ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ರೈತ ದಸರಾದಲ್ಲಿ ಗ್ರಾಮೀಣ ಪ್ರದೇಶದ ರೈತರ ಪ್ರಮುಖ ಕಾರ್ಯಕ್ರಮವಾಗಿರುವ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೀಡುವ ಬಹುಮಾನವನ್ನು ದ್ವಿಗುಣಗೊಳಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರೈತ ದಸರಾ ಕಾರ್ಯಕ್ರಮದ ಅಽಕ ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನ ಪ್ರದರ್ಶನ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅ. ೬ ಮತ್ತು ೭ರಂದು ಜೆ. ಕೆ. ಮೈದಾನದಲ್ಲಿ ನಡೆಯುವ ಹಾಲು ಕರೆಯುವ ಸ್ಪರ್ಧೆಗೆ ಬಹುಮಾನಗಳ ಮೊತ್ತವನ್ನು ಈ ಹಿಂದಿನ ವರ್ಷಗಳಿಗಿಂತ ದ್ವಿಗುಣಗೊಳಿಸಲಾಗಿದೆ ಎಂದರು. ಅ. ೬ರಂದು ನಡೆಯುವ ಶ್ವಾನ ಪ್ರದರ್ಶನದಲ್ಲಿ ನಾಗರಿಕರು ತಮ್ಮ ಶ್ವಾನಗಳೊಂದಿಗೆ ಭಾಗವಹಿಸ ಬೇಕು ಎಂದು ಮನವಿ ಮಾಡಿದರು. ರೈತ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಡಾ. ಎಂ. ಕೃಷ್ಣರಾಜು, ಕಾರ್ಯಾಧ್ಯಕ್ಷ ಕೆ. ಜಿ. ರವಿ, ಸಹ ಕಾರ್ಯದರ್ಶಿ ಡಾ. ನಾಗರಾಜು, ಜಿ. ಎಚ್. ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಥಮ ಬಹುಮಾನವಾಗಿ ೧ ಲಕ್ಷ ರೂ., ದ್ವಿತೀಯ ಬಹುಮಾನವಾಗಿ ೮೦ ಸಾವಿರ ರೂ. , ತೃತೀಯ ೬೦ ಸಾವಿರ ರೂ. , ನಾಲ್ಕನೇ ಬಹುಮಾನವಾಗಿ ೪೦ ಸಾವಿರ ರೂ. ಗೆ ನಿಗದಿಪಡಿಸಲಾಗಿದೆ. ಈ ಸ್ಪರ್ಧೆಗೆ ರಾಜ್ಯದಾದ್ಯಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಹೈನುಗಾರರು ಉತ್ತಮ ತಳಿಯ ರಾಸುಗಳೊಂದಿಗೆ ಭಾಗವಹಿಸಲು ಮತ್ತು ಬಹುಮಾನ ಗೆಲ್ಲುವುದಕ್ಕೆ ಉತ್ತೇಜಿಸಲು ಇಂತಹ ನಿರ್ಧಾರ ಮಾಡಲಾಗಿದೆ. – ಕೆ. ವೆಂಕಟೇಶ್, ಪಶು ಸಂಗೋಪನಾ ಸಚಿವ