ಡಿಸೆಂಬರ್.15ರಿಂದ ಜನವರಿ.20 ರವರೆಗೂ ಚಳಿಯ ತೀವ್ರತೆ ಹೆಚ್ಚಳ
ಡಿಸೆಂಬರ್.4ರವರೆಗೆ ಮಳೆ ಸಾಧ್ಯತೆ
ಗಿರೀಶ್ ಹುಣಸೂರು
ಮೈಸೂರು: ರಾಜ್ಯದಲ್ಲಿ ಮಾಗಿ ಚಳಿಗಾಲ ಆರಂಭವಾಗಿದ್ದರೂ ಚಳಿಯ ತೀವ್ರತೆ ಸದ್ಯ ಜನರನ್ನುಅಷ್ಟೇನು ಬಾಧಿಸುತ್ತಿಲ್ಲ. ಡಿ.೧೫ರಿಂದ ಜನವರಿ ೧೫ರವರೆಗೆ ಚಳಿಯ ತೀವ್ರತೆ ಹೆಚ್ಚಲಿದ್ದು, ಜ.೨೦ರವರೆಗೂ ಮೈ ಕೊರೆಯುವ ಚಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಬಂಗಾಳಕೊಲ್ಲಿಯ ತಮಿಳುನಾಡು ಕರಾವಳಿಯನ್ನು ಅಪ್ಪಳಿಸಿರುವ -ಂಗಲ್ ಚಂಡಮಾರುತವು ಡಿ.೧ರಂದು ಕರ್ನಾಟಕವನ್ನು ಪ್ರವೇಶಿಸುವ ಸಾಧ್ಯತೆಗಳಿದ್ದು, ಡಿ.೨ ಹಾಗೂ ೩ರಂದು ತಮಿಳುನಾಡು-ಕರ್ನಾಟಕ ಗಡಿ ಭಾಗಗಳಲ್ಲಿ ಸಾಗಿ ಕೇರಳದ ಕೋಜಿಕ್ಕೊಡು ಮೂಲಕ ಅರಬ್ಬಿ ಸಮುದ್ರ ಸೇರುವ ಲಕ್ಷಣಗಳಿವೆ. ಹೀಗಾಗಿ ರಾಜ್ಯದಲ್ಲಿ ಡಿ.೨ರಿಂದ ೪ರವರೆಗೆ ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ದಕ್ಷಿಣ ಕರಾವಳಿ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.
ಚಂಡಮಾರುತವು ಅರಬ್ಬಿ ಸಮುದ್ರಕ್ಕೆ ಪ್ರವೇಶಿಸಿದ ನಂತರವೂ ಬಂಗಾಳಕೊಲ್ಲಿಯ ಕಡೆ ಯಿಂದ ಗಾಳಿ ಸೆಳೆಯಲ್ಪಡುವುದರಿಂದ ಹಿಂಗಾರು ರೀತಿಯ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ರಾಜ್ಯಾದ್ಯಂತ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದ್ದು, ಇಂದಿನಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗುವ ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಗರಿಷ್ಟ ತಾಪಮಾನ ೨೩ರಿಂದ ೨೪ ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ ೧೬ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾದರೆ ಚಳಿಗಾಲವೆಂದು ಹೇಳಲಾಗುತ್ತದೆ. ಆದರೆ, ಪ್ರಸ್ತುತ ಹವಾಮಾನ ಮುನ್ಸೂಚನೆಯ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ ೨೪.೨ ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ ೨೦.೨ ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ ೨೪.೧ ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ ೨೦.೭ ಡಿಗ್ರಿ ಸೆಲ್ಸಿಯಸ್, ಚಾಮರಾಜನಗರದಲ್ಲಿ ಗರಿಷ್ಟ ಉಷ್ಣಾಂಶ ೨೨.೮ ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ ೧೯.೯ ಡಿಗ್ರಿ ಸೆಲ್ಸಿಯಸ್, ಕೊಡಗು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ ೨೫.೧ ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ ೨೦ ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದ್ದು, ಡಿ.೪ರವರೆಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಸಾಧಾರಣ ಮಳೆ ಬರುವ ಸಂಭವವಿದೆ ಎಂದು ಹೇಳಲಾಗಿದೆ.
ಹವಾಮಾನ ಮುನ್ಸೂಚನೆ: ಡಿ.೨ರಂದು ಬೆಳಿಗ್ಗೆ ೮ ಗಂಟೆಯವರೆಗೆ ರಾಜ್ಯಾದ್ಯಂತ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಮೋಡ ಜಾಸ್ತಿ ಇರಲಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂ ಚನೆ ಇದ್ದರೆ, ಉಳಿದ ಭಾಗಗಳಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ. ನಂತರ ಕಡಿಮೆಯಾದರೂ ಕರಾವಳಿ ಜಿಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಡಿ.೪ರವರೆಗೆ ಮಳೆ ಮುಂದುವರಿಯುವ ಲಕ್ಷಣಗಳಿವೆ.
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮೈಸೂರು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಜಾಸ್ತಿ ಆಗಬಹುದು. ದಕ್ಷಿಣ ಒಳನಾಡಿನ ಬಹುತೇಕ ಭಾಗಗಳಲ್ಲಿ ಡಿ.೨ ಹಾಗೂ ೩ರಂದು ಮಳೆಯ ಮುನ್ಸೂಚನೆ ಇದೆ. ಡಿ.೩ರ ನಂತರ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಗಳಿವೆ.
ಆರೋಗ್ಯದ ಕಡೆ ಇರಲಿ ಗಮನ: ಚಳಿಯ ತೀವ್ರತೆಯ ಪ್ರಮಾಣ ಹೆಚ್ಚಾದಾಗ ಸಾಮಾನ್ಯವಾಗಿ ಜ್ವರ, ಚಳಿಯಂತಹ ಲಕ್ಷಣಗಳು ಬಾಧಿಸುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಬಂಗಾಳಕೊಲ್ಲಿಯ ಪಾಂಡಿಚೇರಿ ಕರಾವಳಿಯಲ್ಲಿರುವ ಫೆಂಗಲ್ ಚಂಡಮಾರುತವು ದಿನ ಕಳೆದಂತೆ ದುರ್ಬಲಗೊಳ್ಳುತ್ತಿದ್ದು, ಡಿ.೨ ಹಾಗೂ ೩ರಂದು ರಾಜ್ಯದ ಚಾಮರಾಜನಗರದ ಮೂಲಕ ಸಾಗಿ ಕೇರಳದ ಕೋಜಿಕ್ಕೊಡು ಭಾಗದಲ್ಲಿ ಅರಬ್ಬಿ ಸಮುದ್ರ ಸೇರುವ ನಿರೀಕ್ಷೆ ಇದೆ. ಪ್ರಸ್ತುತ ರಾಜ್ಯದಲ್ಲಿ ಚಳಿ ಪ್ರಮಾಣ ಕಡಿಮೆ ಇದೆ. ಫೆಂಗಲ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಇರುವಷ್ಟು ಸಮಯವೂ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯನ್ನು ಸೆಳೆಯುತ್ತಿರುವುದರಿಂದ ಚಳಿಯ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆಗಳಿವೆ. ಡಿ.೧೫ರಿಂದ ರಾಜ್ಯದಲ್ಲಿ ಚಳಿ ತೀವ್ರಗೊಳ್ಳಲಿದೆ.
–ಡಾ.ಜಿ.ವಿ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ,
ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ
“ಪ್ರಸ್ತುತ ಭತ್ತ, ರಾಗಿ, ಮುಸುಕಿನ ಜೋಳಸೇರಿದಂತೆ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳ ಕಟಾವು ಕಾರ್ಯ ನಡೆದಿದ್ದು, ರೈತರು ಮುಂಜಾಗ್ರತಾ ಕ್ರಮವಾಗಿ ಮುಂದಿನ ನಾಲ್ಕು ದಿನಗಳವರೆಗೆ ಕಟಾವು ಸ್ಥಗಿತಗೊಳಿಸಿ, ಈಗಾಗಲೇ ಕಟಾವು ಮಾಡಿರುವ ಬೆಳೆಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಇಲ್ಲವೇ ಕಣದಲ್ಲಿಯೇ ಟಾರ್ಪಲ್‌ಗಳ ಸಹಾಯದಿಂದ ಸಂರಕ್ಷಿಸಿಕೊಳ್ಳುವುದು. ಹೆಚ್ಚುವರಿ ಮಳೆ ನೀರು ಜಮೀನಿನಲ್ಲಿ ನಿಲ್ಲದಂತೆ ಕ್ರಮವಹಿಸುವಂತೆ ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.”