Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮಗುವಿಗಿಂತ ಮದ್ಯ ಸೇವನೆಯೇ ಮುಖ್ಯ ಎಂದ ತಾಯಿ..!

ಮಂಜು ಕೋಟೆ

‘ಎಣ್ಣೆ’ ಬೇಕು ಎಂದು ರಂಪಾಟ ನಡೆಸಿದ ಗಿರಿಜನ ಹಾಡಿಯ ಪಾರ್ವತಿ ಮನವೊಲಿಸುವಲ್ಲಿ ವೈದ್ಯರು ಸುಸ್ತು

ಎಚ್.ಡಿ.ಕೋಟೆ: ತನ್ನ ೯ ತಿಂಗಳ ಮಗುವಿಗಿಂತ ಮದ್ಯ ಸೇವನೆಯೇ ಮುಖ್ಯ ಎಂದು ಮಗುವಿನ ತಾಯಿ ರಂಪಾಟ ಮಾಡಿದ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ತಾಲ್ಲೂಕಿನ ಚಿಕ್ಕೆರೆಯೂರು ಗ್ರಾಮದ ಗಿರಿಜನ ಹಾಡಿಯ ಪಾರ್ವತಿ ತನ್ನ ೯ ತಿಂಗಳ ಗಂಡು ಮಗುವನ್ನು ಸಮರ್ಪಕವಾಗಿ ಪೋಷಣೆ ಮಾಡದೆ ಕುಡಿತದ ಚಟಕ್ಕೆ ಬಲಿಯಾಗಿ ಸದಾ ಮದ್ಯ ಸೇವನೆಯಲ್ಲಿ ತೊಡಗಿಕೊಂಡಿದ್ದರು.

ತಾಯಿ, ಮಗುವಿನ ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಇಲ್ಲಿನ ಆಶಾ ಕಾರ್ಯಕತೆಯರಾದ ಮಂಜುಳಾ, ವೀಣಾ, ಚಂದ್ರಿಕಾ ಅವರು ಸಂಬಂಧ ಪಟ್ಟ ಅಽಕಾರಿಗಳಿಗೆ ವಿಚಾರ ತಿಳಿಸಿದಾಗ, ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥರಾದ ಜಶೀಲ ಅವರು ತಾಯಿ ಮತ್ತು ಮಗುವನ್ನು ಶನಿವಾರ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಂತೆ ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಮುಖಾಂತರ ತಾಯಿ ಮತ್ತು ಮಗುವನ್ನು ತಪಾಸಣೆ ಮಾಡಿಸಲು ಮುಂದಾದಾಗ ತಾಯಿ ಪಾರ್ವತಿ ಮದ್ಯದ ಚಟಕ್ಕೆ ಬಲಿಯಾಗಿದ್ದರಿಂದ ಸ್ತಿಮಿತತೆ ಕಳೆದುಕೊಂಡು ರಂಪಾಟ ನಡೆಸಿದರು.

ಮಗುವಿನ ಮೇಲೆ ತಾಯಿಂದ ಯಾವುದೇ ರೀತಿಯ ತೊಂದರೆಗಳು ಮತ್ತು ಹಲ್ಲೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಮದ್ಯ ಸೇವನೆ ಚಟದಿಂದ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದರು.

ನಂತರ ಆಶಾ ಕಾರ್ಯಕರ್ತರು, ವೈದ್ಯರು, ಮಹಿಳಾ ಸಾಂತ್ವನ ಕೇಂದ್ರದವರು, ಸಿಡಿಪಿ ಇಲಾಖೆಯವರು ತಾಯಿ ಪಾರ್ವತಿಯವರಿಗೆ ಮದ್ಯದ ಚಟದ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಲು ಮುಂದಾದರು.

ಆದರೆ, ಪಾರ್ವತಿ ಅವರು, ನಾನು ಕುಡಿತ ಬಿಡುವ ಪ್ರಶ್ನೆಯೇ ಇಲ್ಲ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನನಗೆ ‘೯೦ ಎಣ್ಣೆ’ ಬೇಕೇ ಬೇಕು ಎಂದು ಪಟ್ಟುಹಿಡಿದರು. ಕೊನೆಗೆ ಎಲ್ಲರೂ ಸೇರಿ ಆಕೆಯನ್ನು ಸಮಾಧಾನಪಡಿಸಿ ಊರಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ.

ಆದರೆ ಭಾನುವಾರ ಪಾರ್ವತಿ ಮತ್ತು ಆಕೆಯ ಮಗು ಹಾಡಿಯಲ್ಲಿ ವಾಸ್ತವ್ಯವಿರಲಿಲ್ಲ. ಆಕೆ ಕಳೆದ ಒಂದು ವರ್ಷದಿಂದ ಗಂಡ ಶಿವು ಜೊತೆ ಗಲಾಟೆ ಮಾಡಿಕೊಂಡು ಬೊಮ್ಮಲಾಪುರ ಹಾಡಿಯ ಪತಿಯ ಮನೆಯಿಂದ ಹೊರಬಂದು ತವರು ಮನೆ ಇರುವ ಚಿಕ್ಕ ಕೆರೆಯೂರಿನಲ್ಲಿ ವಾಸವಾಗಿದ್ದರು. ಆದರೆ ಈಗ ಅಲ್ಲೂ ಇಲ್ಲದೆ, ಪತಿಯ ಮನೆಗೂ ಹೋಗದೆ ಕುಡಿತದ ಮತ್ತಿನಲ್ಲಿ ನಾಪತ್ತೆಯಾಗಿದ್ದಾರೆ.

Tags:
error: Content is protected !!