Mysore
25
clear sky

Social Media

ಮಂಗಳವಾರ, 14 ಏಪ್ರಿಲ 2026
Light
Dark

ಪುರಸಭೆ ವರಿಷ್ಠರ ಚುನಾವಣೆಗೆ ಫೆ.೧೯ಕ್ಕೆ ಮುಹೂರ್ತ

ಕೋಟೆ: ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚುರುಕು ನಿರೀಕ್ಷೆ 

ಮಂಜು ಕೋಟೆ

ಎಚ್.ಡಿ.ಕೋಟೆ: ಮೀಸಲಾತಿಯ ಸಮಸ್ಯೆಯಿಂದ  ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು,  ಫೆ.೧೯ರಂದು ಚುನಾವಣೆ ನಿಗದಿಯಾಗಿದೆ.

ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಪೂರ್ಣಗೊಂಡು ಒಂದು ವರ್ಷ ಕಳೆಯುತ್ತಿದ್ದರೂ ಸರ್ಕಾರ ಮೀಸಲಾತಿಯನ್ನು ಪ್ರಕಟಿಸಿರಲಿಲ್ಲ. ೮ ತಿಂಗಳುಗಳ ಹಿಂದೆ ಪ್ರಕಟಿಸಿದ ಮೀಸಲಾತಿಯ ಪ್ರಕಾರ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿತ್ತು. ಆಗ ಸಾಮಾಜಿಕ ನ್ಯಾಯ ಬೇಕೆಂದು ಪುರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯ ಮಧುಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆದು, ಕೋರ್ಟ್ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಸರಿ ಇದೆ ಎಂದು ಪುರಸಭಾ ಸದಸ್ಯರ ಅರ್ಜಿಯನ್ನು ವಜಾ ಮಾಡಿದೆ.

ಈ ಹಿನ್ನೆಲೆಯಲ್ಲಿ ತಹಸಿಲ್ದಾರ್ ಶ್ರೀನಿವಾಸ ಅವರು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ಫೆ.೧೯ಕ್ಕೆ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ

ಪುರಸಭೆ ಮುಖ್ಯಾಧಿಕಾರಿ ಸುರೇಶ್ ಪುರ ಸಭೆಯ ೨೩ ಸದಸ್ಯರು, ಸಂಸದರು, ಶಾಸಕರಿಗೆ ಚುನಾವಣಾ ನೋಟಿಸ್ ನೀಡಿದ್ದಾರೆ. ಒಂದು ವರ್ಷದಿಂದ ಪುರಸಭೆಗೆ ಅಧ್ಯಕ್ಷ,  ಉಪಾಧ್ಯಕ್ಷರು ಇಲ್ಲದಿದ್ದರಿಂದ  ಆಡಳಿತ ಅಧಿಕಾರಿಯಾಗಿ ಹುಣಸೂರಿನ ಉಪ ವಿಭಾಗಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ,  ಒಂದು ಬಾರಿ ಕೂಡ ಪುರಸಭೆ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿದಂತೆ, ಕಾಮಗಾರಿ ಗಳನ್ನು ಚುರುಕುಗೊಳಿಸಲು, ಮೂಲಸೌಕರ್ಯ ಗಳನ್ನು ಕಲ್ಪಿಸುವ ಬಗ್ಗೆ ಸದಸ್ಯರು ಮತ್ತು ಅಧಿಕಾರಿಗಳೊಡನೆ ಸಭೆ ನಡೆಸದ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸಮಸ್ಯೆಗಳು ಹಾಗೆಯೇ ಇದ್ದವು.

ನೂತನ ಆಡಳಿತ ಮಂಡಳಿಯ ಅಧಿಕಾರ ಅವಧಿ ೮ ತಿಂಗಳುಗಳು ಮಾತ್ರ ಇರುವುದರಿಂದ ಪಟ್ಟಣದ ಅಭಿವೃದ್ಧಿಗೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

” ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ಫೆ.೧೯ರಂದು ನಿಗದಿಪಡಿಸಿದ್ದು,  ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.  ಸಂಬಂಧಪಟ್ಟವರಿಗೆ ಚುನಾವಣೆಗೆ ಆಗಮಿಸುವಂತೆ ನೋಟಿಸ್ ನೀಡಲಾಗಿದ್ದು ಚುನಾವಣಾಧಿಕಾರಿಯಾಗಿ ತಹಸಿಲ್ದಾರ್ ಶ್ರೀನಿವಾಸ್ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.  ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯಡಿ ಚುನಾವಣೆ ನಡೆಯಲಿದೆ.”

 -ಸುರೇಶ್, ಪುರಸಭೆ ಮುಖ್ಯಾಧಿಕಾರಿ

” ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಪುರಸಭೆ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವ ಅವಕಾಶವನ್ನು ಮೀಸಲಾತಿ ಮೂಲಕ ಸರ್ಕಾರ ಮಾಡಿಕೊಟ್ಟಿರುವುದು ನಮ್ಮಂತಹ ಮಹಿಳೆಯರಿಗೆ ಸಂತಸ ತಂದಿದೆ. ಒಂದು ವರ್ಷದಿಂದ ಅಧ್ಯಕ್ಷರು, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೆ ವಾರ್ಡುಗಳಲ್ಲಿ ಬಹಳಷ್ಟು ಮೂಲಸೌಕರ್ಯಗಳ ಸಮಸ್ಯೆ ಉಂಟಾಗಿತ್ತು.”

 -ಸರೋಜಮ್ಮ ಚಿಕ್ಕಣ್ಣ, ಪುರಸಭಾ ಸದಸ್ಯರು

Tags:
error: Content is protected !!