ಭೇರ್ಯ ಮಹೇಶ್
ನ.೬ರಂದು ಕೆ.ಆರ್.ನಗರ ಪುರಸಭೆ ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿ ಮುಕ್ತಾಯ
ಕೆ.ಆರ್.ನಗರ: ಪಟ್ಟಣದ ಪುರಸಭೆ ಅಧ್ಯಕ್ಷರ ಹಾಗೂ ಸದಸ್ಯರ ಅಧಿಕಾರ ಅವಧಿ ನವೆಂಬರ್ ೬ರಂದು ಮುಗಿದಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿ ತಿಂಗಳು ಕಳೆಯುತ್ತಾ ಬಂದರೂ ಇದುವರೆಗೂ ಆಡಳಿತಾಧಿಕಾರಿಗಳು ಅಧಿಕಾರ ಸ್ವೀಕರಿಸಿಲ್ಲ.
೨೦೧೯ರ ಮೇ ೩೧ರಂದು ಪುರಸಭೆಯ ೨೩ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ೧೪, ಜಾ.ದಳ ೮, ಬಿಜೆಪಿ ೧ ಸ್ಥಾನ ಗಳಿಸಿದ್ದವು. ಆದರೇ ಚುನಾವಣೆ ನಡೆದು ೧೮ ತಿಂಗಳುಗಳು ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡದೆ ವಿಳಂಬವಾಯಿತು.
ಆನಂತರ ಮೀಸಲಾತಿ ನಿಗದಿಯಾಗಿ ೨೦೨೦ರ ನ.೬ರಂದು ಪುರಸಭೆಯಲ್ಲಿ ಬಹುಮತ ಗಳಿಸಿದ್ದ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾಗಿ ಕೆ.ಜಿ.ಸುಬ್ರಹ್ಮಣ್ಯ ಮತ್ತು ಉಪಾಧ್ಯಕ್ಷೆಯಾಗಿ ಸೌಮ್ಯ ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು. ಪಕ್ಷದ ಆಂತರಿಕ ಒಪ್ಪಂದದಂತೆ ಕೆ.ಜಿ.ಸುಬ್ರಹ್ಮಣ್ಯ ರಾಜೀನಾಮೆ ನೀಡಿದ ನಂತರ ೨೦೨೨ರ ಏ.೮ರಂದು ಕೋಳಿ ಪ್ರಕಾಶ್ ೨೦೨೩ರ ಜ.೪ರಂದು ಸೈಯದ್ ಸಿದ್ದಿಕ್ ಅಧ್ಯಕ್ಷರಾಗುವ ಮೂಲಕ ಮೊದಲ ಅವಽಯ ೩೦ ತಿಂಗಳನ್ನು ಪೂರೈಸಿದರು.
ಎರಡನೇ ಅವಧಿಯ ೩೦ ತಿಂಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಳಿಸಲು ವಿಳಂಬ ಮಾಡಿದ್ದರಿಂದ ಹುಣಸೂರು ಉಪವಿಭಾಗಾಧಿಕಾರಿಗಳು ೧೯ ತಿಂಗಳುಗಳ ಕಾಲ ಪುರಸಭೆಯ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ ಸದಸ್ಯರು ಮೀಸಲಾತಿ ಪ್ರಕಟವಾಗುವಂತೆ ನೋಡಿಕೊಂಡಿದ್ದ ಪರಿಣಾಮ ೨೦೨೫, ಮೇ ೧೩ರಂದು ಶಿವುನಾಯಕ್ ಕೊನೆಯ ೧೧ ತಿಂಗಳುಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಈಗ ಪುರಸಭೆಯ ಚುನಾಯಿತ ಸದಸ್ಯರ ಅವಧಿ ನ.೬ರಂದು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹುಣಸೂರು ಉಪ ವಿಭಾಗಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದೆ.
ಆದರೆ ನೇಮಕಾತಿ ಆದೇಶ ಹೊರಬಿದ್ದ ಅವಧಿಯಲ್ಲಿಯೇ ಉಪವಿಭಾಗಾಧಿಕಾರಿಗಳು ಬೇರೆಡೆಗೆ ವರ್ಗಾವಣೆಗೊಂಡಿದ್ದು, ಆ ಸ್ಥಾನಕ್ಕೆ ಬೇರೊಬ್ಬರು ಬಂದ ನಂತರ ಪುರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸ್ಪರ್ಧಾಕಾಂಕ್ಷಿಗಳ ಕಾತರ: ಪುರಸಭೆಯ ಆಡಳಿತ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ೨೩ ವಾರ್ಡ್‌ಗಳ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಲು ನೂರಾರು ಮಂದಿ ಸ್ಪರ್ಧಾಕಾಂಕ್ಷಿಗಳು ಸಿದ್ಧರಾಗಿದ್ದಾರೆ.
ಕಾಂಗ್ರೆಸ್ ಮತ್ತು ಜಾ.ದಳ ಸ್ಪರ್ಧಾ ಆಕಾಂಕ್ಷಿಗಳು ಈಗಾಗಲೇ ಮತದಾರರನ್ನು ಭೇಟಿ ಮಾಡಿ ತಮ್ಮ ಮನದಿಂಗಿತ ವ್ಯಕ್ತಪಡಿಸುವುದರೊಂದಿಗೆ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಪಕ್ಷಗಳ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಯಾವಾಗ ಮೀಸಲಾತಿ ಪಟ್ಟಿ ಕೊಡಲಿದೆ ಹಾಗೂ ಚುನಾವಣಾ ಆಯೋಗ ಯಾವಾಗ ದಿನಾಂಕ ಪ್ರಕಟಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
” ಪುರಸಭೆಯ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಆಡಳಿತವನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಮೇಲಧಿಕಾರಿಗಳು ಆಡಳಿತಾಧಿಕಾರಿಗಳನ್ನು ನೇಮಿಸಿದ್ದು, ಅವರು ಅಧಿಕಾರ ವಹಿಸಿಕೊಂಡ ನಂತರ ಅವರ ನಿರ್ದೇನದಂತೆ ನಾವು ಕೆಲಸ ಕಾರ್ಯಗಳನ್ನು ನಿರ್ವಹಿಸಲಿದ್ದು, ಪಟ್ಟಣದ ನಾಗರಿಕರು ಸಹಕರಿಸಬೇಕು.”
-ಜಿ.ಎಸ್.ರಮೇಶ್, ಪುರಸಭಾ ಪ್ರಭಾರ ಮುಖ್ಯಾಧಿಕಾರಿ, ಕೆ.ಆರ್.ನಗರ.





