Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಬಿಸಿಲು, ಮಳೆಯ ಹೊಡೆತಕ್ಕೆ ತಲುಪಿದ ಪುರಸಭೆ ವಾಹನಗಳು

ಮಂಜು ಕೋಟೆ

ಕೋಟೆ: ಲಕ್ಷಾಂತರ ರೂ. ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದರೂ ಪುರಸಭೆ ಎದುರು ನಿಲುಗಡೆ 

ಎಚ್.ಡಿ.ಕೋಟೆ: ಸಾರ್ವಜನಿಕರ ತೆರಿಗೆ ಹಣ ಮತ್ತು ಸರ್ಕಾರದ ಅನುದಾನದಿಂದ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗಿರುವ ಕೋಟ್ಯಂತರ ರೂ. ಬೆಲೆ ಬಾಳುವ ವಾಹನಗಳು ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪುರಸಭೆ ಕಚೇರಿ ಮುಂಭಾಗದಲ್ಲಿ ಬಿಸಿಲು-ಮಳೆಯ ಹೊಡೆತಕ್ಕೆ ಸಿಲುಕಿವೆ.

ಪುರಸಭೆ ವ್ಯಾಪ್ತಿಯಲ್ಲಿರುವ ನಿವಾಸಿಗಳ ಮನೆಗಳ ಕಸಗಳನ್ನು ತೆಗೆದುಕೊಂಡು ಹೋಗಲು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಇತ್ತೀಚೆಗೆ ಟಿಪ್ಪರ್, ಟ್ರಾಕ್ಟರ್, ಜೆಸಿಬಿಗಳನ್ನು ಪುರಸಭೆ ಮತ್ತು ಸರ್ಕಾರದ ಮೂಲಕ ನೀಡಲಾಗಿದೆ.

ಇವುಗಳ ಕೆಲಸ ಮುಗಿದ ಬಳಿಕ ಸುರಕ್ಷಿತವಾದ ಜಾಗದಲ್ಲಿ ಇರಿಸಲು ೧೫ನೇ ಹಣಕಾಸು ಯೋಜನೆಯಡಿ ಪುರಸಭೆಯಿಂದ ಶಿವಾಜಿ ರಸ್ತೆಯ ತಾರಕಾ ನದಿ ಸಮೀಪದಲ್ಲಿ ೩೦ ಲಕ್ಷ ರೂ. ವೆಚ್ಚದಲ್ಲಿ ೩ ವರ್ಷಗಳ ಹಿಂದೆ ಶೆಡ್ ನಿರ್ಮಾಣ ಮಾಡಲಾಗಿತ್ತು. ಆದರೆ, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಈ ಶೆಡ್ ಸದುಪಯೋಗವಾಗದೆ ಪಾಳು ಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಜೊತೆಗೆ ಕೆಟ್ಟಿರುವ ಕೆಲ ವಾಹನಗಳಿಗೆ ಆಶ್ರಯ ನೀಡುತ್ತಿದೆ.

ಕೆಲ ವರ್ಷಗಳ ಹಿಂದೆ ಸರ್ಕಾರದಿಂದ ನೀಡಿದ ೫ ಕಸ ವಿಲೇವಾರಿ ಟಿಪ್ಪರ್‌ಗಳು ಉತ್ತಮ ಗುಣಮಟ್ಟದಿಂದ ಕೂಡಿರದೆ ಸಮರ್ಪಕವಾಗಿ ನಿರ್ವಹಣೆಯಾಗದೆ ಕೆಲವೇ ವರ್ಷಗಳಲ್ಲಿ ಕಾರ್ಯನಿರ್ವಹಿಸ ದಂತಹ ಸ್ಥಿತಿಗೆ ಬಂದಿವೆ. ಹೀಗಾಗಿ ಕೋಟ್ಯಂತರ ರೂ. ಮೌಲ್ಯದ ವಾಹನಗಳು ಮೂಲೆ ಸೇರಿಕೊಂಡಿವೆ.

ಈ ವಾಹನಗಳ ಕೊರತೆಯಿಂದಾಗಿ ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ಹಲವಾರು ತಿಂಗಳುಗಳಿಂದ ಜನರು ಪರದಾಡುತ್ತಿದ್ದರು. ಇತ್ತೀಚೆಗೆ ನೀಡಿರುವ ಹೊಸ ವಾಹನಗಳನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಶೆಡ್‌ನಲ್ಲಿ ಇರಿಸ ಬೇಕಿದ್ದ ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಪ್ರತಿನಿತ್ಯವೂ ಪುರಸಭೆ ಮುಂಭಾಗದಲ್ಲಿ ಕೆಲಸ ಮುಗಿದ ನಂತರ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಮಳೆ, ಬಿಸಿಲಿನಲ್ಲಿ ವಾಹನಗಳು ನಿಲ್ಲುತ್ತಿದ್ದು, ಕೆಟ್ಟು ನಿಂತರೆ ಮತ್ತೆ ಜನರ ತೆರಿಗೆ ಹಣದಿಂದಲೇ ದುರಸ್ತಿ ಪಡಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.

” ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಇದ್ದಿದ್ದರೆ ಪುರಸಭೆ ವ್ಯಾಪ್ತಿಯಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಸಮಸ್ಯೆಗಳ ನಿವಾರಣೆಗೆ ನಾನೂ ಸೇರಿ ಕೆಲ ಸದಸ್ಯರು ಎಷ್ಟೇ ಹೋರಾಟ ಮಾಡಿದರೂ ನಿಯಂತ್ರಣವಾಗುತ್ತಿಲ್ಲ.”

-ಐಡಿಯಾ ವೆಂಕಟೇಶ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

Tags:
error: Content is protected !!