Mysore
27
scattered clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಮೈಸೂರು ನಗರ ಸಾರಿಗೆ: ಹಳೆ ಬಸ್‌ಗಳಿಗೆ ಹೊಸ ರೂಪ?

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೈಸೂರು: ನಗರದಲ್ಲಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವ ಸಾರ್ವಜನಿಕರ ಸಂಖ್ಯೆ ಹೆಚ್ಚಾಗಿದೆ. ನಗರ ಸಾರಿಗೆಗೆ ಪ್ರಸಕ್ತ ವರ್ಷ ೯೬ ಹೊಸ ಬಸ್‌ಗಳು ಸೇರ್ಪಡೆಯಾಗಿವೆ. ಏತನ್ಮಧ್ಯೆ ಹಳೆಯ ಬಸ್‌ಗಳು ಕೂಡ ಹೊಸ ರೂಪ ಪಡೆದು ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತಿವೆ. ಇವುಗಳಿಂದ ಹೊರಹೊಮ್ಮುವ ದಟ್ಟ ಹೊಗೆಯು ಮಾಲಿನ್ಯಕಾರಕವಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಹಳೆಯ ವಾಹನಗಳನ್ನು ಮೈಸೂರಿಗೆ ರವಾನೆ ಮಾಡಿಕೊಳ್ಳಲಾಗುತ್ತಿದ್ದು, ಇವು ಹರಡುವ ಕಪ್ಪು ಹೊಗೆಯು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂಬ ದೂರು ಕೇಳಿಬಂದಿದೆ.

ನಗರದಲ್ಲಿ ೫೧೭ ರೂಟ್‌ಗಳಿದ್ದು, ೫೩೬ ಬಸ್‌ಗಳು ಸಂಚರಿಸುತ್ತಿವೆ. ಇಷ್ಟಾದರೂ ಸಾರ್ವಜನಿಕರು ನಿತ್ಯ ಬಸ್ಸಿಗಾಗಿ ಪರದಾಡುತ್ತಿದ್ದಾರೆ. ನಗರದ ಅನೇಕ ಬಡಾವಣೆಯ ಬಸ್‌ಗಳು ಸದಾ ಕಿಕ್ಕಿರಿದು ಬರುತ್ತಿದ್ದು, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಜನರು ಪ್ರಯಾಣಿಸುತ್ತಿದ್ದಾರೆ.

ಇಷ್ಟೆಲ್ಲದರ ನಡುವೆ ನಗರದಲ್ಲಿ ಬಸ್‌ಗಳ ಕೊರತೆ ನೀಗಿಸಲು ಬಿಎಂಟಿಸಿಯ ಹಳೆಯ ಬಸ್‌ಗಳನ್ನು ಕೆಎಸ್ ಆರ್‌ಟಿಸಿಗೆ ಪರಿವರ್ತಿಸಿ ನಗರದಲ್ಲಿ ಬಳಸಲಾಗುತ್ತಿದೆ ಎಂದು ರವಿಕೀರ್ತಿ ಎಂಬವರು ಎಕ್ಸ್‌ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಕೆಎ-೫೭, ಕೆಎ-೪೨, ಕೆಎ-೪೦, ಕೆಎ-೫೩, ಕೆಎ-೪೦, ಕೆಎ-೦೧ ನಗರದಲ್ಲಿ ಸಂಚರಿಸುತ್ತಿರುವ ಬಿಎಂಟಿಸಿಯ ಬಸ್‌ಗಳಾಗಿದ್ದು, ಇವು ನಗರದ ನಾಲ್ಕೂ ದಿಕ್ಕಿನಲ್ಲಿರುವ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತಿವೆ. ಆದರೆ, ಇವುಗಳಲ್ಲಿ ಬಹುಪಾಲು ಬಸ್‌ಗಳು ಸಂಚರಿಸುವಾಗ ದಟ್ಟವಾದ ಕಪ್ಪು ಹೊಗೆ ಹೊರಹೊಮ್ಮಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹೊಗೆಯಾಡಿದೆ.

ಸದ್ಯ ರಾಜ್ಯ ಸರ್ಕಾರವು ಎಲ್ಲ ಜಿಲ್ಲೆಗಳಿಗೂ ಬಿಎಸ್-೬ ಇಂಜಿನ್ ಹೊಂದಿರುವ ಹೊಸ ಬಸ್‌ಗಳನ್ನು ಒದಗಿಸಿದೆ. ಬೆಳಗಾವಿ, ಹುಬ್ಬಳ್ಳಿ – ಧಾರವಾಡ, ವಿಜಯಪುರ, ಹೊಸಪೇಟೆ ಜಿಲ್ಲೆಗಳಿಗೆ ಬಿಎಸ್-೬ ವಾಹನಗಳನ್ನುಕೊಡಲಾಗಿದೆ. ಮೈಸೂರಿನಲ್ಲಿ ಬಿಎಸ್-೬ ವಾಹನಗಳು ಕಡಿಮೆ ಸಂಖ್ಯೆಯಲ್ಲಿ ಓಡಾಟ ನಡೆಸುತ್ತಿವೆ. ಆದರೆ, ಕಪ್ಪು ಹೊಗೆ ಹರಡುವ ಬಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು  ರವಿಕೀರ್ತಿ ಹೇಳಿದ್ದಾರೆ.

೧೧೫ ಬಸ್‌ಗಳು ಗುಜರಿಗೆ: ೨೦೨೪-೨೦೨೫ರಲ್ಲಿ ಮೈಸೂರು ನಗರದಲ್ಲಿದ್ದ ೧೧೫ ಬಸ್‌ಗಳನ್ನು ಗುಜರಿಗೆ ಹಾಕಲಾಗಿದ್ದು, ಬಸ್‌ಗಳ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಬಿಎಂಟಿಸಿ ಸೇರಿದಂತೆ ಇತರೆ ಸಾರಿಗೆ ಘಟಕಗಳ ಬಸ್‌ನ್ನು ಎರವಲು ಪಡೆದು ಅದನ್ನು ಕೆಎಸ್ ಆರ್‌ಟಿಸಿ ಬಸ್ ಆಗಿ ನವೀಕರಿಸಿ, ಮೈಸೂರು ನಗರದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಬಳಸಸುತ್ತಿದ್ದಾರೆ..

೯೬ ಹೊಸ ಬಸ್‌ಗಳು: ಈ ವರ್ಷ ಮೈಸೂರಿಗೆ ೯೬ ಬಸ್‌ಗಳನ್ನು ಹೊಸದಾಗಿ ತರಿಸಿಕೊಳ್ಳಲಾಗಿದೆ. ಇದರಲ್ಲಿ ಟಾಟಾ ಬಿಎಸ್-೭೫, ಅಶ್ವಮೇಧ-೧೫, ಲೈಲ್ಯಾಂಡ್ ಬಿಎಸ್-೬ ಸೇರಿದಂತೆ ಒಟ್ಟು ೯೬ ಹೊಸ ಬಸ್‌ಗಳು ಬಂದಿವೆ. ಇವುಗಳ ಜೊತೆಗೆ ಬಿಎಸ್-೪ ಇಂಜಿನ್ ಹೊಂದಿರುವ ಬಸ್‌ಗಳನ್ನು ಹೊಂದಲಾಗಿದೆ.

೧೦೦ ಎಲೆಕ್ಟ್ರಿಕ್ ಬಸ್‌ಗಳು: ೨೦೨೪-೨೫ನೇ ಸಾಲಿನಲ್ಲಿ ೧೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಮೈಸೂರಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಕಚೇರಿಗೆ ನೀಡಲಾಗಿದೆ. ಇದಕ್ಕಾಗಿ ಎಲೆಕ್ಟ್ರಿಕ್ ಬಸ್ ಡಿಪೋ ನಿರ್ಮಿಸಬೇಕು. ಹೀಗಾಗಿ ರಾಜ್ಯ ಸರ್ಕಾರ ಅನುಮತಿಗಾಗಿ ಕಾಯುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನಗರಕ್ಕೆ ನೂರು ಹೊಸ ಬಸ್‌ಗಳು ಬರುವ ನಿರೀಕ್ಷೆ ಇದೆ ಎಂದು ಎಚ್.ಟಿ.ವೀರೇಶ್ ಮಾಹಿತಿ ನೀಡಿದರು.

” ಬಿಎಸ್-೬ ಮತ್ತು ಬಿಎಸ್-೪ ಇಂಜಿನ್ ಹೊಂದಿರುವ ಬಸ್‌ಗಳ ಜೊತೆಗೆ ಬಿಎಸ್-೩ ಇಂಜಿನ್ ಹೊಂದಿರುವ ಬಸ್‌ಗಳನ್ನು ನಮ್ಮಲ್ಲಿವೆ. ಆದರೆ, ಇವುಗಳು ಸುವ್ಯವಸ್ಥೆಯಲ್ಲಿವೆ. ಈ ಬಸ್ಗಳನ್ನು ಪ್ರತಿ ತಿಂಗಳು ಪರಿಶೀಲಿಸಲಾಗುತ್ತದೆ. ಪ್ರತಿನಿತ್ಯ ಬಸ್‌ಗಳ ಹೊಗೆ ಪರಿಶೀಲಿಸಿ ಇಂಜಿನ್ ರಿಪೇರಿ ಮಾಡುವ ಪ್ರಕ್ರಿಯೆಗಳು ನಡೆಯುವುದರಿಂದ ಹೆಚ್ಚು ಹೊಗೆ ಬರುವ ಬಸ್‌ಗಳು ನಮ್ಮಲ್ಲಿ ಇಲ್ಲ ಎಂದು ಮೈಸೂರು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ತಿಳಿಸಿದ್ದಾರೆ.”

” ಎಲ್ಲ ನಗರಗಳಿಗೂ ಹೊಸ ಬಸ್‌ಗಳನ್ನು ಅದರಲ್ಲಿಯೂ ಬಿಎಸ್- ೬ ಇಂಜಿನ್ ಹೊಂದಿರುವ ಬಸ್‌ಗಳನ್ನು ಕೊಡುತ್ತಿದ್ದಾರೆ. ಆದರೆ, ಮೈಸೂರಿಗೆ ಮಾತ್ರ ಹೊಸ ಬಸ್‌ಗಳನ್ನು ಬಿಟ್ಟು ಬಿಎಂಟಿಸಿ ಬಸ್ ಗಳನ್ನು ಯಾಕೆ ಕೊಡುತ್ತಿದ್ದಾರೆ? ಇದರಿಂದ ಮೈಸೂರು ನಗರ ಮಾಲಿನ್ಯವಾಗುವುದಿಲ್ಲವೇ? ಗ್ರಾಮಾಂತರ ಬಸ್‌ಗಳು ಕೂಡ ಹೊಗೆ ಹರಡುತ್ತಿವೆ.”

ರವಿಕೀರ್ತಿ, ಮೈಸೂರು

” ಕೆಎಸ್‌ಆರ್‌ಟಿಸಿ ಎಲ್ಲ ಕಡೆಯೂ ಬೆಂಗಳೂರು ನೋಂದಣಿ ಹೊಂದಿರುವ ಬಸ್‌ಗಳಿವೆ. ಕಳೆದ ೫-೬ ವರ್ಷಗಳ ಹಿಂದೆ ಬೆಂಗಳೂರಿನಿಂದ ಬಸ್ಗಳನ್ನು ಕೊಡುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿಯೇ ರಿಜಿಸ್ಟರ್ ಆಗುತ್ತಿದ್ದವು. ಹೀಗಾಗಿ ೨೦೦-೩೦೦ ಬೆಂಗಳೂರು ರಿಜಿಸ್ಟರ್ ಬಸ್‌ಗಳು ಕೆಎಸ್‌ಆರ್‌ಟಿಸಿಯ ಎಲ್ಲ ವಿಭಾಗಗಳಲ್ಲಿ ಓಡಾಡುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿದೆ. ನಮ್ಮಲ್ಲಿರುವ ವಾಹನಗಳು ಸುವ್ಯವಸ್ಥೆಯಲ್ಲಿವೆ.”

ಎಚ್.ಟಿ.ವೀರೇಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಮೈಸೂರು ನಗರ ಸಾರಿಗೆ 

Tags:
error: Content is protected !!