Mysore
33
clear sky

Social Media

ಮಂಗಳವಾರ, 14 ಏಪ್ರಿಲ 2026
Light
Dark

ಮೈಸೂರು ಮಹಾನಗರ ಪಾಲಿಕೆಯಿಂದ ಉಪ ಕರ ಜಾರಿ ; ವಾಹನ ಮಾಲೀಕರಿಗೆ ಹೊರೆ

ಹೆಚ್.ಎಸ್.ದಿನೇಶ್‌ ಕುಮಾರ್

ಮೈಸೂರು : ಸ್ಥಳೀಯ ಸಂಸ್ಥೆಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಏನೆಲ್ಲ ದಾರಿಗಳನ್ನು ಹುಡುಕಬಹುದು ಎಂಬುದನ್ನು ನಗರಪಾಲಿಕೆ ಅಧಿಕಾರಿಗಳು ತೋರಿಸಿಕೊಟ್ಟಿ ದ್ದಾರೆ. ಇನ್ನು ಮುಂದೆ ಸಾರ್ವಜನಿಕರು ತಮ್ಮ ವಾಹನಕ್ಕೂ ತೆರಿಗೆ ಪಾವತಿಸುವ ಅನಿವಾರ್ಯತೆಗೆ ಸಿಲುಕಲಿದ್ದಾರೆ.

ಇದು ನಿಜಕ್ಕೂ ಜನ ವಿರೋಧಿ ನಿಲುವು ಎನ್ನಲು ಯಾವುದೇ ಅಡ್ಡಿ ಇಲ್ಲ. ಜನರು ಯಾವುದೇ ವಾಹನ ಖರೀದಿಸಿದರೂ ಸಾರಿಗೆ ಇಲಾಖೆಗೆ ಜೀವಮಾನ ತೆರಿಗೆ ಪಾವತಿಸುತ್ತಾರೆ. ವಾಹನಗಳು ರಸ್ತೆಗಿಳಿಯುವ ಮೊದಲೇ ತೆರಿಗೆ ಪಾವತಿಸಿ ಆಗಿರುತ್ತದೆ. ನಂತರ ಪ್ರತಿ ವರ್ಷ ವಿಮೆ ಮೊತ್ತ ಪಾವತಿಸಬೇಕಿದೆ.

ಹಳೆಯ ವಾಹನವಾದರೆ ಪ್ರತಿ ಐದು ವರ್ಷಕ್ಕೆ ಒಮ್ಮೆ ಎಫ್‌ಸಿ ಹೆಸರಿನಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಇನ್ನು ಕುಟುಂಬದೊಡನೆ ಪ್ರವಾಸ ಹೊರಟಲ್ಲಿ ಅಲ್ಲಲ್ಲಿ ಟೋಲ್ ಹೆಸರಿನಲ್ಲಿ ತೆರಿಗೆ ಪಾವತಿಸಬೇಕು. ಇಷ್ಟೆಲ್ಲದರ ನಡುವೆ ಇದೀಗ ನೀವು ಯಾವುದೇ ಬಗೆಯ ವಾಹನ ಹೊಂದಿದಲ್ಲಿ ವರ್ಷಕೆ ಒಮ್ಮೆ ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು! ಆಟೋರಿಕ್ಷಾ ಹೊಂದಿರು ವವರು ವರ್ಷಕ್ಕೆ ೨೦೦ ರೂ. , ದ್ವಿಚಕ್ರ ವಾಹನಕ್ಕೆ ವಾರ್ಷಿಕ ೧೦೦ ರೂ. , ಕಾರು ಇದ್ದರೆ ೫೦೦ ರೂ. ಉಪಕರವನ್ನು ನಗರಪಾಲಿಕೆಗೆ ಪಾವತಿಸಬೇಕಿದೆ.

ವರ್ಷಕ್ಕೆ ಒಮ್ಮೆ ತೆರಿಗೆ ಪಾವತಿ ವೇಳೆ, ತಮ್ಮ ಬಳಿ ಎಷ್ಟು ವಾಹನಗಳಿವೆ ಎಂಬುದರ ಲೆಕ್ಕವನ್ನು ಸಾರ್ವಜನಿಕರು ನಗರಪಾಲಿಕೆಗೆ ನೀಡಬೇಕು. ಈ ಮೂಲಕ ವಾಹನಗಳ ಉಪ ಕರವನ್ನು ಲೆಕ್ಕಹಾಕಿ ಪಾವತಿಸಬೇಕು. ನೀರಿನ ಕರವನ್ನು ಶೇ. ೨೫ ರಷ್ಟು ಏರಿಸಿರುವ ನಗರಪಾಲಿಕೆ ಅದರ ಜೊತೆಗೆ ಆಸ್ತಿ ತೆರಿಗೆ ಹಾಗೂ ವಾಹನ ಉಪಕರವನ್ನೂ ಕೂಡ ನಿಗದಿ ಮಾಡಿ ಜನರ ಮೇಲೆ ಹೊರೆ ಹೊರಿಸಿದೆ. ನಗರಪಾಲಿಕೆಯ ಈ ತೀರ್ಮಾನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಮ್ಮ ಮನೆಯ ಆವರಣದಲ್ಲಿ ನಿಲ್ಲಿಸಿಕೊಳ್ಳುವ ವಾಹನಗಳಿಗೆ ನಾವೇಕೆ ಉಪ ಕರ ಪಾವತಿಸಬೇಕು ಎಂದು ಜನರು ಕಿಡಿಕಾರುತ್ತಿದ್ದಾರೆ. ಯಾರೊಂದಿಗೂ ಚರ್ಚೆ ನಡೆಸದೆ ನಗರಪಾಲಿಕೆ ಏಕಾಏಕಿ ಇಂತಹ ತೀರ್ಮಾನ ತೆಗೆದುಕೊಂಡಿದ್ದರೂ ಈ ಭಾಗದ ಶಾಸಕರು, ಉಸ್ತುವಾರಿ ಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಜನರು ಬೇಸರದಿಂದಲೇ ಪ್ರಶ್ನಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ಮತ್ತೆ ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂಬುದು ಜನರ ಅನಿಸಿಕೆ.

ಜನಾಂದೋಲನ ರೂಪಿಸಲು ನಿರ್ಧಾರ
ನಗರಪಾಲಿಕೆಯು ವಾಹನಗಳ ಮೇಲೆ ಉಪ ಕರ ವಿಧಿಸುವ ತೀರ್ಮಾನ ತೆಗೆದುಕೊಂಡಿದ್ದಲ್ಲಿ, ಅದು ಸಂಪೂರ್ಣ ಅವೈಜ್ಞಾನಿಕ. ಯಾರೊಂದಿಗೂ ಚರ್ಚೆ ನಡೆಸದೆ ಇಂತಹ ತೀರ್ಮಾನ ತೆಗೆದುಕೊಳ್ಳಬಾರದು. ನಾನು ದಾವಣಗೆರೆ ಉಪ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದೇನೆ. ಅಲ್ಲಿಂದ ಬಂದ ನಂತರ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಸರ್ಕಾರದ ಇಂತಹ ತೀರ್ಮಾನಗಳ ಬಗ್ಗೆ ಜನಾಂದೋಲನ ರೂಪಿಸಲಾಗುವುದು. –ಟಿ.ಎಸ್. ಶ್ರೀವತ್ಸ, ಶಾಸಕರು, ಕೆ. ಆರ್. ಕ್ಷೇತ್ರ

Tags:
error: Content is protected !!