Mysore
25
broken clouds

Social Media

ಭಾನುವಾರ, 15 ಜೂನ್ 2025
Light
Dark

ಕಲ್ಲುಭೂಮಿಯನ್ನು ಬಂಗಾರ ಭೂಮಿಯನ್ನಾಗಿಸಿದ ಮೂರ್ತಿ

ಅನಿಲ್ ಅಂತರಸಂತೆ

ನಾವು ‘ಬಂಗಾರದ ಮನುಷ್ಯ’ ಸಿನಿಮಾ ನೋಡೇ ಇರುತ್ತೇವೆ. ಆ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್‌ರವರು ಕಲ್ಲುಗಳಿಂದ ಕೂಡಿದ್ದ ಬಂಜರು ಭೂಮಿಯನ್ನು ಹಸನಾಗಿಸಿ ಬಂಗಾರದಂತಹ ಬೆಳೆ ಬೆಳೆದು ಮಾದರಿ ರೈತರಾಗುತ್ತಾರೆ. ಆ ಸಿನಿಮಾದಿಂದ ಸ್ಫೂರ್ತಿಗೊಂಡವರು ಅನೇಕರಿದ್ದಾರೆ.

ಅಂತಹ ಒಬ್ಬ ನಿಜ ಜೀವನದ ಬಂಗಾರದ ಮನುಷ್ಯ, ಕೃಷಿಯಲ್ಲಿ ಸತತವಾಗಿ ಸೋತರೂ ಛಲ ಬಿಡದೆ ಒಂದಲ್ಲ ಒಂದು ಪ್ರಯೋಗಗಳನ್ನು ಮಾಡುತ್ತಾ ಕೊನೆಗೂ ಫಲ ಕಂಡ ರೈತರೊಬ್ಬರು ಇಲ್ಲಿದ್ದಾರೆ. ತಮ್ಮ ತೋಟ ನೋಡಬೇಕು ಎಂದು ಬಂದವರಿಗೆ ‘ಕೃಷಿ ಎಂದರೇನೇ ಸರ್ಕಸ್ ಅಲ್ವೇ’ ಎನ್ನುತ್ತಾ ನಗುಮುಖದಿಂದ ತಮ್ಮ ತೋಟದ ಸುತ್ತ ಒಂದು ಸುತ್ತು ಹಾಕಿಸಿ ಎಲ್ಲವನ್ನೂ ಪರಿಚಯಿಸುವ ಎಚ್.ಆರ್.ಮೂರ್ತಿ ಈಗ ಮಾದರಿ ಕೃಷಿಕ.

ಶಿವಮೊಗ್ಗ ಮೂಲದವರಾದ ಮೂರ್ತಿ ಅವರು ಅನೇಕ ದಶಕ ಗಳಿಂದ ಮೈಸೂರಿನಲ್ಲಿ ನೆಲೆಸಿದ್ದಾರೆ. ಹೋಟೆಲ್ ಉದ್ಯಮಿಯಾಗಿ ರುವ ಅವರು ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಸಮೀಪ ಸುಮಾರು 30 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯ ಮೂಲಕ ಕೃಷಿ ಮಾಡುತ್ತಾ, ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಸಿಗುವ ವಿವಿಧ ಜಾತಿಯ ವಿದೇಶಿ ಹಣ್ಣುಗಳನ್ನು ಬೆಳೆದು ವಿಶಿಷ್ಟವಾದ ಸಾಧನೆ ಮಾಡಿದ್ದಾರೆ. ಆರಂಭದಲ್ಲಿ ಮೂರ್ತಿ ಪಾಳು ಬಿದ್ದ ಜಮೀನನ್ನು ಖರೀದಿಸಿದಾಗ ಅಕ್ಕಪಕ್ಕದ ಜನರಿಂದ ನಗೆಪಾಟಲಿಗೀಡಾದರು. ಆದರೂ ಕಲ್ಲು ಭೂಮಿಯನ್ನು ಕೃಷಿ ಭೂಮಿಯನ್ನಾಗಿಸುವ ಅಸಾಧ್ಯದ ಕೆಲಸಕ್ಕೆ ಕೈ ಹಾಕಿದರು. ನನ್ನ ಸಾಹಸ ನೋಡಿ ಪ್ರೋತ್ಸಾಹ ನೀಡಿದವರಿಗಿಂತ ನಕ್ಕವರೇ ಹೆಚ್ಚು ಎನ್ನುತ್ತಾರೆ ಮೂರ್ತಿ ನಗುತ್ತಾ.

ಕೃಷಿ ಆರಂಭಿಸಿದ ಮೂರ್ತಿ ಬಾಳೆ, ಪಪ್ಪಾಯ, ತೆಂಗು ಮತ್ತು ತರಕಾರಿ ಸೇರಿದಂತೆ ಹಲವು ಹಣ್ಣುಗಳನ್ನು, ಸಫೇದ್ ಮಸ್ತಿ ಎಂಬ ಔಷಧೀಯ ಬೆಳೆ, ಅಪರೂಪದ ವೆನಿಲ್ಲಾ ಬಳ್ಳಿ ಬೆಳೆದರು. ಆರಂಭ ದಲ್ಲಿ ವೆಚ್ಚ ಹೆಚ್ಚಾಯಿತೇ ವಿನಾ ಲಾಭ ಮಾತ್ರ ಕಾಣಲೇ ಇಲ್ಲ. ಹೀಗೇ 3-4 ಬಾರಿ ನಷ್ಟ ಹೊಂದಿದ್ದರೂ ಭೂಮಿ ಮಾರಿ ಉದ್ಯಮ ಮುಂದುವರಿಸುವ ಚಿಂತೆ ಮಾಡದೆ ಕೃಷಿ ಮುಂದುವರಿಸಿದ ಮೂರ್ತಿ ಕೃಷಿಯಲ್ಲಿ ಯಶಸ್ವಿಯಾಗಿ ‘ಮರಳಿ ಯತ್ನವ ಮಾಡು’ ನುಡಿಗೆ ಉತ್ತಮ ಉದಾಹರಣೆಯಾಗಿದ್ದಾರೆ.

ತಮ್ಮ ಜಮೀನಿನಲ್ಲಿಯೇ ಕೆರೆಯೊಂದನ್ನು ಮಾಡಿಕೊಂಡಿರುವ ಮೂರ್ತಿ ಅವರು ಎಲ್ಲ ಬೋರ್‌ವೆಲ್ ಸಂಪರ್ಕ ಅಲ್ಲಿಗೆ ನೀಡಿ ಅಲ್ಲಿಂದ ನೀರಿನೊಂದಿಗೆ ಜೀವಾಮೃತ ಸೇರಿಸಿ ತೋಟದ ಎಲ್ಲ ಗಿಡಗಳಿಗೆ ಪೂರೈಕೆ ಮಾಡುತ್ತಾರೆ. ಆ ಮೂಲಕ ಸಂಪೂರ್ಣ ಸಾವಯವ ಕೃಷಿ ಮಾಡುವ ಅವರು, ಪ್ರಸ್ತುತ ವಾರ್ಷಿಕ 40-50 ಲಕ್ಷ ರೂ. ಆದಾಯ ಪಡೆಯುತ್ತಿದ್ದು, ಮುಂದಿನ 7 ವರ್ಷಗಳಲ್ಲಿ ವಾರ್ಷಿಕ 1 ಕೋಟಿ ರೂ. ಆದಾಯ ಪಡೆಯುವ ನಿರೀಕ್ಷೆ ಹೊಂದಿದ್ದಾರೆ.

ಸುಮಾರು 20-22 ವರ್ಷಗಳಿಂದ ಕೃಷಿ ಮಾಡುತ್ತ ಬಂದಿರುವ ಮೂರ್ತಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಈಗ ತಮ್ಮ ತೋಟದಲ್ಲಿ ವಿವಿಧ ತಳಿಗಳ ವಿದೇಶಿ ಹಣ್ಣುಗಳ ಜತೆಗೆ ತೆಂಗು, ಅಡಕೆ, ಬಾಳೆ, ಡ್ಯಾಗನ್ ಪ್ರೋಟ್, ಬಟರ್‌ ಪ್ರೊಟ್ ಸೇರಿದಂತೆ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ. ಇವರ ತೋಟದಲ್ಲಿ ಕೆರೇಬಿಯನ್ ಬಟರ್ ಪ್ರೊಟ್ ಮೆಕ್ಸಿಕನ್ ಬಟರ್ ಪ್ರೊಟ್, ವಿಯಟ್ನಾಂ – ಮಲೇಷಿಯಾ- ಥಾಯ್ ಹಲಸು, ವೈಟ್ ಸಪೋಟ, ಲಪೋಟೇ, ಹಣ್ಣುಗಳ ರಾಣಿ ಎಂದೇ ಪ್ರಸಿದ್ಧಿಯಾಗಿರುವ ಮ್ಯಾಂಗೋಸ್ಟೀನ್, ಹಣ್ಣುಗಳ ರಾಜ ಡ್ಯೂರಿಯನ್, ಇಂಡಿಯನ್ ಸ್ಟಾರ್ ಆಪಲ್, ಮಿಲ್ಫ್ ಪ್ರೊಟ್, ಬೀಜ ರಹಿತ ಅಮಟೆಕಾಯಿ, ಕೋಕಂ, ಎಗ್‌ ಫೂಟ್, ರಂಬು ಟಾನ್, ನಾಗಪುರ ಆರೆಂಜ್, ಚೆರಿ, ನೆಲ್ಲಿಕಾಯಿ, ವಾಟರ್ ಆ್ಯಪಲ್ ಸೇರಿದಂತೆ ನೂರಾರು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆದಿದ್ದಾರೆ. ಹಲವಾರು ಕಾಡುಜಾತಿಯ ಹಣ್ಣುಗಳನ್ನೂ ಬೆಳೆಸಿದ್ದಾರೆ. ನಾಗಪುರ ಕಿತ್ತಳೆ ಸಮೃದ್ಧವಾಗಿ ಇವರ ತೋಟದಲ್ಲಿ ಬೆಳೆದಿದೆ.
ania4936@gmail.com

ಕೋಟ್ಸ್‌))

ಹುಟ್ಟಿನಿಂದಲೂ ಕೃಷಿಯಲ್ಲಿ ಆಸಕ್ತಿ ಇದೆ. ನನ್ನ ಸ್ನೇಹಿತರ ಸಲಹೆ ಮೇರೆಗೆ ಭೂಮಿ ಖರೀದಿಸಿದೆ. ಹಾಗೇಯೇ ಕೃಷಿ ಚಟುವಟಿಕೆ ಆರಂಭವಾಯಿತು. ಭಾರತದ ಭೂಮಿಯಲ್ಲಿ ವಿದೇಶಿ ಹಣ್ಣುಗಳನ್ನು ಏಕೆ ಬೆಳೆಯಬಾರದು ಎಂದು ಪ್ರಯತ್ನಿಸಿ ಅವುಗಳನ್ನು ಬೆಳೆದಿದ್ದೇನೆ. ಆರಂಭದಲ್ಲಿ ಜನ ಬಂಡೆಕಲ್ಲಿರುವ ಭೂಮಿ ಎಂದರು ಅದನ್ನು ಈಗ ಕೃಷಿ ಭೂಮಿಯನ್ನಾಗಿಸಿದ್ದೇನೆ.
-ಎಚ್.ಆರ್.ಮೂರ್ತಿ, ಕೃಷಿಕ.

Tags:
error: Content is protected !!