ನಂಜನಗೂಡು: ಸ್ವಚ್ಛತೆಯ ಮೂಲಕವೇ ಗ್ರಾಮದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರಿಗೆ ಸರ್ಕಾರ ಅಗತ್ಯ ರಕ್ಷಣಾತ್ಮಕ ಸೌಲಭ್ಯಗಳನ್ನು ನೀಡುವುದರ ಜೊತೆ ಚರಂಡಿಗಳನ್ನು ಸ್ವಚ್ಛ ಮಾಡುವಾಗ ಕೈಗವಸು, ಶೂ ಹಾಕಿಕೊಂಡೇ ಚರಂಡಿಗೆ ಇಳಿಯಬೇಕು ಎಂದು ಕಟ್ಟು ನಿಟ್ಟಿನ ಆದೇಶವನ್ನೂ ನೀಡಿದೆ.
ಆದರೆ ವಾರ್ಷಿಕ ಲಕ್ಷಾಂತರ ರೂ. ಅನುದಾನವಿರುವ ತಾಲ್ಲೂಕಿನ ದುಗ್ಗಹಳ್ಳಿ ಗ್ರಾಪಂ ತನ್ನ ಪೌರ ಕಾರ್ಮಿಕರಿಗೆ ಮಾಸ್ಕ್, ಕೈಗವಸು, ಶೂ ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನೂ ನೀಡದೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅಮಾನವೀಯವಾಗಿ ಸ್ವಚ್ಛತಾ ಕೆಲಸವನ್ನು ಮಾಡಿಸುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
೧೫ನೇ ಹಣಕಾಸು ಯೋಜನೆ ಕೇವಲ ದಾಖಲೆಗೆ ಮಾತ್ರ ಸೀಮಿತವಾಗಿದೆ ಎಂಬ ಆರೋಪಕ್ಕೆ ದುಗ್ಗಹಳ್ಳಿ ಗ್ರಾಪಂ ಕಾರ್ಯವೈಖರಿ ಇಂಬು ಕೊಟ್ಟಂತಾಗಿದೆ.
ಅನೇಕ ತಿಂಗಳುಗಳಿಂದ ಸ್ವಚ್ಛಗೊಳಿಸದೇ ಕೊಳೆತು ದುರ್ನಾತ ಬೀರುತ್ತಿರುವ ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆಯಲ್ಲಿ ನಾಲ್ಕು ಅಡಿ ಆಳದ ಚರಂಡಿಗಿಳಿಸಿ ತ್ಯಾಜ್ಯವನ್ನು ಬರಿಗೈನಲ್ಲೇ ಸ್ವಚ್ಛಗೊಳಿಸುತ್ತಿರುವುದು ದುಗ್ಗಹಳ್ಳಿ ಪಂಚಾಯಿತಿಯ ಅಧೋಗತಿಗೆ ಸಾಕ್ಷಿಯಾಗಿದೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಪೌರ ಕಾರ್ಮಿಕರನ್ನು ಬರಿಗೈನಲ್ಲೆ ಚರಂಡಿಗಿಳಿಸಿರುವ ಗ್ರಾಪಂ ಅಧ್ಯಕ್ಷರು, ಕಾರ್ಯದರ್ಶಿಗಳ ವಿರುದ್ಧ ತಾಲ್ಲೂಕು ಆಡಳಿತ ಈಗಲಾದರೂ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ದುಗ್ಗಳ್ಳಿ ಗ್ರಾಮ ಪಂಚಾಯಿತಿಯ ಜನತೆ.
” ಪಂಚಾಯಿತಿಯ ಸ್ವಚ್ಛತಾ ಕಾರ್ಮಿಕರಿಗೆ ಕನಿಷ್ಠ ರಕ್ಷಣಾ ಸೌಲಭ್ಯ ಗಳನ್ನೇ ನೀಡದೆ ಅವರನ್ನು ಚರಂಡಿಗೆ ಇಳಿಸುವುದು ಅಪರಾಧ. ಇಂತಹ ಹೀನ ಕೆಲಸ ಮಾಡಿಸಿದ ಆ ಪಂಚಾ ಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ವಿರುದ್ಧ ತಾಪಂ ಇಒ ಹಾಗೂ ಜಿಪಂ ಸಿಇಒ ತಕ್ಷಣ ಕ್ರಮ ಕೈಗೊಂಡು ಪಾಠ ಕಲಿಸಬೇಕು.”
-ಡಿ.ಆರ್.ರಾಜು, ರಾಜ್ಯ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ
” ಹಬ್ಬಗಳು ಬಂದಿದ್ದರಿಂದ ಎಲ್ಲ ಗ್ರಾಮಗಳ ಚರಂಡಿ ಕ್ಲೀನ್ ಮಾಡಿಸುವ ಕೆಲಸ ಮಾಡಬೇಕಾಗಿದೆ. ಹಾಗಾಗಿ, ಗುತ್ತಿಗೆಗೆ ಚರಂಡಿ ಕ್ಲೀನ್ ಮಾಡುವ ಕೆಲಸವನ್ನು ನೀಡಲಾಗಿದೆ. ಗ್ರಾಪಂನಲ್ಲಿ ಒಬ್ಬರೇ ಪೌರ ಕಾರ್ಮಿಕರು ಇರುವುದು. ಅವರ ಬದಲಿಗೆ ಅವರ ಮಗ, ಗುತ್ತಿಗೆದಾರರ ಕಡೆಯುವರು ಕೆಲಸ ಮಾಡುತ್ತಿದ್ದರು. ಬೂಟು, ಕೈಗವಸು ಇಲ್ಲದೆ ಕೆಲಸ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಅವನ್ನು ಕೊಡಿಸಲು ವ್ಯವಸ್ಥೆ ಮಾಡಲಾಗಿದೆ. ಗುರುವಾರದಿಂದಲೇ ಬೂಟು, ಕೈಗವಸು ಹಾಕಿ ಕೆಲಸ ಮಾಡಲಿದ್ದಾರೆ.”
ಕರಿಯಪ್ಪ, ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ





