್ ಪಡೆದ ಉತ್ಪನ್ನಗಳು ಅನಾವರಣಗೊಳ್ಳಲಿವೆ.

ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲು ಚಿಂತಿಸಲಾಗಿದೆ. ಸೀ ಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳನ್ನು ಪ್ರದರ್ಶಿಸುವ ಜತೆಗೆ ಮಾರಾಟ ಮಾಡುವುದಕ್ಕೂ ಅವಕಾಶ ಕಲ್ಪಿಸಲು ಸಮಿತಿ ಚಿಂತಿಸಿದೆ.

ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಧರಿಸಿ ನಡಿಗೆ: ಈ ಬಾರಿಯ ಮಹಿಳಾ ದಸರಾದಲ್ಲಿ ವಿಶೇಷವಾಗಿ ಮಹಿಳೆಯರ ಪಾರಂಪರಿಕ ನಡಿಗೆ ಆಯೋಜಿಸಲು ಮುಂದಾಗಿದ್ದು, ೧,೫೦೦ಕ್ಕೂ ಹೆಚ್ಚು ಮಹಿಳೆಯರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಹೂ ಮುಡಿದು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಸೇರಿದಂತೆ ಜಿಐ ಟ್ಯಾಗ್ ಪಡೆದಿರುವ ಮೈಸೂರು ಉತ್ಪನ್ನಗಳನ್ನು ಕೈಯಲ್ಲಿ ಹಿಡಿದು ಸಾಗಲಿದ್ದಾರೆ. ಸೆ.೨೪ರಂದು ಮಹಿಳೆಯರ ಪಾರಂಪರಿಕ ನಡಿಗೆ ನಡೆಯಲಿದ್ದು, ಮಹಿಳೆಯರು ಕೆ.ಆರ್.ವೃತ್ತದಿಂದ ಜೆ.ಕೆ.ಮೈದಾನದವರೆಗೂ ಹೆಜ್ಜೆ ಹಾಕಲಿದ್ದಾರೆ.

ನಾನಾ ಕಾರ್ಯಕ್ರಮಗಳಿಗೆ ಸಿದ್ಧತೆ: ಮಕ್ಕಳು, ಮಹಿಳೆ ಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಮನರಂಜನೆ ನೀಡುವಂತಹ ನಾನಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ವಿವಿಧ ಸ್ಪರ್ಧೆ, ಭರಪೂರ ಮನರಂಜನೆಯ ಜತೆಗೆ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯ ತಡೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿಯೂ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಹಿರಿಯ ನಾಗರಿಕರಿಗೂ ಈ ಬಾರಿ ನಾನಾ ಸ್ಪರ್ಧೆಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಅಂಗವಿಕಲ ಮಹಿಳೆಯರು ಹಾಗೂ ಪುರುಷರಿಗೂ ನಾನಾ ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಪದಗಳ ಜತೆಗೆ ರಾಗಿ ಬೀಸುವ ಸ್ಪರ್ಧೆ: ಒಂದು ದಿನ ಮಹಿಳೆಯರಿಗೆ ಜಾನಪದ ಹಾಡುಗಳನ್ನು ಹಾಡುತ್ತಾ ರಾಗಿ ಬೀಸುವ ಸ್ಪರ್ಧೆ ಆಯೋಜಿಸಲು ಚಿಂತಿಸಲಾಗಿದ್ದು, ಆಸಕ್ತರು ರಾಗಿ ಬೀಸುವ ಕಲ್ಲನ್ನು ತಾವೇ ತಂದು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಹಿಳೆಯರಿಗೆ ವೇಷಭೂಷಣ ಸ್ಪರ್ಧೆ, ಒಲೆ ರಹಿತ ಅಡುಗೆ ಸ್ಪರ್ಧೆ ಇರಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಲೆಮೆನ್ ಆಂಡ್ ಸ್ಪೂನ್, ಮಡಕೆ  ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲು ಚಿಂತಿಸಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಒಂದು ವಿಶೇಷ ನಾಟಕವೂ ನಡೆಯಲಿದೆ.

” ಮೈಸೂರಿನ ಜೆ.ಕೆ.ಮೈದಾನದಲ್ಲಿ ಸೆ.೨೩ರಿಂದ ೨೬ರವರೆಗೆ ಮಹಿಳಾ ದಸರಾ ಸಮಾರಂಭವನ್ನು ಆಯೋಜಿಸಲು ಚಿಂತಿಸಲಾಗಿದೆ. ಈ ಬಾರಿ ಮಹಿಳೆಯರ ಪಾರಂಪರಿಕ ನಡಿಗೆ ಆಯೋಜಿಸಲಾಗುತ್ತದೆ. ೧,೫೦೦ ಮಹಿಳೆಯರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ನಡಿಯಲ್ಲಿ ಭಾಗವಹಿಸಲಿದ್ದಾರೆ.”

-ಬಿ.ಬಸವರಾಜು, ಕಾರ್ಯಾಧ್ಯಕ್ಷ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ

Tags:
error: Content is protected !!